'ಮೇಕ್ ಇನ್ ಇಂಡಿಯಾ ವೀಕ್'ನತ್ತ ಕರ್ನಾಟಕ ಸರ್ಕಾರದ ಚಿತ್ತ...
ಟೀಮ್ ವೈ.ಎಸ್.ಕನ್ನಡ
ಬೆಂಗಳೂರಿನಲ್ಲಿ ಆಯೋಜಿಸಿದ್ದ ಇನ್ವೆಸ್ಟ್ ಕರ್ನಾಟಕ 2016 ಸಮಾವೇಶ ಸಂಪೂರ್ಣ ಯಶಸ್ವಿಯಾಗಿದೆ. ಫೆಬ್ರವರಿ 3-5ರವರೆಗೆ ನಡೆದ ಸಮಾವೇಶದಲ್ಲಿ ಬರೋಬ್ಬರಿ 3.08ಲಕ್ಷ ಕೋಟಿ ಬಂಡವಾಳ ಆಕರ್ಷಿಸಿರುವ ಕರ್ನಾಟಕ ಸರ್ಕಾರ, ಇನ್ನಷ್ಟು ಹೂಡಿಕೆಯ ನಿರೀಕ್ಷೆಯಲ್ಲಿದ್ದು ಮುಂಬೈನಲ್ಲಿ ಫೆಬ್ರವರಿ 13-18ರವರೆಗೆ ನಡೆಯಲಿರುವ `ಮೇಕ್ ಇನ್ ಇಂಡಿಯಾ ವೀಕ್'ನತ್ತ ಚಿತ್ತ ಹರಿಸಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಅವರ ನೇತೃತ್ವದ ಉನ್ನತ ಮಟ್ಟದ ನಿಯೋಗ ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಹಾಗೂ ಐಎಎಸ್ ಅಧಿಕಾರಿ ಕೆ.ರತ್ನಪ್ರಭಾ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಲತಾ ಕೃಷ್ಣ ರಾವ್ ಸೇರಿದಂತೆ ಹಿರಿಯ ಅಧಿಕಾರಿಗಳು ಈ ನಿಯೋಗದಲ್ಲಿ ಉಪಸ್ಥಿತರಿರಲಿದ್ದಾರೆ. ಕರ್ನಾಟಕದ ಉತ್ಪಾದನಾ ವಲಯದ ಸಾಮರ್ಥ್ಯ ಹಾಗೂ ಅವಕಾಶಗಳನ್ನು ಉನ್ನತ ಮಟ್ಟದ ನಿಯೋಗ ಮೇಕ್ ಇನ್ ಇಂಡಿಯಾ ವೀಕ್ನಲ್ಲಿ ಪ್ರದರ್ಶಿಸಲಿದೆ.
ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಲ್ಲಿ ಉತ್ಪಾದನಾ ವಲಯಗಳಾದ ಆಟೋ & ಆಟೋ ಬಿಡಿಭಾಗಗಳು, ಏರೋಸ್ಪೇಸ್, ರಕ್ಷಣೆ, ಕೃಷಿ-ಉದ್ಯಮ, ಆಹಾರ ಸಂಸ್ಕರಣೆ, ಜೈವಿಕ ತಂತ್ರಜ್ಞಾನ, ಎಲೆಕ್ಟ್ರಾನಿಕ್ ಸಿಸ್ಟಮ್ ಡಿಸೈನ್ ಉತ್ಪಾದನೆ, ಮಾಹಿತಿ ತಂತ್ರಜ್ಞಾನ, ಯಂತ್ರೋಪಕರಣಗಳು, ಹೆವಿ ಎಂಜಿನಿಯರಿಂಗ್, ಔಷಧಿ (ಫಾರ್ಮಾಸುಟಿಕಲ್), ಜವಳಿ ಮತ್ತು ಸಿದ್ಧ ಉಡುಪುಗಳ ಮೇಲೆ ಕರ್ನಾಟಕ ಸರ್ಕಾರ ಹೆಚ್ಚಿನ ಗಮನಹರಿಸಲಿದೆ. ಕರ್ನಾಟಕದಲ್ಲಿ ಕೈಗಾರಿಕಾ ಅಭಿವೃದ್ಧಿಯನ್ನು ಬೆಂಬಲಿಸುವ ಎಲ್ಲಾ ಕ್ಷೇತ್ರಗಳ ಮುಖ್ಯಸ್ಥರು ಹಾಗೂ ಪ್ರತಿನಿಧಿಗಳು ಕೂಡ ಮೇಕ್ ಇನ್ ಇಂಡಿಯಾ ವೀಕ್ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ.
ಬಹುರಾಷ್ಟ್ರೀಯ ಕಂಪನಿಗಳು ಸೇರಿದಂತೆ 195ಕ್ಕೂ ಹೆಚ್ಚು ಕಂಪನಿಗಳು ಚೊಚ್ಚಲ ಮೇಕ್ ಇನ್ ಇಂಡಿಯಾ ವೀಕ್ನಲ್ಲಿ ಪಾಲ್ಗೊಳ್ಳುತ್ತಿವೆ. ಸುಮಾರು 60 ರಾಷ್ಟ್ರಗಳಿಂದ 5000ಕ್ಕೂ ಹೆಚ್ಚು ಪ್ರತಿನಿಧಿಗಳು ಆಗಮಿಸಲಿದ್ದಾರೆ. ಇನ್ನು ಪ್ರಮುಖ ಕೈಗಾರಿಕೋದ್ಯಮಿಗಳು ಮೇಕ್ ಇನ್ ಇಂಡಿಯಾ ವೀಕ್ನ ಪ್ರಮುಖ ಆಕರ್ಷಣೆ ಅನ್ನೋದ್ರಲ್ಲಿ ಅನುಮಾನವಿಲ್ಲ. ಮೇಕ್ ಇನ್ ಇಂಡಿಯಾ ಕೇಂದ್ರದ ಹಾಲ್ ನಂಬರ್ 22ರಲ್ಲಿ ಕರ್ನಾಟಕದ ಪ್ರತಿನಿಧಿಗಳಿಗೆ ಸಕಲ ವ್ಯವಸ್ಥೆಗಳನ್ನೂ ಮಾಡಲಾಗಿದೆ. ಹಾಲ್ ನಂಬರ್ 22 ಕರ್ನಾಟಕದ ಪೆವಿಲಿಯನ್ ಆಗಿರಲಿದೆ. ಕರ್ನಾಟಕ ರಾಜ್ಯದ ಸೆಮಿನಾರ್ ಅವಧಿ ಫೆಬ್ರವರಿ 17ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಲ್ ನಂಬರ್ 16ರಲ್ಲಿ ನಡೆಯಲಿದೆ. ಇನ್ನು ಬಿ2ಜಿ ಮೀಟಿಂಗ್ಗಳು ಕೂಡ ಅದೇ ದಿನ ಮಧ್ಯಾಹ್ನ 2.30ರಿಂದ ಸಂಜೆ 5.30ರವರೆಗೆ ನಡೆಯಲಿವೆ. ಈ ಸೆಮಿನಾರ್ನಲ್ಲಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಪ್ರಮುಖ ವಲಯದ ಇಲಾಖೆಗಳ ಮುಖ್ಯಸ್ಥರು ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕ ರಾಜ್ಯದ ಸೆಮಿನಾರ್ನಲ್ಲಿರುವ ಸೆಕ್ಟರ್ ಸೆಶನ್ಗಳಲ್ಲಿ ಖ್ಯಾತ ಉದ್ಯಮಿಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಕರ್ನಾಟಕದಲ್ಲಿ ಉದ್ಯಮ ಮುನ್ನಡೆಸಿದ ತಮ್ಮ ಅನುಭವಗಳನ್ನು ವಿವರಿಸಲಿದ್ದಾರೆ. ಸರ್ಕಾರದ ಪ್ರಮುಖ ಇಲಾಖೆಗಳ ಅಧಿಕಾರಿಗಳು, ಕರ್ನಾಟಕದಲ್ಲಿರುವ ಕೈಗಾರಿಕಾ ನೀತಿ, ಅನುಕೂಲತೆಗಳನ್ನು ಬಿಚ್ಚಿಡಲಿದ್ದಾರೆ. ಅಷ್ಟೇ ಅಲ್ಲ, ಏರೋಸ್ಪೇಸ್ ಮತ್ತು ಫಾರ್ಮಾ ನೀತಿಯ ತಿದ್ದುಪಡಿಯೊಂದಿಗೆ ಆ ವಲಯಗಳನ್ನು ಬೆಂಬಲಿಸುವ ಕುರಿತು ಸಹ ಸೆಮಿನಾರ್ನಲ್ಲಿ ಒತ್ತು ನೀಡಲಾಗುತ್ತದೆ.
ಕರ್ನಾಟಕದ ಸರ್ಕಾರದಿಂದ ಆಹ್ವಾನಿತ ಅತಿಥಿಗಳು ಮತ್ತು ಪ್ರತಿನಿಧಿಗಳು ಮೇಕ್ ಇನ್ ಇಂಡಿಯಾ ವೀಕ್ನಲ್ಲಿ ಪಾಲ್ಗೊಳ್ಳಲು ರಜಿಸ್ಟರ್ ಮಾಡಿಸಿಕೊಳ್ಳಬೇಕು. ಇದಕ್ಕಾಗಿ ಅವರು http://www.makeinindia.com/mumbai-week/visitor-registrationಗೆ ಲಾಗಿನ್ ಆಗಬೇಕು. ಇನ್ನು ಮೇಕ್ ಇನ್ ಇಂಡಿಯಾ ವೀಕ್ ಕಾರ್ಯಕ್ರಮ ನಡೆಯುವ ಸ್ಥಳದ ವಿಳಾಸ ಈ ಕೆಳಗಿನಂತಿದೆ,
ಮೇಕ್ ಇನ್ ಇಂಡಿಯಾ ವೀಕ್ - ಮುಂಬೈ
ಕರ್ನಾಟಕ ಸ್ಟೇಟ್ ಸೆಮಿನಾರ್
ದಿನಾಂಕ: 17/02/2016
ಸಮಯ: ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆ
ಸ್ಥಳ: ಹಾಲ್ 16, ಎಂಎಂಐಸಿ.ಎಂಎಂಆರ್ಡಿಎ ಗ್ರೌಂಡ್ ಮುಂಬೈ
ಸೆಶನ್ ಪಾರ್ಟ್ನರ್ : ಸಿಐಐ ಕರ್ನಾಟಕ
ಇದನ್ನೂ ಓದಿ...
ಉರಿವ ಕುಲುಮೆಯಲ್ಲಿ ಬೆಂದು ನಳನಳಿಸುವ ಆಯುಧವಾದ ಖಡಕ್ ಆಫೀಸರ್ ರವಿ.ಡಿ ಚೆನ್ನಣ್ಣನವರ್