ಕ್ಯಾನ್ಸರ್ ಪೀಡಿತ ಮಗುವಿಗಾಗಿ ಒಲಿಂಪಿಕ್ಸ್ ಪದಕ ಮಾರಿದ ಕ್ರೀಡಾಪಟು..
ಟೀಮ್ ವೈ.ಎಸ್.ಕನ್ನಡ
ರಿಯೋ ಒಲಿಂಪಿಕ್ಸ್ ಜ್ವರ ಈಗಷ್ಟೇ ಕಡಿಮೆಯಾಗಿದೆ, ಆದ್ರೂ ಎಲ್ಲಾ ಕಡೆ ಚಾಂಪಿಯನ್ಗಳ ಗುಣಗಾನ ನಡೀತಾನೇ ಇದೆ. ಪೋಲೆಂಡ್ ದೇಶದ ಆಟಗಾರನೊಬ್ಬ ಮಾಡಿದ ತ್ಯಾಗ ಕೇಳಿದ್ರೆ ಎಂಥವರು ಕೂಡ ಭಾವುಕರಾಗ್ತಾರೆ. ಅವರ ಹೃದಯವಂತಿಕೆ ಪ್ರತಿಯೊಬ್ಬರ ಮನಸ್ಸು ಕೂಡ ಮಿಡಿಯುವುದರಲ್ಲಿ ಅನುಮಾನವಿಲ್ಲ. ಅಷ್ಟಕ್ಕೂ ಇಡೀ ವಿಶ್ವಕ್ಕೇ ಮಾದರಿಯಾದ ಆ ಕ್ರೀಡಾಳು ಯಾರು ಗೊತ್ತಾ ಪೋಲೆಂಡ್ ದೇಶದ ಡಿಸ್ಕಸ್ ಥ್ರೋ ಚಾಂಪಿಯನ್ ಪಯೋಟ್ರ್ ಮಲಚೋವಸ್ಕಿ. ಹೌದು ರಿಯೋ ಒಲಿಂಪಿಕ್ಸ್ನಲ್ಲಿ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿರುವ ಪಯೋಟ್ರ್ ಕ್ಯಾನ್ಸರ್ ಪೀಡಿತ ಮಗುವಿಗೆ ನೆರವಾಗಲು ಬಹುದೊಡ್ಡ ತ್ಯಾಗವನ್ನೇ ಮಾಡಿದ್ದಾರೆ. ಕ್ಯಾನ್ಸರ್ನಿಂದ ಬಳಲುತ್ತಿರುವ 3 ವರ್ಷದ ಮಗು ಒಲೆಕ್ನ ಚಿಕಿತ್ಸೆಗೆ ನೆರವಾಗಲು ನಿಧಿ ಸಂಗ್ರಹಕ್ಕಾಗಿ ರಿಯೋ ಒಲಿಂಪಿಕ್ಸ್ನಲ್ಲಿ ತಾವು ಗೆದ್ದ ಬೆಳ್ಳಿ ಪದಕವನ್ನು ಹರಾಜಿನಲ್ಲಿ ಮಾರಾಟ ಮಾಡಿದ್ದಾರೆ. ಈ ಮೂಲಕ ಕ್ರೀಡಾಸ್ಪೂರ್ತಿ ಮೆರೆದಿರುವ ಪಯೋಟ್ರ್ ಅವರ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
"ರಿಯೋನಲ್ಲಿ ನಾನು ಚಿನ್ನದ ಪದಕ ಗೆಲ್ಲಬೇಕೆಂದು ಆಟದ ಮೈದಾನಕ್ಕಿಳಿದಿದ್ದೆ. ನಾವೆಲ್ಲರೂ ಒಟ್ಟಾಗಿ ಅದಕ್ಕಿಂತಲೂ ಅಮೂಲ್ಯವಾದುದಕ್ಕಾಗಿ ಹೋರಾಡೋಣ. ಈ ಪುಟ್ಟ ಬಾಲಕನ ಆರೋಗ್ಯ ಎಲ್ಲಕ್ಕಿಂತಲೂ ಅಮೂಲ್ಯವಾದದ್ದು. ನೀವೆಲ್ಲರೂ ಸಹಾಯ ಮಾಡಿದ್ರೆ ನಾನು ಗೆದ್ದಿರುವ ಬೆಳ್ಳಿ ಪದಕ ಸ್ವರ್ಣ ಪದಕಕ್ಕಿಂತಲೂ ಅಮೂಲ್ಯ ಎನಿಸಿಕೊಳ್ಳಲಿದೆ''
- ಪಯೋಟ್ರ್,ಪದಕ ವಿಜೇತ
ಬೆಳ್ಳಿ ಪದಕ ಹರಾಜಿಗಿಟ್ಟು 84,000 ಡಾಲರ್ ಹಣವನ್ನು ಸಂಗ್ರಹಿಸುವುದು ಪಯೋಟ್ರ್ ಅವರ ಗುರಿಯಾಗಿತ್ತು. ಆದ್ರೆ ಪದಕ 19,000 ಡಾಲರ್ಗೆ ಹರಾಜಾಗಿದೆ. ಮಗುವಿನ ಶಸ್ತ್ರಚಿಕಿತ್ಸೆಗೆ ಬೇಕಾದ ಮೊತ್ತಕ್ಕೆ ಬೆಳ್ಳಿ ಪದಕವನ್ನು ಖರೀದಿಸುವುದಾಗಿ ಪೋಲೆಂಡ್ನ ಬಿಲಿಯನೇರ್ಗಳಾದ ಡೊಮಿನಿಕಾ ಮತ್ತು ಸೆಬಾಸ್ಟಿಯನ್ ಒಪ್ಪಿಕೊಂಡಿದ್ದಾರೆ. 3 ವರ್ಷದ ಪುಟ್ಟ ಮಗು ಒಲೆಕ್ ರೆಟಿನೋಬ್ಲಾಸ್ಟೋಮಾ ಎಂಬ ಕ್ಯಾನ್ಸರ್ನಿಂದ ಬಳಲುತ್ತಿದೆ. ಇದು ಕಣ್ಣಿನ ಕ್ಯಾನ್ಸರ್ ಆಗಿದ್ದು, ಹೆಚ್ಚಾಗಿ ಚಿಕ್ಕ ಮಕ್ಕಳನ್ನು ಬಾಧಿಸುತ್ತದೆ. ಒಲಿಂಪಿಯನ್ ಪಯೋಟ್ರ್ ಮಾಡಿದ ಸಹಾಯದಿಂದಾಗಿ ಒಲೆಕ್ಗೆ ಚಿಕಿತ್ಸೆ ದೊರೆಯುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ಒಲೆಕ್ನನ್ನು ನ್ಯೂಯಾರ್ಕ್ಗೆ ಕರೆದೊಯ್ಯಲಾಗ್ತಿದೆ.
33 ವರ್ಷದ ಪೋಲೆಂಡ್ನ ಡಿಸ್ಕಸ್ ಪ್ಲೇಯರ್ ಪಯೋಟ್ರ್, 67.55 ಮೀಟರ್ ದೂರಕ್ಕೆ ಡಿಸ್ಕಸ್ ಎಸೆಯುವ ಮೂಲಕ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ರು. ಪದಕವನ್ನು ಮನೆಯ ಶೋಕೇಸ್ನಲ್ಲಿ ಅಲಂಕರಿಸಿ ಇಡುವುದಕ್ಕಿಂತ, ಮಗುವಿಗೆ ನೆರವಾಗುವುದು ಹೆಚ್ಚು ಸೂಕ್ತ ಅನ್ನೋದು ಅವರ ಅಭಿಪ್ರಾಯ. ಇದು ಪಯೋಟ್ರ್ ಗೆದ್ದಿರುವ 2ನೇ ಒಲಿಂಪಿಕ್ ಪದಕ. 2008ರ ಬೀಜಿಂಗ್ ಒಲಿಂಪಿಕ್ಸ್ನಲ್ಲೂ ಅವರು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ರು.
ಇದನ್ನೂ ಓದಿ..