15 ಲಕ್ಷದ ನೌಕರಿ ತೊರೆದು ಹಳೆ ಸೆಲೂನ್ ಗೆ ಹೊಸ ಟಚ್ ನೀಡಿದ ಸ್ನೇಹಿತರು
ಟೀಮ್ ವೈ.ಎಸ್. ಕನ್ನಡ
ಅವಶ್ಯಕತೆ ಹೊಸ ಆವಿಷ್ಕಾರಕ್ಕೆ ಮುನ್ನುಡಿ ಎನ್ನುವ ಮಾತೊಂದಿದೆ. ಮನುಷ್ಯ ತನ್ನ ಅವಶ್ಯಕತೆಗೆ ಅನುಗುಣವಾಗಿ ಹಾಗೂ ಸಮಸ್ಯೆಗಳ ಪರಿಹಾರಕ್ಕಾಗಿ ಹೊಸ ಹೊಸ ವಸ್ತು ಹಾಗೂ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದ್ದಾನೆ. ಕೇವಲ ವಸ್ತುಗಳು ಮಾತ್ರವಲ್ಲ ಸೇವಾ ಕ್ಷೇತ್ರದಲ್ಲೂ ಆವಿಷ್ಕಾರಗಳಾಗಿವೆ. ಹೊಸ ಬಗೆಯ ವಸ್ತುಗಳು ಮಾರುಕಟ್ಟೆಗೆ ಲಗ್ಗೆ ಇಡ್ತಾ ಇದ್ದಂತೆ ಸೇವಾ ಕ್ಷೇತ್ರ ಕೂಡ ವಿಸ್ತರಣೆಗೊಳ್ಳುತ್ತದೆ.ಮಾರುಕಟ್ಟೆಯಲ್ಲಿ ದೇಶಿಯ ಹಾಗೂ ವಿದೇಶಿ ಕಂಪನಿಗಳು ನೂತನ ಸೇವೆಗಳನ್ನು ಹೊತ್ತು ತರುತ್ತಿವೆ.ಇದರಿಂದಾಗಿ ಗ್ರಾಹಕರು ಮಾಡಿದ ಖರ್ಚಿಗೆ ತಕ್ಕ ಸೇವೆ ದೊರೆಯುವುದರ ಜೊತೆಗೆ ಅವರ ಸಮಯ ಕೂಡ ಉಳಿಯುತ್ತಿದೆ. ಸೇವಾ ಕ್ಷೇತ್ರಕ್ಕೆ ಕಾಲಿಡುತ್ತಿರುವ ಕಂಪನಿಗಳು ವೇಗದಲ್ಲಿ ಅಭಿವೃದ್ಧಿ ಕಾಣುತ್ತಿವೆ. ಕೇವಲ ಲಾಭಕ್ಕಾಗಿ ಕಂಪನಿಗಳು ಕೆಲಸ ಮಾಡುತ್ತಿಲ್ಲ,ಬದಲಾಗಿ ಸಾಮಾನ್ಯ ಜನರ ಸಮಸ್ಯೆಗೆ ಸ್ಪಂದಿಸಿ ಅವರಿಗೆ ಹತ್ತಿರವಾಗುತ್ತಿವೆ. ಅದರಲ್ಲೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸ್ಟಾರ್ಟ್ ಅಪ್ ಯೋಜನೆ ನಂತರ ದೇಶದಾದ್ಯಂತ ಸಾಕಷ್ಟು ಬದಲಾವಣೆ ಕಂಡು ಬಂದಿದೆ.ಕಾಲೇಜ್ ನಲ್ಲಿ ಶಿಕ್ಷಣ ಮುಗಿಸಿ ಹೊರ ಬರ್ತಾ ಇರುವ ಯುವಜನತೆ ನೌಕರಿ ಹುಡುಕುವ ಬದಲು ತಮ್ಮದೆ ಉದ್ಯೋಗ ಆರಂಭಿಸಲು ಆಸಕ್ತಿ ತೋರುತ್ತಿದ್ದಾರೆ. ಇದ್ರಲ್ಲಿ ಭೋಪಾಲ್ ನಲ್ಲಿ ಎಂಜಿನಿಯರಿಂಗ್ ಪದವಿ ಮಾಡಿರುವ ವಿದ್ಯಾರ್ಥಿ ಪ್ರವೀಣ್ ಮೌರ್ಯ ಹಾಗೂ ಅವರ ಮೂವರು ಸ್ನೇಹಿತರು ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. ಲಕ್ಷ ಲಕ್ಷ ಸಂಬಳ ಬರುವ ಕೆಲಸ ಬಿಟ್ಟು ಸ್ಟಾರ್ಟ್ ಅಪ್ ಶುರುಮಾಡಿದ್ದಾರೆ. ಐದು ಸ್ನೇಹಿತರು ಸೇರಿ ಶುರುಮಾಡಿರುವ ಸೆಲೂನ್ ಹಾಗೂ ಪಾರ್ಲರ್ ಕೆಲವೇ ಕೆಲವು ತಿಂಗಳಲ್ಲಿಯೇ ಸಾಕಷ್ಟು ಹೆಸರು ಮಾಡಿದೆ. ಹಾಗಾಗಿ ಭೋಪಾಲ್ ಹೊರಗೆ ಹಾಗೂ ದೇಶದ ವಿವಿಧ ಭಾಗಗಳಿಗೆ ತಮ್ಮ ಕಾರ್ಯ ಕ್ಷೇತ್ರವನ್ನು ವಿಸ್ತರಿಸುವ ಯೋಚನೆಯಲ್ಲಿದ್ದಾರೆ ಸ್ನೇಹಿತರು.
ಕ್ಷೌರದಂಗಡಿ ಅಥವಾ ಪಾರ್ಲರ್ ನಲ್ಲಿ ನಮ್ಮ ಬಾರಿಗಾಗಿ ಕಾಯುವುದು ಬೇಸರದ ಸಂಗತಿ. ಅಲ್ಲಿರುವ ಎಲ್ಲ ಪೇಪರ್ ಓದಿ ಮುಗಿಸ್ತಾರೆ ಕೆಲವರು. ಇಷ್ಟವಿರಲಿ ಬಿಡಲಿ ಟಿವಿಯಲ್ಲಿ ಬರುತ್ತಿರುವ ಪ್ರೋಗ್ರಾಂ ನೋಡಿ ನೋಡಿ ಮತ್ತೂ ಬೇಸರವಾಗಿರುತ್ತದೆ. ಕೆಲವೊಮ್ಮೆ ಸರದಿ ನಮ್ಮದಾಗಿದ್ದರೂ ಸೆಲೂನ್ ಅಂಗಡಿಯವನ ಆಪ್ತರು ಅಥವಾ ಈ ಪ್ರದೇಶದ ಪ್ರಮುಖ ವ್ಯಕ್ತಿ ಬಂದ್ರೆ ಅವರಿಗೆ ಮೊದಲ ಆದ್ಯತೆ. ಇದು ಗೊತ್ತಿದ್ದರೂ ಸಿಟ್ಟು ನುಂಗಿಕೊಂಡು ಅಲ್ಲಿಯೇ ಕೂತಿರಬೇಕಾಗುತ್ತದೆ. ಸಾಕಪ್ಪ ಓಡಿ ಹೋಗೋಣ ಅನ್ನಿಸುವುದು ಇದೆ. ಇದರಿಂದ ಬೇಸತ್ತ ಕೆಲವರು ಮನೆಯಲ್ಲಿಯೇ ಶೇವಿಂಗ್ ಮಾಡಿಕೊಳ್ತಾರೆ. ಆದ್ರೆ ಹೇರ್ ಕಟ್ ಮಾಡಿಸುವುದಕ್ಕಾಗಿ ಸೆಲೂನ್ ಗೆ ಹೋಗುವುದು ಅನಿವಾರ್ಯ. ಆದ್ರೆ ಇನ್ನು ಮುಂದೆ ಸರದಿಯಲ್ಲಿ ಕಾಯುವ ಪರಿಸ್ಥಿತಿ ಇರುವುದಿಲ್ಲ. ಮೊದಲೇ ಬುಕ್ ಮಾಡಿ ಸೆಲೂನ್ ಪಾರ್ಲರ್ ಗೆ ಹೋದ್ರೆ ತಕ್ಷಣ ಕಚಾಕಚ್ ಅಂತಾ ಕಟ್ ಆಗುತ್ತೆ ನಿಮ್ಮ ಕೂದಲು.
ದೇಶದ ಸೇವಾ ಕ್ಷೇತ್ರದಲ್ಲಿ ನೂತನ ಐಡಿಯಾದೊಂದಿಗೆ Parlosalo ಹೆಸರಿನಲ್ಲಿ ಆರಂಭವಾಗಿರು ಸ್ಟಾರ್ಟ್ ಅಪ್ ಮೂಲಕ ಯಾವುದೇ ವ್ಯಕ್ತಿ ಹೇರ್ ಕಟ್ಟಿಂಗ್,ಹೇರ್ ಡ್ರೈ,ಶೇವಿಂಗ್,ಟ್ರಿಮ್ಮಿಂಗ್,ಸ್ಪಾ,ಮಸಾಜ್,ವ್ಯಾಕ್ಸ್, ಫೇಶಿಯಲ್ ಮತ್ತು ಮೇಕಪ್ ಸಹಿತ ಪಾರ್ಲರ್ ನ ಎಲ್ಲ ಸೇವೆಗಳನ್ನು ಪಡೆಯಬಹುದಾಗಿದೆ. ಬುಕ್ಕಿಂಗ್ ನಂತರ ಗ್ರಾಹಕನಿಗೆ ಹತ್ತಿರವಾದ ಅಥವಾ ಇಷ್ಟವಾಗುವ ಪಾರ್ಲರ್ ಗೆ ಹೋಗಲು ಸೂಕ್ತ ಸಮಯ ನೀಡಲಾಗುತ್ತದೆ. ಗ್ರಾಹಕ ತನ್ನ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಹೋಗಿ ಯಾವುದಕ್ಕೂ ಕಾಯದೇ ತನಗೆ ಬೇಕಾದ ಸೇವೆಯನ್ನು ಉಚಿತವಾಗಿ ಪಡೆಯಬಹುದಾಗಿದೆ. ಇದರಿಂದಾಗಿ ಆತನ ಸಮಯ ಉಳಿಯುವುದಲ್ಲದೇ ಹೆಚ್ಚುವರಿ ಹಣ ಪಾವತಿ ಮಾಡುವುದರಿಂದಲೂ ತಪ್ಪಿಸಿಕೊಳ್ಳಬಹುದಾಗಿದೆ. ಗ್ರಾಹಕರಿಗೆ ಅವರ ಸಮಯಕ್ಕೆ ತಕ್ಕಂತೆ ಸೇವೆ ಸಿಗುತ್ತಿದೆ. ಪಾರ್ಲರ್ ಮಾಲೀಕರಿಗೆ ಕೂಡ ಗ್ರಾಹಕರನ್ನು ಬಹಳ ಹೊತ್ತು ಕಾಯಿಸುವುದು ತಪ್ಪಿದೆ. ಜೊತೆಗೆ ಹೆಚ್ಚೆಚ್ಚು ಗ್ರಾಹಕರನ್ನು ಸೆಳೆಯಲು ಕಷ್ಟಪಡಬೇಕಾಗಿಲ್ಲ.
Parlosalo ಹೀಗೆ ಕೆಲಸ ಮಾಡುತ್ತದೆ:
Parlosalo ಬಳಿ ನಗರದ ಎಲ್ಲ ಸೆಲೂನ್ ಹಾಗೂ ಪಾರ್ಲರ್ ಪಟ್ಟಿ ಇದೆ. ಯಾವ ಸೆಲೂನ್ ಯಾವ ಪ್ರದೇಶದಲ್ಲಿದೆ ಎನ್ನುವ ಬಗ್ಗೆ ಎಲ್ಲ ವಿವರ ಇದೆ. ಕಂಪನಿಯಲ್ಲಿ 24 ಗಂಟೆ ಗ್ರಾಹಕರು ಬುಕ್ಕಿಂಗ್ ಮಾಡಬಹುದಾಗಿದೆ. ಬುಕ್ಕಿಂಗ್ ಆನ್ಲೈನ್ ಹಾಗೂ ಫೋನ್ ಮೂಲಕ ಮಾಡಲಾಗುತ್ತದೆ. ಗ್ರಾಹಕರು ಯಾವುದೇ ಹತ್ತಿರದ ಅಥವಾ ತಮಗೆ ಬೇಕಾದ ಸೆಲೂನ್ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಸೇವೆ ಪಡೆಯುವ ಮುನ್ನವೇ ಗ್ರಾಹಕ ಖರ್ಚನ್ನು ತುಂಬಬಹುದಾಗಿದೆ. ಇಲ್ಲವೆ ಸರ್ವಿಸ್ ಪಡೆದ ನಂತರ ಸೆಲೂನ್ ಅಥವಾ ಪಾರ್ಲರ್ ನಲ್ಲಿ ಹಣ ನೀಡಬಹುದು. ಕಂಪನಿಯಲ್ಲಿ ಈಗ 12 ಮಂದಿ ಕೆಲಸ ಮಾಡುತ್ತಿದ್ದಾರೆ. ಅದ್ರಲ್ಲಿ ನಾಲ್ಕು ಮಂದಿ ಗ್ರಾಹಕರ ಫೋನ್ ಕರೆ ಸ್ವೀಕರಿಸುವುದು ಹಾಗೂ ಮೇಲ್ ನಲ್ಲಿ ಬಂದ ಬುಕ್ಕಿಂಗ್ ಗಳನ್ನು ಪರಿಶೀಲಿಸುತ್ತಾರೆ. ಉಳಿದ ನಾಲ್ಕು ಮಂದಿ ಕಚೇರಿ ಇತರ ಕೆಲಸಗಳನ್ನು ಮಾಡ್ತಾರೆ. ಮತ್ತೆ ಉಳಿದ ನಾಲ್ಕು ಮಂದಿ ನಗರದಲ್ಲಿ ಹೊಸದಾಗಿ ಆರಂಭವಾಗಿರುವ ಸೆಲೂನ್ ಹಾಗೂ ಪಾರ್ಲರ್ ಗಳನ್ನು ಕಂಪನಿ ಜೊತೆ ಸೇರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಇದನ್ನು ಓದಿ: ವೀಕೆಂಡ್ಗೂ ಒಂದೇ ದರ, ವೀಕ್ಡೇಸ್ನಲ್ಲೂ ಅದೇ ರೇಟ್..!
ಮೂಲತಃ ಉತ್ತರ ಪ್ರದೇಶದ ವಾರಣಾಸಿಯ ನಿವಾಸಿ ಪ್ರವೀಣ್ ಮೌರ್ಯ, ಭೋಪಾಲ್ ನ ಮಿಲೇನಿಯಂ ಕಾಲೇಜ್ ಆಫ್ ಟೆಕ್ನಾಲಜಿಯಲ್ಲಿ ಬಿಇ ಫೈನಲ್ ಈಯರ್ ನಲ್ಲಿ ಓದುತ್ತಿದ್ದಾರೆ. ಅವರ ಮೂವರು ಸ್ನೆಹಿತರು ಹಾಗೂ ಪಾರ್ಟನರ್ ಸಮೀರ್,ಚಾಂದ್ ಹಾಗೂ ನಿಧಿ ಮೂವರೂ ಬಿಇ ಪದವಿಯ ಅಂತಿಮ ವರ್ಷದಲ್ಲಿ ಓದುತ್ತಿದ್ದಾರೆ. ನಾಲ್ವರು ಸ್ನೇಹಿತರಿಗೂ ಹೈದ್ರಾಬಾದ್ ನ ಒಂದು ಕಂಪನಿಯಲ್ಲಿ ಕೆಲಸ ಸಿಕ್ಕಿದೆ. 12-15 ಲಕ್ಷ ಪ್ಯಾಕೇಜ್ ನೀಡಲಾಗಿದೆ. ಆದ್ರೆ ಸ್ವಂತ ಉದ್ಯೋಗದ ಮೇಲೆ ಹೆಚ್ಚಿನ ಪ್ರಾಮುಖ್ಯತೆ ತೋರಿಸಿದ್ದಾರೆ. ಪ್ರವೀಣ್ ತಂದೆ ವ್ಯಾಪಾರಿಗಳು. ಸಹೋದರ ಡಾಕ್ಟರ್. ಪ್ರವೀಣ್ ಹಾಗೂ ಅವರ ಸ್ನೇಹಿತರು ಆತ್ಮವಿಶ್ವಾಸದಲ್ಲಿದ್ದಾರೆ. ತಮ್ಮ ಕಂಪನಿಯನ್ನು ಉನ್ನತ ಮಟ್ಟಕ್ಕೆ ತಲುಪಿಸುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.ಭೋಪಾಲ್ ಹಾಗೂ ಮಧ್ಯಪ್ರದೇಶದ ಗಡಿ ದಾಟಿ,ದೇಶದ ಇತರ ಭಾಗಗಳಿಗೂ ಕಂಪನಿಯನ್ನು ವಿಸ್ತರಿಸುವ ಗುರಿ ಹೊಂದಿದ್ದಾರೆ. ಆದರೆ ಇವರಿಗೆ ಬಂಡವಾಳದ ಸಮಸ್ಯೆ ಇದೆ. ಈ ಸ್ನೇಹಿತರ ಜೊತೆ ಮತ್ತಿಬ್ಬರು ಕೈ ಜೋಡಿಸಿದ್ದಾರೆ. ರವಿ ನಾರಂಗ್ ಹಾಗೂ ಮೋಹನ್ ಸಾಹು. ಇವರಿಬ್ಬರು ವ್ಯಾಪಾರ ಕ್ಷೇತ್ರದಲ್ಲಿ ಸಾಕಷ್ಟು ಅನುಭವಹೊಂದಿದ್ದು, ಬಂಡವಾಳವನ್ನು ಕೂಡ ಒದಗಿಸುತ್ತಿದ್ದಾರೆ.
ಹೇಗೆ ಬಂತು ಯೋಚನೆ :
ಈ ಐಡಿಯಾ ಬಂದಿದ್ದು ಈ ನಾಲ್ಕು ಸ್ನೇಹಿತರಿಗೆ. ಸೆಲೂನ್ ಹಾಗೂ ಪಾರ್ಲರ್ ಗೆ ಹೋಗುವುದು ಅವರಿಗೆ ತಲೆನೋವಿನ ಕೆಲಸವಾಗಿತ್ತು. ಗಂಟೆಗಟ್ಟಲೆ ಕಾಯುವುದು ಅವರಿಗೆ ತಲೆನೋವು ತರಿಸ್ತಾ ಇತ್ತು. ಇದರಿಂದ ಬೇಸತ್ತಿದ್ದ ಇವರು ಕೆಲವು ಬಾರಿ ಸೆಲೂನ್ ಮಂದಿಗೆ ಕರೆ ಮಾಡಿ ನಂತರ ಹೋಗ್ತಾ ಇದ್ದರು. ಹಾಗಾಗಿ ಸಮಯಕ್ಕೆ ಸರಿಯಾಗಿ ಕೆಲಸವಾಗ್ತಾ ಇತ್ತು. ಇದೇ ಇವರ ಹೊಸ ಸ್ಟಾರ್ಟ್ ಅಪ್ ಗೆ ಕಾರಣವಾಯ್ತು.
ಲೇಖಕ: ಹುಸೇನ್ ಟಬಿಸ್
1. ಟೊಮ್ಯಾಟೋ ಬೆಳೆಯಲ್ಲಿ ಹೊಸ ಮ್ಯಾಜಿಕ್- ಜಪಾನ್ ತಳಿಯಿಂದ ಲಾಭದ ಕಿಕ್
2. ಮಾಂಸಾಹಾರವನ್ನು ಸಂರಕ್ಷಿಸಲು ಬಂದಿದೆ ಹೊಸ ತಂತ್ರಜ್ಞಾನ
3. ನಿಮ್ಮೊಳಗಿನ ಉದ್ಯಮಿಯನ್ನು ಬಡಿದೆಬ್ಬಿಸುವ 5 ಟಿವಿ ಕಾರ್ಯಕ್ರಮಗಳು..!