ಓದಿದ್ದು ಒಂಭತ್ತನೇ ಕ್ಲಾಸ್..ಆಗಿದ್ದು ಎಂಜಿನಿಯರ್ಗಳಿಗೇ ಟೀಚರ್....
ನಿನಾದ
ಸಾಧಿಸುವ ಛಲವೊಂದಿದ್ದರೆ ಯಾರೂ ಬೇಕಾದ್ರೂ ಏನನ್ನಾದರೂ ಸಾಧಿಸಬಹುದು ಅನ್ನೋದಕ್ಕೆ ಅಪ್ಪಟ ಉದಾಹರಣೆ ವಿಜಯಪುರದ ಸೃಷ್ಟಿ ಕಾಲೋನಿ ನಿವಾಸಿ ಯಶೋಧಾ ವಿ ಗುಜ್ಜರ್ . ಕೇವಲ ಒಂಭತ್ತನೇ ಕ್ಲಾಸ್ ಓದಿರುವ ಯಶೋಧಾ ಇವತ್ತು ಅದೆಷ್ಟೋ ಎಂಜಿನಿಯರಿಂಗ್ ಗಳಿಗೆ ಕಡಿಮೆ ನೀರು ಬಳಕೆಯ ಶೌಚಾಲಯ ನಿರ್ಮಿಸೋದಕ್ಕೆ ಐಡಿಯಾಗಳನ್ನು ನೀಡುತ್ತಿದ್ದಾರೆ.ಇದರ ಜೊತೆಗೆ ಯಶೋಧಾ ಜೂಟ್ ಉದ್ಯಮದ ಮೂಲಕ ದೇಶ ವಿದೇಶಗಳಲ್ಲಿ ಸದ್ದು ಮಾಡುತ್ತಿದ್ದಾರೆ.
ಬದುಕಿನ ಅನಿವಾರ್ಯತೆಗಾಗಿ ಧರ್ಮಸ್ಥಳದ ರುಡ್ ಸೆಟ್ ನಲ್ಲಿ ಪಡೆದ ಜೂಟ್ ಬ್ಯಾಗ್ ತಯಾರಿ ತರಬೇತಿ ಇವತ್ತು ಯಶೋಧಾರನ್ನು ಇವತ್ತು ಲಕ್ಷಾಂತರ ಮಹಿಳೆಯರಿಗೆ ಮಾದರಿಯನ್ನಾಗಿಸಿದೆ. ರಾಜ್ಯದ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರನ್ನಾಗಿಸಿದೆ. ಐಶ್ವರ್ಯಾ ಜೂಟ್ ಎಂಬ ತಮ್ಮ ಸಂಸ್ಥೆಯ ಮೂಲಕ ಯಶೋಧಾ ವಿವಿಧ ರೀತಿಯ ಜೂಟ್ ಬ್ಯಾಗ್ ಗಳನ್ನು ಹೊರ ದೇಶಗಳಿಗೂ ರಫ್ತು ಮಾಡುತ್ತಿದ್ದಾರೆ. ಆ ಮೂಲಕ ತಿಂಗಳಿಗೆ ಲಕ್ಷಾಂತರ ರೂಪಾಯಿ ವ್ಯವಹಾರ ಮಾಡುತ್ತಿದ್ದಾರೆ. ಯಶೋಧಾ ಓದಿದ್ದು ಕೇವಲ ಒಂಭತ್ತನೇ ತರಗತಿಯಾದ್ರೂ ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿದ್ದಾರೆ. ವಿದ್ಯಾವಂತರಾದ್ರೂ ಯಶೋಧಾ ಅವರ ಮಕ್ಕಳು ಇವತ್ತು ತಾಯಿ ಉದ್ಯಮದಲ್ಲೇ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಸದ್ಯ 60ರ ಹರೆಯದ ಯಶೋಧಾ ತಮ್ಮ ಉದ್ಯಮದ ಜೊತೆಗೆ ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಕಷ್ಟದಲ್ಲಿರುವ ನೂರಾರು ಹೆಣ್ಣುಮಕ್ಕಳಿಗೆ ಯಶೋಧಾ ನೆರವಾಗಿದ್ದಾರೆ. ಇದಲ್ಲಕ್ಕಿಂತ ಅಚ್ಚರಿಯ ಸಂಗತಿ ಅಂದ್ರೆ ಇಡೀ ರಾಜ್ಯದಲ್ಲೇ ಮೊದಲ ಬಾರಿಗೆ ಕಡಿಮೆ ನೀರು ಬಳಕೆಯ ಶೌಚಾಲಯ ಹೇಗೆ ನಿರ್ಮಿಸಬಹುದು ಎಂದು ತೋರಿಸಿಕೊಟ್ಟ ಕೀರ್ತಿ ಇವರದ್ದು. ವಿಜಯಪುರ ಜಿಲ್ಲೆ ಕಣ್ಣೂರು ಮುಂತಾದ ಕಡೆಗಳಲ್ಲಿ ಮೂವತ್ತು ಸಾವಿರಕ್ಕೂ ಹೆಚ್ಚು ಶೌಚಾಲಯಗಳನ್ನು ತಮ್ಮ ಸ್ವಂತ ಆಸಕ್ತಿಯಿಂದ ನಿರ್ಮಿಸಿ ಕೊಟ್ಟಿದ್ದಾರೆ. ಅಲ್ಲದೇ ಅದೆಷ್ಟೋ ಎಂಜಿನಿಯರ್ ಗಳು ಶೌಚಾಲಯ ನಿರ್ಮಾಣದ ಬಗ್ಗೆ ಇವರಿಂದಲೇ ಐಡಿಯಾಗಳನ್ನು ಕೇಳುತ್ತಾರಂತೆ.
ಯಶೋಧಾ ಅವರ ಸಾಧನೆಗೆ ಈಗಾಗಲೇ 200ಕ್ಕೂ ಹೆಚ್ಚು ಪ್ರಶಸ್ತಿಗಳು ದೊರೆತಿವೆ. ಕಿತ್ತೂರು ಚೆನ್ನಮ್ಮ ಪ್ರಶಸ್ತಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ದೇವರಾಜು ಅರಸು ಪ್ರಶಸ್ತಿ, ಝೀ ಕನ್ನಡ ಮಹಿಳಾ ಸಾಧಕಿ ಪ್ರಶಸ್ತಿ ಹೀಗೆ ಅನೇಕ ಗೌರವಗಳಿಗೆ ಭಾಜನರಾಗಿದ್ದಾರೆ. ಅಲ್ಲದೇ ಸರ್ಕಾರ ಕೂಡ ಯಶೋಧಾ ಅವರಿಗೆ ಜೂಟ್ ಬ್ಯಾಗ್ ಕಾರ್ಖಾನೆ ನಿರ್ಮಾಣಕ್ಕಾಗಿ 5000 ಸ್ಕ್ವೇರ್ ಫೀಟ್ ಜಾಗ ನೀಡಿದೆಯಂತೆ. ಹಾಗಾಗಿ ಯಶೋಧಾ ತಮ್ಮ ಉದ್ಯಮವನ್ನು ಇನ್ನಷ್ಟು ಬೆಳೆಸುವ ಉತ್ಸಾಹದಲ್ಲಿದ್ದಾರೆ. ಜೊತೆಗೆ ತನ್ನಂತೆ ಉತ್ತಮ ಬದುಕು ರೂಪಿಸಿಕೊಳ್ಳಲು ಆಸಕ್ತಿಯಿರುವ ಮಹಿಳೆಯರಿಗೆ ಸಹಾಯ ಮಾಡಲು ನಾನೆಂದು ಸಿದ್ಧ ಅನ್ನುತ್ತಾರೆ ಯಶೋಧಾ.