76ರ ಅಜ್ಜಿಯ ಕೈ ರುಚಿ- ಮೈ ಅಮ್ಮಾಸ್ ಹೋಮ್ ಮೇಡ್ ಮ್ಯಾಜಿಕ್..!
ಟೀಮ್ ವೈ.ಎಸ್. ಕನ್ನಡ
ವಯಸ್ಸು ಅನ್ನೋದು ಕೆಲವರಿಗೆ ಕೇವಲ ಸಂಖ್ಯೆಯಾಗಿರುತ್ತದೆ. ಇನ್ನು ಕೆಲವರಿಗೆ ಅದು ಅತಿ ದೊಡ್ಡ ಸಮಸ್ಯೆ ಕೂಡ ಆಗಿರುತ್ತದೆ. ವಯಸ್ಸು ಸಂಖ್ಯೆ ಅಂದುಕೊಂಡವರಿಗೆ ಸಾಧನೆಯ ಹಾದಿ ಸುಲಭವಾಗುತ್ತದೆ. ವಯಸ್ಸು ಹೆಚ್ಚಾಯ್ತು ಅಂದುಕೊಂಡವರಿಗೆ ಅದು ಸಮಸ್ಯೆಯಾಗಿ ಕಾಡುವುದು ಸಹಜ.
ಏನಾದರೂ ಮಾಡಬೇಕು, ಸಾಧಿಸಬೇಕು ಅನ್ನೋ ಛಲವಿದ್ದರೆ ಅದಕ್ಕೆ ವಯಸ್ಸಿನ ಅಡ್ಡಿ ಇರುವುದಿಲ್ಲ. ಅದಕ್ಕೆ ಪ್ರತ್ಯಕ್ಷ ಉದಾಹರಣೆ ಬೆಂಗಳೂರಿನ ಹೆಬ್ಬಾಳದ ನಿವಾಸಿ 76 ವರ್ಷದ ಚಂದ್ರಮತಿ. ಹೌದು, ವಯಸ್ಸು 60 ದಾಟುತ್ತಲೇ ಮಹಿಳೆಯರು ಮಕ್ಕಳು, ಮೊಮ್ಮಕ್ಕಳು, ಕುಟುಂಬ, ಧ್ಯಾನ, ಪೂಜೆ, ಬೆಳಗ್ಗೆ ಸಂಜೆ ವಾಯುವಿಹಾರ, ತೀರ್ಥಯಾತ್ರೆ ಅಂತೆಲ್ಲಾ ತಮ್ಮದೇ ಜೀವನದಲ್ಲಿ ಮುಳುಗಿಬಿಡುತ್ತಾರೆ. ಆದರೆ ಚಂದ್ರಮತಿ ಅವರು ಬೇರೆ ಮಹಿಳೆಯರಂತಲ್ಲ. ಅವರು ಈ ಹಿರಿಯ ವಯಸ್ಸಿನಲ್ಲಿ ‘ಮೈ ಅಮ್ಮಾಸ್ ಹೋಮ್ ಮೇಡ್’ ಎಂಬ ಉದ್ಯಮ ಸ್ಥಾಪಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಆ ಮೂಲಕ ಉದ್ಯಮಿಯಾಗಲು ವಯಸ್ಸು ಮುಖ್ಯವಲ್ಲ, ಬದಲಾಗಿ ಛಲ ಮತ್ತು ಗುರಿ ಮುಖ್ಯ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಹಾಗೇ ಹಲವರಿಗೆ ಮಾದರಿಯಾಗಿದ್ದಾರೆ.
ಹೇಗೆ ಪ್ರಾರಂಭವಾಯ್ತು ‘ಮೈ ಅಮ್ಮಾಸ್ ಹೋಮ್ ಮೇಡ್’
ಚಂದ್ರಮತಿಯವರ ಪತಿ ನಾಗರಾಜ್ ಕಳೆದ ಡಿಸೆಂಬರ್ನಲ್ಲಿ ನಿಧನ ಹೊಂದಿದರು. ಆ ನಂತರ ಚಂದ್ರಮತಿಯವರಿಗೆ ಒಂಟಿತನ ಕಾಡತೊಡಗಿತು. ಆ ಒಂಟಿತನದ ನೋವಿನಿಂದ ಹೊರಬರಲು ಅವರು ಸ್ಥಾಪಿಸಿದ್ದೇ ಈ ‘ಮೈ ಅಮ್ಮಾಸ್ ಹೋಮ್ ಮೇಡ್’. ಹೀಗೆ ಏನಾದರೂ ಕೆಲಸ ಮಾಡುತ್ತಿದ್ದರೆ, ಸಮಯ ಕಳೆಯುತ್ತದೆ. ಏನೋ ಮಾಡುತ್ತಿದ್ದೀನಲ್ಲಾ ಎಂಬ ನೆಮ್ಮದಿ ಕೂಡ ಸಿಗುತ್ತದೆ ಎಂಬ ಆಲೋಚನೆ ಅವರದು. ಹೀಗಾಗಿಯೇ ಅಡುಗೆಗೆ ಉಪಯೋಗಿಸುವ ಮಸಾಲೆ ಪದಾರ್ಥಗಳನ್ನು ಮನೆಯಲ್ಲೇ ರೆಡಿಮೇಡ್ ಸಿದ್ಧಪಡಿಸಿ ಮಾರಾಟ ಮಾಡುವ ಐಡಿಯಾ ಮಾಡಿದರು. ಅದಕ್ಕೆ ಮನೆಯವರಿಂದಲೂ ಬೆಂಬಲ ದೊರೆಯಿತು. ಹೆಚ್ಚು ತಡ ಮಾಡದೇ ಇದೇ ಫೆಬ್ರವರಿಯಲ್ಲಿ 76 ಅಜ್ಜಿ ‘ಮೈ ಅಮ್ಮಾಸ್ ಹೋಮ್ ಮೇಡ್’ ಪ್ರಾರಂಭಿಸಿಯೇಬಿಟ್ಟರು.
ಅಮ್ಮನ ಕೈ ರುಚಿ...
ಅಡುಗೆ ಮನೆಯಲ್ಲಿ ತಯಾರಾಗುವ ತರಹೇವಾರಿ ರುಚಿಕರವಾದ ಆಹಾರ ಪದಾರ್ಥಗಳಿಗೆ ಮಸಾಲೆ ಬೇಕೇಬೇಕು. ಹಲವು ಬ್ರ್ಯಾಂಡ್ಗಳ ರೆಡಿಮೇಡ್ ಮಸಾಲೆ ಪಾಕೆಟ್ಗಳು ಸಿಗುತ್ತವಾದರೂ, ಅವು ಮನೆಯಲ್ಲಿ ಅಮ್ಮ ಮಾಡುವ ಮಸಾಲೆ ರುಚಿಯಂತೆ ಇರುವುದಿಲ್ಲ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸಾವಯವ, ಹಳೆಯ ಪದ್ಧತಿಗಳ ಕಡೆಗೆ ಜನರ ಆಸಕ್ತಿ ಬೆಳೆಯುತ್ತಿದ್ದು, ಪ್ಯಾಕಿಂಗ್ ಉತ್ಪನ್ನಗಳಿಗಿಂತ ಕಣ್ಣೆದುರು ತಯಾರಾಗುವ ಪದಾರ್ಥಗಳ ಮೇಲೆ ಹೆಚ್ಚು ಒಲವಿರುತ್ತದೆ. ಅಲ್ಲದೆ ಹೊರಗೆ ಹೋಟೆಲ್ ತಿಂಡಿ ತಿಂದು ಬೇಸತ್ತ ಮಂದಿ ಯಾವಾಗ ಅಮ್ಮ ಮಾಡಿದ ಅಡುಗೆ ತಿನ್ನುತ್ತೀನೋ ಎನ್ನುತ್ತಿರುತ್ತಾರೆ. ಅಂಥವರಿಗೆ ಚಂದ್ರಮತಿ ಅವರು ‘ಮೈ ಅಮ್ಮಾಸ್ ಹೋಮ್ಮೇಡ್’ ಮೂಲಕ ಅಮ್ಮನ ಕೈರುಚಿಯನ್ನು ನೀಡುತ್ತಿದ್ದಾರೆ. ಅದರಲ್ಲೂ ದಕ್ಷಿಣ ಕನ್ನಡ ಖಾದ್ಯಗಳಿಗಾಗಿ ಚಂದ್ರಮತಿ ಅವರ ಕೈರುಚಿ ಸವಿಯಲೇಬೇಕು.
ಇದನ್ನು ಓದಿ: ಎಲ್ಲರಿಗೂ ಮಾದರಿ, ಭಾರತದಲ್ಲಿರುವ ಮೆಕ್ಸಿಕೋ ರಾಯಭಾರಿ!
ವಿಶೇಷ ಅಂದರೆ ಸಿಲ್ವರ್ ಸರ್ಫರ್ ಎಂಬ ಸ್ವಯಂಸೇವಾ ಸಂಸ್ಥೆ ಹಿರಿಯ ನಾಗರಿಕರ ಕಾರ್ಯಗಳನ್ನು ಪರಿಚಯಿಸಲು ಆಯೋಜಿಸುವ ಮೇಳದಲ್ಲಿ ಎರಡು ಬಾರಿ ಪಾಲ್ಗೊಂಡು ತಾವು ಸಿದ್ಧಪಡಿಸಿದ ಆಹಾರೋತ್ಪನ್ನಗಳನ್ನು ಪ್ರದರ್ಶನ ಹಾಗೂ ಮಾರಾಟ ಮಾಡಿದ್ದರು ಚಂದ್ರಮತಿ. ಆ ಮೂಲಕ ಅವರಿಗೆ ತಮ್ಮಂತೆಯೇ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಹಲವು ಹಿರಿಯ ತಲೆಗಳು ಪರಿಚಯವಾದವು. ಹೀಗೆ ಚಂದ್ರಮತಿ ಅವರ ಉದ್ಯಮಕ್ಕೂ ಹೆಚ್ಚು ಜನರನ್ನು ತಲುಪಿತು ಹಾಗೂ ‘ಮೈ ಅಮ್ಮಾಸ್ ಹೋಮ್ಮೇಡ್’ ಬ್ರ್ಯಾಂಡ್ಗೆ ಒಂದೊಳ್ಳೆ ವೇದಿಕೆ ದೊರೆಯಿತು.
ಫೇಸ್ಬುಕ್ನಲ್ಲೆ ಆರ್ಡರ್!
ವಿಶೇಷ ಅಂದರೆ ಈ ಹಿರಿಯಜ್ಜಿ ಚಂದ್ರಮತಿ ಅವರು ತಂತ್ರಜ್ಞಾನವನ್ನು ತುಂಬ ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಫೇಸ್ಬುಕ್ನಲ್ಲಿ ‘ಮೈ ಅಮ್ಮಾಸ್ ಹೋಮ್ಮೇಡ್’ ಪೇಜ್ ಶುರು ಮಾಡಿ, ಆ ಮೂಲಕ ಜನರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ. ಅವರ ಸೊಸೆ ಶ್ರೀದೇವಿ ಈ ಪೇಜ್ನ ಉಸ್ತುವಾರಿ ವಹಿಸಿಕೊಂಡು, ಪ್ರಚಾರ ರಾಯಭಾರಿಯಾಗಿದ್ದಾರೆ. ಮಾತ್ರವಲ್ಲ ಶ್ರೀದೇವಿಯವರ ತಾಯಿ ಲಕ್ಷ್ಮೀ ಅವರೂ ಚಂದ್ರಮತಿ ಅವರೊಂದಿಗೆ ಕೈಜೋಡಿಸಿದ್ದಾರೆ. 76ರ ಹರೆಯದರಲ್ಲು ಪ್ರತಿದಿನ ಬರೊಬ್ಬರಿ 12 ತಾಸುಗಳ ಕಾಲ ಕೆಲಸ ಮಾಡುವುದು ಚಂದ್ರಮತಿ ಅವರ ಕೆಲಸದ ಮೇಲಿನ ಪ್ರೀತಿ ಹಾಗೂ ಕಾರ್ಯಕ್ಷಮತೆಗೆ ಹಿಡಿದ ಕನ್ನಡಿಯಾಗಿದೆ. ಕೇವಲ ಬೆಂಗಳೂರಿನ ಜನ ಮಾತ್ರವಲ್ಲ ದೇಶ, ವಿದೇಶಗಳಲ್ಲೂ ‘ಮೈ ಅಮ್ಮಾಸ್ ಹೋಮ್ಮೇಡ್’ನ ಮಸಾಲೆ ಪದಾರ್ಥಗಳ ರುಚಿ ಕಂಡು ಹಲವಾರು ಮಂದಿ ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಚಂದ್ರಮತಿಯವರನ್ನು ಶ್ಲಾಘಿಸಿದ್ದಾರೆ.
ಏನೇನು ಸಿಗುತ್ತದೆ?
‘ಮೈ ಅಮ್ಮಾಸ್ ಹೋಮ್ಮೇಡ್’ನಲ್ಲಿ ಹಲವು ವಿಧದ ಚಟ್ನಿ ಪುಡಿಗಳು, ಸಾಂಬಾರ್ ಪುಡಿ, ರಸಂ ಪುಡಿ, ಪುಳಿಯೊಗರೆ ಮಿಕ್ಸ್, ವಾಂಗಿಬಾತ್ ಪೌಡರ್, ಬಿಸಿಬೇಳೆ ಬಾತ್ ಪೌಡರ್, ರಾಗಿ ದೋಸೆ ಮಿಕ್ಸ್, ಮೆಂತೆ ಹಿಟ್ಟು, ಗೊಜ್ಜು ಪುಡಿ ಸೇರಿದಂತೆ 18 ಬಗೆಯ ಮಸಾಲೆ ಹಾಗೂ ಮಿಕ್ಸ್ ಆಹಾರ ಪದಾರ್ಥಗಳು ದೊರೆಯುತ್ತವೆ. ಒಟ್ಟಿನಲ್ಲಿ ಚಂದ್ರಮತಿಯ ಉತ್ಸಾಹ ಮತ್ತು ಹುಮ್ಮಸ್ಸು ಎಲ್ಲಾ ಉದ್ಯಮಿಗಳಿಗೂ ಮಾದರಿ ಅನ್ನೋದರಲ್ಲಿ ಎರಡು ಮಾತಿಲ್ಲ.
1. ಶವ ಸಂಸ್ಕಾರಕ್ಕೂ ಆನ್ಲೈನ್ ಬುಕ್ಕಿಂಗ್
2. ಆನ್ಲೈನ್ ಉದ್ಯಮದಲ್ಲಿ ಲಾಭಕ್ಕಾಗಿ ಪೈಪೋಟಿ- ಗ್ರಾಹಕರಿಗೆ "ಹಬ್ಬದೂಟ"ದ ಸಂಭ್ರಮ..!