ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಇದೆ ಶಿಕ್ಷಾ ಫೈನಾನ್ಸ್
ಉಷಾ ಹರೀಶ್
ಭಾರತದಲ್ಲಿ ಶಿಕ್ಷಣ ಇಂದು ಖಾಸಗೀಕರಣವಾಗುತ್ತಿದೆ. ಇದರ ಪರಿಣಾಮವಾಗಿ ಸಾಕಷ್ಟು ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ವ್ಯಾಸಂಗದಿಂದ ವಂಚಿತರಾಗಿ ಜೀವನ ನಿರ್ವಹಣೆಗಾಗಿ ಉದ್ಯೋಗದ ಹಾದಿ ಹಿಡಿಯುತ್ತಿದ್ದಾರೆ.
ಸಾಕಷ್ಟು ಬ್ಯಾಂಕುಗಳು ಉನ್ನತ ವ್ಯಾಸಂಗಕ್ಕಾಗಿ ಸಾಲ ಕೊಡುತ್ತವೆಯಾದರೂ ಅದನ್ನು ಪಡೆಯಲು ಸಾಕಷ್ಟು ಹರಸಾಹಸ ಮಾಡಬೇಕು. ಈ ಬಗ್ಗೆ ನಮ್ಮ ಸರ್ಕಾರಗಳು ಗಮನ ಹರಿಸುವುದು ಕಡಿಮೆಯೇ. ಇದಲ್ಲೆದರ ಪರಿಣಾಮವಾಗಿ ಇಂದು ಸಾಕಷ್ಟು ಪ್ರತಿಭಾವಂತರು ಉತ್ತಮ ಮತ್ತು ಉನ್ನತ ಶಿಕ್ಷಣ ಪಡೆಯಬೇಕೆಂದಿದ್ದರೂ ಸಾಧ್ಯವಾಗುತ್ತಿಲ್ಲ. ಇದೆಲ್ಲದನ್ನು ಮನಗಂಡ ಇಬ್ಬರು ತಮಿಳುನಾಡಿನ ಯುವಕರು ಬಡ ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಸಾಲ ನೀಡುವ ಹಣಕಾಸು ಸಂಸ್ಥೆ ಸ್ಥಾಪಿಸಿದ್ದಾರೆ.
ಫ್ಲಿಫ್ಕಾರ್ಟ್ಗಿಂತ ಡಬಲ್ ಆದಾಯ ಗಳಿಸಿದ ಭಾರತೀಯ ರೈಲ್ವೇ - ಆನ್ಲೈನ್ ರೈಲ್ವೇ ಟಿಕೆಟ್ ಮಾರಾಟದಲ್ಲಿ IRCTC ಫಸ್ಟ್
ತಮಿಳುನಾಡಿನ ರಾಮಕೃಷ್ಣನ್ ಮತ್ತು ಜೆ. ಅಬ್ರಾಹಂ ಎಂಬ ಯುವಕರು ಇಬ್ಬರೂ ಸೇರಿ ಶಿಕ್ಷಾ ಫೈನಾನ್ಸ್ ಎಂಬ ಹಣಕಾಸು ಸಂಸ್ಥೆ ಆರಂಭಿಸಿದ್ದಾರೆ. ಈ ಇಬ್ಬರಲ್ಲಿ ರಾಮಕೃಷ್ಣನ್ ಕಳೆದೊಂದು ದಶಕದಿಂದ ಚಾರ್ಟಡ್ ಅಕೌಂಟ್ ಮತ್ತು ಕಂಪನಿ ಸೆಕ್ರಟ್ರಿಯೆಟ್ ಶಿಕ್ಷಣ ಪಡೆದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಅವರಿಗೆ ಉತ್ತಮ ವೇತನ ದೊರೆಯುತ್ತಿತ್ತು. ಖಾಸಗಿ ಬ್ಯಾಂಕುಗಳಲ್ಲಿ ರಾಮಕೃಷ್ಣನ್ ಕೆಲಸ ಮಾಡುವಾಗ ಕೆಲ ವಿದ್ಯಾರ್ಥಿಗಳು ಸಾವಿರ ಕನಸು ಹೊತ್ತು ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡಲು ಹಣಕಾಸಿನ ನೆರವಿಗಾಗಿ ಬೇಡಿಕೆ ಇಡುತ್ತಿದ್ದರು. ಆದರೆ ಕೆಲ ಭದ್ರತಾ ಕಾರಣಗಳಿಂದ ಸಾಲ ನೀಡಲು ಕಷ್ಟವಾಗುತ್ತಿತ್ತು. ಆಗ ಸಾಲ ಸಿಗದೇ ಆ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಸಣ್ಣಪುಟ್ಟ ಕೆಲಸಗಳಿಗೆ ಸೇರಿಕೊಳ್ಳುತ್ತಿದ್ದರು. ಇದರಿಂದ ಒಬ್ಬ ಪ್ರತಿಭಾವಂತ ವಿದ್ಯಾರ್ಥಿಯ ಜೀವನ ಕಣ್ಣಮುಂದೆಯ ಕರಗಿ ಹೋಗುತ್ತಿತ್ತು.
ಇಷ್ಟೇ ಅಲ್ಲದೇ ಸಾಕಷ್ಟು ಕಾರಣಗಳಿಂದಲೂ ವಿದ್ಯಾರ್ಥಿಗಳಿಗೆ ಸಾಲ ದೊರೆಯುತ್ತಿರಲಿಲ್ಲ. ಅದನ್ನೆಲ್ಲಾ ಕಣ್ಣಾರೆ ಕಂಡ ರಾಮಕೃಷ್ಣನ್ ತಾವೇ ಏಕೆ ಒಂದು ಹಣ ಕಾಸು ಸಂಸ್ಥೆ ಪ್ರಾರಂಭಿಸಿ ಹಣಕಾಸಿನ ಆಡಚಣೆಯಿಂದ ಶಿಕ್ಷಣದಿಂದ ದೂರು ಉಳಿದ ಯುವಜನರಿಗೆ ಸಹಾಯ ಮಾಡಬಹದು ಎಂದು ಯೋಚಿಸಿ ಈ ಶಿಕ್ಷಾ ಫೈನಾನ್ಸ್ ಪ್ರಾರಂಭಿಸಿದರು.
ಕಡಿಮೆ ಬಡ್ಡಿ ದರದಲ್ಲಿ ಸಾಲ
ಈ ಶಿಕ್ಷಾ ಫೈನಾನ್ಸ್ನಲ್ಲಿ ವಿದ್ಯಾರ್ಥಿಗಳಿಗಾಗಿ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡುತ್ತಾರೆ. ಮತ್ತು ತೀರಿಸುವ ವಿಧಾನವು ಸುಲಭದ್ದಾಗಿದೆ. ಇಲ್ಲಿ ಹತ್ತು ಸಾವಿರ ರೂಪಾಯಿಗಳಿಂದ ಹಿಡಿದು ಒಂದು ಕೋಟಿ ರೂಪಾಯಿವರೆಗೂ ಸಾಲ ಕೊಡಲಾಗುತ್ತದೆ. ಸಾಲ ಪಡೆದವರು ಸುಲಭ ಕಂತುಗಳ ಮೂಲಕ ಅಂದರೆ 20 ರಿಂದ 60 ತಿಂಗಳಲ್ಲಿ ಸಾಲವನ್ನು ಹಿಂತಿರುಗಿಸಬಹುದು. ಇದರ ಮೂಲಕ ಭಾರತದಲ್ಲಿನ ಬಡ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕೆ ಸಾಲ ಸೌಲಭ್ಯ, ವಿದೇಶಗಳಲ್ಲಿ ವ್ಯಾಸಂಗ ಮಾಡ ಬಯಸುವ ಪ್ರತಿಭಾವಂತರಿಗೆ ಹಣಕಾಸು ನೆರವು ನೀಡುತ್ತಿದ್ದಾರೆ.
ರಾಧಾಕೃಷ್ಣನ್ ಅವರ ಈ ಯೋಜನೆಗೆ ಗೆಳೆಯ ಅಬ್ರಾಹಂ ಕೂಡಾ ಸಾಥ್ ನೀಡಿ ಬಡ ಪ್ರತಿಭಾವಂತರ ಶಿಕ್ಷಣಕ್ಕೆ ತಮ್ಮ ಕೈಯಲ್ಲಿ ಸಾಧ್ಯವಾದಷ್ಟು ಸಹಾಯ ಮಾಡುತ್ತಿದ್ದಾರೆ.
ಆರ್ಥಿಕ ನಷ್ಟದಲ್ಲಿರುವ ಸಂಸ್ಥೆಗೂ ಸಾಲ
ಈ ಶಿಕ್ಷಾ ಫೈನಾನ್ಸ್ನಲ್ಲಿ ಬಡ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ಉತ್ತಮ ಶಿಕ್ಷಣ ನೀಡಿ ಆರ್ಥಿಕ ನಷ್ಟದಲ್ಲಿರುವ ಯಾವುದೇ ಶಿಕ್ಷಣ ಸಂಸ್ಥೆಗೆ ಇವರು ಸಾಲ ನೀಡುತ್ತಾರೆ. ಶಾಲೆಗಳ ಕೊಠಡಿಗಳ ನವೀಕರಣಕ್ಕೆ ಶಾಲೆಯಲ್ಲಿ ಮೂಲ ಸೌಕರ್ಯಗಳ ನಿರ್ಮಾಣಕ್ಕಾಗಿ ಸ್ಕೂಲ್ ಲೋನ್ ಎಂಬ ಪ್ರತ್ಯೇಕ ಸಾಲದ ವ್ಯವಸ್ಥೆಯೇ ಈ ಶಿಕ್ಷಾ ಫೈನಾನ್ಸ್ನಲ್ಲಿದೆ. ಇಂದು ಇವರ ಸಂಸ್ಥೆಯಿಂದ ಸಾಲ ಪಡೆದೆ ಸಾವಿರಾರು ವಿದ್ಯಾರ್ಥಿಗಳು ವಿದೇಶಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಮತ್ತು ರಾಮಕೃಷ್ಣನ್ ಮತ್ತು ಅಬ್ರಾಹಂ ಅವರನ್ನು ಪ್ರತಿ ದಿನ ನೆನೆಯುತ್ತಾರೆ. ನಿಮಗೂ ಉನ್ನತ ವ್ಯಾಸಂಗದ ಆಸೆಯಿದ್ದು ಪ್ರತಿಭಾವಂತರಾಗಿದ್ದರೆ ಅವರ ವೆಬ್ಸೈಟ್ಗೆ ಲಾಗ್ ಇನ್ ಆಗಿ ಹೆಚ್ಚಿನ ಮಾಹಿತಿ ಪಡೆಯಬಹುದು. ಬಡ ವಿದ್ಯಾರ್ಥಿಗಳ ನೆರವಿಗೆ ನಿಂತಿರುವ ರಾಮಕೃಷ್ಣನ್ ಮತ್ತು ಅಬ್ರಾಹಂ ಅವರ ಸೇವೆ ಶ್ಲಾಘನೀಯ. ವೆಬ್ ಸೈಟ್ shikshafinance.com/
1.ನಾಯಿಗಳಿಗೊಂದು ಐಶಾರಾಮಿ ಹೋಟೆಲ್- ಮಳೆಯ ನಡುವೆಯೂ ನಡೆದಿದೆ ಕೆಲಸ