ಉರಿವ ಕುಲುಮೆಯಲ್ಲಿ ಬೆಂದು ನಳನಳಿಸುವ ಆಯುಧವಾದ ಖಡಕ್ ಆಫೀಸರ್ ರವಿ.ಡಿ ಚೆನ್ನಣ್ಣನವರ್
ವಿಶ್ವಾಸ್
ಶಿವಮೊಗ್ಗದ ಮಟ್ಟಿಗೆ ಅದೊಂದು ಹೆಸರು ನಿಜಕ್ಕೂ ವಿಧ್ವಂಸಕಕಾರರ ಎದೆ ನಡುಗಿಸುವ ಹೆಸರಾಗಿತ್ತು. ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಕೋಮುಗಲಭೆಗಳು ಸೇರಿದಂತೆ ಇನ್ನಿತರೆ ಕಿಡಿಗೇಡಿತನದ ಮೂಲಕ ಸದಾ ನೆಮ್ಮದಿ ಕೆಡಿಸುತ್ತಿದ್ದ ರೌಡಿಗಳಿಗೆ ಸಿಂಹ ಸ್ವಪ್ನವಾಗಿ ಕಾಡಿದ ದಿಟ್ಟ ಪೊಲೀಸ್ ಅಧೀಕ್ಷಕರ ಹೆಸರದು. ಆ ಹೆಸರೇ ಶಿವಮೊಗ್ಗದ ಜನರ ಪಾಲಿನ ಸಿಂಗಂ, ಜಿಲ್ಲಾ ಪೊಲೀಸ್ ಸೂಪರಿಂಟಂಡಂಟ್ ರವಿ ಡಿ ಚೆನ್ನಣ್ಣನವರ್. ಅಧಿಕಾರ ಸ್ವೀಕರಿಸಿದ ದಿನದಿಂದಲೇ ಪುಡಿರೌಡಿಗಳನ್ನು ಗದರಿಸಿ, ಹಿರಿ ಪಂಟರುಗಳನ್ನು ಹೆಡೆಮುರಿ ಕಟ್ಟಿದ ರವಿ, ಶಿವಮೊಗ್ಗದ ಮಂದಿ ಎಂದಿಗೂ ಮರೆಯಲಾರದ ಅಧಿಕಾರಿಗಳ ಸಾಲಿಗೆ ಸೇರಿದರು. ಶಿವಮೊಗ್ಗದಲ್ಲಿ ಎಗ್ಗುಸಿಗ್ಗಿಲ್ಲದೆ ನಡೆಸಲಾಗುತ್ತಿದ್ದ ಅವ್ಯಾಹತ ಮರಳು ದಂದೆಯನ್ನು ತಹಬಂಧಿಗೆ ತಂದ ದಕ್ಷ ಅಧಿಕಾರಿ ಅವರು. ಅವರು ಅಧಿಕಾರಕ್ಕೆ ಬಂದ ನಂತರ ಕ್ಲಿಯರ್ ಆದ ಕೇಸ್ ಗಳು ಅದೆಷ್ಟೋ. ಯಾವುದೇ ಕ್ರೈಂ ಮಾಡುವ ಮುಂಚೆ ಶಿವಮೊಗ್ಗದ ಕ್ರಿಮಿನಲ್ ಗಳಿಗೆ ರವಿ.ಡಿ. ಚೆನ್ನಣ್ಣನವರ್ ಅನ್ನುವ ಸರಳ ವ್ಯಕ್ತಿತ್ವದ ಆದರೆ ಸಿಂಹ ಘರ್ಜನೆಯ ಚಹರೆ ನೆನಪಾಗುತ್ತಿತ್ತು. ಅಂತಹ ಸೂಪರ್ ಕಾಪ್ ರವಿ ಚೆನ್ನಣ್ಣನವರ್ ಬೆಳೆದುಬಂದಿದ್ದು ಅತ್ಯಂತ ಕಷ್ಟದ ಮುಳ್ಳಿನ ಹಾದಿಯಲ್ಲಿ ಎಂದರೇ ನಂಬ್ತಾರಾ? ಯೆಸ್! ಇದು ವಾಸ್ತವ, ನಮ್ಮ ಮನೆಯ ಮಕ್ಕಳು ಶಾಲೆ ಮೆಟ್ಟಿಲನ್ನು ಹತ್ತುವುದೇ ನಿಜವಾದ ಸಾಧನೆ ಅನ್ನುವ ಸಮುಧಾಯವೊಂದರಲ್ಲಿ ಹುಟ್ಟಿ, ಇಂದು ಆ ಸಮುಧಾಯವೇ ಹೆಮ್ಮೆ ಪಡುವ ಮಟ್ಟಕ್ಕೆ ಬೆಳೆದವರು ರವಿ ಚೆನ್ನಣ್ಣನವರ್.
ಏಕಾಏಕಿ ಐಪಿಎಸ್ ಪಾಸು ಮಾಡಿ ರವಿ ಸಾಹೇಬ್ರು ಎಸ್.ಪಿ ಆಗಲಿಲ್ಲ. ಅವರದ್ದು ಸಂಘರ್ಷದ ಬದುಕು ಆದರೆ, ದೃಢ ಸಂಕಲ್ಪವಿದ್ದ ಸಾಧನೆ. ದಿನಗೂಲಿ ಹುಡುಗನಾಗಿ, ಕಸ ಗುಡಿಸುವ, ನೆಲ ಒರೆಸುವ ಸ್ವೀಪರ್ ಆಗಿ, ಬಳಿಕ ಹೋಟೆಲ್ ನಲ್ಲಿ ಪರಿಚಾರಕನ ಕೆಲಸ ಮಾಡುವ ಮಾಣಿಯಾಗಿ ರವಿ ಬದುಕು ಸಾಗಿಸಲು ಮಾಡದೇ ಇದ್ದ ಕೆಲಸಗಳೇ ಇಲ್ಲ.
ಓದಿದ್ದು ಒಂಭತ್ತನೇ ಕ್ಲಾಸ್..ಆಗಿದ್ದು ಎಂಜಿನಿಯರ್ಗಳಿಗೇ ಟೀಚರ್....
ಈಗ ಜಿಲ್ಲಾ ಅಧೀಕ್ಷಕರಾಗಿ ಹಲವು ಪೊಲೀಸ್ ಅಧಿಕಾರಿಗಳಿಂದ ಸೆಲ್ಯೂಟ್ ಗಿಟ್ಟಿಸಿಕೊಳ್ಳುವ ರವಿ ಸಾರ್, ಈಗ್ಗೆ ಕೆಲವೇ ವರ್ಷಗಳ ಹಿಂದೆ ಧಾರವಾಡದಲ್ಲಿ ನಾನ್ ವೆಜ್ ಹೋಟೆಲ್ನಲ್ಲಿ ಲಿಕ್ಕರ್ ಒದಗಿಸವ ಮಾಣಿಯಾಗಿ ದುಡಿಯುತ್ತಿದ್ದರು. ಮುಂದೆ ಅದೇ ವ್ಯಕ್ತಿ ಧಾರವಾಡದಲ್ಲಿ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದು ಅದೇಷ್ಟದಾಟ ಅನ್ನುವುದಕ್ಕಿಂತ ಒಬ್ಬ ಧ್ಯೇಯದ ಹಿಂದೆ ಬಿದ್ದ ಗಟ್ಟಿಮನಸಿನ ಯುವಕನ ಶ್ಲಾಘನೀಯ ಸಾಧನೆ ಅನ್ನುವುದು ಸೂಕ್ತ. ಬಾಲ್ಯದಿಂದಲೂ ಸಂಕಷ್ಟವನ್ನೇ ಉಂಡು, ಉಟ್ಟು ಬೆಳೆದ ಕುಟುಂಬ ರವಿಯವರದ್ದು. ಕಡು ಬಡತನದ ಜತೆಗೆ ನಿರಂತರ ಹೋರಾಟ ನಡೆಸಿ ಬಾಲ್ಯ ಹಾಗೂ ಕಿಶೋರ ಕಾಲ ಕಳೆದವರು ರವಿ. ಆದರೆ ಕೀಳರಿಮೆಗೆ ಒಳಗಾಗದೆ, ಛಲ ಬಿಡದೇ ತಮ್ಮ ದಾರಿದ್ರ್ಯವನ್ನು ಗೆದ್ದ ಯಶೋಗಾಥೆ ಎಲ್ಲರಿಗೂ ಆದರ್ಶನೀಯ. ಕಡು ಬಡತನವಿದ್ದರೂ ಯಾವುದೇ ಶಾರ್ಟ್ ಕಟ್ ಬಳಸದೇ ರಾಜಮಾರ್ಗದಲ್ಲೇ ಶೈಕ್ಷಣಿಕ ಸಾಧನೆ ಮಾಡಿದ್ದು ಈ ದಕ್ಷ ಅಧಿಕಾರಿಯ ಹೆಗ್ಗಳಿಕೆ.
ಹೋಟೆಲ್ ಮಾಣಿಯಾಗಿದ್ದುಕೊಂಡೇ ಪ್ರಾಥಮಿಕ ಹಾಗೂ ಪ್ರೌಢ ವಿದ್ಯಾಭ್ಯಾಸ ಮುಗಿಸಿದ ರವಿ, ಬಳಿಕ ಅನೇಕ ಸಣ್ಣ ಪುಟ್ಟ ಅರೆಕಾಲಿಕ ಉದ್ಯೋಗಗಳನ್ನು ಮಾಡುತ್ತಾ ಕಾಲೇಜು ಕಲಿತರು. ಕರ್ನಾಟಕದ ಅತ್ಯಂತ ಹಿಂದುಳಿದ ಜಿಲ್ಲೆ ಅನ್ನುವ ಹಣೆಪಟ್ಟಿ ಹೊಂದಿರುವ ಗದಗದ ಅತ್ಯಂತ ಕುಗ್ರಾಮ ನೀಲಾಗುಡ್. ನೀಲಾಕುಡ್ ಗ್ರಾಮದ ಅವಕಾಶ ವಂಚಿತ ಸಮುದಾಯ ಪ್ರತಿಭೆ ರವಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬ್ಯಾಚುಲರ್ ಪದವಿ ಪಡೆದ ರವಿಯವರ ಕನಸು ಸಾಕಷ್ಟು ದೊಡ್ಡದಿತ್ತು. ಅವರು ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲೇಬೇಕು ಅನ್ನುವ ಮಹತ್ವಕಾಂಕ್ಷೆ ಹೊಂದಿದ್ದರು. ಇದಕ್ಕಾಗಿ ಹಗಲಿರುಳಿ ಅವರು ಪಟ್ಟ ಪರಿಶ್ರಮದ ಫಲವೇ ಅವರ ಮೈಮೇಲೆ ಇಂದು ರಾರಾಜಿಸುವ ನಕ್ಷತ್ರಗಳು ಹಾಗೂ ಪೊಲೀಸ್ ಲಾಂಛನಗಳು.
2008-09 ರಲ್ಲಿ ನಡೆದ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ 703ನೇ ಶ್ರೇಣಿಯಲ್ಲಿ ತೇರ್ಗಡೆ ಹೊಂದುವ ಮೂಲಕ ಪ್ರತಿಭೆಗೆ ಯಾವ ಅಡೆತಡೆಗಳೂ ಇಲ್ಲ ಅನ್ನುವುದನ್ನು ಸಾಬೀತು ಮಾಡಿ ತೋರಿಸಿದರು.
ಮುಲಗುಂಡದ ಸರಕಾರಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಪಾಸಾದ ರವಿ ಅದೇ ವೇಳೆ ಸ್ಥಳೀಯ ಎಪಿಎಂಸಿಯಲ್ಲಿ ಮೂಟೆ ತುಂಬಿಸುವ ಅರೆಕಾಲಿಕ ಉದ್ಯೋಗ ನಿರ್ವಹಿಸಿದರು. ತಮ್ಮ ತುಂಬು ಕಷ್ಟದ ದಿನಗಳಲ್ಲಿ ವಿದ್ಯಾಭ್ಯಾಸವನ್ನು ಎಂದಿಗೂ ಅವರು ಕಡೆಗಣಿಸಲಿಲ್ಲ. ಕೂಲಿ ಕೆಲಸ ಮಾಡುವ ಹುಡುಗ ಆ ವರ್ಷ ಎಸ್.ಎಸ್.ಎಲ್.ಸಿ ಬೋರ್ಡ್ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದರು.
ಬೇಸಿಗೆ ರಜೆಯ ದಿನಗಳಲ್ಲಿ ಉಳಿದ ಮಕ್ಕಳು ಆಟವಾಡುತ್ತಿದ್ದರೆ, ರವಿ ಮಾತ್ರ ತಂದೆ ದ್ಯಾಮಪ್ಪ ಹಾಗೂ ತಾಯಿ ರತ್ನವ್ವರ ಜತೆ ಹೊರ ರಾಜ್ಯ ಗೋವಾದಲ್ಲಿ, ಮಂಗಳೂರಿನ ಸಮುದ್ರ ತೀರದಲ್ಲಿ ಹಾಗೂ ಚಿಕ್ಕಮಗಳೂರಿನ ಕಾಫಿ ತೋಟದಲ್ಲಿ ದಿನಗೂಲಿಯಾಗಿ ಕೆಲಸ ಮಾಡುತ್ತಿದ್ದರು. ಅವರು ಹುಲಿಕೋಟೆಯಲ್ಲಿ ಪಿಯುಸಿ ಕಲಿಯುತ್ತಿದ್ದಾಗ ಸಿನಿಮಾ ಥಿಯೇಟರ್ ನಲ್ಲಿ ಕಸ ಗುಡಿಸುವ ಕೆಲಸ ಮಾಡಿದ್ದರು. ಆದರೂ ಪಿಯುಸಿಯಲ್ಲಿ ಅವರು ಗಳಿಸಿದ್ದು ಶೇ. 89ರಷ್ಟು ಅಂಕಗಳು.
ಜೀವನದಲ್ಲಿ ಮಹತ್ತರವಾದುದ್ದನ್ನು ಸಾಧಿಸಬೇಕೆನ್ನುವ ಕನಸಿಟ್ಟುಕೊಂಡಿದ್ದ ರವಿಗೆ ಹುಲಿಕೋಟೆಯಲ್ಲಿ ಉದ್ಯಮಿ ಸುಭಾಷ್ ಅನ್ನುವವರು ಆರ್ಥಿಕ ಸಹಾಯ ನೀಡಿದರು. ಅವರಿಗೆ ಲೋಕಸೇವಾ ಆಯೋಗದ ಪರೀಕ್ಷೆಗೆ ತರಭೇತಿ ಪಡೆಯಲು ಹೈದರಾಬಾದ್ ಗೆ ಕಳುಹಿಸಿದ್ದು ಇವರೇ. ಇದರೊಂದಿಗೆ ಅವರಿಗೆ ನೆರವು ನೀಡಿದವರಲ್ಲಿ ಧಾರವಾಡದ ಎಸಿಪಿಯಾಗಿದ್ದ ಎಂ.ಜಿ.ಬಿಳಗಿ ಇನ್ನೊಬ್ಬರು. ಅಷ್ಟೆಲ್ಲಾ ಕಷ್ಟ, ಸತತ ಪರಿಶ್ರಮ, ಬದ್ಧತೆ ಹಾಗೂ ಏಕಾಗ್ರ ಚಿಂತನೆಯ ಫಲವೇ ಇಂದಿನ ಐಪಿಎಸ್ ಅಧಿಕಾರಿ ರವಿ ಚೆನ್ನಣ್ಣನವರ್. ನಿಜಾರ್ಥದಲ್ಲಿ ರವಿ ಚೆನ್ನಣ್ಣನವರ್ ಬೆಂಕಿಯಲ್ಲಿ ಬೆಂದು, ಕುಲುಮೆಯಲ್ಲಿ ಬಡಿಸಿಕೊಂಡು ಹರಿತಗೊಂಡು ಹೊಳಪಾದ ಆಯುಧ. ಅಂದ ಹಾಗೆ ಮದುವೆಯಾಗಿ ಮಗುವೊಂದರ ತಂದೆಯಾಗಿರುವ ರವಿಯವರಲ್ಲಿ ಅದೆಷ್ಟು ಖಡಕ್ ನೇರವಂತಿಕೆಯಿದೆಯೋ ಅಷ್ಟೇ ಹೃದಯವಂತಿಕೆ ಹಾಗೂ ಜೀವನಪ್ರೀತಿಯೂ ಇದೆ. ಇವರು ನಮ್ಮ ನಿಮ್ಮ ಮಧ್ಯೆಯೇ ಇರುವ ಸವ್ಯಸಾಚಿಗಳು. ಯುವರ್ ಸ್ಟೋರಿ ವತಿಯಿಂದ ರವಿಯವರ ಅಪರಿಮಿತ ಸಾಧನೆಗೆ ಹ್ಯಾಟ್ಸ್ ಆಫ್.
ಇದನ್ನು ಓದಿ
ರಸ್ತೆ ಬದಿಯ ಆಹಾರ ಮಾರಾಟಗಾರರಿಂದ ಉದ್ಯಮಶೀಲತೆಯ ಪಾಠಗಳು..!