Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಪಾಪ್‍ಕ್ವಿಲ್ ಆಭರಣಗಳ ತಯಾರಿಕೆಯ ಸಿದ್ಧಿ ಗಳಿಸಿಕೊಂಡ ಬೆಂಗಳೂರಿನ ಸುರುಚಿ ಅಗರ್‍ವಾಲ್ ಅನ್ನುವ ಸೃಜನಶೀಲ ಕಲಾವಿದೆ

ವಿಶ್ವಾಸ್​​ ಭಾರಾಧ್ವಾಜ್​

ಪಾಪ್‍ಕ್ವಿಲ್ ಆಭರಣಗಳ ತಯಾರಿಕೆಯ ಸಿದ್ಧಿ ಗಳಿಸಿಕೊಂಡ ಬೆಂಗಳೂರಿನ ಸುರುಚಿ ಅಗರ್‍ವಾಲ್ ಅನ್ನುವ ಸೃಜನಶೀಲ ಕಲಾವಿದೆ

Sunday March 06, 2016 , 3 min Read

ಕಲೆ ಅನ್ನುವುದು ಎಲ್ಲರಿಗೂ ಸಿದ್ಧಿಸುವಂತದ್ದಲ್ಲ. ಕಲಾ ಸರಸ್ವತಿಯನ್ನು ಓಲೈಸಿಕೊಳ್ಳಲು ಕೇವಲ ಆಸಕ್ತಿ ಮಾತ್ರವಿದ್ದರೆ ಸಾಲದು. ಮನಸಿನಲ್ಲಿ ಕಲೆಯ ಕಲಿಕೆಯ ಶ್ರದ್ಧೆ ಹಾಗೂ ಕುಸುರಿತನ ಸೃಜನಶೀಲ ಯೋಚನೆಯ ಜೊತೆ ಅಪಾರ ಏಕಾಗ್ರತೆ ಅತಿ ಮುಖ್ಯ. ಕಲೆಯ ಯಾವುದೇ ಪ್ರಕಾರಗಳನ್ನು ಸಿದ್ಧಿಸಿಕೊಳ್ಳಲು ಇದೇ ಮಾನದಂಡ. ಅಂತಹ ಅಪರೂಪದ ಕಲೆಯ ಆರಾಧಕಿಯ ಕಥೆಯಿದು. ಇವರ ಕೈನಲ್ಲಿ ಸೃಷ್ಠಿಯಾಗುವ ಅಪೂರ್ವ ಕರಕುಶಲ ವಸ್ತುಗಳಿಗೆ ಅದ್ಭುತವಾದ ಸೆಳೆಯುವ ಶಕ್ತಿ ಹಾಗೂ ಅಷ್ಟೇ ದೊಡ್ಡ ಡಿಮ್ಯಾಂಡ್ ಇದೆ. ಅನುಪಯುಕ್ತ ತ್ಯಾಜ್ಯ ವಸ್ತುಗಳಿಂದ ಇವರು ಸಿದ್ಧಪಡಿಸುವ ಆಕರ್ಷಕ ವಸ್ತುಗಳ ನಾವಿನ್ಯತೆಗೆ ಮಾರು ಹೋಗದ ಜನರೇ ಇಲ್ಲ. ಈಗೀಗ ಜನಪ್ರಿಯವಾಗ್ತಿರುವ ಪಾಪ್‍ಕ್ವಿಲ್ ಆರ್ಟ್ ಎಂಡ್ ಕ್ರಾಫ್ಟ್ ಅನ್ನುವ ವಿನೂತನ ಕಲೆಯನ್ನು ಆರ್ಥಿಕವಾಗಿ ಲಾಭದಾಯವಾಗಿಸಿಕೊಂಡಿರುವ ಈ ಮಹಿಳೆಯ ಹೆಸರು ಸುರುಚಿ ಸಂಜಯ್ ಅಗರ್‍ವಾಲ್. ಹೆಂಗಳೆಯರ ಮನಸೆಳೆಯುವ ಒಡವೆಗಳು ಹಾಗೂ ಶೋಕೇಸ್‍ನ ಅಲಂಕಾರಿಕ ವಸ್ತುಗಳ ಸೃಷ್ಠಿಕರ್ತೆ ಸುರುಚಿ ಅಗರ್‍ವಾಲ್.

image


ರಾಜಸ್ಥಾನ ಮೂಲದವರಾದ ಇವರಿಬ್ಬರು ಉದ್ಯಾನ ನಗರಿಯ ಎಚ್.ಎಸ್.ಆರ್ ಲೇಔಟ್‍ನಲ್ಲಿ ಸದ್ಯ ನೆಲೆಸಿದ್ದಾರೆ. ಕುಶಲ ಕಲೆಯನ್ನು ಪ್ರವೃತ್ತಿಯನ್ನಾಗಿಸಿಕೊಂಡಿರುವ ಸುರುಚಿ ಅನುಪಯುಕ್ತವೆಂದು ಬಿಸಾಡುವ ತ್ಯಾಜ್ಯ ವಸ್ತುಗಳಿಂದ ನಯನ ಮನೋಹರ ಕರಕುಶಲ ಸಾಮಗ್ರಿಗಳನ್ನ ಅತ್ಯಂತ ಆಕರ್ಷಕವಾಗಿ ಸಿದ್ದಪಡಿಸುತ್ತಾರೆ. ಕಲಾ ಪರಿಣತರಿಂದ ಕರಕುಶಲ ಕಲೆಗಳ ಬಗ್ಗೆ ಮನೆಯಲ್ಲಿಯೇ ತರಬೇತಿ ಪಡೆದ ಸುರುಚಿ ಬಳಿಕ ಕ್ವಿಲ್ಲಿಂಗ್ ಆಭರಣಗಳು, ಟೆರಾಕೋಟಾ ಆಭರಣಗಳು, ಚಿತ್ರಕಲೆ, ತ್ಯಾಜ್ಯ ವಸ್ತುಗಳಿಂದ ಕಲಾಕೃತಿಗಳ ತಯಾರಿಕೆ, ವಿಜ್ಞಾನಕ್ಕೆ ಸಂಬಂಧಿಸಿದ ಮಾದರಿಗಳನ್ನು ಸಿದ್ಧಪಡಿಸಲು ಆರಂಭಿಸಿದರು.

ಇದನ್ನು ಓದಿ: ನೆಮ್ಮದಿಯಿಂದ ನಿದ್ರಿಸಬೇಕಾದ್ರೆ ಮನೆಗೆ ತನ್ನಿ ಇನ್ವಿಸಿಬಲ್ ಬೆಡ್

ಮೊದಲು ಖಾಸಗಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇವರಿಗೆ ಮಗು ಜನಿಸಿದ ಸಂದರ್ಭದಲ್ಲಿ ಮನೆಯಲ್ಲಿ ಹೊತ್ತು ಕಳೆಯುವುದೇ ಕಷ್ಟವಾಗಿತ್ತು. ಆ 2 ವರ್ಷಗಳ ಕಾಲ ಸುಮ್ಮನೇ ಮನೆಯಲ್ಲಿ ಕಾಲಕಳೆಯುವ ಅನಿವಾರ್ಯತೆಯಲ್ಲಿ ಬೇಸರ ಕಳೆಯಲು ತಮಗಿಷ್ಟವಾದ ಕಲೆಯ ಕ್ಷೇತ್ರದ ಕಡೆಗೆ ಆಸಕ್ತಿ ವಹಿಸಿದರು. ಔಷಧ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸುರುಚಿ ಅವರು ಸದ್ಯ ಬೆಂಗಳೂರಿನ ಕಂಪೆನಿಯೊಂದರಲ್ಲಿ ಸಹಾಯಕ ಸಂಶೋಧಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸುರುಚಿ ಅಗರ್‍ವಾಲ್‍ರ ಪತಿ ಸಂಜಯ್ ಅಗರ್‍ವಾಲ್ ಸುಪ್ರಸಿದ್ಧ ಬಯೋಕಾನ್ ಸಂಸ್ಥೆಯಲ್ಲಿ ಉಪವ್ಯವಸ್ಥಾಪಕರಾಗಿ ಜವಬ್ದಾರಿ ಹೊತ್ತಿದ್ದಾರೆ. ಆದರೂ ಪತ್ನಿಯಷ್ಟೇ ಕಲೆಯ ಬಗ್ಗೆ ಆಸಕ್ತಿ ಹೊಂದಿರುವ ಸಂಜಯ್ ಪತ್ನಿಯ ಕಲಾಸೇವೆಗೆ ತಾವೂ ಕೈಜೋಡಿಸುತ್ತಾರೆ.

image


ಅದರಲ್ಲೂ ಮುಖ್ಯವಾಗಿ ಕ್ವಿಲ್ಲಿಂಗ್ ಆಭರಣಗಳ ನಿಮಾಣ ಕಲೆ ಸುರುಚಿಯವರಿಗೆ ಕರತಲಾಮಲಕವೆನಿಸಿದೆ. ಇದರ ಜೊತೆ ಟೆರಾಕೋಟ ಆಭರಣಗಳು, ಗೃಹಾಲಾಂಕರ ಸಾಮಾಗ್ರಿಗಳು ಮುಂತಾದ ನವೀನ ಕಲಾತ್ಮಕ ಆಭರಣಗಳು ಸುರುಚಿಯವರ ಕೈನಲ್ಲಿ ಅತ್ಯದ್ಭುತವಾಗಿ ಮೂಡಿಬರುತ್ತವೆ. ಸುರುಚಿ ಕೇವಲ ಹವ್ಯಾಸಕ್ಕೆಂದು ಕರಕುಶಲ ವಸ್ತುಗಳನ್ನು ಹಾಗೂ ನವೀನ ಆಭರಣಗಳನ್ನು ತಯಾರಿಸಲು ಶುರುಮಾಡಿದರು. ಆದರೆ ಅವರ ಹವ್ಯಾಸವೇ ಅವರಿಗೆ ದೊಡ್ಡ ಆರ್ಥಿಕ ಅವಕಾಶಗಳನ್ನು ತಂದೊಡ್ಡುತ್ತಿದೆ. ಇದೀಗ ಸುರುಚಿ ತಯಾರಿಸಿದ ಲಾಲಿತ್ಯಮಯ ಕಲಾತ್ಮಕ ಆಭರಣಗಳಿಗೆ ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲೂ ಅತಿ ಹೆಚ್ಚು ಡಿಮ್ಯಾಂಡ್ ಪಡೆದುಕೊಳ್ಳುತ್ತಿದೆ. ಈಗೀಗ ಇವರ ಉತ್ಪನ್ನಗಳಿಗೆ ಭಾರೀ ಬೇಡಿಕೆ ಹೆಚ್ಚಿರೋದರಿಂದ ವಾರದ ಎರಡು ದಿನ ಸುರುಚಿ ಮತ್ತು ಅವರ ಪತಿ ಕರ ಕುಶಲ ಆಭರಣ ತಯಾರಿಕೆಗಾಗಿಯೇ ತಮ್ಮ ಅತ್ಯಮೂಲ್ಯ ಸಮಯ ಮೀಸಲಿಡುತ್ತಾರೆ.

ಕೇವಲ ಹೊತ್ತು ಕಳೆಯಲು ಹವ್ಯಾಸಕ್ಕೆ ಎಂಬಂತೆ ಸುರುಚಿ ಶುರುಮಾಡಿದ ಕಲಾಯಾನ ಇಂದು ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿದೆ. ಸುರುಚಿ ಅಗರ್‍ವಾಲ್‍ರವರ ಸ್ನೇಹಿತರು, ಕುಟುಂಬಸ್ಥರು, ಸಂಬಂಧಿಗಳು, ವಿಶ್ವಾಸಿಕರು, ಪ್ರೀತಿಪಾತ್ರರ ಪ್ರೋತ್ಸಾಹ ಹಾಗೂ ಶ್ಲಾಘನೆಗಳೇ ಕರಕುಶಲ ವಸ್ತುಗಳ ವಿನ್ಯಾಸ ಹಾಗೂ ತಯಾರಿಕೆಗೆ ಪ್ರೇರಣೆಯಾಯಿತಂತೆ. ಸುರುಚಿಯವರು ಸ್ವತಃ ಹೇಳುವಂತೆ, ತಮ್ಮ ಕಾಲೇಜು ದಿನಗಳಲ್ಲಿಯೇ ಮೆಹಂದಿ, ಕಸೂತಿ, ಚಿತ್ರಕಲೆ ಮುಂತಾದ ಕಲೆಯ ವಿಷಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರಂತೆ. ಆದರೆ ಅವರಿಗೆ ವಿಶಿಷ್ಟ ಕಲಾಕೃತಿಗಳ ರಚನೆಯ ಕುರಿತಾದ ಹೆಚ್ಚು ಮಾಹಿತಿ ಹಾಗೂ ವ್ಯಾಪ್ತಿ ಸಿಕ್ಕಿದ್ದು ಕಾಲೇಜು ಕಲಿತು ಮದುವೆಯಾದ ನಂತರವಷ್ಟೆ.. ಪತಿ ಸಂಜಯ್ ಅಗರ್‍ವಾಲ್‍ರೊಂದಿಗೆ ಕೆಲಸದ ನಿಮಿತ್ತ ಹೈದರಾಬಾದ್‍ನಲ್ಲಿದ್ದಾಗ ವಿವಿಧ ಭಗೆಯ ಕರಕುಶಲ ಮಳಿಗೆಗಳಿಗೆ ಭೇಟಿ ನೀಡಿ ಇವುಗಳ ನಿರ್ಮಾಣ ಹಾಗೂ ಕುಸುರಿತನದ ಬಗ್ಗೆ ಮಾಹಿತಿ ಪಡೆದರಂತೆ. ಪತಿ ಸಂಜಯ್‍ರೊಂದಿಗೆ ಬೆಂಗಳೂರಿಗೆ ಬಂದ ನಂತರ ವಿಶಿಷ್ಟ ಕಲಾಕೃತಿಗಳ ತಯಾರಿಕೆಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ದೊರೆಯಿತು. ವಿವಿಧ ಸಂಘ ಸಂಸ್ಥೆಗಳು ಮಕ್ಕಳಿಗಾಗಿ ಆಯೋಜಿಸುವ ಹಲವು ರೀತಿಯ ಕಲಾ ಶಿಬಿರಗಳಲ್ಲಿ ನಿರೂಪಕಿಯಾಗಿ, ಶಿಕ್ಷಕಿಯಾಗಿ ಪಾಲ್ಗೊಳ್ಳುವ ಅವಕಾಶ ಅವರಿಗೆ ಸಿಕ್ಕಿತು.

image


ಸುರುಚಿಯವರು ವಿಜ್ಞಾನಕ್ಕೆ ಸಂಬಂಧಿಸಿದ ಹಲವು ವಿಭಿನ್ನ ಮಾದರಿಗಳನ್ನ ತಯಾರಿಸಿ ಭೇಷ್ ಎನಿಸಿಕೊಂಡಿದ್ದಾರೆ. ವಿಜ್ಞಾನಕ್ಕೆ ಸಂಬಂಧಿಸಿದ ಮಾದರಿಗಳನ್ನು ತಯಾರಿಸುವ ಬಗ್ಗೆ ಅನೇಕರಿಗೆ ತರಬೇತಿ ನೀಡಿದ್ದಾರೆ. ವಿವಿಧ ಸಂಸ್ಥೆಗಳಿಂದಲೂ ವಿಜ್ಞಾನ ಮಾದರಿಗಳ ತಯಾರಿಕೆಗೆ ಹೆಚ್ಚು ಬೇಡಿಕೆ ಇದೆ ಅಂತಾರೆ ಸುರುಚಿ. ಸುರುಚಿಯವರ ಕಲಾಕೃತಿಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಪ್ರಚಾರ ಗಿಟ್ಟಿಸಿಕೊಂಡು ಅವರದ್ದೇ ಪಾಪ್‍ಕ್ವಿಲ್ ವೆಬ್‍ಸೈಟ್‍ನಲ್ಲಿ ಮಾರಾಟಕ್ಕೆ ಲಭ್ಯವಿದೆ. ಸುರುಚಿ ತಮ್ಮಲ್ಲಿ ಅಡಗಿರೋ ಈ ಅನನ್ಯ ಕಲೆಯನ್ನು ಆಸಕ್ತ ಮಕ್ಕಳಿಗೆ ಹಾಗೂ ಕಲಿಯಲು ಇಚ್ಛೆಪಡುವ ಮಹಿಳೆಯರಿಗೆ ಧಾರೆಯೆರೆಯುತ್ತಿದ್ದಾರೆ. ಅನುಪಯುಕ್ತವಾದ ಕಸದಿಂದ ಕರಕುಶಲ ವಸ್ತುಗಳನ್ನು ಸಿದ್ಧಪಡಿಸುವ ಅನನ್ಯ ಕಲಾವಿದೆ ಸುರುಚಿಯವರ ಪ್ರಯತ್ನ ಹೀಗೆ ಮುಂದುವರೆಯಲಿ ಅನ್ನೋದು ಯುವರ್ ಸ್ಟೋರಿ ಆಶಯ.

ಇದನ್ನು ಓದಿ:

1. ವಿಶ್ವಾದ್ಯಂತ ಇರುವ ಕನ್ನಡಿಗರಿಗೆ ಇಂಟರ್​ನೆಟ್​ನಲ್ಲಿ ರೇಡಿಯೋ ಕೇಳಿಸಲಿದೆ ನಮ್ ರೇಡಿಯೋ ತಂಡ; ಯಾಕಂದ್ರೆ ಕನ್ನಡ ಕೇಳೋ ಮಜಾನೇ ಬೇರೆ!!

2. ಕಸ ದಿಂದ ರಸ, ಮನೆಯಲ್ಲೇ ಬೆಳೆಯಿರಿ ತಾಜಾ ತರಕಾರಿ..!

3. ಬದುಕನ್ನೇ ಸಿಹಿ ಮಾಡಿದ ಕೇಕ್ ಬ್ಯುಸಿನೆಸ್...