ಟೇಸ್ಟಿ "ಟೀ" ಮ್ಯಾಜಿಕ್- ಒಂದೇ ಕಪ್ ಚಹಾದಲ್ಲಿ ಸಿಗುತ್ತೆ ಉತ್ಸಾಹದ ಕಿಕ್..!
ಟೀಮ್ ವೈ.ಎಸ್. ಕನ್ನಡ
ಕೆಲಸದ ಒತ್ತಡದ ನಡುವೆ ಕೊಂಚ ರಿಲ್ಯಾಕ್ಸ್ ಆಗ್ಬೇಕು ಅಂತ ಅಂದುಕೊಂಡಾಗ ನೆನಪಾಗೋದು ಟೀ. ಒಂದು ಕಪ್ ಸ್ಪೆಷಲ್ ಚಹಾ ಕುಡಿದರೆ ಸಾಕಪ್ಪ ಮೂಡ್ ಸರಿಹೋಗುತ್ತೆ ಅಂತ ಯೋಚನೆ ಮಾಡುವವರಿಗೇನು ಕಡಿಮೆ ಇಲ್ಲ. ಇನ್ನು ಮುದ ನೀಡುವ ಚಳಿಗೆ ಬೆಚ್ಚನೆಯ ಹಿತವಾದ ಟೀ ಸಿಕ್ಕರೆ ಆ ಅನುಭವವನ್ನು ವರ್ಣಿಸಲು ಸಾಧ್ಯವಿಲ್ಲ. ಅದ್ರಲ್ಲೂ ಬೆಳಗಿನ ಜಾವ ಒಂದು ಕೆಟ್ಟ ಟೀ ಕುಡಿದರಂತೂ ಕೆಲವರು ಇಡೀ ದಿನ ಗೊಣಗುತ್ತಲೇ ಇರುತ್ತಾರೆ. ಇದು ನಮ್ಮ ನಿಮ್ಮ ನಡುವೆ ವಿಶೇಷ ಪೇಯವೆನಿಸಿರುವ ಟೀ ಆವರಿಸುವ ರೀತಿ ಹಾಗೂ ನಮ್ಮ ಜೀವನಶೈಲಿಯೊಂದಿಗೆ ಬಿಡಿಸಲಾಗದ ನಂಟಾಗಿ ಬೆಸೆದುಕೊಂಡಿರುವ ಬಗೆ. ಆದ್ರೆ ಎಲ್ಲರಿಗೂ ಒಂದೇ ರೀತಿಯ ಟೀ ರುಚಿಸುವುದಿಲ್ಲ. ಜನ ಅವರ ಅವರ ಟೇಸ್ಟ್ ಗೆ ತಕ್ಕಂತೆ ಲೆಮನ್ ಟಿ, ಬ್ಲ್ಯಾಕ್ ಟಿ, ಮಿಂಟ್ ಟೀ ಹೀಗೆ ಇನ್ನಿಲ್ಲದ ಹತ್ತು ಹಲವು ವೆರೈಟಿ ಟೀಗಳನ್ನ ಬಯಸುತ್ತಾರೆ. ಆದ್ರೆ ಬೇಕೆನಿಸಿದ ಟೀಗಾಗಿ ಅಲೆದಾಡಬೇಕು, ಹುಡುಕಾಟಬೇಕು. ಅಂತಹ ಹುಡುಕಾಟದಲ್ಲಿ ನೀವೇನಾದ್ರೂ ಇದ್ರೆ ಶಾಂತಿನಗರದ ಬಿಎಂಟಿಸಿ ಬಸ್ ಟರ್ಮಿನಲ್ ಗೆ ಒಮ್ಮೆ ಭೇಟಿ ಕೊಡ್ಲೇ ಬೇಕು.
ಬಸ್ ನಿಲ್ದಾಣದ ಒಳಭಾಗಕ್ಕೆ ಎಂಟ್ರಿಕೊಟ್ಟು ಡೆಡ್ ಎಂಡ್ ಗೆ ನೀವೇನಾದ್ರೂ ಬಂದ್ರೆ ಅಲ್ಲೊಂದಿಷ್ಟು ಜನ ಅಂಗಡಿಯೊಂದರ ಮುಂದೆ ಮುಗಿಬಿದ್ದಿರುತ್ತಾರೆ. ಅಲ್ಲಿದ್ದ ಕೆಲವರಲ್ಲಿ ಏನನ್ನೋ ಸವಿಯುತ್ತಿರುವ ತೃಪ್ತಿ, ಇನ್ನು ಕೆಲವರು ಎಷ್ಟೇ ಹೊತ್ತಾದ್ರೂ ಅದನ್ನ ಪಡೆಯಲೇ ಅಂತ ಹಠಹೊತ್ತು ನಿಂತಿರುವ ರೀತಿಯನ್ನ ನೀವು ಕಾಣ್ತೀರಿ. ಅವರೆಲ್ಲಾ ಕಾದಿರೋದು ತಮಗಿಷ್ಟವಾದ ಟೀಯನ್ನ ಕುಡಿಯೋದಿಕ್ಕೆ. ಇವರು ಬಯಸಿದ ಟೀ ನೀಡ್ತಾ ಇರೋ ಅಂಗಡಿ ಹೆಸ್ರೂ ಕೂಡ TEA ಅನ್ನೋದೇ ವಿಶೇಷ.
ಇದನ್ನು ಓದಿ: ಲೇಡಿರಾಕ್ ಸ್ಟಾರ್ ಶಚಿನಾ -ಸೌಂಡ್ ಮಾಡ್ತಿದೆ ದಿಬ್ಬರದಿಂಡಿ
ವಿವಿಧ ಫ್ಲೇವರ್ ಗಳ ಘಮಘಮ..
ಸಾಮಾನ್ಯವಾಗಿ ಬೇರೆ ಟೀ ಅಂಗಡಿಗಳಲ್ಲಿ ಕೇವಲ ಒಂದೆರಡು ವೆರೈಟಿಗಳು ಮಾತ್ರ ಸಿಗುತ್ತವೆ. ಆದ್ರೆ ಟೀ ಪರಿಕಲ್ಪನೆಗೇ ಅನ್ವರ್ಥವಾಗಿರುವ ಈ ಟೀ ಅಂಗಡಿಯಲ್ಲಿ ಹತ್ತಾರು ಬಗೆಯ ಚಹಾ ಸಿಗುತ್ತವೆ. ಲೆಮನ್ ಟೀ, ಬ್ಲ್ಯಾಕ್ ಟೀ, ಆರೆಂಜ್ ಟೀ, ಜಿಂಜರ್, ಮಿಂಟ್, ಪೈನಪಲ್, ಏಲಕ್ಕಿ ಹೀಗೆ ವಿವಿಧ ಚಹಾಗಳ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ..
“ ನನಗೆ ದಿನವೂ ಒಂದೊಂದು ಫ್ಲೇವರ್ ನ ಟೀ ಕುಡಿಯೋದು ತುಂಬಾ ಅಚ್ಚುಮೆಚ್ಚು. ಅದ್ರಲ್ಲೂ ಇತ್ತೀಚೆಗೆ ಚಳಿಗಾಲದಿಂದ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿರುವುದರಿಂದ ಶುಂಠಿ ಟೀಯನ್ನ ಹೆಚ್ಚಾಗಿ ಕುಡಿಯಲು ಬಯಸುತ್ತೇನೆ. ಬೇರೆ ಕಡೆ ಕುಡಿಯುವುದಕ್ಕಿಂತ ಶಾಂತಿನಗರದ ಈ ಟೀ ಅಂಗಡಿಯಲ್ಲಿ ಚಹಾ ಕುಡಿದ್ರೆ ರಿಲ್ಯಾಕ್ಸ್ ಆಗುತ್ತೆ. ಇಲ್ಲಿಗೆ ನಮ್ಮ ಇತರೆ ಗೆಳೆಯರೊಂದಿಗೆ ಬಂದು ಆಗಾಗ್ಗೆ ಚಹಾ ಕುಡಿಯುತ್ತಿರುತ್ತೇನೆ ”
ಈ ಚಹಾ ಅಂಗಡಿ ಸ್ಥಾಪನೆ ಹಿಂದೆಯೂ ಒಂದು ವಿಶೇಷ ಪರಿಕಲ್ಪನೆ ಇದೆ. ಈ ಅಂಗಡಿಯ ಮಾಲಿಕ ಮೊಹಮ್ಮದ್ ರಫೀಕ್ ಖ್ಯಾತ ಟೀ ಮೌಂಟ್ ಕಂಪನಿಯಲ್ಲಿ ತರಬೇತಿ ಪಡೆದು ಬಂದು ಇಲ್ಲಿ ಬ್ಯುಸಿನೆಸ್ ಶುರುಮಾಡಿದ್ದಾರೆ. ವಿವಿಧ ಬಗೆಯ ಟೀ ತಯಾರಿಕೆಯಲ್ಲಿ ಪಳಗಿರುವ ರಫೀಕ್ ಗ್ರಾಹಕರನ್ನ ಮೆಚ್ಚಿಸುವುದೇ ಗುರಿ ಅಂತಾರೆ..
“ ಆರಂಭದಲ್ಲಿ ನಾನು ಕೆಲಸ ಮಾಡುತ್ತಿದ್ದು ಡೆಲ್ ಕಂಪನಿಯಲ್ಲಿ. ಆದ್ರೆ ಸ್ವಂತದ್ದೇನಾದ್ರೂ ಉದ್ದಿಮೆ ಶುರುಮಾಡಬೇಕು ಅಂದುಕೊಳ್ಳುತ್ತಿದೆ. ಆಗ ಗೆಳೆಯರ ಮಾರ್ಗದರ್ಶನದಂತೆ ಟೀ ಮೌಂಟ್ ನಲ್ಲಿ ತರಬೇತಿ ಪಡೆಯಲು ಸೇರಿಕೊಂಡು ನಂತ್ರ ಈಗ ಶಾಂತಿ ನಗರದಲ್ಲಿ ಸ್ವಂತ ಅಂಗಡಿ ಶುರುಮಾಡಿದ್ದೇನೆ. ಇಲ್ಲಿ ನಮ್ಮ ಅಂಗಡಿಯ ಟೀ ಕುಡಿಯೋದಿಕ್ಕೆ ಜನ ಮುತ್ತಿಕೊಳ್ಳುತ್ತಾರೆ. ಹಾಗೂ ಟೇಸ್ಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ”
- ರಫೀಕ್, ಅಂಗಡಿ ಮಾಲೀಕ
ಚಹಾದಲ್ಲಿದೆ ಆರೋಗ್ಯದ ಗುಟ್ಟು..!
ಇಲ್ಲಿ ತಯಾರಿಸಲಾಗುವ ಚಹಾದಲ್ಲಿ ಆರೋಗ್ಯವರ್ಧನೆಗೆ ಹೆಚ್ಚು ಮಹತ್ವಕೊಡಲಾಗಿದೆ. ಋತುಮಾನಕ್ಕೆ ತಕ್ಕತೆ ಜನರು ತಮ್ಮ ಟೇಸ್ಟ್ ಬದಲಾಯಿಸಿಕೊಳ್ಳುತ್ತಿದ್ದಾರೆ. ಸದ್ಯ ಚಳಿಗಾಲ ಇರುವುದರಿಂದ ಶುಂಠಿ ಹಾಗೂ ಮಿಂಟ್ ಟೀಗೆ ಹೆಚ್ಚು ಬೇಡಿಕೆ ಅಂತಾರೆ ಅಂಗಡಿ ಮಾಲಿಕ ರಫೀಕ್.. ವಿಶೇಷ ಅಂದ್ರೆ ಈ ಟೀ ಅಂಗಡಿಯಲ್ಲಿ ಚಹಾ ತಯಾರಿಸುವ ಪೌಡರ್ ಗಳನ್ನ ಯುಎಸ್ ನಿಂದ ಆಮದು ಮಾಡಿಕೊಳ್ಳಲಾಗುತ್ತೆ. ಆ ಕಚ್ಛಾ ಪೌಡರ್ ಗಳಿಗೆ ಕೆಲವು ಅಗತ್ಯ ಎಸೆನ್ಸ್ ಗಳನ್ನ ಸೇರಿಸಿ ವಿವಿಧ ಫ್ಲೇವರ್ ಗಳನ್ನ ರೆಡಿಮಾಡಿಕೊಳ್ಳುತ್ತಾರೆ. ಇನ್ನು ಟೀ ಕಪ್ ಗೆ ತುಳಸಿ ಎಲೆಗಳನ್ನ ಹಾಕಿಕೊಡುವುದು ಇಲ್ಲಿನ ಸ್ಪೆಷಲ್. ಇದಿಷ್ಟೇ ಅಲ್ಲದೆ ಯಾವ ಟೀ ಕುಡಿದರೆ ಏನು ಲಾಭ ಅಂತ ಗ್ರಾಹಕರು ಸುಲಭವಾಗಿ ತಿಳಿದುಕೊಳ್ಳಲು ಇಲ್ಲಿ ಕೆಲವು ಭಿತ್ತಿಬರಹಗಳನ್ನೂ ಹಾಕಲಾಗಿದೆ. ಟೀಯ ಜೊತೆಗೆ ಇಲ್ಲಿ ವಿವಿಧ ರೀತಿಯ ಸೂಪ್ ಗಳನ್ನೂ ವಿಶೇಷ ರೀತಿಯಲ್ಲಿ ತಯಾರಿಸಿಕೊಡಲಾಗುತ್ತೆ. ಹೀಗೆ ಶಾಂತಿನಗರದ ಈ ಸ್ಪೆಷಲ್ ಟೀ ಅಂಗಡಿ ಅಲ್ಲಿದ್ದ ಸುತ್ತಮುತ್ತಲಿನವರನ್ನ ಹಿಡಿದಿಟ್ಟಿದೆ. ನೀವೂ ಏನಾದ್ರೂ ಆ ಏರಿಯಾಕ್ಕೆ ಹೋದ್ರೆ ಮಿಸ್ ಮಾಡದೇ ಟೀ ಟೇಸ್ಟ್ ಮಾಡಿ ಖುಷಿ ಪಡಿ.
1. ಮೆಡಿಕಲ್ಗೆ ಹೋಗೋ ಚಿಂತೆ ಬಿಟ್ಟುಬಿಡಿ- ಆನ್ಲೈನ್ನಲ್ಲೇ ಆರ್ಡರ್ ಮಾಡಿ
2. ಆರೋಗ್ಯದ ಹಿಂದಿದೆ ಮೇಕೆ ಹಾಲಿನ ರಹಸ್ಯ..!
3. ಸಿನೆಮಾ ನೋಡೋದಿಕ್ಕೆ ಟೈಮ್ ಇಲ್ಲ- ಕಿರು ಚಿತ್ರಗಳ ಬಗ್ಗೆ ಬೇಜಾರಿಲ್ಲ..!