ಆನ್ಲೈನ್ ಉದ್ಯಮದಲ್ಲಿ ಲಾಭಕ್ಕಾಗಿ ಪೈಪೋಟಿ- ಗ್ರಾಹಕರಿಗೆ "ಹಬ್ಬದೂಟ"ದ ಸಂಭ್ರಮ..!
ಟೀಮ್ ವೈ.ಎಸ್. ಕನ್ನಡ
ಇದು ಹಬ್ಬಗಳ ಕಾಲ. ಸಾಲು ಸಾಲು ಹಬ್ಬಗಳು ಎದುರಿಗಿವೆ. ದಸರಾ ಇನ್ನೇನು ಮುಗಿಯುತ್ತಿದೆ. ದೀಪಾವಳಿ ಹತ್ತಿರ ಬಂದಿದೆ. ಆದ್ರೆ ಇವುಗಳ ನಡುವೆ ಇ-ಕಾಮರ್ಸ್ ಪೋರ್ಟಲ್ಗಳು ಗ್ರಾಹಕರಿಗೆ ಹಬ್ಬದೂಟ ಬಡಿಸುತ್ತಿವೆ. ಫ್ಲಿಫ್ಕಾರ್ಟ್, ಅಮೇಜಾನ್ ಮತ್ತು ಸ್ನ್ಯಾಪ್ಡೀಲ್ನಂತಹ ಇ-ಕಾಮರ್ಸ್ ಪೋರ್ಟಲ್ಗಳು ಹಬ್ಬದ ಸೀಸನ್ನಲ್ಲಿ ಲಾಭ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿವೆ. ಅಷ್ಟೇ ಅಲ್ಲ ಅತಿ ದೊಡ್ಡ ಮಟ್ಟದಲ್ಲಿ ಮಾರಾಟವನ್ನು ನಿರೀಕ್ಷೆ ಮಾಡುತ್ತಿವೆ. ಒಂದಕ್ಕಿಂತ ಮತ್ತೊಂದು ವಿಭಿನ್ನ ಆಯ್ಕೆಗಳು, ದರದಲ್ಲೂ ಪೈಪೋಟಿ, ಹೀಗೆ ವಿವಿಧ ರೀತಿಯಲ್ಲಿ ಇ-ಕಾಮರ್ಸ್ ಪೋರ್ಟಲ್ಗಳು ಪೈಪೋಟಿಗೆ ಬಿದ್ದಿವೆ.
ಆನ್ಲೈನ್ ಬ್ಯುಸಿನೆಸ್ ನಿಂತಿರೋದೇ ಗ್ರಾಹಕರನ್ನು ತೃಪ್ತಿಪಡಿಸುವ ಕೆಲಸದಲ್ಲಿ. ಒಮ್ಮೆ ಆನ್ಲೈನ್ ಮೂಲಕ ಆರ್ಡರ್ ಪಡೆದ ತಕ್ಷಣ ಕೆಲಸ ಪಟ್ ಪಟ್ ಅಂತ ಮುಗಿದು ಹೋಗಬೇಕಿದೆ. ಪ್ಯಾಕಿಂಗ್, ಶಿಪ್ಪಿಂಗ್ ಮತ್ತು ಡೆಲಿವರಿ ಹಂತಗಳಲ್ಲಿ ಕೆಲಸ ಮುಗಿದು ಬಿಡಬೇಕು. ಆನ್ಲೈನ್ ಮಾರಾಟದಲ್ಲಿ ಅತೀ ಹೆಚ್ಚು ಗ್ರಾಹಕನ್ನು ಹೊಂದಿರುವ ಅಮೇಜಾನ್, ಫ್ಲಿಫ್ಕಾರ್ಟ್ ಮತ್ತು ಸ್ನ್ಯಾಪ್ ಡೀಲ್ಗಳು ಈ ಕೆಲಸದಲ್ಲಿ ಅವಿರತ ಶ್ರಮ ಪಡುತ್ತಿವೆ. ಗ್ರಾಹಕರನ್ನು ಯಾವ ಮಾರ್ಗದಲ್ಲಿ ಬೇಗನೆ ತಲುಪಬಹುದು ಅನ್ನೋದನ್ನ ಕನಸಿನಲ್ಲೂ ಯೋಚನೆ ಮಾಡುವ ಸ್ಥಿತಿಗೆ ಬಂದಿವೆ.
ಇದನ್ನು ಓದಿ: ಟೇಸ್ಟಿ "ಟೀ" ಮ್ಯಾಜಿಕ್- ಒಂದೇ ಕಪ್ ಚಹಾದಲ್ಲಿ ಸಿಗುತ್ತೆ ಉತ್ಸಾಹದ ಕಿಕ್..!
ಆನ್ಲೈನ್ ಮಾರ್ಕೆಟಿಂಗ್ನಲ್ಲಿ ಸ್ಟೋರೇಜ್ ಸ್ಥಳ ಹೆಚ್ಚಾಗಿಯೇ ಇರಬೇಕು. ಅಷ್ಟೇ ಅಲ್ಲ ಬಹುಬೇಡಿಕೆಯ ವಸ್ತುಗಳನ್ನು ಹೆಚ್ಚಾಗಿ ಸಂಗ್ರಹಿಸಿಡಬೇಕು. ಹಳೆಯ ಅನುಭವದಿಂದ ಆನ್ಲೈನ್ ತಜ್ಞ ಮಾರಾಟಗಾರರು ಮೊಬೈಲ್, ಬಟ್ಟೆಗಳನ್ನು ಮತ್ತು ಪವರ್ ಬ್ಯಾಂಕ್ಗಳನ್ನು ಹೆಚ್ಚಾಗಿ ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ. ಇದ್ರ ಜೊತೆಗೆ ಹೋಮ್ ಅಪ್ಲೈಯನ್ಸಸ್ ಮತ್ತು ಇತರೆ ವಸ್ತುಗಳು ಕೂಡ ಆರ್ಡರ್ ಮಾಡಿದ ಕೆಲವೇ ದಿನಗಳಲ್ಲಿ ನಿಮ್ಮ ಮನೆ ಬಾಗಿಲಿಗೆ ತಲುಪುವಂತಹ ವ್ಯವಸ್ಥೆಯನ್ನು ಅಮೇಜಾನ್, ಫ್ಲಿಫ್ಕಾರ್ಟ್ ಮತ್ತು ಸ್ನ್ಯಾಪ್ಡೀಲ್ಗಳು ಮಾಡಿಕೊಂಡಿವೆ.
ವೇಗವಾಗಿ ಗ್ರಾಹಕರ ಕೈ ಸೇರಬೇಕು
ಭಾರತಾದ್ಯಂತ ಇರುವ ಹಳ್ಳಿಗಳನ್ನು ಆನ್ಲೈನ್ ಮಾರಾಟಗಾರರು ತಲುಪುವುದು ಸುಲಭದ ಮಾತಲ್ಲ. ಆದ್ರೆ ಸ್ಪರ್ಧೆ ಹೆಚ್ಚಿರುವುದರಿಂದ ಯಾವುದೇ ಆರ್ಡರ್ಗಳನ್ನು ಕೂಡ ಕೈ ಬಿಡುವ ಹಾಗಿಲ್ಲ. ಹೀಗಾಗಿ ಪ್ಯಾಕಿಂಗ್ ಪ್ರಿಪರೇಷನ್ಗಳು ಹೆಚ್ಚಾಗಿ ಮುಗಿದಿರುತ್ತದೆ. ಇನ್ನೇನು ಆರ್ಡರ್ ಪಡೆಯುವುದು ಮತ್ತು ಅದನ್ನು ತಲುಪಿಸುವ ಮಾರ್ಗವಷ್ಟೇ ಉಳಿದುಕೊಂಡಿದೆ. ಮೊಬೈಲ್ ಫೋನ್ಗಳು, ಪವರ್ ಬ್ಯಾಂಕ್ಗಳು, ಎಲೆಕ್ಟ್ರಾನಿಕ್ ಐಟಂಗಳು ಮತ್ತು ಪಾದರಕ್ಷೆಗಳ ಪ್ಯಾಕಿಂಗ್ ಕೆಲಸ ಮುಗಿದಿದೆ. ಹೀಗಾಗಿ ಇಂತಹ ವಸ್ತುಗಳು ಬೇಗನೆ ಗ್ರಾಹಕರ ಕೈ ಸೇರಲಿದೆ.
ಸ್ನ್ಯಾಪ್ಡೀಲ್ ಈಗಾಗಲೇ 30,000 ವಿವಿಧ ಪಿನ್ಕೋಡ್ಗಳನ್ನು ಸಂಗ್ರಗಹಿಸಿಟ್ಟುಕೊಂಡಿದೆ. ಲೇಹ್, ಪೋರ್ಟ್ಬ್ಲೇರ್ ಮತ್ತು ಲಕ್ಷದ್ವೀಪದಂತಹ ಪ್ರದೇಶಗಳ ಗ್ರಾಹಕರನ್ನು ಕೂಡ ಬೇಗನೆ ತಲುಪುವ ವಿಶ್ವಾಸವನ್ನು ಇಟ್ಟುಕೊಂಡಿದೆ. ರಡ್ಸೀರ್ ಸಂಶೋಧನೆಯ ಪ್ರಕಾರ ಸ್ನ್ಯಾಪ್ಡೀಲ್ ಕಳೆದ 7 ತಿಂಗಳುಗಳಲ್ಲಿ ಅತೀ ವೇಗವಾಗಿ ಆರ್ಡರ್ಗಳನ್ನು ಗ್ರಾಹಕರ ಕೈ ತಲುವಂತೆ ಮಾಡಿದೆ.
“ ವೇಗವಾಗಿ ಗ್ರಾಹಕರನ್ನು ತಲುಪುವ ಉದ್ದೇಶದಿಂದನ ಸ್ನ್ಯಾಪ್ಡೀಲ್ ಈಗಾಗಲೇ 20,000 ಟನ್ ಕಾರ್ಗೋಗಳನ್ನು ವಾಯುಮಾರ್ಗದಲ್ಲಿ ಕಳುಹಿಸಲು ಬುಕ್ಕಿಂಗ್ ಮಾಡಿದೆ. ಲಾಜಿಸ್ಟಿಕ್ ಪಾರ್ಟ್ನರ್ಗಳ ಜೊತೆಗೆ ಮಾತುಕತೆಯೂ ನಡೆದಿದೆ. ಗ್ರಾಹಕರನ್ನು ತೃಪ್ತಿಗೊಳಿಸುವುದು ನಮ್ಮ ಮೊದಲ ಉದ್ದೇಶ ”
- ಸೌರಭ್ ಬನ್ಸಾಲ್, ವೈಸ್ ಪ್ರಸಿಡೆಂಟ್, ಕೆಟಗರಿ ಮ್ಯಾನೇಜೆಮೆಂಟ್, ಸ್ನ್ಯಾಪ್ಡೀಲ್
ಸ್ನ್ಯಾಪ್ಡೀಲ್ ಈಗಾಗಲೇ ಲೀಡಿಂಗ್ ಬ್ರಾಂಡ್ಗಳ ಜೊತೆ ಒಪ್ಪಂದಗಳನ್ನು ಮಾಡಿಕೊಂಡಿದೆ. ಇನ್ಸ್ಟಾಲೇಷನ್ ವಿಚಾರದಲ್ಲೂ ಒಪ್ಪಂದಗಳಿವೆ. ಹೀಗಾಗಿ ಗ್ರಾಹಕರು ಆರ್ಡರ್ ಮಾಡಿದ ಒಂದು ದಿನದ ಒಳಗೆ ಸ್ನ್ಯಾಪ್ಡೀಲ್ ವಸ್ತುಗಳನ್ನು ನಿಮ್ಮ ಕೈ ತಲುಪಿಸಲಿದೆ. ಅಷ್ಟೇ ಅಲ್ಲದೆ ಆರ್ಡರ್ ಪಡೆದಲ್ಲಿಂದ ಹಿಡಿದು,ಪ್ಯಾಕಿಂಗ್, ಶಿಪ್ ಮೇಟ್ ಮತ್ತು ಡೆಲಿವರಿ ತನಕ ಗ್ರಾಹಕರಿಗೆ ವಿವಿಧ ರೀತಿಯಲ್ಲಿ ಸ್ನ್ಯಾಪ್ಡೀಲ್ ಮಾಹಿತಿಯನ್ನು ನೀಡಲಿದೆ.
ಅಮೆರಿಕ ಮೂಲದ ಅಮೇಜಾನ್ ಭಾರತದ ಇ ಕಾಮರ್ಸ್ಗಳ ಪೈಕಿ ಅತೀ ದೊಡ್ಡ ವೇರ್ಹೌಸ್ ಮತ್ತು ಮೂಲಭೂತ ಸೌಲಭ್ಯವನ್ನು ಹೊಂದಿದೆ ಅಂತ ಹೇಳಿಕೊಳುತ್ತಿದೆ. ಅಷ್ಟೇ ಅಲ್ಲ ಕಳೆದ ವರ್ಷಕ್ಕಿಂತ ಹೆಚ್ಚು ವ್ಯವಹಾರದಲ್ಲೂ ಅಭಿವೃದ್ಧಿ ಕಂಡಿದೆ. ಅಮೇಜಾನ್ ಶೆಕಡಾ 80 ಪ್ರತಿಶತ ಡೆಲಿವರಿಗಳನ್ನು ತಾನೇ ಮಾಡಿಕೊಳ್ಳುತ್ತಿದೆ. ಅಷ್ಟೇ ಅಲ್ಲ ಕಳೆದ ವರ್ಷಕ್ಕಿಂತ ಶೆಕಡಾ 200 ಪ್ರತಿಶತ ಮಾರಾಟಗಾರರು ಹೆಚ್ಚಾಗಿ ಅಮೇಜಾನ್ ಅನ್ನು ಸೇರಿಕೊಂಡಿದ್ದಾರೆ. ಸದ್ಯ ಅಮೇಜಾನ್ 1,20,000 ಮಾರಾಟಗಾರರನ್ನು ಹೊಂದಿದ್ದರೆ, ಫ್ಲಿಫ್ಕಾರ್ಟ್ 1 ಲಕ್ಷ ಮತ್ತು ಸ್ನ್ಯಾಪ್ ಡೀಲ್ 3 ಲಕ್ಷ ಮಾರಾಟಗಾರರನ್ನು ಹೊಂದಿದೆ.
“ಅಮೇಜಾನ್ ಸ್ಥಳೀಯ ಮಾರಾಟಗಾರರ ಜೊತೆಗೆ ಒಪ್ಪಂದವನ್ನು ಮಾಡಿಕೊಂಡಿದೆ. ಈ ಮೂಲಕ ಗ್ರಾಹಕರನ್ನು ಶೀಘ್ರದಲ್ಲೇ ತಲುಪುವ ಕೆಲಸಕ್ಕೆ ಹೊಸ ಟಚ್ ನೀಡಿದೆ. ಲೋಕಲ್ ಸ್ಟೋರ್ಗಳ ಕಾನ್ಸೆಪ್ಟ್ನಿಂದ ವ್ಯವಹಾರ ಹೆಚ್ಚಾಗಿದೆ. ಇದು ಸ್ಥಳೀಯ ಮಾರಾಟಗಾರರಿಗೂ ಸಹಾಯಕವಾಗಿದೆ. ಸ್ಥಳೀಯ ಮಾರಾಟಗಾರರೇ ಡೆಲಿವರಿಗಳನ್ನು ಕೂಡ ನೋಡಿಕೊಳ್ಳುತ್ತಾ ಇರುವುದರಿಂದ ಗ್ರಾಹಕರನ್ನು ಬೇಗನೆ ತಲುಪಲು ಸಾಧ್ಯವಾಗುತ್ತಿದೆ”
- ಮನೀಷ್ ತಿವಾರಿ, ವೈಸ್ಪ್ರಸಿಡೆಂಟ್, ಕೆಟಗರಿ ಮ್ಯಾನೇಜ್ಮೆಂಟ್, ಅಮೇಜಾನ್ ಇಂಡಿಯಾ
ಸೂಪರ್ ಪ್ಲಾನಿಂಗ್
ಕಳೆದ ಜುಲೈನಲ್ಲಿ ಅಮೇಜಾನ್ ಭಾರತದ 100 ನಗರಗಳಲ್ಲಿ ಒನ್-ಡೇ ಡೆಲಿವರಿ ಮತ್ತು 2 ದಿನದ ಡೆಲಿವರಿ ಅನ್ನೋ ಕಾನ್ಸೆಪ್ಟ್ನ್ನು “ಅಮೇಜಾನ್ ಪ್ರೈಮ್” ಅನ್ನೋ ಹೆಸರಿನ ಮೂಲಕ ಗ್ರಾಹಕರನ್ನು ಆಕರ್ಷಿಸುವ ಕೆಲಸ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಫ್ಲಿಫ್ಕಾರ್ಟ್, “ಫ್ಲಿಫ್ಕಾರ್ಟ್ ಅಶ್ಯೂರ್ಡ್” ಅನ್ನೋ ಕಾನ್ಸೆಪ್ಟ್ನಲ್ಲಿ ಹೈ ಕ್ವಾಲಿಟಿ ಪ್ರಾಡಕ್ಟ್ಗಳನ್ನು 2ರಿಂದ 4 ದಿನಗಳ ಒಳಗೆ ಕೈ ಸೇರುವಂತೆ ಮಾಡುವ ಯೋಜನೆಯನ್ನು ಮಾಡಿತ್ತು. ಫ್ಲಿಫ್ಕಾರ್ಟ್ ಮತ್ತು ಅಮೇಜಾನ್ಗೆ ಸೆಡ್ಡು ಹೊಡೆಯುವ ಪ್ಲಾನ್ ಅನ್ನು ಸ್ನ್ಯಾಪ್ಡೀಲ್ ಮಾಡಿತ್ತು. ನಿಗದಿತ ಪ್ರದೇಶದಲ್ಲಿ ನಿಗದಿತ ವಸ್ತುಗಳನ್ನು ಒಂದೇ ದಿನದ ಒಳಗೆ ಉಚಿತವಾಗಿ ಗ್ರಾಹಕರ ಕೈ ಸೇರುವಂತೆ ಮಾಡುವ ಯೋಜನೆ ರೂಪಿಸಿ ಗ್ರಾಹಕರನ್ನು ಆಕರ್ಷಿಸಿತ್ತು. ಇ-ಕಾಮರ್ಸ್ ನಲ್ಲಿನ ಈ ಸಮರ ನಿಜಕ್ಕೂ ಗ್ರಾಹಕರಿಗೆ ಲಾಭವನ್ನು ತಂದುಕೊಟ್ಟಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ.
ಹಬ್ಬದ ಸೀಸನ್ಗಳು ಫ್ಲಿಫ್ಕಾರ್ಟ್, ಅಮೇಜಾನ್ ಮತ್ತು ಸ್ನ್ಯಾಪ್ಡೀಲ್ಗಳ ಕ್ವಾಲಿಟಿಗಳನ್ನು ಕೂಡ ಪರೀಕ್ಷೆಗೆ ಒಳಪಡಿಸಲಿವೆ. ಈಗಾಗಲೇ ಸ್ನ್ಯಾಪ್ಡೀಲ್ ಮತ್ತು ಫ್ಲಿಫ್ಕಾರ್ಟ್ 10,000ಕ್ಕಿಂತಲೂ ಅಧಿಕ ತಾತ್ಕಾಲಿಕ ಉದ್ಯೋಗಿಗಳನ್ನು ನೇಮಿಸಿಕೊಂಡಿದೆ. ಈ ಮೂಲಕ ಅಕ್ಟೋಬರ್- ನವೆಂಬರ್ನಲ್ಲಿ ಬರುವ ಆರ್ಡರ್ಗಳನ್ನು ಶೀಘ್ರದಲ್ಲೇ ಗ್ರಾಹಕರ ಕೈ ಸೇರುವಂತೆ ಮಾಡುವ ಕೆಲಸದ ಕಡೆ ಹೆಚ್ಚು ಗಮನ ಕೊಟ್ಟಿದೆ.
ಒಟ್ಟಿನಲ್ಲಿ ಇ- ಕಾಮರ್ಸ್ಗಳೇ ಪ್ರಮುಖವಾಗಿರುವ ಈ ಕಾಲದಲ್ಲಿ ಯಾವ ಒಂದು ಸಣ್ಣ ತಪ್ಪಿಗೂ ಅವಕಾಶವಿಲ್ಲ. ಯಾಕಂದ್ರೆ ಇಲ್ಲಿ ಗ್ರಾಹಕರೇ ದೇವರು. ಅವರ ಮನಸ್ಸು ತೃಪ್ತಿಯಾದರೆ ಭವಿಷ್ಯ ಉತ್ತಮವಾಗುತ್ತದೆ. ಗ್ರಾಹಕನ ಮನಸ್ಸು ಗೆಲ್ಲುವಲ್ಲಿ ಎಡವಿದರೆ ಮತ್ತೆ ಹೊಸ ಗಿಮಿಕ್ಗಳನ್ನು ಮಾಡಲೇಬೇಕಾಗುತ್ತದೆ.
1. ಮನೆ ಕೆಲಸಗಳನ್ನು ಮಾಡಿ ಮುಗಿಸುವ ಮಿತ್ರನ ಬಗ್ಗೆ ನಿಮಗೆಷ್ಟು ಗೊತ್ತು..?
2. ಅಂದು 150 ರೂಪಾಯಿ ಸಂಬಳ, ಇಂದು 150 ಕೋಟಿ ರೂಪಾಯಿ ವಹಿವಾಟು ನಡೆಸುವ ಚಾಣಕ್ಯ..!