ಧಾರವಾಡ ಜಿಲ್ಲೆಯಲ್ಲಿ ಶಿಕ್ಷಣ ಕ್ರಾಂತಿಯ ಜೊತೆಗೆ ಕೈಗಾರಿಕಾ ಪರ್ವ
ಟೀಮ್ ವೈ.ಎಸ್.ಕನ್ನಡ
ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿದರೆ ಅತ್ಯಧಿಕ ಸಂಖ್ಯೆಯಲ್ಲಿ ಬೃಹತ್ ಕೈಗಾರಿಕೆಗಳು ಸ್ಥಾಪನೆಯಾಗಿರುವ ಹೆಗ್ಗಳಿಕೆ ಧಾರವಾಡ ಜಿಲ್ಲೆಗಿದೆ. ಶಿಕ್ಷಣ ಕ್ಷೇತ್ರದ ಕಾಶಿ ಎಂದೇ ಗುರುತಿಸಿರುವ ಧಾರವಾಡ ಹಲವು ಅಂಶಗಳಿಂದ ಹೂಡಿಕೆದಾರರ ಮನಸ್ಸು ಗೆದ್ದಿದೆ. ಅತ್ಯುತ್ತಮ ವಾತಾವರಣ, ಪರಿಣಿತ ಮಾನವ ಸಂಪನ್ಮೂಲ, ಮಾದರಿ ಸಾರಿಗೆ ಸಂಪರ್ಕ, ವ್ಯೂಹಾತ್ಮಕವಾಗಿ ಅತ್ಯಂತ ಆಯಕಟ್ಟಿನ ಸ್ಥಳ ಹೀಗೆ ಹತ್ತು ಹಲವು ಅಂಶಗಳು ಧಾರವಾಡದತ್ತ ಉದ್ಯಮಿಗಳನ್ನು ಕೈ ಬೀಸಿ ಕರೆಯುತ್ತಿದೆ.

ಧಾರವಾಡ- ಒಂದು ಸಂಕ್ಷಿಪ್ತ ಚಿತ್ರಣ
ಧಾರವಾಡ ಎಂದಾಕ್ಷಣ ಕಣ್ಣಮುಂದೆ ಸುಳಿಯುವುದು ಅಲ್ಲಿನ ಶಿಕ್ಷಣ ಸಂಸ್ಥೆಗಳು. ಮಗುವನ್ನು, ದೇಶದ ಹೊಣೆಯರಿತ ಪ್ರಜೆಯಾಗಿ ಮಾರ್ಪಡಿಸುತ್ತಿರುವ ಶಿಕ್ಷಣ ಸಂಸ್ಥೆಗಳು.. ಒಂದಲ್ಲ ಎರಡಲ್ಲ ಹೆಜ್ಜೆಗೊಂದು ಅತ್ಯುನ್ನತ ಗುಣಮಟ್ಟ ಹೊಂದಿರುವ ಶಿಕ್ಷಣ ಸಂಸ್ಥೆಗಳು, ವಿದ್ಯಾ ಕಾಶಿ ಎಂಬ ಅನ್ವರ್ಥ ನಾಮವನ್ನೇ ಧಾರವಾಡಕ್ಕೆ ತಂದಿವೆ. ಧಾರವಾಡದ ಪೇಡಾ, ಧಾರವಾಡದ ಮಳೆ. ಧಾರವಾಡದ ಶಿಕ್ಷಣ ಹೀಗೆ ಹತ್ತು ಹಲವು ವಿಶೇಷಣಗಳು ಇಲ್ಲಿ ಹಾಸು ಹೊಕ್ಕಾಗಿವೆ.
ಕೈಗಾರಿಕೆಗಳ ತವರೂರು
ರಾಜ್ಯದ ಕೈಗಾರಿಕೆಗಳ ಮಟ್ಟಿಗೆ ಹೇಳುವುದಾದರೆ, ಧಾರವಾಡ ಜಿಲ್ಲೆ ಕೈಗಾರಿಕೆಗಳಿಗೆ ಸೂಕ್ತ ಸ್ಥಳ. ಸಮತಟ್ಟಾಗಿರುವ ಭೂಮಿ, ಮುಂಬೈ , ಬೆಂಗಳೂರು ಮಧ್ಯೆ ಇರುವ ವ್ಯೂಹಾತ್ಮಕ ಹಾಗೂ ಅತ್ಯಂತ ಆಯಕಟ್ಟಿನ ಜಾಗ. ರೈಲ್ವೇ ವಲಯ ಕಚೇರಿ ಹೀಗೆ ಪ್ರಥಮಗಳ ಪಟ್ಟಿಗೆ ಅರ್ಹವಾಗಿದೆ ಧಾರವಾಡ.
ಜಿಲ್ಲೆಯ ವೈಶಿಷ್ಠ್ಯ
ಐದು ತಾಲೂಕುಗಳನ್ನು ಹೊಂದಿರುವ ಧಾರವಾಡ ಜಿಲ್ಲೆ, ಸಾಕ್ಷರತಾ ಪ್ರಮಾಣದಲ್ಲಿ ಮುಂಚೂಣಿಯಲ್ಲಿದೆ. ಶೇಕಡಾ 80 ರಷ್ಟು ಸಾಕ್ಷರತಾ ಮಟ್ಟ ಹೊಂದಿದೆ. ಇದು ಸಹಜವಾಗಿಯೇ ಕೈಗಾರಿಕೆಗಳಿಗೆ ಅಗತ್ಯವಿರುವ ಮಾನವ ಸಂಪನ್ಮೂಲದ ಬೇಡಿಕೆ ಈಡೇರಿಸುತ್ತಿದೆ. ಎಂಟು ಕೈಗಾರಿಕಾ ಪ್ರದೇಶ , ಐದು ಕೈಗಾರಿಕಾ ಎಸ್ಟೇಟ್ ಗಳನ್ನು ಹೊಂದಿರುವ ಧಾರವಾಡ ಜಿಲ್ಲೆ, ಅಗತ್ಯ ಮೂಲ ಭೂತ ಸೌಲಭ್ಯ ಹೊಂದಿದೆ.
ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆ
ಕೈಗಾರಿಕಾ ಕ್ಷೇತ್ರದಲ್ಲಿ ಧಾರವಾಡ ಜಿಲ್ಲೆ ಮುಂಚೂಣಿಯಲ್ಲಿದ್ದರೂ ಕೃಷಿ ಕ್ಷೇತ್ರಕ್ಕೆ ಜಿಲ್ಲೆಯ ಕೊಡುಗೆ ಅನನ್ಯ, ಅನರ್ಘ್ಯ. ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕೆ ಇದು ಮಹತ್ವಪೂರ್ಣ ಕೊಡುಗೆ ನೀಡುತ್ತಿದೆ. ಇದರ ಜೊತೆಗೆ ಅತ್ಯುತ್ತಮ ಗುಣಮಟ್ಟದ ಈರುಳ್ಳಿ, ಶೇಂಗಾ, ಆಲೂಗಡ್ಡೆಗೆ ಧಾರವಾಡಕ್ಕೆ ಧಾರವಾಡವೇ ಸರಿಸಾಟಿ.. ಈರುಳ್ಳಿಯಂತೂ ಸೂಪರ್.. ಅದನ್ನು ಮೀರಿಸಲು ಸಾಧ್ಯವೇ ಇಲ್ಲ.. ಇದರ ಜೊತೆಗೆ ತೋಟಗಾರಿಕಾ ಬೆಳೆಗಳು ಕೂಡ ತಮ್ಮ ಪಾಲು ನೀಡುತ್ತಿವೆ.
ಉದ್ಯಮಿಗಳಿಗೆ ಅಚ್ಚುಮೆಚ್ಚಿನ ಜಿಲ್ಲೆ.
ಧಾರವಾಡ ಉದ್ಯಮಿಗಳಿಗೆ ಯಾಕೆ ಅಚ್ಚು ಮೆಚ್ಚು.. ಈ ಪ್ರಶ್ನೆಗೆ ಉತ್ತರ ಸರಳ.. ಯಾಕೆಂದರೆ ಇಲ್ಲಿ ಉದ್ಯಮಿಗಳಿಗೆ ಅಗತ್ಯ ಇರುವ ಎಲ್ಲ ಸೌಲಭ್ಯ ತ್ವರಿತಗತಿಯಲ್ಲಿ ದೊರೆಯುತ್ತಿದೆ. ವಿಳಂಬದ ಮಾತು ಇಲ್ಲವೇ ಇಲ್ಲ. ಎಲ್ಲವೂ ನೇರ ಪಾರದರ್ಶಕ. ಕೈಗಾರಿಕೆಗಳಿಗೆ ಅಗತ್ಯ ಇರುವ ಭೂಮಿ ಧಾರವಾಡ ಜಿಲ್ಲೆಯಲ್ಲಿ ಯಥೇಚ್ಚವಾಗಿ ದೊರೆಯುತ್ತಿದೆ. ಯಾಕೆಂದರೆ ಧಾರವಾಡ ಜಿಲ್ಲೆಯಲ್ಲಿ ಸರ್ಕಾರದ ಬಳಿಯೇ ಅಗತ್ಯ ಭೂಮಿ ಇದೆ. ಇದು ಒಂದು ಪ್ಲಸ್ ಪಾಯಿಂಟ್. ಉದ್ಯಮ ಆರಂಭಿಸಲು ಎದುರಾಗುವ ಮೊದಲ ಅಡಚಣೆ ಇಲ್ಲಿ ನಿವಾರಣೆಯಾಗುತ್ತಿದೆ.
ಸಾರಿಗೆ ಸಂಪರ್ಕ- ಅತ್ಯುತ್ತಮ ಸಾರಿಗೆ ಜಾಲ
ಅತ್ಯಂತ ಆಯಕಟ್ಟಿನ ಜಾಗದಲ್ಲಿರುವ ಧಾರವಾಡ ಮುಂಬೈ ಮತ್ತು ಬೆಂಗಳೂರು ಮಧ್ಯೆ ನೆಲೆಸಿದೆ. ಎರಡು ಬೃಹತ್ ನಗರಗಳ ಮಧ್ಯೆಯ ಕೊಂಡಿಯಾಗಿ ಇದು ಬೆಳೆದು ನಿಂತಿದೆ. ಕಚ್ಚಾ ವಸ್ತುಗಳ ಪೂರೈಕೆಗೆ ಅತ್ಯುತ್ತಮ ಸಾರಿಗೆ ಜಾಲವನ್ನು ಧಾರವಾಡ ಹೊಂದಿದೆ. ಜಿಲ್ಲಾ ಕೇಂದ್ರವಾಗಿರುವ ಹುಬ್ಬಳಿ, ವಾಣಿಜ್ಯ ಚಟುವಟಿಕೆಗಳಿಂದ ದಿನವಿಡೀ ಸದ್ದುಗದ್ದಲ್ಲದಲ್ಲಿ ಮುಳುಗಿದ್ದರೆ, ಶಿಕ್ಷಣ ನಗರ ಧಾರವಾಡ ಜ್ಞಾನ ಭಂಡಾರವಾಗಿ ಹೊರಹೊಮ್ಮಿದೆ.ಮೂರು ರಾಷ್ಟ್ರೀಯ ಹೆದ್ದಾರಿಗಳು ಜಿಲ್ಲೆಯ ಮೂಲಕ ಹಾದು ಹೋಗುತ್ತಿವೆ. ಇದು ದೇಶದ ಎಲ್ಲ ಮೂಲೆಗಳೊಂದಿಗೂ ಧಾರವಾಡವನ್ನು ಸಂಪರ್ಕಿಸುತ್ತಿದೆ.
ಕೊನೆಯ ಮಾತೇನು...?
ಐಐಟಿ ಮುಕುಟ ಮಣಿ
ಕೇಂದ್ರ ಸರ್ಕಾರ ಘೋಷಿಸಿರುವ ಐಐಟಿ, ಧಾರವಾಡದ ಮುಕುಟ ಮಣಿಯಾಗಿದೆ. ಇದು ಜಾಗತಿಕ ಮಟ್ಟದಲ್ಲಿ ಧಾರವಾಡದ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ. ಐಐಟಿ ಸ್ಥಾಪನೆಯೊಂದಿಗೆ ಇತರ ಸಂಬಂಧಿ ಕ್ಷೇತ್ರಗಳಲ್ಲಿ ಕೂಡ ಬೆಳವಣಿಗೆಯ ನಿರೀಕ್ಷೆ ಗರಿಗೆದರಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಧಾರವಾಡ ಬಂಡವಾಳ ಹೂಡಿಕೆಗೆ ಅತ್ಯಂತ ಸೂಕ್ತ ಸ್ಥಳ. ಹೂಡಿಕೆಗೆ ನಿರೀಕ್ಷೆಗೂ ಮೀರಿ ಫ್ರತಿಫಲ ಗ್ಯಾರಂಟಿ.