ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಬಂದಿದೆ ಈಸಿ `ಡ್ರಿವನ್'
ಟೀಮ್ ವೈ.ಎಸ್. ಕನ್ನಡ
ಇತ್ತೀಚೆಗೆ ಎಲ್ಲಿ ನೋಡಿದ್ರೂ ಟ್ರಾಫಿಕ್ ಸಮಸ್ಯೆ. ಸಂಚಾರ ದಟ್ಟಣೆಯಲ್ಲಿ ಸಿಕ್ಕು ಒದ್ದಾಡುವ ಪ್ರತಿಯೊಬ್ಬರೂ ಯಾರಾದ್ರೂ ಈ ಕಿರಿಕಿರಿಗೆ ಮುಕ್ತಿ ಹಾಡಿದ್ರೆ ಸಾಕು ಎಂದುಕೊಳ್ತಾರೆ. ಟ್ರಾಫಿಕ್‍ನಲ್ಲಿ ಸಿಕ್ಕು ಟೈಂ ವೇಸ್ಟ್ ಮಾಡುವ ಬದಲು ವಾಹನದ ಹಿಂಬದಿ ಸೀಟಿನಲ್ಲೇ ಕುಳಿತು ಕಚೇರಿ ಕೆಲಸ ಮಾಡುವಂತಿದ್ರೆ ಚೆನ್ನ ಎಂದುಕೊಳ್ಳುವವರೂ ಇದ್ದಾರೆ. ದಿನಪತ್ರಿಕೆ ಓದೋದು, ಕ್ಯಾಂಡಿ ಕ್ರಶ್ ಆಡೋದು ಮಾಮೂಲು. ಇಂತಹ ಸಂದರ್ಭಗಳನ್ನೆಲ್ಲ ಅಧ್ಯಯನ ಮಾಡಿದ ಶಿವಾಲಿಕ್ ಸೇನ್ ಪ್ರತಿನಿತ್ಯದ ಈ ಸಮಸ್ಯೆಗೊಂದು ಪರಿಹಾರ ಹುಡುಕಿದ್ದಾರೆ.
ಕಾರು ಮಾಲೀಕರಿಗೆ ನಗರದಲ್ಲಿ ತಮ್ಮ ಸ್ವಂತ ವಾಹನವನ್ನು ಬಳಸುವುದು ಎಷ್ಟು ಕಷ್ಟಕರ ಅನ್ನೋದನ್ನು ಕ್ರೌಡ್‍ಫೈರ್‍ನಲ್ಲಿ ಕೆಲಸ ಮಾಡುತ್ತಿದ್ದಾಗಲೇ ಶಿವಾಲಿಕ್ ಅರ್ಥಮಾಡಿಕೊಂಡಿದ್ರು. ಹಾಗಾಗಿಯೇ ಮುಂಬೈ ಮಹಾನಗರದಲ್ಲಿ ಬಹುತೇಕ ಎಲ್ಲರೂ ಸಾರ್ವಜನಿಕ ಸಾರಿಗೆ ಅಥವಾ ಕಾರ್‍ಪೂಲ್‍ನಂತಹ ಪರ್ಯಾಯ ಕ್ಯಾಬ್ ಸೇವೆಯನ್ನು ಅವಲಂಬಿಸಿದ್ದಾರೆ. ಪರಿಣಾಮ ಅವರ ಸ್ವಂತ ಕಾರುಗಳು ಅಪಾರ್ಟ್‍ಮೆಂಟ್‍ನ ಪಾರ್ಕಿಂಗ್ ಲಾಟ್‍ನಲ್ಲಿ ಧೂಳು ತಿನ್ನುತ್ತಿವೆ. ಇನ್ನು ಕೆಲವರು ತಮ್ಮ ಕಾರುಗಳನ್ನು ಬಳಸುತ್ತಿದ್ದಾರೆ, ಅದಕ್ಕಾಗಿ ತಾತ್ಕಲಿಕ ಚಾಲಕರನ್ನೂ ಇಟ್ಟುಕೊಂಡಿದ್ದಾರೆ. ಆದ್ರೆ ಈ ವಲಯ ಸಂಪೂರ್ಣ ಅಸಂಘಟಿತವಾಗಿದೆ.
"ಈ ಮಾರುಕಟ್ಟೆಯ ಸಂಘಟನೆಯೇ ಇದಕ್ಕೆ ಪರಿಹಾರ. ಸುಲಭವಾಗಿ ಚಾಲಕರನ್ನು ಬುಕ್ ಮಾಡಲು ಅವಕಾಶ ಕಲ್ಪಿಸಬೇಕು, ಮೇಲಿಂದ ಮೇಲೆ ಫೋನ್ ಮಾಡಿ ಡ್ರೈವರ್‍ಗಳನ್ನು ಹುಡುಕುವ ತಲೆನೋವು ತಪ್ಪಿಸಲು ಒಂದೇ ಒಂದು ಕ್ಲಿಕ್ ಮೂಲಕ ಬುಕ್ಕಿಂಗ್ ಮಾಡಲು ವ್ಯವಸ್ಥೆ ಮಾಡಬೇಕು. ಮುಂಬೈನಲ್ಲಿ ಪೈಪೋಟಿದಾರರಿಗಿಂತ ಕಡಿಮೆ ಬೆಲೆಯಲ್ಲಿ ಆನ್ ಡಿಮಾಂಡ್ ಸೇವೆಯನ್ನು ಒದಗಿಸುವುದು ನಮ್ಮ ಉದ್ದೇಶವಾಗಿತ್ತು''
- ಶಿವಾಲಿಕ್
ಜೇನುಗೂಡಿನಲ್ಲಿ ಐವರು
ಶಿವಾಲಿಕ್ ಅವರ ಈ ಐಡಿಯಾ ಸ್ನೇಹಿತರು ಮತ್ತು ಸಹಪಾಠಿಗಳಿಗೂ ಇಷ್ಟವಾಯ್ತು. ಸಿಓಓ ಆಗಿ ಕೆಲಸ ಮಾಡಿದ್ದ 23ರ ಹರೆಯದ ಅರುಣ್ ಗಾಂಧಿ, 24 ವರ್ಷದ ಸಿಎಂಓ ನಿಖಿಲ್ ತವೋರಾ, ಆಪರೇಶನ್ ಹೆಡ್ ಹಾಗೂ ಫೈನಾನ್ಸ್ ವಿಭಾಗದ ಮುಖ್ಯಸ್ಥ ಅಮನ್ ಸಂಚೇತಿ, ಕಾರ್ಯಾಚರಣೆಯ ಮುಖ್ಯಸ್ಥ ಗೌರವ್ ದೇಶ್‍ಮುಖ್ ಈ ಹೊಸ ಪರಿಕಲ್ಪನೆಗಾಗಿ ಪರಸ್ಪರ ಜೊತೆಯಾದ್ರು. ``ನಾವೆಲ್ಲರೂ ಶೀಘ್ರದಲ್ಲೇ ಉದ್ಯೋಗಕ್ಕೆ ಗುಡ್‍ಬೈ ಹೇಳಿದೆವು. ಹೊಸದೇನನ್ನಾದ್ರೂ ಮಾಡಲು ಇದೇ ಸರಿಯಾದ ಸಮಯ ಎಂದು ನಮಗನಿಸಿತ್ತು. ಸ್ಮಾರ್ಟ್ ಫೋನ್ ನಮ್ಮೆಲ್ಲ ಅಗತ್ಯಗಳನ್ನು ಪೂರೈಸುವ ವಸ್ತುವಾಗಿತ್ತು'' ಎನ್ನುತ್ತಾರೆ ಶಿವಾಲಿಕ್. ಐವರೂ ಜೊತೆಯಾಗಿ ಕಳೆದ ಡಿಸೆಂಬರ್‍ನಲ್ಲಿ `ಡ್ರಿವನ್' ಅನ್ನು ಆರಂಭಿಸಿದ್ದಾರೆ.
ಇದನ್ನು ಓದಿ: ಕ್ಯಾನ್ಸರ್ ಪತ್ತೆಗೆ ನ್ಯಾನೋ ಚಿಪ್..!
ಅಡ್ಡಿ..
ಕಚೇರಿಗೆ ತೆರಳುವವರಿಗೆ ದಿನಪೂರ್ತಿ ಚಾಲಕರ ಅವಶ್ಯಕತೆ ಬೀಳುವುದಿಲ್ಲ. ಹಾಗಾಗಿ ತಿಂಗಳ ಸಂಬಳಕ್ಕೆ ಚಾಲಕರನ್ನು ನೇಮಕ ಮಾಡಿಕೊಳ್ಳುವ ಹಳೆಯ ವಿಧಾನ ಬೇಡವೆಂದು ಡ್ರಿವನ್ ಸದಸ್ಯರು ನಿರ್ಧರಿಸಿದ್ರು. ಗಂಟೆಗಳ ಆಧಾರದ ಮೇಲೆ ಚಾಲಕರನ್ನು ಹೈರ್ ಮಾಡಿಕೊಳ್ಳುವ ರಿಯಲ್ ಟೈಮ್ ತಂತ್ರಜ್ಞಾನವನ್ನು ಡ್ರಿವನ್ ಅಳವಡಿಸಿಕೊಂಡಿದೆ. ``ಪರ್ಮನೆಂಟ್ ಡ್ರೈವರ್‍ಗಳ ಕೆಲಸಕ್ಕೆ ಅಡ್ಡಿಪಡಿಸುವುದು ನಮ್ಮ ಉದ್ದೇಶವಲ್ಲ. ರಿಯಲ್ ಟೈಮ್‍ನಲ್ಲಿ ತಾತ್ಕಾಲಿಕ ಚಾಲಕರನ್ನು ಒದಗಿಸುವುದು ನಮ್ಮ ಉದ್ದೇಶ. ಪರಿಣಾಮಕಾರಿ ಸೇವೆ, ಸ್ಥಿರ ಸಂಬಳದ ಬದಲು ಬಳಕೆಗೆ ಅನುಗುಣವಾಗಿ ಹಣ ಪಾವತಿ ಮಾಡುವು ಸುಲಭ ವ್ಯವಸ್ಥೆ ಇದಾಗಿದೆ'' ಅನ್ನೋದು ಶಿವಾಲಿಕ್ ಅವರ ಅಭಿಪ್ರಾಯ.
ಸಂಪೂರ್ಣವಾಗಿ ಮುನ್ನಡೆಸುತ್ತಿರುವ ಚಾಲಕರೊಂದಿಗೆ..
ಈವರೆಗೆ 67 ಚಾಲಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಅವರ ಹಿನ್ನೆಲೆ, ಪೊಲೀಸ್ ಪರಿಶೀಲನೆ ಹಾಗೂ ಸಂದರ್ಶನದ ಬಳಿಕ ಅವರನ್ನು ಹೈರ್ ಮಾಡಿಕೊಳ್ಳಲಾಗಿದೆ. ಅವರಿಗೆ ಸೂಕ್ತ ತರಬೇತಿಯನ್ನೂ ನೀಡಲಾಗಿದೆ. 60 ನಿಮಿಷಗಳೊಳಗೆ ಗ್ರಾಹಕರಿರುವ ಸ್ಥಳಕ್ಕೆ ಚಾಲಕರು ತಲುಪುವುದು ಕಡ್ಡಾಯ. ಮೊದಲ ಒಂದು ಗಂಟೆಗೆ 199 ರೂಪಾಯಿ ವಿಧಿಸಲಾಗುತ್ತದೆ. ರಾತ್ರಿ 11 ಗಂಟೆಯ ನಂತರ ಮೊದಲ ಒಂದು ತಾಸಿಗೆ ದರ ಹೆಚ್ಚಳವಿರುತ್ತದೆ, ಬಳಿಕ ಹಳೆಯ ದರವೇ ಅನ್ವಯವಾಗುತ್ತದೆ.
"ತಮ್ಮದೇ ಸ್ವಂತ ಕಾರಿನಲ್ಲಿ ಚಾಲನೆ ಮಾಡುವ ತಲೆನೋವಿಲ್ಲದೆ ಪ್ರಯಾಣಿಸುವುದರಲ್ಲಿರುವ ಅನುಕೂಲತೆ, ಆರಾಮದಾಯಕ ಸ್ಥಿತಿ ಹಾಗೂ ಸಂತೋಷವನ್ನು ಗ್ರಾಹಕರು ಅನುಭವಿಸುತ್ತಿದ್ದಾರೆ. ಅದಕ್ಕೆ ತಕ್ಕಂತೆ ಹಣ ಪಾವತಿಸುತ್ತಾರೆ. ಭವಿಷ್ಯದಲ್ಲಿ ವಹಿವಾಟು ಇನ್ನಷ್ಟು ವಿಸ್ತರಿಸುವ ನಿರೀಕ್ಷೆ ಇದೆ''
- ಶಿವಾಲಿಕ್.
ಉತ್ತಮ ರೀತಿಯ ಟ್ರಾಫಿಕ್
ಡ್ರಿವನ್ ಆದಾಯ ಮಾದರಿ ಒಂದು ಆಯಾಮವನ್ನು ಹೊಂದಿದೆ. ಪ್ರತಿ ವಹಿವಾಟಿನ ಮೇಲೆ ಡ್ರಿವನ್‍ಗೆ ಶೇ.20ರಷ್ಟು ಕಮಿಷನ್ ಸಿಗುತ್ತಿದೆ. ಕೆಲ ಈವೆಂಟ್ ಕಂಪನಿಗಳು ಹಾಗೂ ಹೋಟೆಲ್‍ಗಳೊಂದಿಗೂ ಟೈಅಪ್ ಮಾಡಿಕೊಳ್ಳಲು ಡ್ರಿವನ್ ಚಿಂತನೆ ನಡೆಸಿದೆ. ತಿಂಗಳ ಬೆಳವಣಿಗೆ ದರ ಶೇ.200ರಷ್ಟಿದ್ದು ಪ್ರತಿ ತಿಂಗಳು ಸುಮಾರು 1000ಕ್ಕೂ ಹೆಚ್ಚು ಸವಾರಿಯನ್ನು ಡ್ರಿವನ್ ಮಾಡುತ್ತಿದೆ. ಪ್ರತಿ ಸವಾರಿಯಲ್ಲಿ ಸುಮಾರು 400 ರೂಪಾಯಿ ದೊರೆಯುತ್ತಿದೆ.
1.6 ಬಿಲಿಯನ್ ಡಾಲರ್ ಮೌಲ್ಯದ ಮಾರುಕಟ್ಟೆ ಕಾರ್ ಮಾಲೀಕತ್ವದಲ್ಲಿ ಶೇ.18ರಷ್ಟು ಪ್ರಗತಿ ಹೊಂದುತ್ತಿದೆ. ಸದ್ಯ ಭಾರತದಲ್ಲಿ ಕಾರ್ ಮಾಲೀಕತ್ವ 1000ಕ್ಕೆ 13 ಜನರಷ್ಟಿದೆ. ಭವಿಷ್ಯದಲ್ಲಿ ಈ ಸಂಖ್ಯೆ 6 ಪಟ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಜಸ್ಟ್ ಡಯಲ್ ಹಾಗೂ ಡ್ರೈವ್ ಯು ನಂತಹ ಸಂಸ್ಥೆಗಳಿಂದ ಡ್ರಿವನ್ ಪೈಪೋಟಿ ಎದುರಿಸುತ್ತಿದೆ. ಟಾಸ್ಕ್‍ಬೊಬ್ ಕೂಡ ಇತ್ತೀಚೆಗಷ್ಟೆ ಸಿರೀಸ್ ಎ ಫಂಡಿಂಗ್‍ನಲ್ಲಿ ಐವಿ ಕ್ಯಾಪ್ ವೆಂಚರ್ಸ್‍ನಿಂದ 28 ಕೋಟಿ ರೂಪಾಯಿ ಬಂಡವಾಳ ಸಂಗ್ರಹಿಸಿದೆ. ಹೌಸ್‍ಜೊಯ್‍ಗೆ ಅಮೇಝಾನ್ ಮತ್ತಿತರ ಸಂಸ್ಥೆಗಳಿಂದ 150 ಕೋಟಿ ರೂಪಾಯಿ ಲಭ್ಯವಾಗಿದೆ. ಗ್ರಾಹಕರು ಒಳ್ಳೆಯ ರೇಟಿಂಗ್ ನೀಡಿದ ಚಾಲಕರನ್ನೇ ಮತ್ತೆ ಒದಗಿಸುವುದು ಡ್ರಿವನ್ ವಿಶೇಷತೆಗಳಲ್ಲೊಂದು.
`ಡ್ರಿವನ್' ಪಾಲಿಗೆ ಚಮತ್ಕಾರ ಮಾಡಿದ್ದೆಂದರೆ ವಾಟ್ಸಾಪ್ ಮಾರ್ಕೆಟಿಂಗ್. ಇದರಲ್ಲಿರುವ ರಿಸ್ಕ್ ಅಂದ್ರೆ ಉಳಿದ ವೇದಿಕೆಗಳಂತೆ ರಿಯಾಯಿತಿ ಮಾದರಿಯಿಲ್ಲ. ಚಿಕ್ಕದಾದ ಫ್ರೆಂಡ್ಸ್&ಫ್ಯಾಮಿಲಿ ರೌಂಡ್ ಹೆಚ್ಚಿಸಿದಾಗಿನಿಂದ ಗ್ರಾಹಕರಿಗೆ ರಿಯಾಯಿತಿ ಸಿಗುತ್ತಿಲ್ಲ, ಡ್ರೈವರ್‍ಗಳ ಇನ್ಸೆಂಟಿವ್ ಕೂಡ ಕಡಿಮೆಯಾಗಿದೆ. ಆದ್ರೆ ಅಗತ್ಯ ಸಮಯದಲ್ಲಿ ಗ್ರಾಹಕರು ಹಣ ಪಾವತಿಗೆ ಹಿಂದೇಟು ಹಾಕುವುದಿಲ್ಲ ಅನ್ನೋದು ವಾಸ್ತವ. ದೆಹಲಿ ಮತ್ತು ಪುಣೆಯಲ್ಲಿ ಕೂಡ ಸೇವೆ ವಿಸ್ತರಿಸಲು ಡ್ರಿವನ್ ಯೋಜನೆ ರೂಪಿಸಿದ್ದು, ಇನ್ನಷ್ಟು ಬಂಡವಾಳ ಸಂಗ್ರಹಕ್ಕೂ ಮುಂದಾಗಿದೆ.
ಲೇಖಕರು: ಬಿಂಜಲ್ ಶಾ
ಅನುವಾದಕರು: ಭಾರತಿ ಭಟ್
1. ಹೋಟೆಲ್ ಒಂದರ ಲೆಕ್ಕಾಚಾರ, ಇಲ್ಲಿ ಎಲ್ಲವೂ ಕೆಜಿ ಲೆಕ್ಕದಲ್ಲೇ..!
2. 'ಮೆಡಿಡೈಲಿ'ಗೆ ಜನ್ಮ ನೀಡಿದ ಮರಾಠಿ ಹಬ್ಬ..!
3. ಸ್ಟಾರ್ಟ್ಅಪ್ ಉದ್ಯಮಿಗಳಿಗೆ ಸ್ಫೂರ್ತಿ ನೀಡಬಲ್ಲ ಸ್ಪೋರ್ಟ್ಸ್ಮನ್ ಸ್ಪಿರಿಟ್.. !