ಪ್ರಯಾಣಕ್ಕಾಗಿ ಮನೆಯನ್ನೇ ಮಾರಿದ್ರು.. ಹವ್ಯಾಸದಿಂದ ಕೋಟ್ಯಾಧಿಪತಿಗಳಾದ್ರು..!
ಟೀಮ್ ವೈ.ಎಸ್.ಕನ್ನಡ
ಕೈಯಲ್ಲಿರುವ ಐದು ಬೆರಳುಗಳೇ ಒಂದೇ ರೀತಿಯಾಗಿಲ್ಲ. ಇನ್ನು ಜಗತ್ತಿನಲ್ಲಿರುವ ಜನರು ಒಂದೇ ತರಹ ಇರುತ್ತಾರಾ..? ಸಾಧ್ಯವೇ ಇಲ್ಲ. ಜಗತ್ತಿನಲ್ಲಿರುವ ಕೆಲವರಿಗೆ ಕೆಲವು ವಿಷಯಗಳ ಬಗ್ಗೆ ಹೆಚ್ಚು ಆಸಕ್ತಿ. ಇನ್ನು ಕೆಲವರಿಗೆ ಅದೇ ಹುಚ್ಚು. ನೋಡುವವರು ಏನು ಅಂದುಕೊಂಡರೂ ಪರವಾಗಿಲ್ಲ. ತಾವು ಬದುಕೋದು ಮಾತ್ರ ಹೀಗೇಯೇ ಅಂತ ನಿರ್ಧಾರ ಮಾಡಿ ಬಿಡುತ್ತಾರೆ.
ಈಗ ನಾವು ಹೇಳುವ ಕಥೆಯೂ ವಿಭಿನ್ನ. ಈ ಕಥೆಯ ನಾಯಕ ಮತ್ತು ನಾಯಕಿ ಚೇತನ್ ಮತ್ತು ಸಂದೀಪ. ಇಬ್ಬರೂ ದಂಪತಿಗಳು. ಟೂರ್ ಮಾಡೋದು ಅಂದ್ರೆ ಸ್ವರ್ಗಕ್ಕೇ ಮೂರೇ ಗೇಣು ಅಂತ ಹೇಳುವ ವ್ಯಕ್ತಿತ್ವ ಇವರದು. ಇವರ ಮೂಲ ಮುಂಬೈ. ತಮ್ಮ ಕನಸು ಟ್ರಾವೆಲಿಂಗ್ ಅನ್ನು ನನಸು ಮಾಡಿಕೊಳ್ಳಲು ಅವರು ಮಾಡಿದ್ದು, ಸ್ವಂತ ಮನೆಯನ್ನೇ ಮಾರಿದ್ದು, ಈ ದಂಪತಿಯ ನಿರ್ಧಾರಗಳಿಗೆ ಆರಂಭದಲ್ಲಿ ಅದೆಷ್ಟು ಟೀಕೆಗಳು ಬಂದಿತ್ತೋ ಅವರಿಗೇ ಗೊತ್ತು. ಆದ್ರೆ ಇವರಿಬ್ಬರ ಗುರಿ ಸ್ಪಷ್ಟವಿತ್ತು. ಟ್ರಾವೆಲ್ ಮಾಡಿ ಜಗತ್ತು ಸುತ್ತುವ ಕನಸು ದೊಡ್ಡದಿತ್ತು.
ಸಂದೀಪ ಎಲೆಕ್ಟ್ರಾನಿಕ್ಸ್ ಎಂಜಿನಿಯರ್. ಚೇತನ್ ಅಡ್ವಟೈಸಿಂಗ್ ಡಿಸೈನ್ ಬ್ಯಾಗ್ರೌಂಡ್ನಿಂದ ಬಂದವರು. ಆರಂಭದಲ್ಲಿ ಜಗತ್ತು ಸುತ್ತುವ ಆಸೆಗಾಗಿ ಮನೆ ಮಾರುವ ನಿರ್ಧಾರ ಮಾಡಿದ್ದಾಗ ಮನೆಯವರು ಕೂಡ ಬುದ್ಧಿ ಮಾತು ಹೇಳಿದ್ದರು. ಇದು ಸುತ್ತುವ ಸಮಯವಲ್ಲ. ಮಕ್ಕಳು, ಅವರ ವಿದ್ಯಾಭ್ಯಾಸ ಅಂತ ಸುಮ್ಮನೆ ಕುಳಿತುಕೊಳ್ಳಿ ಅಂತ ಟಿಪ್ಸ್ ಕೊಟ್ಟಿದ್ದರು. ಆದರೆ ಈ ದಂಪತಿಗಳಿಗೆ ಟಿಪ್ಸ್ ಬೇಕಿರಲಿಲ್ಲ. ಮನಸ್ಸಿನಲ್ಲಿ ನಿರ್ಧಾರ ಸ್ಪಷ್ಟವಾಗಿತ್ತು.
ಇದನ್ನು ಓದಿ: ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಮರುಬಳಕೆ - ವಿಜ್ಞಾನಿಗಳಿಂದ ಡೀಸೆಲ್ ತಯಾರಿಕೆ
ಅಂದಹಾಗೆ ಈ ದಂಪತಿಗಳು ಯಾವುದೇ ಪ್ಲಾನ್ಗಳನ್ನು ಫಿಕ್ಸ್ ಮಾಡಿಕೊಂಡು ಟೂರ್ ಮಾಡೋದಿಲ್ಲ. ಇವರಿಗೆ ಸಿಗುವ ವೀಸಾದ ಅವಧಿ ಮುಗಿಯುವ ತನಕ ಯಾವುದಾದರು ಒಂದು ದೇಶದಲ್ಲಿ ಸುತ್ತುತ್ತಾ ಇರುತ್ತಾರೆ. ಇವರು ಯಾವುದೇ ಪ್ರೈವೇಟ್ ವಾಹನಗಳನ್ನು ಬಾಡಿಗೆ ಪಡೆದು ಪ್ರಯಾಣಿಸುವುದಿಲ್ಲ. ಪಬ್ಲಿಕ್ ಟ್ರಾನ್ಸ್ಪೋರ್ಟ್ ಇವರ ನೆಚ್ಚಿನ ವಾಹನ. ಉಳಿದುಕೊಳ್ಳುವುದಕ್ಕೆ ಹೋಮ್ ಸ್ಟೇ ಸಾಕಾಗುತ್ತದೆ. ಚೇತನ್ ಮತ್ತು ಸಂದೀಪಗೆ ಪರ್ವತಗಳು, ಬೀಚ್ಗಳು, ದ್ವೀಪ ಮತ್ತು ಮರುಭೂಮಿ ಹೀಗೆ ಯಾವುದಿದ್ರೂ ಟ್ರಾವೆಲಿಂಗ್ ಅನ್ನೋದು ಬೋರ್ ಹೊಡೆಸಿಲ್ಲ. ಇವರ ಜೊತೆಗಿರುವ ಕ್ಯಾಮರಾಕ್ಕೆ ಮಾತ್ರ ಇವ್ರು ಎಲ್ಲೇ ಹೋದ್ರು ಹೆಚ್ಚು ಕೆಲಸ ಇರುತ್ತದೆ.
ಸಂದೀಪ ಮತ್ತು ಚೇತನ್ ಭಾರತದ ಮೂಲೆ ಮೂಲೆಗೆ ಪ್ರವಾಸ ಮಾಡಿದ್ದಾರೆ. ಬ್ರೆಝಿಲ್, ಅರ್ಜೆಂಟೈನಾ, ಬೊಲಿವಿಯಾ ಮತ್ತು ಪೆರು ದೇಶಗಳ ಉದ್ದಗಲಗಳು ಗೊತ್ತಿದೆ. ದಂಪತಿಗಳಾಗಿ ಪ್ರಯಾಣ ಮಾಡುವುದು ಇವರ ಪಾಲಿಗೆ ಅತೀ ದೊಡ್ಡ ಸಂತಸದ ವಿಚಾರ. ಕೆಲವೊಮ್ಮೆ ಇವರು ಸತತ ಪ್ರಯಾಣದ ಒತ್ತಡ ಮತ್ತು ಸುಸ್ತುಗಳನ್ನು ಅನುಭವಿಸಿದ್ದಾರೆ. ದುಡ್ಡಿಲ್ಲದೆ ಪ್ರಯಾಣವನ್ನು ನಿಲ್ಲಿಸಿದ್ದು ಕೂಡ ಇದೆ.
ಸಂದೀಪ ಮತ್ತು ಚೇತನ್ ಇಬ್ಬರಿಗೂ ಪ್ರವಾಸ ಅಂದ್ರೆ ಬಹು ಖುಷಿ. ಇವರ ಮೊದಲ ಟ್ರಿಪ್ ಹನಿಮೂನ್ಗೆ ಮಡಿಕೇರಿಗೆ ಹೋಗಿದ್ದು ಈಗ ಅಚ್ಚಳಿಯದ ನೆನಪು. ಅಲ್ಲಿಂದ ಮುಂದೆ ನಡೆದಿದ್ದೆಲ್ಲವೂ ಇತಿಹಾಸ. ಇವತ್ತು ಟ್ರಾವೆಲ್ ಬ್ಲಾಗರ್ಗಳ ಪೈಕಿ ಸಂದೀಪ ಮತ್ತು ಚೇತನ್ ಅಗ್ರಸ್ಥಾನದಲ್ಲಿದ್ದಾರೆ. ಸಂದೀಪ ಮತ್ತು ಚೇತನ್ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳಲ್ಲಿ, ಇಲ್ಲಿಗೆ ಭೇಟಿ ನೀಡಿ: http://sandeepachetan.com/.
1. ಮೂಕಪ್ರಾಣಿಗಳ ನೋವಿಗೆ ಸ್ಪಂದಿಸಿದ ಹೃದಯವಂತ : ಎಲ್ಲರಿಗೂ ಬಾಲಿವುಡ್ ನಟನ ಔದಾರ್ಯ
2. ಹಿರಿಜೀವಗಳ ಬದುಕಲ್ಲಿ ಆಶಾಕಿರಣ - ಸಂಗಾತಿ ಆಯ್ಕೆಗಾಗಿ ವಿವಾಹ ವೇದಿಕೆ