22 ಮಕ್ಕಳಿಗೆ ಸಿಗಲಿದೆ ಶೌರ್ಯ ಪ್ರಶಸ್ತಿ 2019; ಕರ್ನಾಟಕದಿಂದ ಇಬ್ಬರು ಪ್ರಶಸ್ತಿಗೆ ಆಯ್ಕೆ
10 ಬಾಲಕಿಯರು ಮತ್ತು 12 ಬಾಲಕರಿಂದ ಕುಡಿದ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಭಾರತೀಯ ಮಕ್ಕಳ ಕಲ್ಯಾಣ ಮಂಡಳಿ (ಐಸಿಸಿಡಬ್ಲ್ಯೂ) ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದೆ. ಅದರಲ್ಲಿ ಕರ್ನಾಟಕದ ಇಬ್ಬರು ಮಕ್ಕಳು ಸೇರಿರುವುದು ಸಂತಸದ ಸಂಗತಿ.
ಕರ್ನಾಟಕದಲ್ಲಿ ಉಂಟಾದ ಪ್ರವಾಹದ ಸಂದರ್ಭದಲ್ಲಿ ಆಂಬುಲೆನ್ಸ್‌ಗೆ ದಾರಿ ತೋರಿದ ಕಾರಣಕ್ಕಾಗಿ ಕರ್ನಾಟಕದ 11 ವರ್ಷದ ವೆಂಕಟೇಶ್‌ನಿಗೆ ಈ ವರ್ಷದ ಐಸಿಸಿಡಬ್ಲ್ಯೂ ರಾಷ್ಟ್ರೀಯ ಧೈರ್ಯ ಪ್ರಶಸ್ತಿನೀಡಿ ಗೌರವಿಸುತ್ತಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ ಪ್ರವಾಹದ ಸಂದರ್ಭದಲ್ಲಿ ಮೃತ ದೇಹ ಮತ್ತು ಸಂಬಂಧಿಕರನ್ನು ಹೊತ್ತ ಸಾಗುತ್ತಿದ್ದ ಆಂಬುಲೆನ್ಸ್‌ಗೆ ಚಾಲಕನಿಗೆ ಸೇತುವೆಯ ದಾರಿ ಕಾಣದಾಗಿ ಹತಾಶನಾದಾಗ ಖುದ್ದಾಗಿ ಧೈರ್ಯದಿಂದ ಮುನ್ನಡೆದು ದಾರಿ ತೋರಿಸಿದ್ದ ಕರ್ನಾಟಕದ ರಾಯಚೂರು ಜಿಲ್ಲೆಯ ದೇವದುರ್ಗಾ ತಾಲೂಕಿನ ಹಿರೇರಾಯನ ಕುಂಪಿಯ ವೆಂಕಟೇಶ್.
ತನ್ನ ಎರಡು ವರ್ಷದ ಸಹೋದರನನ್ನು ಕೆರಳಿದ ಹಸುವಿನಿಂದ ರಕ್ಷಿಸಿದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ನವಿಲಗೋಣದ ಒಂಬತ್ತು ವರ್ಷದ ಆರತಿ ಕಿರಣ್ ಶೆಟ್ ಅವರು ಸಹ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಆರತಿ ಕೋಪಗೊಂಡ ಹಸುವಿನಿಂದ ತನ್ನ ಸಹೋದರನನ್ನು ಧೈರ್ಯ ಮತ್ತು ಸಮಯಪ್ರಜ್ಞೆಯಿಂದ ರಕ್ಷಿಸಿದಳು. ತನ್ನ ಮನೆಯ ಹತ್ತಿರ ಆಕಳೊಂದು ತನ್ನ ಸಹೋದರನಿಗೆ ತೊಂದರೆ ನೀಡುತ್ತಿರುವದನ್ನು ಆರತಿ ಗಮನಿಸಿದಾಗ, ಅವಳು ತನ್ನ ಸಹೋದರನನ್ನು ಎತ್ತಿಕೊಂಡು ತನ್ನ ಮನೆಯ ಕಡೆಗೆ ಓಡಿದಳು. ಅವಳು ಹಸುವಿಗೆ ಎದುರು ನಿಂತು ತನ್ನ ತಮ್ಮನ ರಕ್ಷಣೆಗೆ ಮುಂದಾದಳು. ಅವಳ ಕಿರುಚಾಟ ಕೇಳಿದ ಆಕೆಯ ಪೋಷಕರು ಹೊರಬಂದು ಬಂದು ಹಸುವನ್ನು ಓಡಿಸಿದರು.
ಕಳೆದ ವರ್ಷ ಏಪ್ರಿಲ್‌ನಲ್ಲಿ ಸಮುದ್ರದಲ್ಲಿ ತನ್ನ ಮೂವರು ಸ್ನೇಹಿತರನ್ನು ರಕ್ಷಿಸಲು ಹೋಗಿ ಪ್ರಾಣಕಳೆದುಕೊಂಡ ಕೇರಳದ ಕೋಳಿಕೋಡ್‌ನ ಹದಿನಾರು ವರ್ಷದ ಮುಹಮ್ಮದ್ ಮುಹ್ಸಿನ್ ಅವರನ್ನು ಮರಣೋತ್ತರವಾಗಿ ಐಸಿಸಿಡಬ್ಲ್ಯೂ ಅಭಿಮನ್ಯು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2019 ರಲ್ಲಿ ಕಾಶ್ಮೀರದಲ್ಲಿ ಶೌರ್ಯದಿಂದ ಹೋರಾಡಿದ ಕುಪ್ವಾರಾ ಮೂಲದ ಸರ್ತಾಜ್ ಮೊಹಿದೀನ್ ಮುಗಲ್ (16) ಮತ್ತು ಬುಡ್ಗಾಮ್ ಮೂಲದ ಮುದಾಸೀರ್ ಅಶ್ರಫ್ (19) ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
"ನಾನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕುಪ್ವಾರಾದ ತುಮಿನಾ ಗ್ರಾಮದಲ್ಲಿರುವ ನನ್ನ ಮನೆಯ ಮೊದಲ ಮಹಡಿಯಲ್ಲಿದ್ದೆ, ಎದುರಾಳಿಗಳು ಹಾರಿಸಿದ ಶೆಲ್ ಮೊದಲ ಮಹಡಿಯಲ್ಲಿ ನನ್ನ ಮನೆಗೆ ಅಪ್ಪಳಿಸಿತು ಮತ್ತು ಇದರ ಪರಿಣಾಮವಾಗಿ ನನ್ನ ಕೋಣೆಯಲ್ಲಿ ಹೊಗೆ ತುಂಬಿತ್ತು. ನಾನು ತಕ್ಷಣ ಮೇಲಿನ ಮಹಡಿಯಿಂದ ಕೆಳಗೆ ಜಿಗಿದೆ, ತದನಂತರ ನನ್ನ ಪೋಷಕರು ಮತ್ತು ಇಬ್ಬರು ಸಹೋದರಿಯರು ಇದ್ದ ನೆಲಮಹಡಿಗೆ ಧಾವಿಸಿದರು," ಎಂದು ಮುಗಲ್ ಹೇಳಿದರು.
"ನಾನು ನನ್ನ 8 ವರ್ಷದ ಸಹೋದರಿ ಸಾದಿಯಾ ನನ್ನು ನನ್ನ ಕೈಯಲ್ಲಿ ತೆಗೆದುಕೊಂಡೆ ಮತ್ತು 13 ವರ್ಷದ ಸಾನಿಯಾ ನನ್ನ ಕೈಗಳನ್ನು ಹಿಡಿದಿದ್ದಳು, ಮತ್ತು ನನ್ನ ಹಾನಿಗೊಳಗಾದ ಮನೆ ಕುಸಿಯುವ ಮೊದಲು ಪೋಷಕರು ಕೋಣೆಯಿಂದ ಹೊರಗೆ ಓಡಿದರು," ಎಂದು ಮುಗಲ್ ಪಿಟಿಐಗೆ ತಿಳಿಸಿದ.
ಮುಗಲ್‌ನನ್ನು ಐಸಿಸಿಡಬ್ಲ್ಯೂ ಶ್ರವಣ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಅಲ್ಲಿನ ಹಳ್ಳಿಯೊಂದರಲ್ಲಿ ಮಿ -17 ಹೆಲಿಕಾಪ್ಟರ್ ಅಪಘಾತಕ್ಕೀಡಾದ ನಂತರ ಬುಡ್ಗಾಮ್ ಮೂಲದ ಅಶ್ರಫ್ ಜನರಿಗೆ ಸಹಾಯ ಮಾಡಲು ಧಾವಿಸಿದ್ದನು.
ಐಸಿಸಿಡಬ್ಲ್ಯೂ ಎಂಬ ಎನ್ಜಿಒ 1957 ರಿಂದ ಈ ಪ್ರಶಸ್ತಿಗಳನ್ನು ಆಯೋಜಿಸುತ್ತಿದೆ ಮತ್ತು ಕಳೆದ ವರ್ಷದವರೆಗೆ 1,004 ಮಕ್ಕಳಿಗೆ - 703 ಬಾಲಕರು ಮತ್ತು 301 ಬಾಲಕಿಯರಿಗೆ ಪ್ರಶಸ್ತಿ ನೀಡಿದೆ.
ಸೆಪ್ಟೆಂಬರ್ 2018 ರಲ್ಲಿ ಬ್ರಹ್ಮಪುತ್ರದಲ್ಲಿ ಮುಗುಚಿ ಬೀಳುವ ದೋಣಿಯಿಂದ ತಾಯಿ, ಚಿಕ್ಕಮ್ಮ ಮತ್ತು ತನ್ನನ್ನು ರಕ್ಷಿಸಿದ ಗುವಾಹಟಿ, ಅಸ್ಸಾಂನ ಹುಡುಗ ಕಮಲ್ ಕೃಷ್ಣ ದಾಸ್ (12) ಸಹ ಪ್ರಶಸ್ತಿಗೆ ಭಾಜನರಾಗಲಿದ್ದಾನೆ.
ಅದ್ಭುತ ಧೈರ್ಯವನ್ನು ಪ್ರದರ್ಶಿಸಿದ ಮತ್ತೊಬ್ಬ ಹುಡುಗ ಮೇಘಾಲಯದ ಎವರ್‌ಬ್ಲೂಮ್ ಕೆ ನೊಂಗ್ರಮ್ (10), ಕಳೆದ ವರ್ಷ ಎರಡು ಪ್ರತ್ಯೇಕ ಘಟನೆಗಳಲ್ಲಿ ತನ್ನ ಇಬ್ಬರು ಸ್ನೇಹಿತರನ್ನು ನೀರುಪಾಲಾಗುವದರಿಂದ ಈತ ಪಾರುಮಾಡಿದ್ದಾನೆ.
2019 ರ ಮಾರ್ಚ್‌ನಲ್ಲಿ ಇಂಫಾಲ್ ನದಿಯಲ್ಲಿ ಮುಳುಗುತ್ತಿದ್ದ ಬಾಲಕನ ಪ್ರಾಣ ಉಳಿಸಿದ ಮಣಿಪುರದ ಲೌರೆಂಬಮ್ ಯೈಖೋಂಬಾ ಮಂಗಂಗ್ (8) ಅತ್ಯಂತ ಕಿರಿಯ ಪುರಸ್ಕೃತ.
ನೇಪಾಳದಿಂದ ಹಿಂದಿರುಗುವಾಗ ಬೆಂಕಿಯಲ್ಲಿ ಸಿಲುಕಿದ್ದ 40 ಕ್ಕೂ ಹೆಚ್ಚು ಜನರನ್ನು ರಕ್ಷಿಸಲು ಸಹಾಯ ಮಾಡಿದ ಕೇರಳದ ಆದಿತ್ಯ ಕೆ (15) ಅವರನ್ನು ಐಸಿಸಿಡಬ್ಲ್ಯೂ ಭರತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.