Kannada

ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡುವ ತಮಟೆ ಶಿವಮ್ಮನ ಕಥೆ..!

ಉಷಾ ಹರೀಶ್​​

YourStory Kannada
4th Apr 2016
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಒಂದು ಕಾಲದಲ್ಲಿ ಪುರುಷನಿಗಷ್ಟೆ ಸೀಮಿತವಾಗಿದ್ದ ಅನೇಕ ಕೆಲಸಗಳಲ್ಲಿ ಇಂದು ಮಹಿಳೆಯರು ತಮ್ಮದೇ ಆದ ಛಾಪು ಮೂಡಿಸುವಷ್ಟು ಪರಿಣತಿ ಸಾಧಿಸುತ್ತಿದ್ದಾರೆ. ಗ್ರಾಮೀಣ ಮಹಿಳೆಯೊಬ್ಬಳು ಮಹಿಳೆ ತಮಟೆ ಕಲಾ ತಂಡವೊಂದನ್ನು ಕಟ್ಟಿ ರಾಜ್ಯಾದ್ಯಂತ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲೂ ಮಹಿಳೆಯರಿಂದ ತಮಟೆ ಸದ್ದು ಮೊಳಗಿಸುವ ಮೂಲಕ ಗಮನಸೆಳೆದಿದ್ದಾರೆ.

ಮಹಿಳೆಯರೆಂದರೆ ನಾಲ್ಕು ಗೋಡೆಗಳ ನಡುವೆ ಇದ್ದುಕೊಂಡು ಮನೆ ಸಂಸಾರ ಮಕ್ಕಳಿಗೆ ಅಡುಗೆ ಇಷ್ಟೆ ಜೀವನ ಎಂಬ ಸಂಪ್ರದಾಯವನ್ನು ಪಕ್ಕಕ್ಕೆ ಸರಿಸಿ ಸಮಾಜದ ಮುಖ್ಯವಾಹಿನಿಯಲ್ಲಿ ಸಾಧನೆಯ ಮೆಟ್ಟಲು ಹತ್ತುವಲ್ಲಿ ಯಶಸ್ವಿಯಾಗಿರುವ ಈ ಮಹಿಳಾ ತಮಟೆ ತಂಡವನ್ನು ಮುನ್ನೆಡೆಸುತ್ತಿರುವವರು ಈಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಇಟ್ಟಸಂದ್ರ ಗ್ರಾಮದ ಶಿವಮ್ಮ ಎಂಬ ಮಹಿಳೆ.

image


ಶಾಲೆ ಬಿಟ್ಟ ಮಕ್ಕಳಿಗೆ ತಮಟೆ ಕಲಿಕೆ

ಪುರುಷನಿಗೆ ಸೀಮಿತವಾಗಿದ್ದ ತಮಟೆ ವಾದನ ಕಲೆಯನ್ನು ಹೆಣ್ಣು ಮಕ್ಕಳಿಗೆ ಕಲಿಸಿದ್ದಾರೆ ಶಿವಮ್ಮ ವಿಶೇಷವಾಗಿ ಸ್ವಸಹಾಯ ಸಂಘದ ಸದಸ್ಯರಲ್ಲಿ ಯಾರ ಮಕ್ಕಳು ಶಾಲೆ ಬಿಟ್ಟಿದ್ದಾರೋ ಅಂಥವರನ್ನು ಗುರುತಿಸಿ ಆ ಹೆಣ್ಣು ಮಕ್ಕಳಿಗೆ ತಮಟೆ ನೃತ್ಯ ತರಬೇತಿ ನೀಡಿ ಅವರಲ್ಲಿರುವ ಸುಪ್ತ ಪ್ರತಿಭೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇದರ ಜೊತೆಗೆ ಸಮಾಜದಲ್ಲಿರುವ ಸಮಸ್ಯೆಗಳ ವಿರುದ್ಧದ ತಮ್ಮ ತಮಟೆ ಮೂಲಕ ನ್ಯಾಯ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ತಮ್ಮ ಮಕ್ಕಳಿಗೆ ತಮಟೆ ಕಲಿಕೆ

ಶಿವಮ್ಮ ಅವರಿಗೆ ಮೂವರು ಮಕ್ಕಳು ಅದರಲ್ಲಿ ಇಬ್ಬರು ಹೆಣ್ಣು ಮಕ್ಕಳಿದ್ದು ಅವರು ಉನ್ನತ ವ್ಯಾಸಂಗ ಆಡುತ್ತಿದ್ದಾರೆ. ಅವರು ಸಹ ತಮ್ಮ ವಿದ್ಯಾಬ್ಯಾಸದ ಬಿಡುವಿನ ಸಮಯದಲ್ಲಿ ತಾಯಿ ಶಿವಮ್ಮ ಅವರ ಜತೆ ತಮಟೆ ನುಡಿಸುವ ಕಾರ್ಯಕ್ರಮಗಳಲ್ಲಿ ತಮಟೆ ಬಾರಿಸುತ್ತಾರೆ. ಈ ಮೂಲಕ ಕಲೆಯನ್ನು ಮಕ್ಕಳಲ್ಲಿ ಪ್ರೋತ್ಸಾಹಿಸಿ ಸಾಮಾಜಿಕ ಸ್ಫೂರ್ತಿಯನ್ನು ತುಂಬುತ್ತಾ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರದರ್ಶನ ನೀಡುವ ಮೂಲಕ ಶಿವಮ್ಮ ಗಮನಸೆಳೆದಿದ್ದಾರೆ.

ಇದನ್ನು ಓದಿ: ‘ಸಂತೃಪ್ತಿ’ಯಲ್ಲಿ ತೃಪ್ತಿಯಿಂದ ಉತ್ತರ ಕರ್ನಾಟಕದ ತಿನಿಸುಗಳನ್ನು ಸವಿಯಿರಿ....

ಪತಿಯ ಬೆಂಬಲ

ಶಿವಮ್ಮ ಅವರ ಪತಿ ವೆಂಕಟೇಶ್ ಸಮಾಜದಲ್ಲಿರುವ ಸಾಕಷ್ಟು ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಟ ನಡೆಸುವ ಸಾಮಾಜಿಕ ಕಾರ್ಯಕರ್ತ. ಇಂತಹ ಪತಿಯ ಕೈ ಹಿಡಿದಿರುವ ಶಿವಮ್ಮ ಅವರು ಸಹ ಪತಿಯ ಸಾಮಾಜಿಕ ಕಳಕಳಿಯ ಗುಣಗಳನ್ನು ಮೈಗೂಡಿಸಿಕೊಂಡಿದ್ದಾರೆ. ಶಿವಮ್ಮ ಅವರ ತಮಟೆ ವಾದನದ ತಂಡಕ್ಕೆ ಪರೋಕ್ಷವಾಗಿ ಪತಿ ವೆಂಕಟೇಶ್ ನೆರವಾಗತ್ತಿದ್ದಾರೆ.

image


ಮಹಿಳೆಯರಿಗೆ ಕೌಶಲ್ಯ ತರಬೇತಿ

ಶಿವಮ್ಮ ಅವರ ಸಾಮಾಜಿಕ ಕಳಕಳಿ ಬರೀ ತಮಟೆ ವಾದನಕ್ಕೆ ಅಷ್ಟೇ ಸೀಮಿತವಾಗಿಲ್ಲ. ಜೊತೆಗೆ ತಮ್ಮ ಗ್ರಾಮದ ಸುತ್ತಮುತ್ತಲಿನ ಮಹಿಳೆಯರ ಒಟ್ಟುಗೂಡಿಸಿ ಸ್ವಸಹಾಯ ಗುಂಪುಗಳನ್ನು ರಚಿಸಿಕೊಂಡು ಅವರಿಗೆ ಕೌಶಲ್ಯ ತರಬೇತಿ ನೀಡುತ್ತಾ ಬಂದಿದ್ದಾರೆ. ತರಬೇತಿಗಳನ್ನು ನೀಡುವ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ ಪತಿ ವೆಂಕಟೇಶ್ ಅವರೊಂದಿಗೆ ಜೀತ ವಿಮುಕ್ತಿ ಹೋರಾಟ ಸಂಘಟನೆಯಲ್ಲಿ ಕೈಜೋಡಿಸಿ ನೂರಾರು ಬಾಲಕಾರ್ಮಿಕರ ರಕ್ಷಣೆ, ಸಾಕಷ್ಟು ಜೀತದಾಳುಗಳು ಬಿಡುಗಡೆಮಾಡಿಸಿರುವುದಲ್ಲದೆ ಅವರಿಗೆ ಸರ್ಕಾರದಿಂದ ಪುನರ್ವಸತಿ ಕಲ್ಪಿಸಲು ಹೋರಾಟ ಮಾಡಿದ್ದಾರೆ. ಮೂಲಸಮಸ್ಯೆಗಳ ಬಗ್ಗೆ ಬೀದಿ ನಾಟಕ ತಂಡಗಳನ್ನು ರಚಿಸಿಕೊಂಡು ಪ್ರದರ್ಶನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

2005 ರಲ್ಲಿ ಇವರು ಸ್ಥಾಪಿಸಿದ ಸ್ಫೂರ್ತಿ ಮಹಿಳಾ ಮತ್ತು ಮಕ್ಕಳ ಸಾಮಾಜಿಕ, ಸಾಂಸ್ಕೃತಿಕ ಅಭಿವೃದ್ಧಿ ಸಂಸ್ಥೆ ರಾಜ್ಯಾದ್ಯಂತ ಮಹಿಳೆಯರ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ದುಡಿಯುತ್ತಿದೆ. ರಾಜ್ಯದ್ಯಂತ ಒಂದು ಸಾವಿರದಷ್ಟು ಮಹಿಳಾ ಸಂಘಗಳನ್ನು ರಚನೆ ಮಾಡಿ ಅವರಿಗೆ ಆರ್ಥಿಕವಾಗಿ ಸ್ವಾವಲಂಬನೆಯ ಬದುಕು ಕಟ್ಟುವಲ್ಲಿ ಶಿವಮ್ಮ ಅವರ ಪಾತ್ರ ಹೆಚ್ಚಾಗಿದೆ. ಸಂಸ್ಥೆಯಲ್ಲಿರುವವರನ್ನು ಜತೆಯಲ್ಲಿಟ್ಟುಕೊಂಡು ಜೀತದಾಳುಗಳು, ಬಾಲಕಾರ್ಮಿಕರ ಬಿಡುಗಡೆಗೆ ದುಡಿಯುತ್ತಿದ್ದಾರೆ. ಇದರಲ್ಲಿ ಪ್ರಮುಖವಾಗಿ ಮಹಿಳಾ ಸ್ವಸಹಾಯ ಸಂಘಗಳಿಗೆ ಸರಕಾರದಿಂದ ಸುಮಾರು 2 ಕೋಟಿ ರೂ. ನಷ್ಟಿ ಸಾಲ ಸೌಲಭ್ಯ ಒದಗಿಸಿ ಸ್ವಾವಲಂಬಿಗಳಾಗಿ ಬದುಕಲು ನೆರವಾಗಿದ್ದು, ಪಾವಗಡದಲ್ಲಿ ೪೦೩ ಜೀತದಾಳುಗಳನ್ನು ಬಿಡುಗಡೆಗೊಳಿಸಿ ಸರಕಾರದಿಂದ ಪುನರ್ವಸತಿ ಕಲ್ಪಿಸಲು ನೆರವು ನೀಡಿದ್ದಾರೆ ಶಿವಮ್ಮ.

ತಮಟೆ ಸದ್ದು ಎಲ್ಲೆಲ್ಲಿ..?

ಶಿವಮ್ಮ ಅವರ ತಮ್ಮ ತಂಡಕ್ಕೆ ಸ್ಫೂರ್ತಿ ಮಹಿಳಾ ತಂಡ ಎಂದು ಹೆಸರಿಟ್ಟುಕೊಂಡು ಅದರ ನಾಯಕತ್ವ ವಹಿಸಿಕೊಂಡ ದಿನದಿಂದ ಇಲ್ಲಿಯವರೆಗೂ ಅನೇಕ ಕಾರ್ಯಕ್ರಮಗಳ ಮೂಲಕ ರಾಜ್ಯಾದ್ಯಂತ ಗಮನ ಸೆಳೆದಿದ್ದಾರೆ.ಬರೀ ಕರ್ನಾಟಕ ಮಾತ್ರವಲ್ಲದೆ ಪಕ್ಕದ ರಾಜ್ಯಗಳಾದ ಆಂಧ್ರ, ಗೋವಾ ಮುಂತಾದ ಕಡೆ ತಮಟೆ ವಾದನ ಕಾರ್ಯಕ್ರಮಗಳನ್ನು ನೀಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇವರ ನಾಯಕತ್ವದೊಂದಿಗೆ ಮಹಿಳಾ ತಮಟೆ ನೃತ್ಯ ತಂಡವು ಒಂದು ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದೆ. ಪ್ರಮುಖವಾಗಿ ವಿಶ್ವ ಕನ್ನಡ ಸಮ್ಮೇಳನ, ಹಂಪಿ ಉತ್ಸವ, ಮೈಸೂರು ದಸರಾ, ಜನಪದ ಉತ್ಸವ, ಜನಪದ ಜಾತ್ರೆ, ಕಿತ್ತೂರು ರಾಣಿ ಚೆನ್ನಮ್ಮ ಉತ್ಸವ, ಗಣರಾಜೋತ್ಸವ, ಸ್ವಾತಂತ್ರ್ಯೋತ್ಸವ, ಕನ್ನಡ ರಾಜ್ಯೋತ್ಸವ, ಸುಗ್ಗಿ-ಹುಗ್ಗಿ, ಮಹಿಳಾ ಉತ್ಸವಗಳಲ್ಲಿ ಮಹಿಳೆಯ ತಮಟೆ ಸದ್ದು ಮೊಳಗಿಸಿದ್ದಾಳೆ. ೨೦೧೨-೧೩ನೇ ಸಾಲಿನಲ್ಲಿ ಮೈಸೂರು ದಸರಾದಲ್ಲಿ ಭಾಗವಹಿಸಿ ಪ್ರದರ್ಶನ ನೀಡಿ ಅದರಲ್ಲಿ ಪಾಲ್ಗೊಂಡಿದ್ದ 180 ತಂಡಗಳಲ್ಲಿ ಈಕೆಯ ಮಹಿಳಾ ತಂಡ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿತ್ತು. ತಂಡದಲ್ಲಿರುವ ಎಲ್ಲ ಹೆಣ್ಣು ಮಕ್ಕಳು ಉನ್ನತ ವಿದ್ಯಾಭ್ಯಾಸ ಮಾಡಲು ಪ್ರದರ್ಶನದಿಂದ ಬರುವ ಸಂಭಾವನೆ ಹಾಗೂ ಸಂಸ್ಥೆಯಿಂದ ನೀಡುವ ಪ್ರೋತ್ಸಾಹ ಧನ ಸಹಕಾರಿಯಾಗಿ ಬಳಸುತ್ತಿದ್ದಾರೆ.ಈ ಮೂಲಕ ಮಹಿಳೆಯುರಲ್ಲಿ ಶಿವಮ್ಮ ಅವರು ಆತ್ಮ ಸ್ಥೈರ್ಯ ತುಂಬುತ್ತಿದ್ದಾರೆ. 

ಇದನ್ನು ಓದಿ:

1. ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಬಂದಿದೆ ಈಸಿ `ಡ್ರಿವನ್'

2. ಸ್ಟಾರ್ಟ್​ಅಪ್ ಉದ್ಯಮಿಗಳಿಗೆ ಸ್ಫೂರ್ತಿ ನೀಡಬಲ್ಲ ಸ್ಪೋರ್ಟ್ಸ್​​​ಮನ್ ಸ್ಪಿರಿಟ್.. !

3. ಕ್ಯಾನ್ಸರ್ ಪತ್ತೆಗೆ ನ್ಯಾನೋ ಚಿಪ್..!

 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags