ತೆರೆದ ಕೊಳವೆ ಬಾವಿಗಳೆಂದರೆ ಮಕ್ಕಳ ಪಾಲಿನ ಮರಣ ಕೂಪಗಳಿದ್ದಂತೆ. ಒಮ್ಮೆ ಮಗು ತೆರೆದ ಬಾವಿಗೆ ಬಿದ್ದರೆ, ರಕ್ಷಣಾ ಸಿಬ್ಬಂದಿ ದಿನಗಟ್ಟಲೆ ಕಾರ್ಯಾಚರಣೆ ನಡೆಸಿದ್ರೂ ಮಕ್ಕಳು ಬದುಕುವುದು ತುಂಬಾ ಕಡಿಮೆ. ಆದ್ರೆ ಈಗ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸೇರಿ ಈ ಸಮಸ್ಯೆಗೆ ಸೊಲ್ಯೂಷನ್ ಒಂದನ್ನ ಹುಡುಕಿದ್ದಾರೆ. ತೆರೆದ ಕೊಳವೆ ಬಾವಿಗೆ ಬಿದ್ದ ಮಗುವನ್ನು ಸುರಕ್ಷಿತವಾಗಿ ಮೇಲೆತ್ತುವ ಒಂದು ಅದ್ಭುತ ಯಂತ್ರವನ್ನು ಕಂಡು ಹಿಡಿದಿದ್ದಾರೆ. ಕಡಿಮೆ ವೆಚ್ಚದಲ್ಲಿ ನಿರ್ಮಿಸಿರುವ ಈ ಯಂತ್ರ, ತೆರೆದ ಕೊಳವೆ ಬಾವಿಗೆ ಬಿದ್ದವರನ್ನು ರಕ್ಷಿಸುವ ಅತ್ಯಂತ ಪರಿಣಾಮಕಾರಿ ಹೈಟೆಕ್ ಸಾಧನವಾಗಿದೆ. ಸದ್ಯ ಭಾರತದಲ್ಲಿರುವ ಎಲ್ಲ ವಿಧಾನಗಳಿಗಿಂತ ಒಂದು ಹೆಜ್ಜೆ ಮುಂದಿದೆ..
ಒಂದು ಸಲ ಯೋಚಿಸಿ, ಒಂದು ಚಿಕ್ಕ ತೆರೆದ ಬೋರ್ವೆಲ್. ಒಂದು ಸಣ್ಣ ನಿರ್ಲಕ್ಷ್ಯ. ಅದೆಷ್ಟೋ ಮಕ್ಕಳ ಪ್ರಾಣವನ್ನೇ ಬಲಿಪಡೆದಿತ್ತು. ಅದೆಷ್ಟೋ ಕುಟುಂಬಗಳನ್ನು ಕಣ್ಣೀರ ಕಡಲಿಗೆ ತಳ್ಳಿತ್ತು. ಬೋರ್ವೆಲ್ಗೆ ಬಿದ್ದ ಮಕ್ಕಳನ್ನ ಹೊರ ತೆಗೆಯಲು ಹಗಲುರಾತ್ರಿ ಕಾರ್ಯಾಚರಣೆ ನಡೆಸಿದ್ರೂ ಮಕ್ಕಳು ಬದುಕಿ ಬಂದಿದ್ದು ತೀರಾ ವಿರಳ. ಆಗೆಲ್ಲಾ ಕಾಡಿದ್ದು ಮಕ್ಕಳನ್ನ ಬೋರ್ವೆಲ್ನಿಂದ ಮೇಲೆತ್ತಲು ಬೇಕಾದ ಒಂದು ಯಂತ್ರ.. ಆದರೆ ಈಗ ಅದಕ್ಕೆ ಸೂಕ್ತ ಪರಿಹಾರ ಕಂಡುಹಿಡಿದಿದ್ದಾರೆ,ನಮ್ಮ ವಿದ್ಯಾರ್ಥಿಗಳು.
ಸಾಫ್ಟ್ವೇರ್ ಬೋರಾಯ್ತು, ಫೋಟೋಗ್ರಫಿ ಇಷ್ಟವಾಯ್ತು
ತೆರೆದ ಕೊಳವೆ ಬಾವಿಗೆ ಬಿದ್ದ ಮಕ್ಕಳನ್ನ ಹೊರತೆಗೆಯಲು ಹೊಸ ಹೊಸ ಯಂತ್ರಗಳ ಸಂಶೋಧನೆ ನಡೆಯುತ್ತಲೇ ಇದೆ. ಇದೀಗ ಇಂಥಾದ್ದೇ ಒಂದು ಯಂತ್ರವನ್ನ ನಮ್ಮ ಬೆಂಗಳೂರಿನ ವಿದ್ಯಾರ್ಥಿಗಳು ಕಂಡು ಹಿಡಿದಿದ್ದಾರೆ. ಬೆಂಗಳೂರಿನ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸೇರಿ ಬೋರ್ವೆಲ್ಗೆ ಬಿದ್ದ ಮಕ್ಕಳನ್ನ ಕೇವಲ ಹತ್ತೇ ಹತ್ತು ನಿಮಿಷದಲ್ಲಿ ಮೇಲಕ್ಕೆತ್ತುವಂತಹ ರೋಬೋವನ್ನು ಸಿದ್ಧಗೊಳಿಸಿದ್ದಾರೆ. ನಗರದ ಕೆ.ಎಸ್.ಐ.ಟಿ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಶರತ್ ಬಾಬು, ಹಾಗೂ ಮಂಗಳೂರಿನ ಅಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಾದ ಧನುಷ್ ಕುಮಾರ್ ಹಾಗೂ ಗಿರಿಧರ್ ಸೇರಿ, ಚೈಲ್ಡ್ ರೆಸ್ಕ್ಯೂ ರೋಬೋ ಮಷಿನ್ ಅಭಿವೃದ್ದಿಪಡಿಸಿದ್ದಾರೆ.
"ಸದಾ ಟಿವಿ, ಪತ್ರಿಕೆ ನೋಡುತ್ತಿದ್ದಾಗ ಕಾಡುತ್ತಿದ್ದ ಕಟ್ಟ ಕಡೆಯ ಪ್ರಶ್ನೆ, ತೆರೆದ ಕೊಳವೆ ಬಾವಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು, ಯಾಕೆ ಯಾರಿಂದಲೂ ಸಾಧ್ಯವಾಗುತ್ತಿಲ್ಲವೆಂದು. ವಾರಗಟ್ಟಲೇ ಕಾರ್ಯಚರಣೆ ನಡೆದ್ರು ಯಶಸ್ವಿಯಾಗಿದ್ದು ತುಂಬಾ ಕಮ್ಮಿ. ಅದಕ್ಕಾಗಿ ಒಂದು ವ್ಯವಸ್ಥಿತವಾಗಿ ರೋಬೋ ತಯಾರಿಸಬೇಕೆಂಬ ಕಲ್ಪನೆ ಬಂತು ಅದನ್ನು ನಾವೆಲ್ಲ ಸೇರಿಕೊಂಡು ನನಸಾಗಿಸಿದ್ದೇವ. ಇಂತಹ ಘಟನೆ ಭಾರತದ ಯಾವುದೇ ಮೂಲೆಯಲಿ ನಡೆಯಲಿ, ಸ್ಥಳಕ್ಕೆ ಧಾವಿಸಿದ 10 ನಿಮಿಷದಲ್ಲೇ ಮಗುವನ್ನು ರಕ್ಷಿಸುವಂತಹ ರೋಬೋ ನಮ್ಮಲ್ಲಿದೆ ಎಂದು ಅಭಿಮಾನದಿಂದ ಹೇಳುತ್ತಾರೆ ಧನುಷ್ ಕುಮಾರ್."
"ರೋಬೋ ಮಷಿನ್ ವಿಶೇಷತೆ ಏನು ಅಂದ್ರೆ ಇದು ಕೊಳವೆ ಬಾವಿಯಲ್ಲಿ 360 ಡಿಗ್ರಿ ತಿರುಗಿ ಮಕ್ಕಳನ್ನು ಹಿಡಿದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಹೈ ಕ್ವಾಲಿಟಿ ಎಚ್ಡಿ ಕ್ಯಾಮರಾಗಳಿಂದ ಸುಮಾರು 150 ರಿಂದ 200 ಅಡಿಯವರೆಗೂ ಬಿದ್ದಿರುವ ಮಕ್ಕಳ ಚಿತ್ರಣವನ್ನ ನೀಡುವ ಸಾಮರ್ಥ್ಯ ಹೊಂದಿದೆ. ಇದ್ರಲ್ಲಿ ಅಳವಡಿಸಿರುವ ಮೆಕ್ಯಾನಿಕಲ್ ಬೆಲ್ಲೋಸ್ ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೆ. ಈ ಮಷಿನ್ ಮೂಲಕ ಆಕ್ಸಿಜನ್ ಪೂರೈಕೆಯನ್ನೂ ಮಾಡಬಹುದು. ಕ್ಯಾಮರಾದಲ್ಲಿ ಸರಿಯಾಗಿ ನೋಡಿ ಮಗುವಿಗೆ ತೊಂದರೆಯಾಗದಂತೆ, ಸುರಕ್ಷಿತವಾಗಿ ಬದುಕಿಸಲು ಬೇಕಾದಂತಹ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಹಲವು ಟ್ರಯಲ್ನಲ್ಲಿ ಪ್ರಾಯೋಗಿಕವಾಗಿ ಇದು ಯಶಸ್ವಿಯಾಗಿದೆ ಅಂತಾರೆ ಗಿರಿಧರ್"
ರಾಜ್ಯದಲ್ಲಿ ಈಗಾಗಲೇ ಹತ್ತಾರು ಮಕ್ಕಳು ತೆರೆದ ಬೋರ್ವೆಲ್ಗಳಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಆದ್ರೆ ಇನ್ಮುಂದೆ ಮಕ್ಕಳು ಬೋರ್ವೆಲ್ಗೆ ಬಿದ್ದರೂ ಚಿಂತೆಪಡಬೇಕಿಲ್ಲ ಅನ್ನೋ ಮಾತು ಈ ವಿದ್ಯಾರ್ಥಿಗಳದ್ದು. ಅಲ್ಪ ವೆಚ್ಚ, ಅಲ್ಪ ಸಮಯದಲ್ಲಿ ಮಗುವನ್ನು ರಕ್ಷಿಸುವಂತಹ ಈ ರೋಬೋ ತಯಾರಿಸಿದ ತ್ರಿಮೂರ್ತಿಗಳು ಇನ್ನೂ ಹೆಚ್ಚಿನ ಸಾಧನೆ ಮಾಡುವ ತವಕದಲ್ಲಿದ್ದಾರೆ.
1. ತಲೆನೋವು ಕೊಡುವ ಸಮಸ್ಯೆಗಳಿಗೆ ಬೆರಳ ತುದಿಯಲ್ಲೇ ಪರಿಹಾರ - ಈಗೇನಿದ್ರೂ ಲೋಕಲ್ ಓಯ್ ಸಮಾಚಾರ.. !
2. ಬೆಂಗಳೂರು ಬೀದಿಯಿಂದ ಫ್ರಾನ್ಸ್ವರೆಗೆ-ಇದು ಸಿಲಿಕಾನ್ಸಿಟಿ ಮಕ್ಕಳ ಫುಟ್ಬಾಲ್ ಪ್ರೀತಿ