ಗಣರಾಜ್ಯೋತ್ಸವದ ಪೆರೇಡ್‌ಗೆ ಪಾದಾರ್ಪಣೆ ಮಾಡಲಿರುವ ಮಹಿಳಾ ಸಿಆರ್‌ಪಿಎಫ್ ಬೈಕ್ ಸವಾರರು
ಗಣರಾಜ್ಯೋತ್ಸವ ದಿನದಂದು ನಡೆಯಲಿರುವ ಮೆರವಣಿಗೆಯಲ್ಲಿ 65 ಸದಸ್ಯರ ಮಹಿಳಾ ತಂಡವು 350ಸಿಸಿ ರಾಯಲ್ ಎನ್‌ಫೀಲ್ಡ್ ಬುಲೆಟ್ ಮೋಟರ್ ಸೈಕಲ್‌ಗಳಲ್ಲಿ ತಮ್ಮ ಸಾಹಸಮಯ ಪ್ರದರ್ಶನವನ್ನು ನೀಡಲಿದ್ದಾರೆ.
ಸಿಆರ್‌ಪಿಎಫ್‌ನ ಎಲ್ಲ ಮಹಿಳಾ ಬೈಕ್ ಸವಾರರು ಜನವರಿ 26 ರಂದು ರಾಜ್‌ಪಾತ್‌ನಲ್ಲಿ ನಡೆಯುವ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಪಾದಾರ್ಪಣೆ ಮಾಡಿ, ತಮ್ಮ ಸಾಹಸಗಳನ್ನು ಪ್ರದರ್ಶಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
65 ಸದಸ್ಯರನ್ನೊಳಗೊಂಡ ಈ ತಂಡವು ಗಣರಾಜ್ಯೋತ್ಸವ ದಿನದ ಮೆರವಣಿಗೆಯ ಕೊನೆಯಲ್ಲಿ 350 ಸಿಸಿ ರಾಯಲ್ ಎನ್‌ಫೀಲ್ಡ್ ಬುಲೆಟ್ ಮೋಟರ್‌ಸೈಕಲ್‌ಗಳಲ್ಲಿ ತಮ್ಮ ಚಮತ್ಕಾರಿ ಕೌಶಲ್ಯವನ್ನು 90 ನಿಮಿಷಗಳ ಕಾಲ ಪ್ರದರ್ಶಿಸಲಿದ್ದಾರೆ.
ನಮ್ಮ ಮಹಿಳಾ ಬೈಕ್ ಸವಾರರು ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲು.
"ನಾವು ನಿರ್ವಹಿಸಿದ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರನ್ನು ಒಳಗೊಳ್ಳುವ ನಮ್ಮ ಬದ್ಧತೆಯ ಭಾಗವಾಗಿ ಈ ತಂಡವನ್ನು 2014 ರಲ್ಲಿ ರಚಿಸಲಾಯಿತು," ಎಂದು ಸಿಆರ್‌ಪಿಎಫ್ ವಕ್ತಾರ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಮೋಸೆಸ್ ದಿನಕರನ್ ಪಿಟಿಐಗೆ ತಿಳಿಸಿದ್ದಾರೆ.
ರಾಪಿಡ್ ಆಕ್ಷನ್ ಫೋರ್ಸ್ (ಆರ್‌ಎಎಫ್) ನೊಂದಿಗೆ ಪೋಸ್ಟ್ ಮಾಡಲಾಗಿರುವ ಇನ್ಸ್ಪೆಕ್ಟರ್ ಸೀಮಾ ನಾಗ್ ಅವರು ಈ ದಳವನ್ನು ಮುನ್ನಡೆಸಲಿದ್ದಾರೆ.
ಆರ್‌ಎಎಫ್ ಕೇಂದ್ರ ಮೀಸಲು ಪೊಲೀಸ್ ಪಡೆಯು (ಸಿಆರ್ಪಿಎಫ್) ವಿಶೇಷ ಗಲಭೆ ವಿರೋಧಿ ಯುದ್ಧ ಘಟಕವಾಗಿದೆ, ಇದು ವಿಶ್ವದ ಅತಿದೊಡ್ಡ ಅರೆಸೈನಿಕ ಶಕ್ತಿಯಾಗಿದ್ದು, ಸುಮಾರು 3.25 ಲಕ್ಷ ಸಿಬ್ಬಂದಿಗಳನ್ನು ಹೊಂದಿದೆ.
ಈ ತಂಡಕ್ಕೆ ಸಿಆರ್‌ಪಿಎಫ್ ತರಬೇತುದಾರರು 25 ರಿಂದ 30 ವರ್ಷದೊಳಗಿನ ಸದಸ್ಯರನ್ನು ವಿಶೇಷವಾಗಿ ಆಯ್ಕೆ ಮಾಡಿದ್ದಾರೆ. ಇವರನ್ನು ಪಡೆಗಳ ವಿವಿಧ ಯುದ್ಧ ಶ್ರೇಣಿಗಳಿಂದ ಆಯ್ಕೆ ಮಾಡಲಾಗಿದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದರು.
ಕಳೆದ ವರ್ಷ ಅಕ್ಟೋಬರ್ 31 ರಂದು ಗುಜರಾತ್‌ನ ಕೆವಾಡಿಯಾದಲ್ಲಿ ನಡೆದ ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನ ಆಚರಣೆಯಲ್ಲಿ ಈ ಮಹಿಳಾ ಬೈಕರ್ ತಂಡ ಪ್ರದರ್ಶನ ನೀಡಿತ್ತು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು.
1986 ರಲ್ಲಿ ಸಿಆರ್‌ಪಿಎಫ್ ಏಷ್ಯಾದಲ್ಲಿ ಮೊದಲ ಸಶಸ್ತ್ರ ಮಹಿಳಾ ಬೆಟಾಲಿಯನ್ ಅನ್ನು ರಚಿಸಿತ್ತು. ಪ್ರಸ್ತುತ ಅಂತಹ ಆರು ಘಟಕಗಳನ್ನು ಹೊಂದಿದ್ದು, ತಲಾ 1,000 ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಹೊಂದಿದೆ.
ಈ ವರ್ಷದ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಎಲ್ಲ ಮಹಿಳಾ ಸಿಆರ್‌ಪಿಎಫ್ ದಳವು 9 ಬೈಕು ಸವಾರಿಯನ್ನು ಪ್ರಸ್ತುತ ಪಡಿಸಲಿದ್ದು, ಬಹು ಮೋಟರ್‌ಸೈಕಲ್‌ಗಳಲ್ಲಿ ಮಾನವ ಪಿರಮಿಡ್‌ಗಳನ್ನು ರಚಿಸುವ ಮೂಲಕ ಪ್ರದರ್ಶನ ಮುಕ್ತಾಯಗೊಳ್ಳುತ್ತದೆ.
2018 ರ ಪೆರೇಡ್‌ನಲ್ಲಿ ಬಾರ್ಡರ್ ಸೆಕ್ಯುರಿಟಿ ಫೋರ್ಸ್‌ನ (ಬಿಎಸ್‌ಎಫ್) ಮಹಿಳಾ ಬೈಕರ್‌ಗಳ ತಂಡವು ಇದೇ ರೀತಿಯ ಮೊದಲ ಪ್ರದರ್ಶನ ನೀಡಿತ್ತು.
2015 ರಲ್ಲಿ ನೌಕಾಪಡೆ ಹಾಗೂ ವಾಯುಪಡೆಯ ಮಹಿಳೆಯರ ಸೈನ್ಯ ರಾಷ್ಟ್ರೀಯ ಮೆರವಣಿಗೆಯಲ್ಲಿ ಪಾದಾರ್ಪಣೆ ಮಾಡಿದ್ದರು.
ಸಂಪ್ರದಾಯದಂತೆ ಗಣರಾಜ್ಯೋತ್ಸವದ ಮೆರವಣಿಗೆಯು ಬಿಎಸ್ಎಫ್ ಮತ್ತು ಸೈನ್ಯದ ಬೈಕ್‌ಗಳ ಮೇಲೆ ಮಾಡಲಾಗುವ ಸಾಹಸಮಯ ಸವಾರಿ/ಪ್ರದರ್ಶನ ಮಾಡುವ ಮೂಲಕ ಕೊನೆಗೊಳ್ಳುತ್ತದೆ. ಆದರೆ ಈ ವರ್ಷ ಸಿಆರ್‌ಪಿಎಫ್ ಮಹಿಳಾ ಸಿಬ್ಬಂದಿಗೆ ಅವಕಾಶ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.