85ರ ಇಳಿವಯಸ್ಸಿ‌ನ ಅಜ್ಜಿ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ‘ಕಲಿಯುವದಕ್ಕೆ ವಯಸ್ಸಿನ ಹಂಗಿಲ್ಲ’ ಎಂದು ಸಾಧಿಸಿ ತೋರಿಸಿದ್ದಾರೆ

ಕೆಂಬಿ ಎಂಬ ಅಜ್ಜಿಯ ಜೊತೆಗೆ, ಕೇರಳದ ವಯನಾಡಿನ ಬುಡಕಟ್ಟು ವಸಾಹತುಗಳಲ್ಲಿನ ಸುಮಾರು 3,000 ಇತರೆ ಅಭ್ಯರ್ಥಿಗಳು ಕೇರಳ ರಾಜ್ಯ ಸರ್ಕಾರ ನಡೆಸಿದ ಸಾಕ್ಷರತಾ ಪರೀಕ್ಷೆಗಳಲ್ಲಿ ತೇರ್ಗಡೆಗೊಂಡಿದ್ದಾರೆ.

85ರ ಇಳಿವಯಸ್ಸಿ‌ನ ಅಜ್ಜಿ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ‘ಕಲಿಯುವದಕ್ಕೆ ವಯಸ್ಸಿನ ಹಂಗಿಲ್ಲ’ ಎಂದು ಸಾಧಿಸಿ ತೋರಿಸಿದ್ದಾರೆ

Friday September 27, 2019,

2 min Read

ಕೈಗಾರಿಕೋದ್ಯಮಿ ಮತ್ತು ಫೋರ್ಡ್ ಮೋಟಾರ್ ಕಂಪನಿಯ ಸ್ಥಾಪಕರಾದ ಹೆನ್ರಿ ಫೋರ್ಡ್ ಒಂದು ಕಡೆ ಹೀಗೆ ಬರೆದಿದ್ದಾರೆ “ಕಲಿಕೆಯನ್ನು ನಿಲ್ಲಿಸುವ ಯಾರೇ ಆದರೂ ವೃದ್ಧರೇ ಸರಿ, ಇಪ್ಪತ್ತು ಅಥವಾ ಎಂಭತ್ತರ ವಯಸ್ಸಿನಲ್ಲೂ ಕಲಿಯುವವರು ಸದಾ ಚಿರತರುಣರು. ”


ಈ ಮೇಲಿನ ಹೇಳಿಕೆ, ಕೇರಳದ ವಯನಾಡಿನ 85 ವರ್ಷದ ಅಜ್ಜಿ ಕೆಂಬಿ ಯವರಿಗೆ ಸರಿಯಾಗಿ ಹೊಂದಿಕೊಳ್ಳುತ್ತದೆ, ಅವರು ಇತ್ತೀಚೆಗೆ ಕೇರಳ ರಾಜ್ಯ ಸಾಕ್ಷರತಾ ಮಿಷನ್ (ಕೆ.ಎಸ್.ಎಲ್.ಎಂ) ನಡೆಸುವ ಸಾಕ್ಷರತಾ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದಾರೆ.


ಇತರೆ ಬುಡಕಟ್ಟು ಅಭ್ಯರ್ಥಿಗಳ ಜೊತೆಗೆ ಪರೀಕ್ಷೆಗೆ ಹಾಜರಾಗಿರುವ ಎಂಬತ್ತೈದರ ಅಜ್ಜಿ ಕೆಂಬಿ (ಚಿತ್ರ: ಎಡೆಕ್ಸ್ ಲೈವ್)



ಮನಂತವಾಡಿಯ ಪದಚಿಕುನ್ನು ಗ್ರಾಮದವರಾದ ಕೆಂಬಿ, ಪರೀಕ್ಷೆಗೆ ಹಾಜರಾದ ಇತರೆ 2,993 ಅಭ್ಯರ್ಥಿಗಳ ಪೈಕಿ ಅತ್ಯಂತ ಹಿರಿಯರು.


ಕೆಂಬಿಯವರ ಜೊತೆಗೆ, ಕೇರಳದ ವಯನಾಡಿನ ಬುಡಕಟ್ಟು ವಸಾಹತುಗಳಲ್ಲಿನ ಸುಮಾರು 3000 ಇತರೆ ಅಭ್ಯರ್ಥಿಗಳು ಕೇರಳ ರಾಜ್ಯ ಸರ್ಕಾರ ನಡೆಸಿದ ಸಾಕ್ಷರತಾ ಪರೀಕ್ಷೆಗಳಲ್ಲಿ ತೇರ್ಗಡೆಗೊಂಡಿದ್ದಾರೆ ಎಂದು ಇಂಡಿಯಾ ಟುಡೇ ವರದಿಮಾಡಿದೆ.


ಬುಡಕಟ್ಟು ಸಾಕ್ಷರತಾ ಯೋಜನೆಯ ಎರಡನೇ ಹಂತದಲ್ಲಿ ಭಾಗವಹಿಸಿದ ಅಜ್ಜಿ ಕೆಂಬಿಯವರು,


“ಚಿಕ್ಕವಳಾಗಿದ್ದಾಗಿ ಶಾಲೆಗೆ ಹೋಗಿ ಕಲಿಯಬೇಕೆಂಬುದು ಆಸೆಯಾಗಿತ್ತು. ಆದರೆ ನನ್ನ ಅಪ್ಪ-ಅಮ್ಮ ಅದಕ್ಕೆ ಅನುವು ಮಾಡಲಿಲ್ಲ” ಎಂದು ಎಡೆಕ್ಸ್ ಲೈವ್ ಗೆ ತಿಳಿಸಿದ್ದಾರೆ.


ಚಿಕ್ಕಂದಿನಲ್ಲಿ ಕೆಂಬಿ ದಿನಗೂಲಿಗಾಗಿ ದುಡಿಯುತ್ತಿದ್ದರು. ಆದರೂ ಸಹ ವಿದ್ಯಾರ್ಜನೆಯ ಬಗೆಗಿನ ಅವರ ದಾಹ ಕಡಿಮೆಯಾಗಲಿಲ್ಲ. ಕೆಲ ವರ್ಷಗಳ ನಂತರ, ಸಾಕ್ಷರತಾ ಪ್ರಚಾರಕಿಯಾದ ಕ್ಲೇರಮ್ಮ ಮತ್ತು ಬೋಧಕಿಯಾದ ಸುನೀತಾ ಅವರ ಕಾರಣದಿಂದಾಗಿ ಮತ್ತೆ ಕಲಿಕೆಯನ್ನು ಮುಂದುವರೆಸುವ ಅವಕಾಶ ದೊರೆಯಿತು.


ಸುನೀತಾ ಮತ್ತು ಕ್ಲೇರಮ್ಮ ಎಂಬಿಬ್ಬರು ಬುಡಕಟ್ಟು ಜನರ ಸಾಕ್ಷರತಾ ಕಾರ್ಯಕ್ರಮದ ಅಂಗವಾಗಿ ಕೆ.ಎಸ್.ಎಲ್.ಎಮ್ ವತಿಯಿಂದ ರಾಜ್ಯಾದ್ಯಂತ ಪ್ರಚಾರ ನಡೆಸಿದರು. ಅದೇ ಸಂಧರ್ಭದಲ್ಲಿ ಅಜ್ಜಿಗೆ ಪರೀಕ್ಷೆಗೆ ಹಾಜರಾಗಲು ಉತ್ತೇಜನ ನೀಡಿದ್ದರು. ಈ ಯೋಜನೆಯನ್ನು ಪರಿಶಿಷ್ಟ ವರ್ಗಗಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ನಡೆಸಲಾಗುತ್ತದೆ.


ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುವ ತನ್ನಿಬ್ಬರು ಮಕ್ಕಳ ಕುರಿತು ಮಾತನಾಡಿದ ಅಜ್ಜಿ ಕೆಂಬಿ, “ನನ್ನ ಇಬ್ಬರು ಮಕ್ಕಳೂ ಶಾಲೆ ಕಲಿತಿದ್ದಾರೆ, ಸಾಕ್ಷರರಾಗಿದ್ದಾರೆ. ಆದ್ದರಿಂದ, ತರಗತಿಯಲ್ಲಿ ಕಲಿಸಿದ ಯಾವುದನ್ನಾದರೂ ಅವರು ನನಗೆ ಓದಿಸಿ ಸಹಾಯ ಮಾಡುತ್ತಾರೆ. ನನ್ನ ಸಹಪಾಠಿಗಳು ಸಹ ನನ್ನ ನೆರವಿಗಿದ್ದಾರೆ” ಎಂದು ಹೇಳಿದ ಕೆಂಬಿ ಇದೀಗ ಕಂಪ್ಯೂಟರ್ ಕಲಿಯುವ ಉತ್ಸಾಹದಲ್ಲಿದ್ದಾರೆ.


ಕೆ.ಎಸ್‌.ಎಲ್‌.ಎಂ ಇತ್ತೀಚಿಗೆ ರಾಜ್ಯಾದ್ಯಂತ ಆಯೋಜಿಸಿದ್ದ ಪರೀಕ್ಷೆಯಲ್ಲಿ ಮೊದಲ ಹಾಗು ಎರಡನೇ ಹಂತದಲ್ಲಿ ಉತ್ತೀರ್ಣರಾದ ಒಟ್ಟು ಬುಡಕಟ್ಟು ವಿದ್ಯಾರ್ಥಿಗಳ ಸಂಖ್ಯೆ 7,302 ಕ್ಕೆ ಏರಿದೆ.


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.