ಟೆರೆಸ್​ ಮೇಲೆ ಬೆಳೆಯುತ್ತೆ ತರಕಾರಿ-ತಪ್ಪಿ ಹೋಯಿತು ಕಸದ ಕಿರಿಕಿರಿ..!

ಟೀಮ್​​ ವೈ.ಎಸ್​. ಕನ್ನಡ

11th May 2017
  • +0
Share on
close
  • +0
Share on
close
Share on
close

ಸಾಮಾನ್ಯವಾಗಿ ತರಕಾರಿಯನ್ನು ಜಮೀನಿನಲ್ಲಿ ಬೆಳೆಯುವುದು ಕಂಡಿದ್ದೇವೆ. ಇನ್ನು ಕೆಲವು ಮನೆಯ ಟೆರೆಸ್​ನಲ್ಲಿ, ಜೊತೆಗೆ ಸ್ಥಳಾವಕಾಶ ಸಿಕ್ಕಿದ ಕಡೆಗಳಲ್ಲಿ ತರಕಾರಿಯನ್ನು ಬೆಳೆಯುವ ಪ್ರಯತ್ನ ಮಾಡಬಹುದು. ಪರಿಸರದಲ್ಲಿ ಹಸಿರು ಇರಬೇಕು ಅನ್ನುವ ಉದ್ದೇಶ ಇಟ್ಟುಕೊಂಡವರು ಮನೆಯ ಮುಂದೆ ಮರ ಬೆಳೆದು ಖುಷಿ ಪಡಬಹುದು. ಆದ್ರೆ ಅದಕ್ಕೆ ನೀರು, ಗೊಬ್ಬರ ಬೇಕೇ ಬೇಕು. ಉಪಯೋಗಕ್ಕೆ ಬಾರದ ಮರಕ್ಕೆ ಗೊಬ್ಬರ ಯಾರು ಹಾಕ್ತಾರೆ ಹೇಳಿ..? ಆದ್ರೆ ಬೆಂಗಳೂರಿನ ನಿವಾಸಿಯೊಬ್ಬರು ನಿಮ್ಮೆಲ್ಲಾ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿದ್ದಾರೆ. ಮನೆಯಲ್ಲೇ ತರಕಾರಿ ಬೆಳೆದಿದ್ದಾರೆ. ಅಷ್ಟೇ ಅಲ್ಲ ಆ ತರಕಾರಿಗಳಿಗೆ ಮನೆಯ ಗೊಬ್ಬರವನ್ನ ಉಪಯೋಗಿಸಿಕೊಂಡಿದ್ದಾರೆ.  

image


ಬದಲಾವಣೆ ಮತ್ತೊಬ್ಬರಿಂದ ಆಗಿ ಬಿಡಲಿ ಅನ್ನುವ ಮನಸ್ಸಿನ ಬದಲು, ನಾವೇ ಬದಲಾವಣೆಗೆ ನಾಂದಿ ಹಾಡೋಣ ಅನ್ನುವವರ ಸಂಖ್ಯೆ ತುಂಬಾ ಕಡಿಮೆ. ಆದ್ರೆ ಜನನಗರ ನಿವಾಸಿ ಆನಂದ್​, ಬದಲಾವಣೆಗೆ ನಾಂದಿ ಹಾಡಿದ್ದಾರೆ. ಅಷ್ಟೇ ಅಲ್ಲ ತಾನು ಅಂದುಕೊಂಡಿದ್ದನ್ನು ಮಾಡಿ ತೋರಿಸಿದ್ದಾರೆ. ತನ್ನ ಯೋಚನೆ ಮತ್ತು ಯೋಜನೆಗಳ ಮೂಲಕ ಎಲ್ಲರಿಗೂ ಮಾದರಿ ಆಗಿದ್ದಾರೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಸ ಸುದ್ದಿ ಮಾಡುವಷ್ಟು ಬೇರೆ ಯಾವುದೂ ಸುದ್ದಿ ಮಾಡುವುದಿಲ್ಲ. ಸರಿಯಾದ ರೀತಿಯಲ್ಲಿ ಕಸ ವಿಲೇವಾರಿಯಾಗದೇ ಬೆಂಗಳೂರು ಜಾಗತಿಕ ಮಟ್ಟದಲ್ಲೂ ಹೆಸರು ಮಾಡಿತು. ಅದಕ್ಕಾಗಿ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ವಿವಿಧ ರೀತಿಯ ಕಾನೂನುಗಳನ್ನು ಜಾರಿಗೆ ತರಲಾಯಿತು ಆದರೂ ನಗರದ ಬೀದಿ ಬೀದಿಗಳಲ್ಲಿ ಕಸ ತುಂಬಿಕೊಂಡು ಗಾರ್ಡನ್ ಸಿಟಿ ಬೆಂಗಳೂರನ್ನು ಗಾರ್ಬೇಜ್ ಸಿಟಿಯನ್ನಾಗಿ ಮಾಡಿದೆ ಈ ಕಸ.

ಇದನ್ನು ಓದಿ: ರಾಗಿ ಮುದ್ದೆಯಿಂದ ಬಿಗ್​ಬಾಸ್ಕೆಟ್ ತನಕ- ಗ್ರಾಹಕ, ರೈತರಿಗೆ ಲಾಭದ ಮಾರ್ಗ

ಆದರೆ ಬೆಂಗಳೂರಿನ ನಿವಾಸಿಯೊಬ್ಬರು ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನೆಲ್ಲಾ ಸಂಸ್ಕರಿಸಿ ಇದರಿಂದ ಉತ್ಪತ್ತಿಯಾಗುವ ಜೈವಿಕ ಅನಿಲವನ್ನು ಅಡುಗೆಗೆ ಬಳಸುತ್ತಿದ್ದಾರೆ. ಅಷ್ಟೆ ಅಲ್ಲದೇ ಸಂಸ್ಕರಣೆ ಮೂಲಕ ಉಳಿಯುವ ದ್ರಾವಣ ಉಪಯುಕ್ತ ಗೊಬ್ಬರವಾಗಿರುವ ಕಾರಣ ತಮ್ಮ ಮನೆ ಮೇಲಿರುವ ಟೆರೆಸ್​ನಲ್ಲಿ ಅದರ ಸಹಾಯದಿಂದ ಕೆಲ ತರಕಾರಿಗಳನ್ನು ಬೆಳೆಯುತ್ತಿದ್ದಾರೆ ಎಂದರೆ ನೀವು ನಂಬಲೇಬೇಕು .

ಹೌದು ಬೆಂಗಳೂರಿನ ಗಿರಿನಗರ 2ನೇ ಹಂತದಲ್ಲಿರುವ ಕಂಟ್ರಾಕ್ಟರ್ ಕೆಲಸ ಮಾಡುತ್ತಿರುವ ಸಿ. ಎನ್. ಆನಂದ್ ಎಂಬುವವರ ಮನೆಯಲ್ಲಿ ಈ ಪ್ರಯೋಗ ಚಾಲನೆಯಲ್ಲಿದ್ದು ಅದು ಯಶಸ್ವಿಯೂ ಆಗಿದೆ. ಅವರ ಮನೆಯಲ್ಲಿ ಉತ್ಪತ್ತಿಯಾಗುವ ಎರಡು ಕೆ ಜಿ ಕಸವನ್ನು ರಸ ಮಾಡಿ ಅದರಿಂದ ತರಕಾರಿ ಬೆಳೆಯುತ್ತಿದ್ದಾರೆ.

image


ಆನಂದ್ ಅವರು ವಾಸವಾಗಿರುವ ಎರಡು ಮಹಡಿ ಕಟ್ಟಡದಲ್ಲಿ ಹತ್ತಾರು ಮಂದಿ ನೆಲೆಸಿದ್ದಾರೆ. ಈ ಹಿಂದೆ ನಗರದಲ್ಲಿ ತಾಂಡವವಾಡಿದ ತ್ಯಾಜ್ಯ ಸಮಸ್ಯೆ, ಮಂಡೂರು ಘಟಕದಲ್ಲಿ ಅವೈಜ್ಞಾನಿಕವಾಗಿ ಕಸ ಸುರಿದಿರುವುದರಿಂದ ಸ್ಥಳೀಯರು ಅನುಭವಿಸುತ್ತಿರುವ ತೊಂದರೆ, ಕಸದ ವಿಚಾರದಲ್ಲಿ ರಾಷ್ಟ್ರೀಯ ಮಟ್ಟದ ಮಾಧ್ಯಮಗಳಲ್ಲಿ ಬೆಂಗಳೂರಿಗೆ ಬಂದ ಕೆಟ್ಟ ಹೆಸರಿನ ಬಗ್ಗೆ ಅರಿತ ಆನಂದ್ ಮತ್ತವರ ಕುಟುಂಬ ಆರಂಭಿಸಿದ ಪ್ರಯತ್ನದ ಫಲವಾಗಿ ಈಗ, ಅವರ ಗೃಹದಲ್ಲಿ ಉತ್ಪತ್ತಿಯಾಗುವ ಹಸಿ ಕಸವನ್ನೆಲ್ಲಾ ಮನೆಯಲ್ಲೇ ವಿಲೇವಾರಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿ ದಿನ ಇವರ ಮನೆಯಿಂದ ಹಸಿ ಕಸ ಒಣ ಕಸವನ್ನು ಪ್ರತ್ಯೇಕಿಸಿ ನೀಡುತ್ತಿದ್ದರು. ಇದೀಗ ವಾರದಲ್ಲಿ ಒಮ್ಮೆ ಪೌರಕಾರ್ಮಿಕರು ಒಣ ಕಸವನ್ನು ಪಡೆದು ಹೊಗುತ್ತಿದ್ದಾರೆ. 

ಜೈವಿಕ ಅನಿಲ ಬಳಕೆ

ಮನೆಯಲ್ಲಿ ನಿತ್ಯ ಸುಮಾರು 2 ಕೆ.ಜಿ.ಯಷ್ಟು ಹಸಿ ಕಸ ಉತ್ಪತ್ತಿಯಾಗುತ್ತಿತ್ತು. ಹಸಿ ಕಸವನ್ನು ಸಂಸ್ಕರಿಸಿ ಅದರಿಂದ ಉತ್ಪತ್ತಿಯಾಗುವ ಜೈವಿಕ ಅನಿಲವನ್ನು ಅಡುಗೆಗೆ ಬಳಸಲು ನಿರ್ಧರಿಸಿದರು. ಎರಡು ಕೆ.ಜಿ ಸಾಮರ್ಥ್ಯದ ಎರಡು ಸಂಸ್ಕರಣಾ ಸಾಧನಗಳು ಹಾಗೂ ಎರಡು ಸ್ಟೌವ್​ ಅಳವಡಿಸಿಕೊಂಡರು. ಇದೀಗ ನಿತ್ಯ ಎರಡು ಕೆ.ಜಿ ಹಸಿ ಕಸವನ್ನು ಈ ಸಾಧನದೊಳಗೆ ಹಾಕಿದರೆ ನಿತ್ಯ ಒಂದರಿಂದ ಒಂದೂವರೆ ಗಂಟೆ ಕಾಲ ಜೈವಿಕ ಅನಿಲವನ್ನು ಅಡುಗೆ ಕಾರ್ಯಕ್ಕೆ ಬಳಸಬಹುದಾಗಿದೆ.

ತರಕಾರಿ ಬೆಳೆ

ಹಸಿ ಕಸ ಸಂಸ್ಕರಣೆ ಬಳಿಕ ಉಳಿಯುವ ದ್ರಾವಣ ಪ್ರತ್ಯೇಕವಾಗಿ ಡಬ್ಬದಲ್ಲಿ ಸಂಗ್ರಹವಾಗುತ್ತದೆ. ಇದು ಉಪಯುಕ್ತ ಗೊಬ್ಬರವಾಗಿರುವುದರಿಂದ ಟೆರೆಸ್​ನಲ್ಲಿ ಕೈತೋಟ ಸಿದ್ಧಪಡಿಸಿ ತರಕಾರಿ ಗಿಡಗಳಿಗೆ ಬಳಸಲಾರಂಭಿಸಿ ಅದರಿಂದ ನಂತರ ಬೆಂಡೇಕಾಯಿ, ಕುಂಬಳಕಾಯಿ, ಗೋರಿ–ಕಾಯಿ, ಚಪ್ಪರದ ಅವರೆಕಾಯಿ, ಹಾಗಲಕಾಯಿ, ಬದನೆಕಾಯಿ ಇತರೆ ತರಕಾರಿ ಬೆಳೆದು ಬಳಸುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಮನೆಗೆ ಟೊಮೆಟೊ, ಹಸಿ ಮೆಣಸಿನ ಕಾಯಿಯನ್ನು ಖರೀದಿಸದೆ ತಾರಸಿಯಲ್ಲೇ ಬೆಳೆದು ಬಳಸುತ್ತಿದ್ದಾರೆ. ಹೆಚ್ಚಾದಾಗ ಅಕ್ಕಪಕ್ಕದವರಿಗೂ ನೀಡಿದ್ದಾರೆ.

ವೆಚ್ಚ 24,000 ರೂಪಾಯಿ

ಜೈವಿಕ ಅನಿಲ ಉತ್ಪಾದನಾ ಸಾಧನ, ಕೊಳವೆ ಅಳವಡಿಕೆ, ಸ್ಟೌ ವ್​ ಎ​ಲ್ಲವೂ ಸೇರಿ 24 ಸಾವಿರ ರೂಪಾಯಿ ವೆಚ್ಚವಾಗಿದೆ. ಆದರೆ ಈ ಹಿಂದೆ ತಿಂಗಳಿಗೆ ಖಾಲಿಯಾಗುತ್ತಿದ್ದ ಅಡುಗೆ ಅನಿಲ ಸಿಲಿಂಡರ್ ಒಂದೂವರೆ ತಿಂಗಳವರೆಗೆ ಬಳಕೆಯಾಗುತ್ತಿದೆ. ಹಾಗಾಗಿ ಪ್ರತಿ ತಿಂಗಳು ಉಳಿತಾಯದ ಪ್ರಯೋಜನ ಪಡೆಯುತ್ತಿದ್ದಾರೆ.

ಮನೆ ಮಂದಿಯಿಂದಲೂ ಸಾಥ್

ಮನೆಯಲ್ಲಿ ಉತ್ಪತ್ತಿಯಾಗುವ ಅಷ್ಟೂ ಕಸವನ್ನು ರಸವನ್ನಾಗಿಸುವಲ್ಲಿ ಆನಂದ್ ಮಾತ್ರವಲ್ಲದೆ ಅವರ ಮನೆಯ ಸದಸ್ಯರೆಲ್ಲಾ ತೊಡಗಿಸಿಕೊಂಡಿದ್ದಾರೆ. ತಂದೆ ನರಸಿಂಹಮೂರ್ತಿ ಅವರು ಮೊಮ್ಮಕ್ಕಳೊಂದಿಗೆ ಟೆರೆಸ್​ನಲ್ಲಿ ಗಿಡಗಳನ್ನು ಪೋಷಿಸುವುದರಲ್ಲೇ ಸಂತಸಪಡುತ್ತಿದ್ದಾರೆ. ಗುರುರಾಜ್, ಮನೋರಮಾ ಮತ್ತಿತರರು ಸಹಕಾರ ನೀಡುತ್ತಿದ್ದಾರೆ. ಈವರೆಗೆ 2000ಕ್ಕೂ ಹೆಚ್ಚು ತುಳಸಿ ಸಸಿಗಳನ್ನು ಸಾರ್ವಜನಿಕರಿಗೆ ಹಂಚಿದ್ದಾರೆ. ಈ ಪ್ರಯತ್ನ ಕಂಡು ಆಕರ್ಷಿತರಾದವರು ಶಾಲಾ ಮಕ್ಕಳನ್ನು ಕರೆತಂದು ಕಸ ಸಂಸ್ಕರಣೆ ಬಗ್ಗೆ ಅರಿವು ಮೂಡಿಸುವ ಕಾರ್ಯವೂ ನಡೆಯುತ್ತಿದೆ.

ಇದನ್ನು ಓದಿ:

1. ಸಾಧನೆಯ ಹಿಂದಿದೆ ಬೆಟ್ಟದಂತಹ ಪರಿಶ್ರಮ- ಸಾಲ್ಸಾದಲ್ಲಿ ಗಿನ್ನೆಸ್​ ದಾಖಲೆ ಬರೆದ ಸೂರ್ಯಕಾಂತ

2. ಆಹಾರ ಪೋಲಾಗುವುದನ್ನು ತಡೆಯುವ ಪ್ಲಾನ್​- ಹಸಿದವರ ಹೊಟ್ಟೆ ತುಂಬಿಸ್ತಾರೆ ಶಿವಕುಮಾರ್​​

3. ಅಮ್ಮನ ಪ್ರೀತಿಯನ್ನು ಸಾರುವ ಲಂಚ್ ಬಾಕ್ಸ್- "ವಾಯಾ ಬಾಕ್ಸ್"​ನಲ್ಲಿದೆ ವಿಶೇಷ ಗಮ್ಮತ್ತು 

  • +0
Share on
close
  • +0
Share on
close
Share on
close
Report an issue
Authors

Related Tags

ಸೈನ್ ಅಪ್ ನಮ್ಮ ದೈನಂದಿನ ಸುದ್ದಿಪತ್ರಕ್ಕಾಗಿ

Our Partner Events

Hustle across India