ಭಾರತದಲ್ಲೇ ಅತಿ ಹೆಚ್ಚು ದಂತ ಚಿಕಿತ್ಸಾಲಯಗಳನ್ನು ಹೊಂದಿರುವ ಮೈಡೆಂಟಿಸ್ಟ್ ಬೆಂಗಳೂರಿನಲ್ಲಿ 50 ಕ್ಲಿನಿಕ್‍ಗಳ ಗುರಿ
ವಿಶಾಂತ್
ಮೈಡೆಂಟಿಸ್ಟ್ ಭಾರತದಲ್ಲೇ ಅತಿ ಹೆಚ್ಚು ದಂತ ಚಿಕಿತ್ಸಾಲಯಗಳನ್ನು ಹೊಂದಿರುವ ಕಂಪನಿ. ಭಾರತದಾದ್ಯಂತ 106 ದಂತ ಚಿಕಿತ್ಸಾಲಯಗಳನ್ನು ಹೊಂದಿದೆ ಮೈಡೆಂಟಿಸ್ಟ್. ಇದುವರೆಗೆ ಸುಮಾರು 4 ಲಕ್ಷಕ್ಕೂ ಹೆಚ್ಚು ಜನರಿಗೆ ಈ ಚಿಕಿತ್ಸಾಲಯಗಳಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಮೂಲಕ ಅಷ್ಟೂ ಜನರ ನಗುವಿಗೆ ಕಾರಣವಾಗಿದೆ ಮೈಡೆಂಟಿಸ್ಟ್.
ಮೈಡೆಂಟಿಸ್ಟ್ ಹೇಗೆ ಪ್ರಾರಂಭವಾಯು ಗೊತ್ತಾ?
2010ರಲ್ಲಿ ಮುಂಬೈನಲ್ಲಿ ಪ್ರಾರಂಭವಾದ ಮೈಡೆಂಟಿಸ್ಟ್ ಇವತ್ತು ಮುಂಬೈ ಒಂದು ನಗರದಲ್ಲೇ ಬರೊಬ್ಬರಿ 50 ದಂತ ಚಿಕಿತ್ಸಾಲಯಗಳನ್ನು ಹೊಂದಿದೆ. ಪ್ರಾರಂಭದಲ್ಲಿ ತಿಂಗಳಿಗೆ ಎರಡು ಕ್ಲಿನಿಕ್‍ಗಳಂತೆ ಪ್ರಾರಂಭಿಸಲಾಗಿತ್ತಾದ್ರೂ, ಇವತ್ತು ಪ್ರತಿ ತಿಂಗಳು ದೇಶದ ಬೇರೆ ಬೇರೆ ನಗರಗಳಲ್ಲಿ 7 ಹೊಸ ಹೊಸ ಕ್ಲಿನಿಕ್‍ಗಳನ್ನು ಪ್ರಾರಂಭಿಸಲಾಗುತ್ತಿದೆ. ದಂತ ಚಿಕಿತ್ಸೆಗೆ ಬೇಕಾದ ಉಪಕರಣಗಳನ್ನು ವೈದ್ಯರಿಗೆ ಮಾರಾಟ ಮಾಡುವ ಮೂಲಕ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ ವಿಕ್ರಮ್ ವೋರಾ ಇವತ್ತು ಟೋಟಲ್ ಡೆಂಟಲ್ ಕೇರ್ ಪ್ರೈವೇಟ್ ಲಿಮಿಟೆಡ್ ಕಂಪನಿ ಮೂಲಕ ಭಾರತದ ಅತಿ ದೊಡ್ಡ ದಂತ ಚಿಕಿತ್ಸಾಲಯಗಳನ್ನು ನಡೆಸುತ್ತಿದ್ದಾರೆ.
ಬೆಂಗಳೂರಿಗೂ ಮೈಡೆಂಟಿಸ್ಟ್ ಲಗ್ಗೆ
ಇಂತಹ ಮೈಡೆಂಟಿಸ್ಟ್ ಇತ್ತೀಚೆಗಷ್ಟೇ ಬೆಂಗಳೂರಿಗೂ ಪದಾರ್ಪಣೆ ಮಾಡಿದೆ. ಮೊದಲ ಹಂತದಲ್ಲಿ ಒಟ್ಟು 10 ದಂತ ಚಿಕಿತ್ಸಾಲಯಗಳನ್ನು ಪ್ರಾರಂಭಿಸಲು ಮೈಡೆಂಟಿಸ್ಟ್ ಯೋಜನೆ ರೂಪಿಸಿದೆ. ಈಗಾಗಲೇ ಜೆಪಿ ನಗರ 5ನೇ ಹಂತದಲ್ಲಿ ಮೊದಲ ಚಿಕಿತ್ಸಾಲಯ ಕೆಲಸ ಪ್ರಾರಂಭಿಸಿದ್ದು, ಇನ್ನು ಕೆಲವೇ ದಿನಗಳಲ್ಲಿ ನಗರದ ಬೇರೆ ಬೇರೆ ಕಡೆಗಳಲ್ಲಿ ಇನ್ನೂ ಹತ್ತು ಡೆಂಟಲ್ ಕ್ಲಿನಿಕ್‍ಗಳನ್ನು ಶುರು ಮಾಡಲಾಗುವುದು ಅಂತಾರೆ ವಿಕ್ರಮ್ ವೋರಾ. 2016ರ ಅಂತ್ಯದೊಳಗೆ ಬೆಂಗಳೂರಿನಲ್ಲಿ ಒಟ್ಟು 50 ಡೆಂಟಲ್ ಕ್ಲಿನಿಕ್‍ಗಳನ್ನು ಪ್ರಾರಂಭಿಸುವ ಗುರಿ ಅವರದು.
2010ರಲ್ಲಿ ಮುಂಬೈನಲ್ಲಿ ಪ್ರಾರಂಭವಾದ ಮೈಡೆಂಟಿಸ್ಟ್ ಈಗಾಗಲೇ ಪುಣೆ, ಅಹಮದಾಬಾದ್‍ಗಳಲ್ಲೂ ತನ್ನ ಕಾರ್ಯಕ್ಷೇತ್ರ ವಿಸ್ತರಿಸಿದೆ. ಈಗ ಬೆಂಗಳೂರಿನಲ್ಲೂ ಪ್ರತಿ ತಿಂಗಳು 5 ಕ್ಲಿನಿಕ್ ಪ್ರಾರಂಭಿಸುವ ಮೂಲಕ ಮುಂದಿನ ಒಂದು ವರ್ಷದಲ್ಲಿ 50 ದಂತ ಚಿಕಿತ್ಸಾಲಯಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ.
2013ರಲ್ಲಿ ಬಿ ಸರಣಿಯಲ್ಲಿ ಸೀಡ್‍ಫಂಡ್ & ಏಷಿಯನ್ ಹೆಲ್ತ್ ಕೇರ್ ಫಂಡ್ ಮೂಲಕ 50 ಕೋಟಿ ಮತ್ತು ಇತ್ತೀಚೆಗಷ್ಟೇ ಎಲ್‍ಜಿಟಿ ವೆಂಚರ್ ಫಿಲಾಂತ್ರಪಿ ಅವರಿಂದ ಸಿ ಸರಣಿಯಲ್ಲಿ 50 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಪಡೆದಿದೆ. ಈ ಮೂಲಕ ದೇಶದೆಲ್ಲೆಡೆ ತನ್ನ ಕಾರ್ಯಕ್ಷೇತ್ರ ವಿಸ್ತರಿಸುವ ಆಲೋಚನೆ ಹೊಂದಿದ್ದಾರೆ ವಿಕ್ರಮ್ ವೋರಾ.
‘ನಾನು ನನ್ನ ಸಹೋದರ ಇಬ್ಬರೂ ದಂತ ವೈದ್ಯರಿಗೆ ಚಿಕಿತ್ಸಾ ಸಲಕರಣೆಗಳನ್ನು ಪೂರೈಸುತ್ತಿದ್ದೆವು. ಆ ಸಂದರ್ಭಗಳಲ್ಲಿ ದಂತ ಚಿಕಿತ್ಸಾಲಯಗಳಿಗೆ ತೆರಳಿದಾಗ, ವೈದ್ಯರನ್ನು ಭೇಟಿಯಾಗಲು ಕಾಯಬೇಕಿತ್ತು. ಆಗ ದಂತ ಸಂಬಂಧಿ ಸಮಸ್ಯೆ ಹೊಂದಿದ ಅಥವಾ ಗ್ರಾಹಕರು ವೈದ್ಯರ ಬಳಿ ಚಿಕಿತ್ಸೆ ಪಡೆದು ಹೊರ ಬಂದ ಬಳಿಕ ಹೆಚ್ಚು ಹಣ ತೆತ್ತ ಕುರಿತು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಜೊತೆಗೆ ನುರಿತ ತಜ್ಞರನ್ನು ಭೇಟಿ ಮಾಡಲು ಅಥವಾ ಅವರಿಂದ ಚಿಕಿತ್ಸೆ ಪಡೆಯಲು ಹಲವು ದಿನಗಳ ಕಾಲ ಹಲ್ಲು ನೋವಿನೊಂದಿಗೇ ಕಾಯುವ ದುಸ್ಥಿತಿಯಿತ್ತು. ಇಂತಹ ಸಮಸ್ಯೆಗಳನ್ನು ನೋಡಿ ನೋಡಿ ನನಗೂ ನನ್ನ ಸಹೋದರನಿಗೂ ದಂತ ಚಿಕಿತ್ಸೆಯನ್ನು ಸಾಮಾನ್ಯ ಜನರ ಕೈಗೆಟುಕುವಂತೆ ಮಾಡಬೇಕು ಅನ್ನೋ ಆಸೆ ಮೂಡತೊಡಗಿತು. ಅದನ್ನು ಕೇಳಿದ ತುಂಬಾ ಜನ ನಮ್ಮನ್ನು ನಂಬಲೇ ಇಲ್ಲ. ಆದ್ರೆ ಕೆಲವೇ ದಿನಗಳಲ್ಲಿ ನಮ್ಮೊಂದಿಗೆ ಕೆಲ ದಂತ ವೈದ್ಯರು ಕೈಜೋಡಿಸಿದರು. ಹೀಗೆ ಮೈಡೆಂಟಿಸ್ಟ್ ಪ್ರಾರಂಭವಾಯ್ತು. ಅಂದಿನಿಂದ ಅವರೂ ಬೆಳೆಯುತ್ತಿದ್ದಾರೆ, ನಾವೂ ಅಭಿವೃದ್ಧಿ ಹೊಂದುತ್ತಿದ್ದೇವೆ’ ಅಂತ ಮೈಡೆಂಟಿಸ್ಟ್ ಜನ್ಮದ ಕುರಿತು ಹೇಳುತ್ತಾರೆ ಸಂಸ್ಥೆಯ ಸಿಇಒ ಮತ್ತು ಸಹ ಸಂಸ್ಥಾಪಕ ವಿಕ್ರಮ್ ವೋರಾ.
ಕಡಿಮೆ ವೆಚ್ಚದ ಉತ್ತಮ ಗುಣಮಟ್ಟದ ಚಿಕಿತ್ಸೆ
ಬೇರೆ ದಂತ ಚಿಕಿತ್ಸಾಲಯಗಳಿಗೂ ಮೈಡೆಂಟಿಸ್ಟ್‍ಗೂ ತುಂಬಾ ವ್ಯತ್ಯಾಸಗಳಿವೆಯಂತೆ. ವಿಕ್ರಮ್ ವೋರಾ ಹೇಳುವ ಪ್ರಕಾರ. ‘ ನಾವು ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಸಾಮಾನ್ಯ ಜನರ ಕೈಗೆಟುಕುವ ಬೆಲೆಯಲ್ಲಿ ನೀಡುತ್ತೇವೆ. ಅಕಸ್ಮಾತ್ ಚಿಕಿತ್ಸೆಯ ವೆಚ್ಚ 18 ಸಾವಿರ ರೂಪಾಯಿ ಆಯ್ತು ಅಂತಿಟ್ಟುಕೊಳ್ಳಿ, ಆ ಹಣವನ್ನು ಚಿಕಿತ್ಸೆ ಪಡೆದವರು ಇಎಮ್‍ಐ ಮೂಲಕ ಪ್ರತಿ ತಿಂಗಳು ಕಂತಿನ ರೂಪದಲ್ಲಿ ಕಟ್ಟಬಹುದು. ಅಲ್ಲದೇ ಪರಿಶೀಲನೆ ಮತ್ತು ಎಕ್ಸ್‍ರೇಗಳನ್ನು ಯಾವುದೇ ಶುಲ್ಕ ಪಡೆಯದೇ ನೀಡುತ್ತಿದ್ದೇವೆ. ಬೆಂಗಳೂರಿನಲ್ಲೂ ಈ ಸೌಲಭ್ಯ ಮುಂದುವರೆಯಲಿದೆ’ ಅಂತ ನಗುತ್ತಾರೆ ವಿಕ್ರಮ್ ವೋರಾ.
ಭವಿಷ್ಯದ ಯೋಜನೆ
ಮೈಡೆಂಟಿಸ್ಟ್ ದಂತ ಚಿಕಿತ್ಸಾಲಯಗಳಲ್ಲಿ 500 ಮಂದಿ ವೈದ್ಯರು ಹಾಗೂ 1250 ಇತರೆ ಸಿಬ್ಬಂದಿ ಸೇರಿದಂತೆ ಒಟ್ಟು 2250 ಮಂದಿ ಕೆಲಸ ಮಾಡುತ್ತಿದ್ದಾರೆ. ‘ನಮ್ಮ ಕ್ಲಿನಿಕ್‍ಗಳಲ್ಲಿ ಸೇರಬಯಸುವ ದಂತ ವೈದ್ಯರಿಗೆ ನಾವು ಏಳರಿಂದ ಎಂಟು ದಿನಗಳ ತರಬೇತಿ ನೀಡುತ್ತೇವೆ. ಈ ಮೂಲಕ ಅವರ ಗುಣಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ಅವರ ಕ್ಲಿನಿಕ್‍ಅನ್ನೂ ಮೇಲ್ದರ್ಜೆಗೆ ಏರಿಸುತ್ತೇವೆ. ಹೀಗೆ ಪ್ರತಿ ದಂತ ಚಿಕಿತ್ಸಾಲಯಕ್ಕೂ ಸುಮಾರು 50 ಲಕ್ಷ ರೂಪಾಯಿ ಖರ್ಚು ಮಾಡಲಾಗುತ್ತೆ. ಈ ಮೂಲಕ ಬೆಂಗಳೂರಿನಲ್ಲಿ ಪ್ರಾರಂಭಿಸಲು ಉದ್ದೇಶಿಸಿರುವ 50 ಡೆಂಟಲ್ ಕ್ಲಿನಿಕ್‍ಗಳಿಗೆ 25 ಕೋಟಿ ರೂಪಾಯಿ ಬಂಡವಾಳ ಹೂಡುವ ಯೋಜನೆ ಇದೆ’ ಅಂತ ಬೆಂಗಳೂರಿನ ಪ್ಲ್ಯಾನ್ ಕುರಿತು ಹೇಳಿಕೊಳ್ಳುತ್ತಾರೆ ವಿಕ್ರಮ್ ವೋರಾ. ಬೆಂಗಳೂರಿನ 50 ಡೆಂಟಲ್ ಕ್ಲಿನಿಕ್‍ಗಳಲ್ಲಿ 150ರಿಂದ 200 ದಂತ ವೈದ್ಯರು ಕೆಲಸ ಮಾಡಲಿದ್ದಾರೆ.
‘ಪ್ರತಿ ತಿಂಗಳು ದೇಶದ ಬೇರೆ ಬೇರೆ ಭಾಗಗಳಲ್ಲಿರುವ ಮೈಡೆಂಟಿಸ್ಟ್‍ನ ಡೆಂಟಲ್ ಕ್ಲಿನಿಕ್‍ಗಳಲ್ಲಿ ಬರೊಬ್ಬರಿ 30 ಸಾವಿರ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾವಿಲ್ಲಿ ಕೇವಲ 1 ಸಾವಿರ ರೂಪಾಯಿಯಿಂದ ಶುರುವಾಗುವ ರೂಟ್ ಕೆನಾಲ್ಸ್ ಚಿಕಿತ್ಸೆ ಹಾಗೂ ಆರ್ಥೊಡಾಂಟಿಕ್ಸ್ ಸೇರಿದಂತೆ ಹಲ್ಲಿಗೆ ಸಂಬಂಧಿಸಿದ ಎಲ್ಲಾ ಚಿಕಿತ್ಸೆಗಳನ್ನೂ ನೀಡುತ್ತೇವೆ. ಬೆಂಗಳೂರಿನಲ್ಲೂ ಪ್ರತಿ ತಿಂಗಳ 10 ಸಾವಿರದಿಂದ 15 ಸಾವಿರ ರೋಗಿಗಳಿಗೆ ಚಿಕಿತ್ಸೆ ನೀಡುವ ಯೋಜನೆ ಹಾಕಿಕೊಂಡಿದ್ದೇವೆ’ ಅಂತ ಭವಿಷ್ಯದ ಯೋಜನೆಗಳ ಕುರಿತು ಹೇಳಿಕೊಳ್ಳುತ್ತಾರೆ ವಿಕ್ರಮ್ ವೋರಾ.