ಭಾರತೀಯ ರಂಗಭೂಮಿಯ ಹೆಮ್ಮೆ "ಗಿರೀಶ್ ಕಾರ್ನಾಡ್"
ಚೈತ್ರ. ಎನ್
ತಂದೆ ಯಾಯತಿಯ ಅಕಾಲಿಕ ಮುಪ್ಪನ್ನು ಸ್ವೀಕರಿಸಿದ ಮಗ ಪುರುವಿನ ಬಗ್ಗೆ ನಾವೆಲ್ಲರೂ ಓದಿರುತ್ತೇವೆ, ಕೇಳಿರುತ್ತೇವೆ. ಆದರೆ ಅದನ್ನೆ ಅನುಭಾವಿಸಿ ಅದಕ್ಕೊಂದು ಹೊಸ ಆಯಾಮ, ವಿಶ್ಲೇಷಣೆ ಕೊಟ್ಟು ರಂಗದ ಮೇಲೆ ತರುವ ಪ್ರಯತ್ನ ಬರಹಗಾರ, ನಾಟಕಕಾರ, ನಟ ಮತ್ತು ನಿರ್ದೇಶಕನಿಗಷ್ಟೇ ಸಮರ್ಥವಾಗಿ ಮಾಡಲು ಸಾಧ್ಯವಾಗುವುದು. ಈ ಪೀಳಿಗೆಯ ಭಾರತದ ರಂಗಭೂಮಿ ನಾಟಕಗಳ ಬರಹ ಎಂದ ಕೂಡಲೇ ನಮ್ಮ ಮನಸಲ್ಲಿ ಮೂಡುವ ಚಿತ್ರ ಜ್ಞಾನಪೀಠ ಪುರಸ್ಕೃತರಾದ ಗಿರೀಶ್ ಕಾರ್ನಾಡ್‍ರದ್ದು.
ತುತುನ್ ಮುಖರ್ಜಿಯವರೊಂದಿಗೆ ನಡೆದ ಸಂದರ್ಶನದಲ್ಲಿ ನಾಟಕ ಕ್ಷೇತ್ರ ತಮ್ಮನ್ನು ಹೇಗೆ ಸೆಳೆಯಿತು ಎನ್ನುವುದರ ಬಗ್ಗೆ ಕಾರ್ನಾಡರ ಹೇಳುವುದು ಹೀಗೆ " ಸಿರ್ಸಿಯಲ್ಲಿ ಯಾವಾಗಲೂ ನಾಟಕಗಳು ನಡೆದೆ ಇರುತ್ತಿದ್ದವು. ರಂಗಭೂಮಿಯನ್ನು ಅದರ ಎಲ್ಲಾ ವೈಭವದಲ್ಲೂ ನಾವು ನೋಡಿದೆವು. ಹಲವಾರು ಮರಾಠಿ ಕಂಪನಿ ನಾಟಕಗಳು ಹಾಗೂ ಪ್ರವಾಸಿ ನಾಟಕ ತಂಡಗಳು ಆ ಊರಿಗೆ ಬರುತ್ತಿದ್ದವು. ಸುಗ್ಗಿಯ ನಂತರ ಯಕ್ಷಗಾನವಿರುತ್ತಿತ್ತು. ಎರಡು ಭಿನ್ನ ನಾಟಕ ರೂಪಗಳಿಗೆ, ಜಗತ್ತುಗಳಿಗೆ ನಾನು ತೆರೆದುಕೊಂಡಿದ್ದೆ" ಎನ್ನುತ್ತಾರೆ. ಹೀಗೆ ನಾಟಕಗಳನ್ನು ನೋಡುತ್ತಾ ಬದುಕಾಗಿಸಿಕೊಳ್ಳುತ್ತಾ ಆ ಕ್ಷೇತ್ರದಲ್ಲೇ ಇಡೀ ಭಾರತವನ್ನೊಮ್ಮೆ ಬೇರೆ ದೇಶಗಳು ತಿರುಗಿ ನೋಡುವಂತೆ ಮಾಡಿದ ಕಾರ್ನಾಡ್‍ರ ಹುಟ್ಟೂರು ಮಹಾರಾಷ್ಟ್ರ. 16-17 ವಯಸ್ಸಿನಲ್ಲಿ ಟಿ. ಎಸ್. ಇಲಿಯಟ್ ಅವರ ಚಿತ್ರ ಬರೆದು ಅವರಿಗೆ ಕಳಿಸಿದ್ದರು, ಕವಿ ಈಲಿಯಟ್‍ರವರು ಅದರ ಮಳೆ ತಮ್ಮ ಆಟೋಗ್ರಾಫ್ ಹಾಕಿ ಕಳಿಸಿದ್ದರು. ಹೀಗೆ ಸರ್ವಪಲ್ಲಿ ರಾಧಕೃಷ್ಣನ್, ಐನ್‍ಸ್ಟೀನ್ ಎಲ್ಲರ ಚಿತ್ರ ಬರೆದು ಕಳಿಸೋದು ಆಟೋಗ್ರಾಫ್ ಪಡೆಯೋದು ಮಾಡುತ್ತಿದ್ದ ಕಾರ್ನಾಡರಿಗೆ ಸಾನ್ ಓಕಿಝಿ ಎಂಬ ಐರಿಶ್ ಕವಿ ಹೀಗೆ ಹೇಳಿದರಂತೆ" ಏಕೆ ಹೀಗೆ ಎಲ್ಲರ ಚಿತ್ರ ಬರೆದು ಅದರ ಮೇಲೆ ಅವರ ಆಟೋಗ್ರಾಫ್ ಪಡೆಯುತ್ತೀಯ? ಓದುವವರು ನಿನ್ನ ಆಟೋಗ್ರಾಫ್ ಪಡೆಯುವಂತೆ ಮಾಡು " ಎಂದರಂತೆ ಇದರಿಂದ ಪ್ರೇರಣೆಗೊಂಡ ಕಾರ್ನಾಡರು ತಮ್ಮ 18 ನೇ ವಯಸ್ಸಿನಲ್ಲಿ ಹೊಸ ಬದಲಾವಣೆ ಕಂಡರು.
ಸಿನಿಮಾ ನಟರಾಗಿ, ನಿರ್ದೆಶಕರಾಗಿ, ಆಡಳಿತಗಾರರಾಗಿ, ಚಿಂತಕರಾಗಿ ತಾಯಿ ಲಕ್ಷ್ಮಿಬಾಯಿ ಮತ್ತು ತಂದೆ ರಘುನಾಥ ಕಾರ್ನಾಡ್. ತಾಯಿಯವರದ್ದು ಪುನರ್ ವಿವಾಹವಾಗಿತ್ತು. "ಮೂರನೇ ಮಗು ಬೇಡ ಎಂದು ಕಾರ್ನಾಡ್‍ರ ತಾಯಿ ಅಬಾರ್ಷನ್ ಮಾಡಿಸೋಣ ಅಂದಿದ್ರು, ಡಾ. ಮಧುಮಾಲತಿ ಗುಣೆ, ಅವರು ಬರಲೇ ಇಲ್ಲ. ಹೀಗೆ ಹೋಗೋಣ ಹೋಗೋಣ ಅಂತಾ ಬಿಟ್ಟೆ ನೀನು ಹುಟ್ಟಿದೆ ಅಂದ್ರು ನಮ್ಮಮ್ಮ" ಎಂದು ನೆನೆಸಿಕೊಳ್ಳುತ್ತಾರೆ ಕಾರ್ನಾಡ್‍ರು.
ತಂದೆ ಸರ್ಕಾರಿ ನೌಕರರು, ಆಗಾಗ ವರ್ಗವಾಗುತ್ತಿತ್ತು. ಹೀಗೆ ವರ್ಗವಾಗಿ ಮಹಾರಾಷ್ಟ್ರದಲ್ಲಿದ್ದ ಸಂದರ್ಭ. 1938 ರಲ್ಲಿ ಕಾರ್ನಾಡ್‍ರು ಜನಿಸಿದರು. 14 ನೇ ವಯಸ್ಸಿಗೆ ಧಾರಾವಾಡಕ್ಕೆ ಬಂದರು. ಅಲ್ಲಿಂದ ಇಲ್ಲಿಯ ತನಕ ಕಾರ್ನಾಡ್‍ರಿಗೂ ಧಾರಾವಾಡಕ್ಕೂ ಬಿಡಿಸಲಾರದ ನಂಟು. ಕಥೆ ಹೇಳುವ ಸಂಸ್ಕೃತಿ ಬಾಲ್ಯದಲ್ಲಿ ಮೈದಳೆದಿತ್ತು. ಮನೆಯಲ್ಲಿ ಮರಾಠಿಯ ಭಾಷೆ ಪ್ರಭಾವವಿದ್ದರೂ ಕಾರ್ನಾಡ್ ಮತ್ತು ಅವರ ತಂಗಿ ಕನ್ನಡ ಕಲಿತರು. ಮುಂದೆ ಅದೇ ಕನ್ನಡದಲ್ಲಿ ಸಾಧಿಸಲು ಅವಕಾಶ ಮಾಡಿಕೊಟ್ಟಿತ್ತು.
ಬೇಂದ್ರೆಯವರನ್ನ ಬಹಳ ಹತ್ತಿರದಿಂದ ನೋಡಿದವರಾಗಿದ್ದ ಕಾರ್ನಾಡ್‍ರಿಗೆ ವಿ. ಕೃ. ಗೋಕಾಕ್‍ರವರು ಕಾಲೇಜಿನ ಪ್ರಾಂಶುಪಾಲರಾಗಿದ್ದರು. ಧಾರಾವಾಡದ ಕರ್ನಾಟಕ್ ಕಾಲೇಜಿನಲ್ಲಿ ಸೀನಿಯರ್ ಆಗಿದ್ದ ಸಾಹಿತಿಗಳಾದ ಕೀರ್ತಿನಾಥ್ ಕುರ್ತಾಕೋಟಿ ಚರ್ಚೆಗಳ ಮೂಲಕ ಸಾಹಿತ್ಯ ವಿಷಯದಲ್ಲಿ ಹೆಚ್ಚು ಪ್ರಭಾವ ಬೀರಿದ್ದರು. ಕನ್ನಡ ಪ್ರಭ ಸಂಪಾದಕರು ವೈ.ಎನ್.ಕೆ. ಪ್ರಕಾರ ಮನೋಹರ ಗ್ರಂಥ ಮಾಲೆ ಕನ್ನಡ ಸಾಹಿತ್ಯ ಬೆಳೆಯಲು ಕಾರಣ. ಇದು ಕಾರ್ನಾಡ್‍ರಿಗೆ ಮನೆಯೇ ಅಗಿಬಿಟ್ಟಿತ್ತು. ಕನ್ನಡ, ಸಂಸ್ಕೃತ, ಸಾಹಿತ್ಯ ಕಲಿತದ್ದು ಇಲ್ಲೇ. ಎ .ಕೆ. ರಾಮನುಜನ್, ಶಂಕರ್ ಮೊಕಾಶೀ ಪುಣೆಕರ್ ಅವರನ್ನೆಲ್ಲಾ ಭೇಟಿ ಮಾಡಿದ್ದು ಪರಿಣಾಮ ಬೀರಿತ್ತು.
ವಿದೇಶದಲ್ಲಿ ಓದುವ ಆಸೆ ಇತ್ತು. ಅದಕ್ಕಾಗಿ ಸ್ಕಾಲರ್‍ಶಿಪ್ ಬೇಕಿತ್ತು. ಅದಕ್ಕೆ ಹೆಚ್ಚು ಸ್ಕೋರ್ ಮಾಡಲು ಗಣಿತ ತೆಗೆದುಕೊಂಡು ರೋಡ್ಸ್ ಸ್ಕಾಲರ್‍ಶಿಪ್ ಪಡೆದು ಆಕ್ಸ್ಫರ್ಡ್ಗೆ ಹೋದ್ರು. ಆದರೆ ಲಾಜಿಕ್, ತರ್ಕವನ್ನು ಕಲಿಸಿದ ಗಣಿತ ನಾಟಕದಲ್ಲಿ ಹೊಸ ಆಯಾಮ ತರಲು ಕಾರ್ನಾಡ್‍ರಿಗೆ ಪ್ರಯೋಜನವಾಯಿತು. ಬಿ ಎ ಮುಗಿಸಿ ಬರೆದ ಮೊದಲ ನಾಟಕ ಯಾಯಾತಿ ಅದನ್ನು ಬಿ ವಿ ಜೋಷಿಯವರಿಗೆ ಕೊಟ್ಟಿದ್ದರು ಓದಲಿಕ್ಕೆ. ನಂತರ ಆಕ್ಸ್ಫರ್ಡ್ಗೆ ಹೋರಟು ಹೋದರು. ಅಲ್ಲಿ ಯಾಯಾತಿ ನಾಟಕವನ್ನು ಬದಲಾಯಿಸಿ ಬರೆದರು. ನಂತರ ಮನೋಹರ ಗ್ರಂಥ ಮಾಲೆ ಪ್ರಕಟಿಸಿತು. ಒಂದು ವೇಳೆ ಮನೋಹರ ಗ್ರಂಥ ಮಾಲೆ ಯಾಯಾತಿ ಪ್ರಕಟಿಸದೇ ಇದ್ದದ್ದರೇ ಕಾರ್ನಾಡ್‍ರು ಲಂಡನ್‍ನಲ್ಲೆ ಉಳಿದುಬಿಡುತ್ತಿದ್ದರಂತೆ.
ಭಾರತಕ್ಕೆ ಬಂದ ನಂತರ ರಂಗಭೂಮಿಯ ಕಡೆ ಸೆಳೆಯಿತು. ಆಗಲೇ ಹುಟ್ಟಿಕೊಂಡಿದ್ದು ತುಘಲಕ್ ನಾಟಕ ರಚನೆ. ಹಯವದನ, ಹಿಟ್ಟಿನ ಹುಂಜ, ನಾಗಮಂಡಲ, ಹೂ, ಅಗ್ನಿ ಮತ್ತು ಮಳೆ, ಟಿಪ್ಪು ಕಂಡ ಕನಸು, ಈ ಮೂಲಕ ಜಾನಪದ, ಐತಿಹಾಸಿಕ ನಾಟಕಗಳಿಗೆ ಹೊಸ ಆಯಾಮ ನೀಡಿದರು ಕಾರ್ನಾಡರು. "ಮಹಿಳಾ ವಿಮರ್ಶಕರು ಅನುಕಂಪದಿಂದ ನೋಡುತ್ತಾರೆ. ಇದಕ್ಕೆ ಕಾರಣ ನನ್ನ ಅಕ್ಕ, ತಂಗಿ, ಸೋದರ ಮಾವನ 5 ಹೆಣ್ಣು ಮಕ್ಕಳು, ಇವರೆಲ್ಲರ ಪ್ರಭಾವ ನನ್ನ ಮೇಲೆ ಇತ್ತು." ಎನ್ನುತ್ತಾರೆ ಕಾರ್ನಾಡರು. ಒಡಕಲು ಬಿಂಬ, ಲಗ್ನದ ಆಲ್ಬಮ್, ಅಂಜುಮಲ್ಲಿಗೆ ಸಾಮಾಜಿಕ ನಾಟಕಗಳು ಪರಿಣಾಮಕಾರಿಯಾಗಿ ಮೂಡಿದ್ದವು.
ಕಾರ್ನಾಡರು ನವ್ಯತೆಯನ್ನು ರಂಗಭೂಮಿಗೆ ತಂದರು. ಸ್ವಾತಂತ್ರ್ಯಯೋತ್ತರ ನಾಟಕಕಾರರಾಗಿ ತಾವು ಎದುರಿಸಿದ ಸಮಸ್ಯೆ ಬಗ್ಗೆ ಕಾರ್ನಾಡರು ಹೇಳುವುದು ಹೀಗೆ " ನಮ್ಮದು ಬ್ರಿಟಿಷ್ ಆಳ್ವಿಕೆ ಕೊನೆಗೊಂಡ ನಂತರ ಪ್ರೌಢಾವಸ್ತೆ ತಲುಪಿದ ಮೊದಲನೆ ಪೀಳಿಗೆ. ಆದ್ದರಿಂದ ಅದುವರೆಗೆ ಉಳಿದಿದ್ದ ಹೊರಗೆ ಬಂದು ಪರಿಹಾರಕ್ಕಾಗಿ ಒತ್ತಾಯಿಸುವ ಸನ್ನಿವೇಷ ಎದುರಾಯಿತು" ಎನ್ನುತ್ತಾರೆ. ಈ ಸಂದರ್ಭದಲ್ಲಿ ಆಧುನಿಕತೆ ದಾಳಿ ಎದುರಿಸುತ್ತಿದ್ದ ಭಾರತದ ರಂಗಭೂಮಿ ಬಗ್ಗೆ ಚರ್ಚಿಸಲು ಸತ್ರದಲ್ಲಿ ಭಾಗವಹಿಸಿದ್ದರು. ಆಗಲೇ ಹುಟ್ಟಿಕೊಂಡಿದ್ದ ಮಾಸ್ಟರ್ ಪೀಸ್ ನಾಟಕ "ಹಯವದನ". ಕಾರ್ನಾಡರ ನಾಟಕದಲ್ಲಿ ಮನುಷ್ಯ ಮತ್ತು ಪ್ರಾಣಿ ಎರಡನ್ನು ಬಳಸಿಕೊಂಡು ನಾಟಕ ಹಣಿಯುವ ತಂತ್ರಗಾರಿಕೆ ಕಾಣಬಹುದು. ನಾಗಮಂಡಲದಲ್ಲಿ ಹಾವು ಮತ್ತು ಮನುಷ್ಯ, ಹಯವದನದಲ್ಲಿ ಕುದುರೆ ಹಾಗೂ ಮನುಷ್ಯ ಇದಕ್ಕೆ ಉದಾಹರಣೆ.
ಕಾರ್ನಡರು ನಾಟಕಗಳಿಗೆ ಆಯ್ಕೆ ಮಾಡಿಕೊಳ್ಳುವ ವಿಷಯದ ಮೂಲವೇ ಹೆಚ್ಚು ಆಸಕ್ತಿ ಕೆರಳಿಸುತ್ತದೆ." ತಮ್ಮ ನಾಟಕಗಳಿಗಾಗಿ ಪುರಾಣ, ಇತಿಹಾಸ, ಕಾವ್ಯ ಹಾಗೂ ಜಾನಪದಗಳಿಂದ ಕತೆಯನ್ನು ಆಯ್ದುಕೊಂಡಿದ್ದುಂಟು. ಇದಕ್ಕೆ ಮುಖ್ಯ ಕಾರಣವೆಂದರೆ ಈ ಕತೆಗಳು ಮನುಷ್ಯರ ಹಾಗೂ ದೇವ ಮಾನವರ ಸಂಬಂಧಗಳ ಕಾರಣ ಪ್ರತಿಮೆಗಳನ್ನು ಒದಗಿಸುತ್ತದೆ ಎನ್ನುವುದು. ಈ ಕಥೆಗಳನ್ನು ಅವರು ಇದ್ದಕ್ಕಿದ್ದಂತೆ ಉಪಯೋಗಿಸುವುದಿಲ್ಲ. ತಮ್ಮ ವಿಶಿಷ್ಟ ತಾತ್ವಿಕತೆಗೆ ಆಕಾರ ಕೊಡುವುದಕ್ಕಾಗಿ ಹಾಗೂ ತಾಂತ್ರಿಕ ಕಾರಣಗಳಿಂದಾಗಿ ಅವುಗಳಲ್ಲಿ ಬದಲಾವಣೆ ತಂದುಕೊಳ್ಳುತ್ತಾರೆ. ಕಾರ್ನಾಡರ ತಾತ್ವಿಕತೆ ಅರಿವು ಬಹಳ ದೊಡ್ಡದು. ಮನುಷ್ಯನ ಅಪೂರ್ಣತೆ, ಹಾಗೂ ಪರಿಪೂರ್ಣದ ಹಂಬಲ, ಅಸ್ಮಿತೆಯ ಸಮಸ್ಯೆಗಳು, ಲೈಂಗಿಕತೆ, ಹಿಂಸೆಯ ಸ್ವರೂಪ, ಧರ್ಮ, ದೇವ ಮನುಷ್ಯ ಸಂಬಂಧ, ರಾಜಕೀಯ ಹಾಗೂ ಸಾಮಾಜಿಕ ಕ್ರಾಂತಿ"- ಇವು ಇವರ ಅನವೇಷಣೆಯ ಪ್ರಮುಖ ಕ್ಷೇತ್ರಗಳು. ಈ ವಿಷಯಗಳ ಮೇಲೆಯೇ ಕಾರ್ನಾಡ್‍ರ ನಾಟಕಗಳು ರೂಪುಗೊಂಡಿವೆ.
"ನಾಟಕ ಅಂದರೆ ಬಹಳ ಪರಾವಲಂಬಿ ಕಲೆ. ಕಾರಂತರು ಮತ್ತು ರಾಮಾನುಜನ್ ರವರು ರಂಗಭೂಮಿಯನ್ನು ಕಲಿಸಿಕೊಟ್ಟರು, ನಾಟಕಗಳು ತಿದ್ದುಪಡಿ ಆಗುತ್ತಲೇ ಇರಬೇಕು ಆಗಲೇ ಒಳ್ಳೆ ನಾಟಕ ರಚಿಸಲಾಗುವುದು" ಅಂತಾರೆ ಕಾರ್ನಾಡ್‍ರು. ಇವರ ನಾಟಕಗಳು ಭಾರತದ ಭಾಷೆಗಲ್ಲದೇ ವಿದೇಶಿ ಭಾಷೆಗೂ ಅನುವಾದವಾಗಿದೆ. ಅಮೇರಿಕಾದ ಗತ್ರಿ ಹಾಗು ಇಂಗ್ಲೆಂಡ್‍ನ ಲೆಸ್ಟರ್ ಹೇ ಮಾರ್ಕೆಟ್ ಥಿಯೇಟರ್ ಕಾರ್ನಾಡರ ನಾಟಕ ಪ್ರದರ್ಶಿಸಿವೆ.
1969 ರಲ್ಲಿ ಸಂಸ್ಕಾರ ಚಿತ್ರಕ್ಕೆ ಸಂಭಾಷಣೆ ಮತ್ತು ಚಿತ್ರಕಥೆ ಬರೆದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರು. ಬಿ ವಿ ಕಾರಂತರ ಜೊತೆ ಸೇರಿ ವಂಶವೃಕ್ಷದ ನಿರ್ದೇಶಕರಾದರು. ಕಾಡು, ತಬ್ಬಲಿಯೂ ನಿನಾದೆ ಮಗನೆ, ಒಂದಾನೊಂದು ಕಾಲದಲ್ಲಿ, ಕಾನೂರು ಹೆಗ್ಗಡಿ ಸಿನಿಮಾ ನಿರ್ಧೇಶಿದರು. ಸತ್ಯಜಿತ್ ರೇ, ಶ್ಯಾಮ್ ಬೆನಗಲ್ ಜೊತೆ ಹಿಂದಿ ಚಿತ್ರರಂಗದಲ್ಲೂ ಕೆಲಸ ನಿರ್ವಹಿಸಿದ್ದಾರೆ. ಉತ್ಸವ್, ಓ ಘರ್, ಚೆಲುವಿ ಚಿತ್ರದ ಮೂಲಕ ಹಿಂದಿಯಲ್ಲೂ ನಿದೇಶಕರಾದರೂ. ಡಾ. ವಿಷ್ಣುವರ್ಧನ್‍ರನ್ನು ವಂಶವೃಕ್ಷದ ಮೂಲಕ ಪರಿಚಯಿಸಿದರು, ಶಂಕರ್ ನಾಗ್‍ರನ್ನು ಒಂದಾನೊಂದು ಕಾಲದಲ್ಲಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಕರೆತಂದರು, ಅಂಬರೀಷ್ ಪುರಿ, ಓಂ ಪೂರಿ, ಶೇಕರ್ ಸುಮನ್, ಸೋನಾಲಿ ಕುಲಕರ್ಣಿ, ಛಾಯಗ್ರಾಹಕ ರಾಜೀವ್ ಮೆನನ್, ಸಾಬೂ ಸಿರಿಲ್ ಕಲಾ ನಿರ್ದೇಶಕರನ್ನು ಬಾಲಿವುಡ್‍ಗೆ ತಂದ ಹೆಗ್ಗಳಿಕೆ ಕಾರ್ನಾಡ್‍ರದ್ದು. ಅಂತರಾಲ, ಸ್ವರಾಜ್ ನಾಮಾ, ಕಾನೂರ್ ಕೀ ಠಾಕೂರಿನ್‍ನಂಥ ಟಿವಿ ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ.
ಕರ್ನಾಟಕ ನಾಟಕ ಆಕಾಡೆಮಿ, ಕೇಂದ್ರ ಸಂಗೀತ ಅಕಾಡೆಮಿ, ಪುಣೆ ಫಿಲ್ಮ್ ಇನ್ಸಿಟ್ಯೂಟ್‍ನಲ್ಲಿ ಕೆಲಸ ನಿರ್ವಹಿಸಿದ್ದಾರೆ. ಪದ್ಮಭೂಷಣ, ಕೇಂದ್ರ ಸಾಹಿತ್ಯ ಅಕಾಡೆಮಿ, ಗುಬ್ಬಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಆಡಾಡ್ತಾ ಆಯುಷ್ಯ ಇವರ ಆತಕಥೆ. ಇಷ್ಟೇ ಅಲ್ಲದೇ ಕನ್ನಡದ ಅನೇಖ ಸಿನಿಮಗಳಲ್ಲಿ ಇಂದಿಗೂ ಅಭಿನಯಿಸುತ್ತಲೇ ಇದ್ದಾರೆ. ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುತ್ತ ತಮ್ಮ ನಿಲುವಿಗೆ ಬದ್ಧರಾಗಿ ಹೋರಾಟ ನಡೆಸುತ್ತಾರೆ. ಯುವಪೀಳಿಗೆಯ ಅನುಯಾಯಿಗಳನ್ನು ಹೊಂದಿದ್ದಾರೆ. ಕಾರ್ನಾಡ್‍ರ ರಂಗನಡಿಗೆ ನರಂತರವಾಗಿ ಸಾಗಲಿ ಎನ್ನುವುದೇ ಎಲ್ಲ ಕಲಾಭಿಮಾಣಿಗಳ ತುಂಬು ಹೃದಯದ ಹಾರೈಕೆ.