ರಿಯಲ್ ಎಸ್ಟೇಟ್ ಉದ್ಯಮಿಯಿಂದ ಸಮಾಜಮುಖಿ ಕಾರ್ಯ
ಉಷಾ ಹರೀಶ್
ಭಾರತದಲ್ಲಿ ಭೂಮಿಗಿರುವ ಬೆಲೆ ವಜ್ರ ವೈಢೂರ್ಯಗಳಿಗೂ ಇಲ್ಲ. ಇಂತಹ ಭೂಮಿಯಿಂದಲೇ ಸಾಕಷ್ಟು ಜನ ಇಂದು ಜೀವನ ನಡೆಸುತ್ತಿದ್ದಾರೆ. ಭೂಮಿ ಮಾರಾಟ ಮಾಡುವವರು ಒಬ್ಬರಾದರೆ ಅದನ್ನು ತೆಗೆದುಕೊಳ್ಳುವವರು ಮತ್ತೊಬ್ಬರು. ಆದರೆ ಅದನ್ನು ಗುರುತಿಸಿ ಮಾರಾಟಗಾರರಿಗೂ, ಕೊಳ್ಳುವವರಿಗೂ ನಡುವೆ ಸೇತುವೆಯಾಗಿ ನಿಂತು ಇಬ್ಬರಿಗೂ ಅನುಕೂಲವಾಗುವಂತೆ ಮಾಡುವವರೆ ರಿಯಲ್ ಎಸ್ಟೇಟ್ ಉದ್ಯಮಿಗಳು. ಇಂದು ಬೆಂಗಳೂರು ಮೈಸೂರಿನಲ್ಲಿ ಏರಿಯಾಗೊಬ್ಬರಂತೆ ರಿಯಲ್ ಎಸ್ಟೇಟ್ ಉದ್ಯಮಿಗಳು ಸಿಗುತ್ತಾರೆ. ಎಲ್ಲರಿಗೂ ದುಡ್ಡು ಮಾಡುವುದಷ್ಟೇ ಉದ್ದೇಶ. ಆದರೆ ಸಾಂಸ್ಕೃತಿಕ ನಗರ ಮೈಸೂರಿನಲ್ಲಿರುವ ಒಬ್ಬ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ತಮ್ಮ ಸಮಾಜಮುಖಿ ಕೆಲಸದಿಂದ ಇಡೀ ಮೈಸೂರಿನಲ್ಲೇ ಖ್ಯಾತಿ ಗಳಿಸಿದ್ದಾರೆ. ಅವರ ಸಮಾಜಮುಖಿ ಮನಸ್ಸಿನಿಂದಾಗಿ ಇಂದು ಚೆನ್ನೈ ನಗರದ ಪ್ರವಾಹ ಪರಿಸ್ಥಿತಿಗೆ ತಾವು ನೆರವಾಗುವುದಲ್ಲದೇ ತಮ್ಮ ಸ್ನೇಹಿತರನ್ನು, ಪ್ರವಾಹ ಪೀಡಿತರಿಗೆ ನೆರವಾಗುವಂತೆ ಮಾಡಿ ರಿಯಲ್ ಹೀರೊ ಆಗಿದ್ದಾರೆ.
ಹೌದು ಮೈಸೂರಿನ ರಿಯಲ್ ಎಸ್ಟೇಟ್ ಉದ್ಯಮಿ ಶ್ರೀಹರಿ, ಪ್ರವಾಹ ಪೀಡಿತ ಚೆನ್ನೈಗೆ ಸಾಕಷ್ಟು ಪರಿಹಾರ ಸಾಮಾಗ್ರಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ಮೂಲತಃ ಬೆಂಗಳೂರು ಮೂಲದ ಶ್ರೀಹರಿ ಬಿ.ಕಾಂ. ಪಧವಿದರರು. ಉದರ ನಿಮಿತ್ತಂ ಬಹುಕೃತ ವೇಷಂ ಎಂಬಂತೆ ಇವರು ಚಿಕ್ಕದಾಗಿ ಪ್ರಾರಂಭಮಾಡಿದ ಜಿಎಸ್ಎಸ್ ಎಂಬ ರಿಯಲ್ ಎಸ್ಟೇಟ್ಉದ್ಯಮ ಇಂದು ಸಾಕಷ್ಟು ಬೆಳದಿದೆ. ಬೇರೆಯವರಾಗಿದ್ದರೆ ಉದ್ಯಮ ಬೆಳದಿದೆ, ಹಣ ಮಾಡಿಕೊಳ್ಳುವ ಎಂದುಕೊಳ್ಳುತ್ತಿದ್ದರೇನೋ. ಆದರೆ ಶ್ರೀಹರಿಯವರು ಹಾಗೆ ಮಾಡದೇ ತಮ್ಮ ಉದ್ಯಮ ಬೆಳೆದಂತೆ ತಮ್ಮಲ್ಲಿರುವ ಸಮಾಜ ಮುಖಿ ಮನಸ್ಸನ್ನು ಬೆಳಸಿಕೊಂಡರು. ಆಗ ಹುಟ್ಟಿಕೊಂಡಿದ್ದೇ ಜಿಎಸ್ಎಸ್ ಯೋಗೀಕ್ ರಿಸರ್ಚ್ ಫೌಂಡೇಶನ್.
ಈ ಯೋಗೀಕ್ ರಿಸರ್ಚ್ ಫೌಂಡೇಶನ್ನ ಮುಖ್ಯ ಉದ್ದೇಶ ಸಮಾಜದಲ್ಲಿರವ ಜಾತಿ ಪದ್ಧತಿಯನ್ನು ಹೊಗಲಾಡಿಸಿ ಎಲ್ಲರೂ ಒಟ್ಟಿಗೆ ಸಹಬಾಳ್ವೆಯಿಂದ ಜೀವನ ನಡೆಸುವುದು ಮತ್ತು ಉತ್ತಮ ಆರೋಗ್ಯ ಕಾಪಾಡಿಕೊಳ್ಳವುದು. ಅದಕ್ಕಾಗಿ ಉಚಿತ ಯೋಗ ತರಬೇತಿ, ಉಚಿತ ಪ್ರಾಣಾಯಾಮ ಶಾಲೆಗಳನ್ನು ತಮ್ಮ ಕಚೇರಿ ಮೇಲ್ಭಾಗದಲ್ಲಿ ಪ್ರಾರಂಭ ಮಾಡಿದರು.
ಸೋಷಿಯೋ ಯುನಿಟಿ ಎಂಬ ಹೆಸರಿನಲ್ಲಿ ಎಲ್ಲಾ ಧರ್ಮದವರನ್ನು ಸೇರಿಸಿ ರಕ್ಷಾ ಬಂಧನ್ ಹಬ್ಬವನ್ನು ಕಳೆದ ಎರಡು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಅದಕ್ಕಾಗಿ ಅವರು ಎಲ್ಲಾ ಸಮುದಾಯದ ಸಾವಿರಾರು ಜನರನ್ನು ಒಟ್ಟಿಗೆ ಸೇರಿಸುತ್ತಾರೆ.
ಈ ಜಿಎಸ್ಎಸ್ ಯೋಗೀಕ್ ರಿಸರ್ಚ್ ಫೌಂಡೇಶನ್ ಮೂಲಕ ಚೆನ್ನೈನ ಪ್ರವಾಹ ಪೀಡಿತರಿಗೆ ಸುಮಾರು 5 ಸಾವಿರ ವಾಟರ್ ಬಾಟಲ್, ಸಾವಿರಾರು ಬೆಡ್ಸ್ಪ್ರೆಡ್ಗಳು, ಬಿಸ್ಕೆಟ್ಗಳು, ಊಟದ ಸಾಮಾನುಗಳನ್ನು ತಮ್ಮ ಸ್ನೇಹಿತರೊಂದಿಗೆ ಸೇರಿಕೊಂಡು ಸಂಗ್ರಹ ಮಾಡಿ ಅದನ್ನು ಚೆನ್ನೈಗೆ ಕಳುಹಿಸಿದ್ದಾರೆ. ಅದರಲ್ಲಿ ತಮ್ಮ ಜಿಎಸ್ಎಸ್ ಸಂಸ್ಥೆಯ ವತಿಯಿಂದಲೂ ಕೊಡುಗೆಯನ್ನು ನೀಡಿದ್ದಾರೆ.
ಮತ್ತಷ್ಟು ಸಾಮಾಜಿಕ ಕೆಲಸಗಳು
ಜಿಎಸ್ಎಸ್ ಯೋಗಿಕ್ ರಿಸರ್ಚ್ ಫೌಂಡೇಶನ್ನ ಉಸ್ತುವಾರಿಯಲ್ಲಿ 2014ರಲ್ಲಿ ಮೈಸೂರು ಅರಮನೆ ಆವರಣದಲ್ಲಿ ಯೋಗ ದಿನ ಆಚರಣೆ, ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಶಿಬಿರ, ಪ್ರತಿ ತಿಂಗಳು ಯೋಗಿಕ್ ಕ್ಯಾಂಪ್ ಹೆಸರಲ್ಲಿ ಟ್ರೆಕ್ಕಿಂಗ್ ಹೋಗುವುದು, ಯೋಗ ಕ್ಯಾಂಪ್, ಆಗಾಗ್ಗೆ ಆರೋಗ್ಯ ತಪಾಸಣಾ ಶಿಬಿರ, ಪರ್ಸನಾಲಿಟಿ ಡೆವಲಪ್ಮೆಂಟ್ ಕ್ಲಾಸ್ಗಳು, ಫೈನ್ ಆರ್ಟ್ಸ್ ತರಬೇತಿ, ಮ್ಯೂಸಿಕ್ ಕ್ಲಾಸ್ಗಳು, ಚೆಸ್ ಆಟದ ಕಾರ್ಯಾಗಾರ, ನಾಯಕತ್ವ ಶಿಬಿರಗಳನ್ನು ಆಯೋಜನೆ ಮಾಡುವುದು ಸೇರಿದಂತೆ ಇನ್ನಿತರ ಹತ್ತು ಹಲವು ಸಾಮಾಜಿಕ ಕೆಲಸಗಳನ್ನು ಶ್ರೀಹರಿಯವರು ಹಮ್ಮಿಕೊಂಡು ಬರುತ್ತಿದ್ದಾರೆ.
ಬೃಂದಾವನ ಆಸ್ಪತ್ರೆ, ಜೀವನಧಾರಾ ರಕ್ತನಿಧಿ, ಕೌಟಿಲ್ಯ ವಿದ್ಯಾಲಯ, ವಿಜಯ ವಿಠ್ಠಲ ವಿದ್ಯಾಸಂಸ್ಥೆ ಸೇರಿದಂತೆ ನೂರಕ್ಕು ಹೆಚ್ಚು ಸಂಘಟನೆಗಳು ಶ್ರೀಹರಿಯವರ ಒಳ್ಳೆ ಕೆಲಸಗಳಿಗೆ ಕೈಜೋಡಿಸಿವೆ.
ಮೆಡಿಕಲ್ ಹೆಲ್ಪ್ಲೈನ್
ಸಾಮಾನ್ಯವಾಗಿ ಸರಕಾರ ನಡೆಸುವ ಮೆಡಿಕಲ್ ಹೆಲ್ಪ್ಲೈನ್ ಅನ್ನು ಶ್ರೀಹರಿಯವರ ಜಿಎಸ್ಎಸ್ ಯೋಗಿಕ್ ರಿಸರ್ಚ್ ಫೌಂಡೇಶನ್ ಹೊಂದಿದೆ. ಶ್ರೀಹರಿಯವರಿಗೆ ಗೊತ್ತಿರುವ ಒಂದಷ್ಟು ಜನ ವೈದ್ಯರ ತಂಡವನ್ನು ಒಟ್ಟುಗೂಡಿಸಿ ಮೈಸೂರು ಜನತೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಮೆಡಿಕಲ್ ಹೆಲ್ಪ್ಲೈನ್ಅನ್ನು ಪ್ರಾರಂಭ ಮಾಡಿದ್ದಾರೆ. ಇದು ಬೆಳಗ್ಗೆ 7ರಿಂದ ಸಂಜೆ 7 ರವರೆಗೂ ಈ ನಂಬರ್ ಕರೆ ಅಥವಾ ಮೆಸೆಜ್ ಮಾಡಿದರೆ ಸಾಕು, ಆರೋಗ್ಯಕ್ಕೆ ಸಂಬಂಧಪಟ್ಟ ಏನೇ ಸಲಹೆ ಸೂಚನೆಗಳು ಬೇಕಿದ್ದರೂ, ರಕ್ತ ಬೇಕಾಗಿದ್ದರಿಗೆ, ಅವರು ಸಹಾಯ ಮಾಡುತ್ತಾರೆ. ಒಟ್ಟಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳೆಂದರೆ ದುಡ್ಡು ಮಾಡುವವರು ಎಂಬ ಭಾವನೆ ಇರುವಾಗ ಶ್ರೀಹರಿಯವರು ತಮ್ಮ ಸಾಮಾಜಿಕ ಕಳಕಳಿಯಿಂದಾಗಿ ನಮ್ಮ ನಡುವೆ ವಿಭಿನ್ನವಾಗಿ ನಿಲ್ಲುತ್ತಾರೆ. ನೀವು ಒಮ್ಮೆ
http://www.gssyoga.com/Wedoಗೆ ಬೇಟಿ ಕೊಡಿ ಅಥವಾ ಹೆಲ್ಪ್ಲೈನ್ ನಂಬರ್, +917829062229ಗೆ ಕಾಲ್ ಮಾಡಿ.