ಕಾಯಕವೇ ಕೈಲಾಸ ಹನುಮಂತನ ಸಾಹಸ

ಕಾಯಕವೇ ಕೈಲಾಸ ಹನುಮಂತನ ಸಾಹಸ

Thursday February 18, 2016,

3 min Read

ತಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಕ್ಕಿಲ್ಲವೆಂದು ಅದೆಷ್ಟೋ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೃಷಿಯನ್ನ ನಂಬಿಕೊಂಡು ಇದ್ದವರು ಇಂದು ಹಳ್ಳಿಯಿಂದ ಪಟ್ಟಣಕ್ಕೆ ಜಿಗಿದ್ದಾರೆ. ತಮ್ಮ ಸ್ವಂತ ದುಡಿಮೆ ಬಿಟ್ಟು, ಮತ್ತೊಬ್ಬರ ಹಂಗಿನಲ್ಲಿ ಕೂಲಿ ನಾಲಿ ಮಾಡಿ ಸಿಟಿಯಲ್ಲಿ ಜೀವನ ಮಾಡುತ್ತಿದ್ದಾರೆ. ಕೃಷಿಯನ್ನ ತ್ಯಜಿಸಿ, ಇಂದು ಅದೆಷ್ಟೋ ರೈತರು ಬೇರೆ ಪರ್ಯಾಯ ಕೆಲಸ ನಂಬಿಕೊಂಡಿದ್ದಾರೆ. ಆದರೆ ಅನ್ನ ನೀಡುವ ಕೃಷಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ನೂರಾರು ರೈತರು ಇನ್ನು ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ ಅಂತಾರೆ ಸಾಹಸಿ ರೈತ ಹನುಮಂತ ಶಿರೋಳ.

image


ಆತ್ಮಹತ್ಯೆಯೇ ಎಲ್ಲಕ್ಕೂ ಪರಿಹಾರವಲ್ಲ. ನಮ್ಮ ಜೀವನವನ್ನು ರೂಪಿಸುವ, ಯಾವತ್ತಿಗೂ ನಮ್ಮ ಕೈ ಬಿಡದೇ ಮುಂದೆ ಕರೆದುಕೊಂಡು ಹೋಗುದು ಕೃಷಿ ಬೇಸಾಯ ಮಾತ್ರ. ಭೂಮಿ ತಾಯಿಯನ್ನ ಅರ್ಥ ಮಾಡಿಕೊಂಡು, ಕೃಷಿಗೆ ಬೇಕಾದ ಕಲೆಯನ್ನು ರೂಢಿಸಿಕೊಂಡ್ರೆ ಯಾವುದೇ ನಷ್ಟ ಆಗೋಲ್ಲ ಅಂತಾರೆ. ಇಂದು ಅದೆಷ್ಟೋ ರೈತರು ಕೃಷಿಯನ್ನ ಅರ್ಥ ಮಾಡಿ ಕೊಳ್ಳದೇ ತಮ್ಮ ಪ್ರಾಣ ಬಿಟ್ಟಿದ್ದಾರೆ, ಸ್ವಲ್ಪ ತಲೆಗೆ ಕೆಲಸ ಕೊಟ್ಟಿದ್ರೆ ಅವ್ರ ಕುಟುಂಬ ಅನಾಥವಾಗುತ್ತಿರಲಿಲ್ಲ ಅಂತಾರೆ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರೋ ರೈತ ಹನುಮಂತ. ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ರನ್ನಬೆಳಗಲಿ ಪಟ್ಟಣದ ಅದೃಶಿ ತೋಟದ ವಸ್ತಿ ನಿವಾಸಿ ಹನಮಂತ ಶಿರೋಳ ಎಂಬ ರೈತ, ತನ್ನ ಸ್ವಂತ ಜಮೀನಿನಲ್ಲಿ 8 ವರ್ಷಗಳ ಅನುಭವವನ್ನು ಧಾರೆಯೆರೆದು ಲಾಭ, ನಷ್ಟ, ಮಾರುಕಟ್ಟೆಯ ಏರು-ಪೇರುಗಳನ್ನು ಮನಗಂಡಿದ್ದಾರೆ.

ರೈತ ಹನುಮಂತ ಕೇವಲ ಒಂದೇ ಬೆಳೆಗೆ ಸೀಮಿತವಾಗದೇ ತಮ್ಮ ಜಮೀನಿನಲ್ಲಿ ಕಬ್ಬು ಮಾತ್ರವಲ್ಲದೇ. ತಮ್ಮ 19 ಎಕರೆ ಜಮೀನಿನಲ್ಲಿ ಸಮವಾಗಿ ಗೋವಿನ ಜೋಳ, ಅರಿಶಿಣ ಮತ್ತು ಬಾಳೆ ಬೆಳೆದು ಒಂದರಲ್ಲಾದ ನಷ್ಟವನ್ನು ಇನ್ನೊಂದರಲ್ಲಿ ಭರಿಸಿಕೊಂಡು ಸಮತೋಲನ ಕಾಯ್ದುಕೊಂಡಿದ್ದಾರೆ. ಕಳೆದ 10 ವರ್ಷದಿಂದ ಕೃಷಿಯಲ್ಲಿ ಲಾಭಗಳಿಸಿದ್ದಾರೆ. ಇದರ ಮೂಲಕ ಕೈಚೆಲ್ಲಿಕೊರುವ ರೈತರಿಗೆ ಸ್ಫೂರ್ತಿಯಾಗಿದ್ದಾರೆ. ಜೊತೆಗೆ ಒಂದು ಹೆಜ್ಜೆ ಮುಂದೆ ಹೋಗಿ 20 ಜಾನುವಾರುಗಳ ಸಾಕಣೆ ಮಾಡಿ ಹೈನೋದ್ಯಮವನ್ನೂ ನಡೆಸುತ್ತಿದ್ದಾರೆ.

ಇದನ್ನು ಓದಿ

ಬದುಕು ಬದಲಿಸಿದ ಮೊಲ ಸಾಕಾಣಿಕೆ....ಉಪನ್ಯಾಸಕ ಮಾಡಿದ ಮೋಡಿ ಇದು


ಕೃಷಿ ಮೂಲಕ ಹೆಚ್ಚು ಆದಾಯ ಹೇಗೆ?

ಎಲ್ಲ ಕೃಷಿಯನ್ನೇ ನಂಬಿಕೊಂಡಿರೋ ರೈತರಲ್ಲಿ ಮೊದಲಿಗೆ ಕಾಡುವ ಪ್ರಶ್ನೆ ಅಂದ್ರೆ ಯಾವ ರೀತಿ ಕೃಷಿ ಮೂಲಕ ಹೆಚ್ಚು ಲಾಭವನ್ನು ಪಡೆವುದು ಎಂದು. ಇದಕ್ಕೆ ಉತ್ತರವಾಗಿ ತಮ್ಮ 19 ಎಕೆರೆ ಜಮೀನಿನಲ್ಲಿ ಬೆಳೆದು ತೋರಿಸಿದ್ದಾರೆ ಹನುಮಂತಪ್ಪ. ಮೊದಮೊದಲು ತಮ್ಮ 19 ಎಕೆರೆ ಜಮೀನಿನಲ್ಲಿ 6 ಎಕೆರೆ ಕಬ್ಬು ಬೆಳೆದ್ರು. ಆದ್ರೆ ನಾಟಿ ಮಾಡಿ ಅಂದಾಜು 1ಲಕ್ಷ ವೆಚ್ಚದಲ್ಲಿ 180 ಟನ್ ಕಬ್ಬು ಬೆಳೆದು ಸರಾಸರಿ 3.8 ಲಕ್ಷ ಆದಾಯ ಗಳಿಸಿದ ಇವ್ರು ಕೇವಲ ಕಬ್ಬಿನಿಂದ ಲಾಭವಿಲ್ಲ ಎಂದು ಮನಗಂಡರು. ನಂತರ ಕಬ್ಬಿಗೆ ಸೀಮಿತವಾಗಿರದೇ 4.5 ಎಕರೆ ಹೊಲದಲ್ಲಿ ಜಿ9 ತಳಿಯ ಬಾಳೆ ಬೆಳೆದು ವರ್ಷಕ್ಕೆ 2.5 ಲಕ್ಷ ವೆಚ್ಚದಲ್ಲಿ 11 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಇದು ಹನುಮಂತರ ಬಾಳು ಬಾಳೆಯಿಂದ ಬಂಗಾರವಾಯ್ತು.

19 ಎಕರೆಯ ಜಮೀನಿನಲ್ಲಿ 6 ಎಕರೆ ಕಬ್ಬು, 4.5 ಎಕರೆಯಲ್ಲಿ ಬಾಳೆ, 4 ಎಕರೆ ಸೇಲಂ ತಳಿಯ ಅರಿಷಿಣ ಮತ್ತು ಉಳಿದ 4 ಎಕರೆಯಲ್ಲಿ ಗೋವಿನ ಜೋಳ ನಾಟಿ ಮಾಡಿ, ಬರೋಬ್ಬರಿ ವರ್ಷಕ್ಕೆ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ. ಒಂದು ಸೂಕ್ತ ಯೋಜನೆಯನ್ನು ರೂಪಿಸಿ, ಅದಕ್ಕೆ ತಕ್ಕಂತೆ ದ್ವಿಗುಣ ಆದಾಯವನ್ನು ಪಡೆಯುತ್ತಿದ್ದಾರೆ. ಕೇವಲ ಕೃಷಿ ಮಾತ್ರವಲ್ಲ, ಹೈನುಗಾರಿಕೆಗೂ ಜಿಗಿದು ಲಾಭವನ್ನು ಗಳಿಸುತ್ತಿದ್ದಾರೆ.

ಹನಿ ನೀರಾವರಿ ಮತ್ತು ಜಾನುವಾರು ಮೂತ್ರ;

ನೀರಾವರಿಗಾಗಿ 4 ಬಾವಿ ಮತ್ತು 2 ಬೋರ್‍ವೆಲ್ ಹೊಂದಿದ್ದರೂ ಕೂಡ ನೀರಿನ ಮಿತವ್ಯಯಕ್ಕಾಗಿ ಹನಿ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಕಬ್ಬು, ಬಾಳೆ, ಅರಿಷಿಣ ಮತ್ತು ಗೋವಿನ ಜೋಳಕ್ಕೆ ಸಂಪೂರ್ಣ ಹನಿ ನೀರಾವರಿ ಅಳವಡಿಸಿದ್ದಾರೆ. ಬೆಳೆಗಳಿಗೆ ತಿಪ್ಪೆ ಗೊಬ್ಬರವನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ. ಹನಿ ನೀರಾವರಿಯ ಪೈಪ್‍ನಲ್ಲಿ ಜಾನುವಾರುಗಳ ಮೂತ್ರ ಮಿಶ್ರಣ ಮಾಡಿ ನೀರುಣಿಸುವುದರಿಂದ ಕೀಟನಾಶಕ ಬಳಸುವ ಪ್ರಮೇಯವೇ ಬಂದಿಲ್ಲ ಎನ್ನುತ್ತಾರೆ. ಹೀಗೆ ಸರಕಾರಿ ಗೊಬ್ಬರ ಕಡಿಮೆ ಬಳಸಿ ತಮ್ಮಲ್ಲೇ ಲಭ್ಯವಿರುವ ತಿಪ್ಪೆ ಗೊಬ್ಬರ ಮತ್ತು ಜಾನುವಾರುಗಳ ಮೂತ್ರ ಬಳಸಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಗಳಿಸುವ ಜಾಣ್ಮೆ ಮತ್ತು ಬೆಳೆಗಳನ್ನು ಅದಲು ಬದಲಾಗಿ ಬೆಳೆದು ಭೂಮಿಯ ಫಲವತ್ತತೆಯನ್ನು ಕಾಯ್ದುಕೊಳ್ಳುವ ಜಾಣ್ಮೆ ಇವರದು.

ಉತ್ಪನ್ನಗಳ ಮುಕ್ತಿಗೆ ಮಾರುಕಟ್ಟೆ ಜ್ಞಾನ:

ರೈತರು ಕೇವಲ ಭರ್ಜರಿಯಾಗಿ ಬೆಳೆಯುವ ಕಲೆ ಮಾತ್ರ ಹೊಂದಿದರೆ ಸಾಲದು ತಮ್ಮ ಉತ್ಪನ್ನಗಳಿಗೆ ಮುಕ್ತಿ ನೀಡಲು ಸರಿಯಾದ ಮಾರುಕಟ್ಟೆ ಬಗ್ಗೆ ಜ್ಞಾನ ಹೊಂದಿರಬೇಕು ಎಂದು ಅಭಿಪ್ರಾಯ ಪಡುವ ಇವರು, ತಮ್ಮ ಅರಿಷಿಣ ಉತ್ಪನ್ನವನ್ನು ದೂರದ ಸಾಂಗಲಿಗೆ ಮಾರಾಟ ಮಾಡುತ್ತಾರೆ. ಬಾಳೆಯನ್ನು ತಮ್ಮ ಹೊಲಕ್ಕೇ ಬಂದು ಖರೀದಿಸುವವರಿಗೆ ಮಾರುತ್ತಾರೆ. ಕಬ್ಬು ಮತ್ತು ಗೋವಿನಜೋಳದಿಂದ ಗರಿಷ್ಠ ಪ್ರಮಾಣದ ಮೇವು ಪಡೆದುಕೊಂಡು ಕಟಾವು ಮಾಡುತ್ತಾರೆ. ಆಗ ಬೆಲ್ಲ ಮತ್ತು ಸಕ್ಕರೆ ದರದಲ್ಲಿ ಯಾವುದು ಹೆಚ್ಚೋ ಅದರ ಮೇಲಿಂದ ಕಬ್ಬನ್ನು ಸಕ್ಕರೆ ಕಾರ್ಖಾನೆಗೋ ಅಥವಾ ಆಲಿಮನೆಗೋ ಕಳಿಸುವ ನಿರ್ಧಾರ ಮಾಡುತ್ತಾರೆ. ಒಟ್ಟಿನಲ್ಲಿ ಕೃಷಿಯಲ್ಲಿ ಸಮನ್ವಯತೆ ಕಾಯ್ದುಕೊಂಡರೆ, ಭೂತಾಯಿ ಎಲ್ಲರಿಗೂ ಒಲಿಯುತ್ತಾಳೆ ಎಂಬುದಕ್ಕೆ ಇವರ ಜಾಣ್ಮೆಯ ಕೃಷಿಯೇ ಸಾಕ್ಷಿ. 

ಇದನ್ನು ಓದಿ

1. ಹೊಸ ದಾಖಲೆಯತ್ತ ಸ್ಟಾರ್ ಶೆಫ್ ಗೇಮ್ : ಇದು ಅಡುಗೆ ಭಟ್ಟರ ಆಟ..!

2. ಬಸ್ ಹತ್ತಿ ಲಾಸ್ಟ್​​ ಸ್ಟಾಪ್ ಎಂದು ಹೇಳ್ಬೇಡಿ..!

3. "ಅಮಿತಾಬ್‍ರಿಂದ ಬೇಷ್ ಎನಿಸಿಕೊಂಡ ಬಾಲಕಿ - ಆಕೆಯಿಂದಾಗಿದೆ ಗ್ರಾಮದಲ್ಲಿ ಶೌಚಾಲಯ ಕ್ರಾಂತಿ"