Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಪೆಟ್ರೋಲ್ ಬಂಕ್ ಕೆಲಸಗಾರನ ಸಾಮಾಜಿಕ ಕಳಕಳಿ- ಬುಲ್​ಟೆಂಪಲ್ ಬಳಿ ಇರುವ ಆಪತ್ಭಾಂಧವನ ಕಥೆ ಓದಿ

ಟೀಮ್​ ವೈ.ಎಸ್​. ಕನ್ನಡ

ಪೆಟ್ರೋಲ್ ಬಂಕ್ ಕೆಲಸಗಾರನ ಸಾಮಾಜಿಕ ಕಳಕಳಿ- ಬುಲ್​ಟೆಂಪಲ್ ಬಳಿ ಇರುವ ಆಪತ್ಭಾಂಧವನ ಕಥೆ ಓದಿ

Wednesday March 22, 2017 , 3 min Read

ಸಾಮಾನ್ಯವಾಗಿ ನಗರದ ಜನರು ತಮ್ಮದೇ ಜೀವನದಲ್ಲಿ , ಲೈಫ್ ಸ್ಟೈಲ್​ನಲ್ಲಿ ಜೊತೆಗೆ ಕೆಲಸದಲ್ಲಿ ಬ್ಯುಸಿ ಆಗಿರ್ತಾರೆ. ತನ್ನ ಎದುರಿನ ಮನೆಯಲ್ಲಿ ಏನಾಗುತ್ತಿದೆ ಅನ್ನುವುದು ಕೂಡ ಗೊತ್ತಾಗುವುದಿಲ್ಲ. ಇಂತಹ ಜನರಿಗೆ ಸಮಾಜ ಸೇವೆ ಅನ್ನುವುದು ಕೇವಲ ಹೆಸರಿಗೆ ಮಾತ್ರ ಇರುತ್ತದೆ. ಆದ್ರೆ ನಾವು ಹೇಳ ಹೊರಟಿರುವ ಕಥೆ ಎಲ್ಲದಕ್ಕಿಂತ ವಿಭಿನ್ನ. ಈ ಕಥೆಯ ಹೀರೋ ಕಿರಣ್. ಬೆಂಗಳೂರಿನ ಬುಲ್ ಟೆಂಪಲ್ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಒಂದರಲ್ಲಿ ಜೀವನ ಸಾಗಿಸುವುದಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಆದ್ರೆ ಕಿರಣ್ ತನ್ನ ಸಾಮಾಜಿಕ ಕಳಕಳಿ ಮೂಲಕ ಸುದ್ದಿ ಆಗಿದ್ದಾರೆ. ತಾನು ಕೆಲಸ ಮಾಡುತ್ತಿರುವ ಏರಿಯಾದಲ್ಲಿ ಕಿರಣ್ ತನ್ನದೇ ಶೈಲಿಯಲ್ಲಿ ಜನರಿಗೆ ನೆರವಾಗುತ್ತಿದ್ದಾರೆ. ರಸ್ತೆ ಅಪಘಾತ ನಡೆದಾಗ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡುತ್ತಾರೆ. ಎಲ್ಲೋ ಒಂದು ಕಡೆ ಬೀದಿದೀಪ ಕೆಟ್ಟುಹೋಗಿದ್ದರೆ ಅದನ್ನು ರಿಪೇರಿ ಮಾಡುತ್ತಾನೆ. ಅಪಘಾತದ ಸಮಯದಲ್ಲಿ ವಾರ್ನಿಂಗ್ ಸಿಗ್ನಲ್​ಗಳನ್ನು ರಸ್ತೆ ಮೇಲೆ ತಂದಿಡುತ್ತಾರೆ. ಹೀಗೆ ಕಿರಣ್ ಬೆಂಗಳೂರನ್ನು ಸೇಫ್ ಸಿಟಿ ಮಾಡಲು ತನ್ನ ಕೈಯಿಂದ ಆಗಬಹುದಾದ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದಾರೆ.

image


ಕಿರಣ್ ತಂದೆ ಮಂಡ್ಯ ಜಿಲ್ಲೆಯ ಅನಗೋಲ ಗ್ರಾಮದಲ್ಲಿ ಕೃಷಿಕ. ಆರಂಭದಲ್ಲಿ ಕಿರಣ್​ಗೆ ಪ್ರಥಮ ಚಿಕಿತ್ಸೆಯ ಬಗ್ಗೆ ಗಂಧಗಾಳಿ ಗೊತ್ತಿರಲಿಲ್ಲ. ಆದ್ರೆ ತಾನು ಕೆಲಸ ಮಾಡುತ್ತಿದ್ದ ಪೆಟ್ರೋಲ್ ಬಂಕ್​ನಲ್ಲಿ ಹೆಚ್ಚುಕಡಿಮೆ ಆದ್ರೆ ತುರ್ತಾಗಿ ಏನು ಮಾಡಬೇಕು ಅನ್ನುವುದನ್ನು ಹೇಳಿಕೊಡುತ್ತಿದ್ದರು. ಇದನ್ನು ಕಿರಣ್ ಈಗ ತನ್ನದೇ ಶೈಲಿಯಲ್ಲಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ಅಂದಹಾಗೇ ಕಿರಣ್ APSE ಸಂಜೆ ಕಾಲೇಜಿನಿಂದ ಬಿ.ಕಾಂ. ಪದವಿಯನ್ನು ಕೂಡ ಪಡೆದುಕೊಂಡಿದ್ದಾರೆ. ಪೆಟ್ರೋಲ್ ಬಂಕ್​ನಲ್ಲಿ ದುಡಿಯುವ ಮೂಲಕ ತಿಂಗಳೊಂದಕ್ಕೆ 10,000 ರೂಪಾಯಿ ಸಂಪಾದನೆಯನ್ನು ಕೂಡ ಮಾಡುತ್ತಿದ್ದಾನೆ. ತನ್ನ ಸಮಾಜವ ಸೇವೆಗಾಗಿ ಕಿರಣ್ ಕಳೆದ ವರ್ಷ ನಮ್ಮ ಬೆಂಗಳೂರು ಫೌಂಡೇಷನ್ ನೀಡುವ ರೈಸಿಂಗ್ ಸ್ಟಾರ್ ಅವಾರ್ಡ್ ಗೆ ನಾಮಿನೇಟ್ ಕೂಡ ಆಗಿದ್ದ ಅನ್ನುವುದು ಮತ್ತೊಂದು ವಿಶೇಷ. ಕಿರಣ್ ತನ್ನ ಸಮಾಜ ಸೇವೆಯನ್ನು ತನ್ನದೇ ಹಣದಲ್ಲಿ ಮಾಡುತ್ತಿದ್ದಾನೆ. ಸರಕಾರದಿಂದಾಗಲಿ ಅಥವಾ ತಾನು ಕೆಲಸ ಮಾಡುವ ಪೆಟ್ರೋಲ್ ಬಂಕ್ ಮಾಲೀಕನಿಂದಾಗಲೀ ಒಂದು ನಯಾಪೈಸೆಯನ್ನು ಕೂಡ ಕಿರಣ್ ಬಯಸುತ್ತಿಲ್ಲ ಅನ್ನುವುದು ಆತನ ಸಾಮಾಜಿಕ ಕಳಕಳಿಗೆ ಹಿಡಿದ ಕೈಗನ್ನಡಿ.

“ ಈ ಸ್ಥಳದಲ್ಲಿ ಸಾಕಷ್ಟು ಅಪಘಾತಗಳು ನಡೆಯುತ್ತಿದ್ದವು. ಅಪಘಾತದಲ್ಲಿ ಗಾಯಗೊಂಡವರಿಗೆ ನಾನು ಮತ್ತು ನನ್ನ ಸಹೋದ್ಯೋಗಿಗಳು ಪ್ರಥಮ ಚಿಕಿತ್ಸೆಯನ್ನು ನೀಡುತ್ತಿದ್ದೆವು. ಕೆಲವೊಂದು ಸಂದರ್ಭದಲ್ಲಿ ಪಕ್ಕದಲ್ಲಿದ್ದ ಆಸ್ಪತ್ರೆಗೆ ಗಾಯಾಳುಗಳನ್ನು ಚಿಕಿತ್ಸೆಗಾಗಿ ಕರೆದುಕೊಂಡು ಹೋಗುತ್ತಿದ್ದೆವು. ವಾಹನಕ್ಕಾದ ಡ್ಯಾಮೇಜ್​ಗಳನ್ನು ಸರಿಪಡಿಸಲು ಪಕ್ಕದಲ್ಲಿದ್ದ ಗ್ಯಾರೇಜ್​​ಗೆ ತೆಗೆದುಕೊಂಡು ಹೋಗುತ್ತಿದ್ದೆವು. ಇಲ್ಲಿ ನಡೆಯುತ್ತಿರುವ ಅಪಘಾತಗಳನ್ನು ಹೇಗಾದ್ರೂ ಮಾಡಿ ತಡೆಯಬೇಕು ಅನ್ನುವುದು ನಮ್ಮ ಉದ್ದೇಶವಾಗಿತ್ತು. ”
- ಕಿರಣ್, ಸಮಾಜ ಸೇವಕ

2015ರ ಸೆಪ್ಟಂಬರ್​ನಲ್ಲಿ ಕರ್ನಾಟಕ ಬಂದ್ ನಿಮಿತ್ತ ಕಿರಣ್ ಕೆಲಸ ಮಾಡುತ್ತಿದ್ದ ಪೆಟ್ರೋಲ್ ಬಂಕ್​ಗೆ ರಜಾ ಇತ್ತು. ಆವತ್ತು ಕಿರಣ್ ಪೆಟ್ರೋಲ್ ಬಂಕ್ ಮುಂದಿನ ಸ್ಥಳಗಳಲ್ಲಿ ನಡೆದ ಅಪಘಾತಗಳ ಫೋಟೋಗ್ರಾಫ್​ಗಳ ಜೊತೆ ಚಾಮರಾಜಪೇಟೆ ಪೊಲೀಸ್ ಠಾಣೆಗೆ ಬೇಟಿ ನೀಡಿ ಪರಿಸ್ಥಿತಿಯನ್ನು ವಿವರಿಸಿದ್ದರು. ಅಷ್ಟೇ ಅಲ್ಲ ಸೈನ್ ಬೋರ್ಡ್​ಗಾಗಿ ಮನವಿ ಸಲ್ಲಿಸಿ, ಅದನ್ನು ಪಡೆದು, ತನ್ನದೇ ಖರ್ಚಿನಿಂದ ಆ ಬೋರ್ಡ್​ಗಳನ್ನು ಅಪಘಾತವಾಗುತ್ತಿದ್ದ ಸ್ಥಳದಲ್ಲಿ ಫಿಕ್ಸ್ ಮಾಡಿದ್ದಾರೆ. ಆವತ್ತಿನಿಂದ ಇಲ್ಲಿ ತನಕ ಆ ಸ್ಥಳದಲ್ಲಿ ಒಂದೇ ಒಂದು ಅಪಘಾತ ನಡೆದಿಲ್ಲ. ಕಿರಣ್ ಮಾಡುತ್ತಿದ್ದ ಸಹಾಯಕ್ಕೆ ಸಿಗುತ್ತಿದ್ದಿದ್ದು ಒಂದೇ ಒಂದು ಥ್ಯಾಂಕ್ಸ್ ಮಾತ್ರ.

“ ನಾನು ಹಲವು ವ್ಯಕ್ತಿಗಳನ್ನು ರಕ್ಷಿಸಿದ್ದೇನೆ. ರಾತ್ರಿ ಹೊತ್ತು ಊಟ ಬಿಟ್ಟುಸ ಸಹಾಯ ಮಾಡಿದ್ದೇನೆ. ಸರಕಾರ ಮಾಡದೇ ಇದ್ದ ಕೆಲಸ ನಾನು ಮಾಡಿರುವುದಕ್ಕೆ ಹಲವರು ನನಗೆ ಧನ್ಯವಾದ ಹೇಳಿದ್ದಾರೆ. ಇಂತಹ ಕೆಲಸಗಳನ್ನು ಮಾಡಲು ನನಗೆ ಇನ್ನಷ್ಟು ಸ್ಫೂರ್ತಿ ಸಿಕ್ಕಿದೆ.”
- ಕಿರಣ್, ಸಮಾಜ ಸೇವಕ

ಕಿರಣ್​ಗೆ ತನ್ನ ಜೊತೆ ಕೆಲಸ ಮಾಡುತ್ತಿದ್ದ 6 ಸಹೋದ್ಯೋಗಿಗಳು ನೆರವು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕಿರಣ್ ಮತ್ತವರ ತಂಡ ಬುಲ್ ಟೆಂಪಲ್ ರಸ್ತೆಯಲ್ಲಿ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಅಲ್ಲೂ ಮುಂಜಾಗ್ರತಾ ಕ್ರಮಗಳನ್ನು ಸೂಚಿಸುವ ಬೋರ್ಡ್​ಗಳನ್ನು ಅಳವಡಿಸುವ ಯೋಚನೆ ಮಾಡುತ್ತಿದ್ದಾರೆ. ಅಪರಿಚಿತರಿಗೆ ಅವಕಾಶ ಸಿಕ್ಕಿದಾಗ ನೆರವು ನೀಡಬೇಕು. ನಾವು ನೀಡಿದ ನೆರವು ನಮ್ಮನ್ನು ಇನ್ನೊಂದು ದಿನ ಕಾಪಾಡುತ್ತದೆ ಅನ್ನುವುದು ಕಿರಣ್ ಇಟ್ಟುಕೊಂಡಿರುವ ಅಚಲ ನಂಬಿಕೆ. ಕಿರಣ್ ಕೆಲಸ ಹಲವರಿಗೆ ಮಾದರಿಯಾಗಿದೆ. ಕಿರಣ್​ರಂತೆ ಎಲ್ಲರೂ ಯೋಚನೆ ಮಾಡಿದ್ರೆ, ಬೆಂಗಳೂರು ಮತ್ತಷ್ಟು ಸೇಫ್ ಆಗುತ್ತದೆ ಅನ್ನುವ ಬಗ್ಗೆ ಎರಡು ಮಾತಿಲ್ಲ. 

ಇದನ್ನು ಓದಿ:

1. ಸೈಲೆಂಟ್ ಹಾರ್ಟ್ ಅಟ್ಯಾಕ್ ವಿರುದ್ಧ ಹೋರಾಟ- ಹೊಸ ಡಿವೈಸ್ ಕಂಡುಹಿಡಿದ 15ರ ಹರೆಯದ ಬಾಲಕ

2. ಈ ಗ್ರಾಮದಲ್ಲಿ ಹೆಣ್ಣುಮಕ್ಕಳೇ ಮನೆ ಒಡತಿಯರು..!

3. ಇಳಿವಯಸ್ಸಿನಲ್ಲೂ ದೇಶ ಸುತ್ತುವ ಸಾಹಸಿ : ವಿಶ್ವಪರ್ಯಟನೆ ಮಾಡ್ತಿದ್ದಾರೆ 95ರ ಅಮ್ಮಾಚಿ