ಸಕಲ ಕಲಾ ವಲ್ಲಭ - ಆಸಕ್ತಿಯೇ ಈಗ ಫುಲ್ ಟೈಂ ಜಾಬ್
ಪೂರ್ವಿಕಾ
ಕಲೆ ಅನ್ನೋದು ಯಾರ ಸೊತ್ತು ಅಲ್ಲ. ಶಿಸ್ತು, ಆಸಕ್ತಿ ಇತ್ತು ಅಂದ್ರೆ ಕಲೆಯನ್ನ ಒಲಿಸಿಕೊಳ್ಳಬಹುದು ಅನ್ನೋ ಮಾತಿದೆ. ಆದ್ರೆ ಕೆಲ ಕಲೆಗಳನ್ನ ಒಲಿಸಿಕೊಳ್ಳಲು ಅದೆಷ್ಟೋ ಮಂದಿ ಏನೇನೂ ಮಾಡಿ ಸೋತಿರುತ್ತಾರೆ. ಆದ್ರೆ ನಾವು ಇವತ್ತು ಹೇಳ್ತಿರೋರನ್ನ ಸಕಲ ಕಲೆಯ ವಲ್ಲಭ ಅಂದ್ರೆ ತಪ್ಪಾಗಲಾರದು. ಯಾಕಂದ್ರೆ ಇವ್ರು ಆಸಕ್ತಿ ತೋರಿದ ಎಲ್ಲಾ ಕಲೆಗಳನ್ನ ಕಲೆತು ಜೀರ್ಣಿಸಿಕೊಂಡಿದ್ದಾರೆ. ಆಕ್ಟಿಂಗ್‍ಗೂ ಸೈ, ಫೈಟಿಂಗ್ಗೂ ಸೈ, ಶಿಲ್ಪಕಲೆಗೂ ಜೈ …!
ಬೆಂಗಳೂರಿನ ಮೂಲೆ ಮೂಲೆಯಲ್ಲಿ ರಸ್ತೆಗಳಲ್ಲಿ ನೋಡೋಕೆ ಸಿಗೋ ರಾಜ್ಕುಮಾರ್ ಪುತ್ಥಳಿ, ವಿಷ್ಣುವರ್ಧನ್ ಪುತ್ಥಳಿ, ಚಿನ್ನಸ್ವಾಮಿ, ಕುವೆಂಪು ಹೀಗೆ ಇನ್ನೋ ಅನೇಕ ರೀತಿಯ ಪುತ್ಥಳಿಗಳನ್ನ ಕೆತ್ತಿ ತನ್ನ ಕಲೆಯನ್ನ ರಾಜ್ಯದ ಮೂಲೆ ಮೂಲೆಗೂ ಹರಡಿದ್ದಾರೆ ಮುರಳಿಧರ್ ಆಚಾರ್. ಮೂಲತಃ ಚಿಕ್ಕ ಜಾಜೂರಿನವರಾದ ಮುರಳಿಧರ್ ಸದ್ಯ ಬೆಂಗಳೂರಿನ ಕತ್ತರಿಗುಪ್ಪೆಯಲ್ಲಿ ನಿವಾಸಿಯಾಗಿದ್ದಾರೆ. ಮುರಳಿಧರ್ ಆಚಾರ್ ಶಿಲ್ಪಕಲೆ ಕಲೆಗೆ ಹೆಸರುವಾಸಿ, ಮಾತ್ರವಲ್ಲದೆ ಕುಂಚ ಹಿಡಿದು ನಿಂತ್ರೆ ನಿಮ್ಮೆಲ್ಲರನ್ನ ಬೆರಗಾಗಿಸುವಂತೆ ಪೈಟಿಂಗ್ ಮಾಡ್ತಾರೆ. ಅಭ್ಯಾಸ ಮಾಡಿದ್ದು ಚಿತ್ರ ಕತೆಯಾದ್ರು ಆಸಕ್ತಿ ಮೂಡಿದ್ದು ಮಾತ್ರ ಶಿಲ್ಪಕಲೆಯ ಮೇಲೆ..!
ಇಲ್ಲಿಯ ವರೆಗೂ ಲೆಕ್ಕವಿಲ್ಲದಷ್ಟು ಶಿಲ್ಪಕಲೆಯನ್ನ ಮಾಡಿರೋ ಮುರಳಿ ಅವ್ರ ಆಸಕ್ತಿ ಕಲೆಯ ಮೇಲಿನ ಶಿಸ್ತನ್ನು ಕಂಡು ನಟ ಉಪೇಂದ್ರ ಮೆಚ್ಚಿದ್ದಾರೆ. 2007ರಿಂದ ಶಿಲ್ಪಕಲೆಯನ್ನ ಮಾಡಲು ಶುರು ಮಾಡಿರೋ ಮುರಳಿ ಕಂಚು,ಫೈಬರ್ ,ಹಿತ್ತಾಳೆ ,ತಾಮ್ರ,ಕಲ್ಲು ಹೀಗೆ ಇನ್ನೂ ಅನೇಕ ರೀತಿ ಪುತ್ಥಳಿಗಳನ್ನ ಮಾಡುತ್ತಾರೆ…ಚಿನ್ನಸ್ವಾಮಿ ಸ್ಟೇಡಿಯಂಗೆ ನೀವು ಬೇಟಿಕೊಟ್ರೆ ಅಲ್ಲಿ ಇರೋ ಚಿನ್ನಸ್ವಾಮಿ ಅವ್ರ ಪುತ್ಥಳಿಗೆ ರೂಪ ನೀಡಿದ್ದು ಇದೇ ಮುರಳಿಧರ್.
ಇತ್ತೀಚಿಗಷ್ಟೆ ಮೈಸೂರಿನ ಸುತ್ತೂರು ಮಠದಲ್ಲಿ ಶಿಲ್ಪಕಲಾ ಅಕಾಡೆಮಿ ಕ್ಯಾಂಪ್ ನಲ್ಲಿ ಆಯೋಜಿಸಿದ್ದ ಶಿಲ್ಪಕಲಾ ಕ್ಯಾಂಪ್ ನಲ್ಲಿ ವಿದ್ಯಾರ್ಥಿಗಳಿಗೆ ಮುರಳಿ ಶಿಲ್ಪಕಲಾ ಬಗ್ಗೆ ತರಗತಿಗಳನ್ನ ನೀಡಿದ್ದಾರೆ. ಈ ಕ್ಯಾಂಪ್ ನಲ್ಲಿ ಮಾಡಿದ ಸುತ್ತೂರು ಮಠದ ಸ್ವಾಮಿಗಳ ಪುತ್ಥಳಿ ಎಲ್ಲರ ಗಮನ ಸೆಳೆದಿರೋದು ವಿಶೇಷ. ಸದ್ಯ ಕಲಾ ಮಾಧ್ಯಮದಲ್ಲಿರೋ ಎಲ್ಲಾ ರೀತಿಯ ಕಲೆಯನ್ನಕಲಿತು ಸೈ ಅನ್ನಿಸಿಕೊಂಡಿರೋ ಮುರಳಿ ಇಷ್ಟೇ ಅಲ್ಲದೆ ಒಬ್ಬ ಒಳ್ಳೆಯ ನಟ ಹಾಗೂ ಕಲಾ ನಿರ್ದೇಶಕ. ಇವ್ರ ಸೃಜನಶೀಲತೆಯನ್ನ ನೋಡಿ ನಟ ಉಪೇಂದ್ರ ಅವ್ರ ನಿರ್ದೇಶನದ ಉಪ್ಪಿ2 ಸಿನಿಮಾಗೆ ಸಹಾಯಕ ನಿರ್ದೇಶಕ ಹಾಗೂ ಕಲಾ ನಿರ್ದೇಶಕರಾಗಿ ಕೆಲಸ ಮಾಡುವಂತೆ ಆಹ್ವಾನ ನೀಡಿದ್ದರು. ಅದ್ರಲ್ಲೂ ಸೈ ಅನ್ನಿಸಿಕೊಂಡಿರೋ ಮುರಳಿಧರ್ ಸದ್ಯ ಬಹು ಬೇಡಿಕೆಯ ಕಲಾ ನಿರ್ದೇಶಕ ಹಾಗೂ ಶಿಲ್ಪಕಲಾ ಕಲಾವಿದ. ತನ್ನ ಆಸಕ್ತಿಗೆ ಒಂದು ರೂಪ ನೀಡಿದ ಗುರುಗಳನ್ನ ಸದಾ ಸ್ಮರಿಸೋ ತಾವು ಕಲಿತಕಲೆಯನ್ನ ಹಲವು ವಿದ್ಯಾರ್ಥಿಗಳ ಜೊತೆಯಲ್ಲಿ ಹಂಚಿಕೊಳ್ತಿದ್ದಾರೆ. ಮುರಳಿಧರ್ ಮಾಡಿರೋ ವಿವೇಕಾನಂದ ಹಾಗೂ ರಾಮಕೃಷ್ಣ ಅವ್ರ ಪುತ್ಥಳಿ ಅವ್ರ ಕಲಾ ಜೀವನದಲ್ಲಿ ಅದ್ಬುತ ಹಾಗೂ ಅತೀ ದೊಡ್ಡ ಪುತ್ಥಳಿ.
ಆಸಕ್ತಿಯನ್ನೇಉದ್ದಿಮೆಯಾಗಿ ಮಾಡಿಕೊಂಡಿರೋ ಮುರಳಿಧರ್ ಈಗ ರಾಜ್ಯದಲ್ಲಿರೋ ಉತ್ತಮ ಹಾಗೂ ಬೇಡಿಕೆಯ ಶಿಲ್ಪಕಲಾ ಕಲಾವಿದರಲ್ಲಿ ಇವ್ರು ಕೂಡ ಒಬ್ಬರು. ರಾಜ್ಯದ ಯಾವುದೇ ಮೂಲೆಯಲ್ಲಾದರೂ ಶಿಲ್ಪ ಕಲೆ ಮಾಡಿಕೊಡಬೇಕು ಅಂದ್ರೆ ಮುರಳಿಧರ್ ಮಾಡಿಕೊಡುತ್ತಾರೆ. ಅತ್ಯಂತ ದೊಡ್ಡ ಶಿಲ್ಪಗಳಾದ್ರೆ ಮುರಳಿಧರ್ ಅವ್ರೇ ಖುದ್ದಾಗಿ ಭೇಟಿಕೊಟ್ಟು ಪುತ್ಥಳಿ ಮಾಡಿಕೊಡುತ್ತಾರೆ. ಇನ್ನು ಸಣ್ಣ ಪುಟ್ಟ ಪುತ್ಥಳಿಗಳಾದ್ರೆ ತಮ್ಮ ನಿವಾಸದಲ್ಲೇ ಮಾಡಿಕೊಡುತ್ತಾರೆ. ಆಸಕ್ತಿ ಹಾಗೂ ಶ್ರದ್ದೆ ಇದ್ರೆ ಸಾಕು ಎಂತಹ ಕಲೆಯನ್ನಾದ್ರು ಒಲಿಸಿಕೊಳ್ಳಬಹುದು ಅನ್ನೋದು ಮುರಳಿಧರ್ ಅವ್ರನ್ನ ನೋಡಿದ್ರೆ ತಿಳಿಯುತ್ತದೆ. ಸುಮಾರು ಒಂಭತ್ತು ವರ್ಷದಿಂದ ಶಿಲ್ಪಕಲೆಯನ್ನ ಜೀವನಕ್ಕೆಆಧಾರವಾಗಿಟ್ಟುಕೊಂಡಿರೋ ಮುರಳಿಧರ್ ಈಗಿನ ಯುವ ಕಲಾ ವಿದ್ಯಾರ್ಥಿಗಳಿಗೆ ಸ್ಫೂರ್ತಿನೂ ಹೌದು.