ಬೆಂಗಳೂರು ಬೀದಿಯಿಂದ ಫ್ರಾನ್ಸ್ವರೆಗೆ-ಇದು ಸಿಲಿಕಾನ್ಸಿಟಿ ಮಕ್ಕಳ ಫುಟ್ಬಾಲ್ ಪ್ರೀತಿ
ಪಿ.ಅಭಿನಾಷ್
ಇವರೆಲ್ಲಾ ಬಡಕುಟುಂಬದ ಮಕ್ಕಳು, ಬೆಂಗಳೂರಿನ ಬೀದಿಗಳಲ್ಲಿ ಫುಟ್ಬಾಲ್ ಆಡೋದು ಅವರ ಹವ್ಯಾಸ. ಪಾಠದೊಂದಿಗೆ ಆಟವನ್ನೂ ಆಡುತ್ತಾ ಬೆಳೆದಿರುವ ಮಕ್ಕಳ ಫುಟ್ಬಾಲ್ ಪ್ರೀತಿ ಅವರನ್ನ ಫ್ರಾನ್ಸ್ನತ್ತ ಕರೆದೊಯ್ಯತ್ತಿದೆ. ಫ್ರಾನ್ಸ್ನಲ್ಲಿ ನಡೆಯಲಿರುವ ವಿಶ್ವ ಸ್ಟ್ರೀಟ್ ಫುಟ್ಬಾಲ್ ಫೆಸ್ಟ್ನಲ್ಲಿ ಸಿಲಿಕಾನ್ ಸಿಟಿ ಮಕ್ಕಳು ವಿಶ್ವದೆದುರು ತಮ್ಮ ಪ್ರತಿಭೆಯನ್ನ ಅನಾವರಣಗೊಳಿಸಲಿದ್ದಾರೆ.
ಇವರಾರ್ಯಾರು ಹಣ ಕೊಟ್ಟು ಪ್ರೊಫೆಷನಲ್ಸ್ ಬಳಿ ಫುಟ್ಬಾಲ್ ಕೋಚಿಂಗ್ ಪಡೆದಿಲ್ಲ. ಆದ್ರೆ ಟಿವಿಯಲ್ಲಿ ಫುಟ್ಬಾಲ್ನ್ನು ನೋಡುತ್ತಾ, ಆಸಕ್ತಿಯಿಂದ ಫುಟ್ಬಾಲ್ ಆಡಲು ಆರಂಭಿಸಿದ್ದರು. ಆಡ್ತಾ ಆಡ್ತಾ ಫುಟ್ಬಾಲ್ ಇವರ ಜೀವಾಳವಾಯ್ತು. ಆಗಾಗ ಫುಟ್ಬಾಲ್ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಮಕ್ಕಳು ಈಗ ಫ್ರಾನ್ಸ್ನಲ್ಲಿ ನಡೆಯಲಿರುವ ವಿಶ್ವ ಸ್ಟ್ರೀಟ್ ಫುಟ್ಬಾಲ್ ಫೆಸ್ಟಿವಲ್ನಲ್ಲಿ ಭಾರತವನ್ನ ಪ್ರತಿನಿಧಿಸುತ್ತಿದ್ದಾರೆ. ಹೌದು ಪ್ರಪಂಚದಾದ್ಯಂತ ಬಡ ಮಕ್ಕಳ ಪ್ರತಿಭೆಯನ್ನು ಗುರುತಿಸುವ ಹಾಗೂ ಅವರಲ್ಲಿ ಜೀವನ ಕೌಶಲ್ಯ ವೃದ್ದಿಸುವ ಉದ್ದೇಶದಿಂದ ಫ್ರಾನ್ಸ್ನಲ್ಲಿ ವಿಶ್ವ ಸ್ಟ್ರೀಟ್ ಫುಟ್ಬಾಲ್ ಫೆಸ್ಟಿವಲ್ನ್ನು ಆಯೋಜಿಸಲಾಗಿದೆ. ಜೂನ್ 28ರಿಂದ ಜುಲೈ ಏಳನೇ ತಾರೀಖಿನವರೆಗೂ ಫೆಸ್ಟಿವಲ್ ನಡೆಯಲಿದೆ. ಹತ್ತನೇ ತರಗತಿಯಲ್ಲಿ ಓದುತ್ತಿರುವ ಹರ್ಷಿತಾ, ಮನೋಜ್ ಕುಮಾರ್, ಅರ್ಬಾಜ್ ಹಾಗೂ ಒಂಭತ್ತನೇ ತರಗತಿಯಲ್ಲಿ ಓದುತ್ತಿರುವ ನವನೀತಾ ಫ್ರಾನ್ಸ್ ಗೆ ಹಾರಲಿದ್ದು, ವಿಶ್ವದ ಹಲವೆಡೆಗಳಿಂದ ಬರುತ್ತಿರುವ ಇತರೆ 500 ವಿದ್ಯಾರ್ಥಿಗಳೊಂದಿಗೆ ಫುಟ್ಬಾಲ್ ಆಡಲಿದ್ದಾರೆ. ಕೇವಲ ಫುಟ್ಬಾಲ್ ಮಾತ್ರವಲ್ಲ, ವಿಶ್ವದ ಇತರೆ ಮಕ್ಕಳೊಂದಿಗೆ ಬೆರೆತು ಹೊಸತನತ ಅನುಭವ ಪಡೆಯಲಿದ್ದಾರೆ.
“ನನಗೆ ಫುಟ್ಬಾಲ್ ಆಡೋದು ಅಂದ್ರೆ ತುಂಬಾ ಇಷ್ಟ. ನಾನು ತುಂಬಾ ವರ್ಷಗಳಿಂದ ಫುಟ್ಬಾಲ್ ಆಡ್ತಿದ್ದೀನಿ. ಈ ಫೆಸ್ಟ್ಗೆ ಸೆಲೆಕ್ಟ್ ಆಗೋಗೆ ಮುಂಚೆ ತುಂಬಾ ಮಕ್ಕಳ ಜೊತೆ ಕಾಂಪೀಟ್ ಮಾಡಿದ್ವಿ. ಕೊನೆಗೆ ನಾಲ್ವರನ್ನ ಆಯ್ಕೆ ಮಾಡಿದ್ರು. ನಮ್ಮಂತೆ ಆಸೆ ಕನಸುಗಳನ್ನ ಹೊತ್ತಿರುವ ನೂರಾರು ಮಂದಿ ಪ್ರಾನ್ಸ್ಗೆ ಬಂದಿರ್ತಾರೆ. ನಮ್ ಪರೀಕ್ಷೆ ಕೂಡ ಮಾರ್ಚ್ ಹೊತ್ತಿಗೆ ಮುಗಿದು ಹೋಗೋದ್ರಿಂದ ಶಾಲೆಗೆ ರಜೆ ಕೂಡ ಸಿಗತ್ತೆ. ಮುಂದೆ ನಾನು ದೊಡ್ಡ ಫುಟ್ಬಾಲರ್ ಆಗಬೇಕು ಅನ್ನೋ ಕನಸು ಕಂಡಿದ್ದೇನೆ ಅಂತಾಳೆ’ ಫ್ರಾನ್ಸ್ಗೆ ಹಾರಲು ಸಜ್ಜಾಗಿರುವ ಹರ್ಷಿತಾ.
ಭಾರತದಲ್ಲಿ ಹೆಚ್ಚುತ್ತಿದೆ ತೋಟಗಾರಿಕೆಗೆ ಬೆಲೆ
ಶಾಲೆ ಮುಗಿಯುತ್ತಿದ್ದಂತೆ ಈ ಮಕ್ಕಳೆಲ್ಲಾ ಪ್ರತಿದಿನ ಸಂಜೆ ಜಯನಗರದ ಮಾಧವ ಪಾರ್ಕ್ನಲ್ಲಿ ಸೇರುತ್ತಾರೆ. ತಮಗೆ ತಿಳಿದಿರುವಷ್ಟರ ಮಟ್ಟಿಗೆ ಫುಟ್ಬಾಲ್ ಪ್ರಾಕ್ಟೀಸ್ ಮಾಡುತ್ತಾ ಬಂದಿದ್ದಾರೆ. ತಮ್ಮದೆ ಆದ ತಂಡವೊಂದನ್ನ ರಚಿಸಿಕೊಂಡು ಸ್ಪರ್ಧೆಗಳಲ್ಲೂ ಪಾಲ್ಗೊಳ್ಳುತ್ತಾರೆ. ಬಡ ಕುಟುಂಬದಿಂದ ಬಂದಿರುವ ಈ ಮಕ್ಕಳಿಗೆ ಆಟಬೇಕು, ದೊಡ್ಡ ಫುಟ್ಬಾಲರ್ ಆಗಬೇಕು ಅನ್ನೋ ಮಹತ್ವಾಕಾಂಕ್ಷೆ ಇದೆ. ಕೇವಲ ಹುಡುಗರು ಮಾತ್ರವಲ್ಲದೆ, ಹೆಣ್ಣುಮಕ್ಕಳೂ ಈ ಟೀಮ್ನಲ್ಲಿರೋದು ವಿಶೇಷ. ಫುಟ್ಬಾಲ್ ಕೇವಲ ಗಂಡುಮಕ್ಕಳಿಗಾಗಿ ಮಾತ್ರವಲ್ಲ, ನಾವೂ ಆಡಿ ತೋರಿಸುತ್ತೇವೆ ಅನ್ನೋ ಕಿಚ್ಚು ಈ ಹೆಣ್ಣುಮಕ್ಕಳ ಆಸಕ್ತಿಗೂ ನೀರೆಯುತ್ತಿದೆ. ಡ್ರೀಮ್ ಎ ಡ್ರೀಮ್ ಎನ್ನುವ ಸರ್ಕಾರೇತರ ಸಂಸ್ಥೆ ಈ ಮಕ್ಕಳ ಪ್ರತಿಭೆಯನ್ನ ಗುರುತಿಸಿ ಫ್ರಾನ್ಸ್ಗೆ ಕರೆದುಕೊಂಡು ಹೋಗ್ತಾ ಇದೆ. ಮಕ್ಕಳ ಪ್ರಯಾಣದ ಸಂಪೂರ್ಣ ವೆಚ್ಚ , ಪಾಸ್ಪೋರ್ಟ್ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನೂ ಒದಗಿಸ್ತಾ ಇದೆ. ಮಕ್ಕಳಲ್ಲಿ ಜೀವನ ಕೌಶಲ್ಯವನ್ನ ತುಂಬಬೇಕು ಅನ್ನೋದು ಡ್ರೀಮ್ ಎ ಡ್ರೀಮ್ನ ಉದ್ದೇಶವಾಗಿದೆ.
ಇಂದು ಒಂದು ಸ್ಪರ್ಧೆಯಲ್ಲ. ದೇಶದ ಬೇರೆ ಬೇರೆ ಭಾಗಗಳಿಂದ ಐದೂನೂರು ಮಕ್ಕಳು ಇ್ಲಲಿ ಭಾಗವಹಿಸ್ತಾ ಇದ್ದಾರೆ. ಫುಟ್ಬಾಲ್ನ ಮೂಲಕ ಮಕ್ಕಳಿಗೆ ವಿದ್ಯಾಭ್ಯಾಸ, ಹಾಗೂ ಕಲಿಕೆಗೆ ಒತ್ತು ಕೊಡುವ ಉದ್ದೇಶವಾಗಿದೆ. ಮಕ್ಕಳಲ್ಲಿ ಜೀವನ ಕೌಶಲ್ಯವನ್ನ ವೃದ್ದಿಸುವುದು ನಮ್ಮ ಗುರಿ’ ಅಂತಾರೆ ಡ್ರೀಮ್ ಎ ಡ್ರೀಮ್ ನ ಮ್ಯಾನೇಜರ್ ಆಗಿರುವ ಪವಿತ್ರಾ.
ಸದ್ಯ ಈ ಮಕ್ಕಳು ಫುಟ್ಬಾಲ್ಗಾಗಿ ಪ್ರತಿನಿತ್ಯ ಹೆಚ್ಚು ತರಬೇತಿ ಪಡೆಯುತ್ತಿದ್ದಾರೆ. ಫಿಟ್ ಅಂಡ್ ಫೈನ್ ಆಗೋಕೆ, ಅಗತ್ಯ ಆಹಾರವನ್ನ ಸೇವಿಸ್ತಾ ಇದ್ದಾರೆ. ಬಡತನವಿದ್ರೂ, ಈ ಮಕ್ಕಳ ಪೋಷಕರು ಬೆಂಬಲಕ್ಕೆ ನಿಂತಿದ್ದಾರೆ. ಹಾಗಂತ ಮಕ್ಕಳು ಓದಿನಲ್ಲೇನೂ ಹಿಂದೆ ಬಿದ್ದಿಲ್ಲ, ಫುಟ್ಬಾಲ್ನಲ್ಲಿ ಹೇಗೆ ಎತ್ತಿದ ಕೈ ಹಾಗೇ ಓದಿನಲ್ಲೂ ಮುಂದಿದ್ದಾರೆ. ಒಟ್ಟಿನಲ್ಲಿ, ಮಕ್ಕಳ ಫುಟ್ಬಾಲ್ ಪ್ರೀತಿ ಫ್ರಾನ್ಸ್ವರೆಗೂ ಅವರನ್ನ ಕೊಂಡೊಯ್ಯುತ್ತಿದೆ.
ಭಾರತದಲ್ಲಿ ಹೆಚ್ಚುತ್ತಿದೆ ತೋಟಗಾರಿಕೆಗೆ ಬೆಲೆ
ಓಲಾ ಕಾರ್ ಆಯ್ತು.. ಈಗ ಓಲಾ ಕಫೆ ಬಂತು.!
ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳು ಕೆಟ್ಟಿವೆಯೇ..? ರಿಪೇರಿಗೆ ಇದೆ ಸೇವಾ ಕಂಪನಿ..!