ಕಾಳಧನಿಕರ ಮೇಲೆ ಮೋದಿ 'ಸರ್ಜಿಕಲ್ ಸ್ಟ್ರೈಕ್' : 500-1000 ರೂ. ನೋಟುಗಳ ಮುದ್ರಣ, ಚಲಾವಣೆ ಬಂದ್
ಟೀಮ್ ವೈ.ಎಸ್.ಕನ್ನಡ
ದೇಶಾದ್ಯಂತ ನಿನ್ನೆ ಮಧ್ಯರಾತ್ರಿಯಿಂದ್ಲೇ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳ ಚಲಾವಣೆ ಮತ್ತು ಮುದ್ರಣವನ್ನು ನಿರ್ಬಂಧಿಸಲಾಗಿದೆ. ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕಾಳಧನ ಹಾಗೂ ನಕಲಿ ನೋಟುಗಳ ಹಾವಳಿ ತಡೆಯಲು ಕೈಗೊಂಡಿರುವ ಕ್ರಮವನ್ನು ಪ್ರಕಟಿಸಿದ್ರು. ನಾಳೆ 500 ಮತ್ತು 2000 ರೂಪಾಯಿ ಮುಖಬೆಲೆಯ ಹೊಸ ನೋಟುಗಳು ಚಲಾವಣೆಗೆ ಬರಲಿವೆ. ಅಲ್ಲಿಯವರೆಗೆ ಸಾರ್ವಜನಿಕರು 100 ರೂಪಾಯಿ ನೋಟುಗಳಲ್ಲೇ ಎಲ್ಲ ವಹಿವಾಟು ಮಾಡಬೇಕು. ನೋಟುಗಳನ್ನು ಬದಲಿಸಿಕೊಳ್ಳಲು ಹಲವು ಅವಕಾಶಗಳನ್ನು ಕಲ್ಪಿಸಲಾಗಿದ್ದು ಆತಂಕ ಪಡಬೇಡಿ ಎಂದು ಪ್ರಧಾನಿ ಅಭಯ ನೀಡಿದ್ದಾರೆ. ಇಂದು ಮತ್ತು ನಾಳೆ ದೇಶದ ಎಲ್ಲ ಎಟಿಎಂಗಳ ಕಾರ್ಯಾಚರಣೆ ಸ್ಥಗಿತಗೊಳ್ಳಲಿದೆ. ಬುಧವಾರ ಬ್ಯಾಂಕ್ ವ್ಯವಹಾರ ಕೂಡ ಇರುವುದಿಲ್ಲ. ಆದ್ರೆ ನಗದು ರಹಿತ ವ್ಯವಹಾರಕ್ಕೆ ಯಾವುದೇ ತೊಂದರೆಯಿಲ್ಲ. ಆನ್ಲೈನ್ ನಲ್ಲಿ ನಡೆಯುವ ನಗದು ರಹಿತ ವ್ಯವಹಾರ, ಚೆಕ್, ಡೆಬಿಟ್, ಕ್ರೆಡಿಟ್ ಕಾರ್ಡ್ ಮೂಲಕ ನಡೆಯುವ ವಹಿವಾಟು ಅಬಾಧಿತವಾಗಿದೆ.
ಇಲ್ಲಿ 3 ದಿನ 500-1000 ರೂ. ನೋಟು ಸ್ವೀಕಾರ..
ಜನಸಾಮಾನ್ಯರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕಾಗಿ ಕೆಲವು ಅತ್ಯಗತ್ಯ ಸ್ಥಳಗಳಲ್ಲಿ ಇನ್ನು 3 ದಿನಗಳ ಕಾಲ 500 ಮತ್ತು 1000 ರೂಪಾಯಿ ನೋಟುಗಳನ್ನು ಸ್ವೀಕರಿಸಲು ಅವಕಾಶ ನೀಡಲಾಗಿದೆ.
*ಔಷಧ ಮಳಿಗೆಗಳು
*ಸರ್ಕಾರಿ ಹಾಲಿನ ಬೂತ್ ಗಳು
*ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸ್ವಾಮ್ಯದ ಸಹಕಾರಿ ಮಳಿಗೆಗಳಾದ ಹಾಪ್ ಕಾಮ್ಸ್ ಮತ್ತು ಜನತಾ ಬಜಾರ್
*ಪೆಟ್ರೋಲ್ ಬಂಕ್ ಗಳು ಮತ್ತು ಗ್ಯಾಸ್ ಸ್ಟೇಶನ್
*ಸರ್ಕಾರಿ ಬಸ್, ರೈಲು, ವಿಮಾನ ಟಿಕೆಟ್ ಕೌಂಟರ್ ಗಳು
*ಚಿತಾಗಾರ ಮತ್ತು ರುದ್ರಭೂಮಿಗಳು
ಇನ್ನು ಹಣ ನಗದೀಕರಣಕ್ಕೆ ಕೂಡ ಕೆಲವು ನಿರ್ಬಂಧಗಳಿವೆ...
*ಎಟಿಎಂಗಳಲ್ಲಿ ದಿನಕ್ಕೆ ಕೇವಲ 2000 ರೂ. ಪಡೆಯಬಹುದು
*ಖಾತೆಯಿಂದ ಹಣ ಡ್ರಾ ಮಾಡಿಕೊಳ್ಳಲು ಕೇವಲ 10,000 ರೂ. ಮಿತಿ ಹೇರಲಾಗಿದೆ
*ವಾರಕ್ಕೆ 20,000 ರೂ. ಮಾತ್ರ ಡ್ರಾ ಮಾಡಬಹುದು
ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಗಳಲ್ಲಿ ನೋಟುಗಳನ್ನು ಬದಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಹಳೆಯ 500 ಅಥವಾ 1000 ರೂಪಾಯಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ನವೆಂಬರ್ 10 ರಿಂದ ಡಿಸೆಂಬರ್ 30ರ ವರೆಗೂ ಅವಕಾಶವಿದೆ. ಪ್ಯಾನ್ ಕಾರ್ಡ್, ವೋಟರ್ ಐಡಿ ಅಥವಾ ಆಧಾರ್ ಕಾರ್ಡ್ ತೋರಿಸಿ ನಿಮ್ಮ ಹಳೆ ನೋಟುಗಳನ್ನು ಬ್ಯಾಂಕ್ ನಲ್ಲಿ ವಿನಿಮಯ ಮಾಡಿಕೊಳ್ಳಿ. ಒಂದು ವೇಳೆ ಡಿ.30ರೊಳಗೆ ಹಳೆ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗದೇ ಇದ್ದರೆ ಪ್ರಮಾಣಪತ್ರ ಒದಗಿಸಿ ಮಾರ್ಚ್ 31ರ ಒಳಗಾಗಿ ವಿನಿಮಯ ಮಾಡಿಕೊಳ್ಳಬಹುದು.
ಇನ್ನು ಚಲಾವಣೆಗೆ ಬರಲಿರುವ 500 ಮತ್ತು 2000 ರೂಪಾಯಿ ಹೊಸ ನೋಟುಗಳಲ್ಲಿ ನ್ಯಾನೋ ಜಿಪಿಎಸ್ ಚಿಪ್ ಗಳನ್ನು ಅಳವಡಿಸಲಾಗಿದೆ. ಈ ಚಿಪ್ಗಳ ಮೂಲಕ ಎಲ್ಲೆಲ್ಲಿ ಹಣ ಬಚ್ಚಿಡಲಾಗಿದೆ ಎಂಬುದನ್ನು ಪತ್ತೆ ಹಚ್ಚಬಹುದು. ಹಾಗಾಗಿ ಕಾಳಧನಿಕರಿಗೆಲ್ಲ ಈಗ ಢವ ಢವ ಶುರುವಾಗಿದೆ. ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಭಾಷಣ ಮಾಡುವವರೆಗೂ ಇಂಥದ್ದೊಂದು ಆರ್ಥಿಕ ಕ್ರಾಂತಿಯಾಗಲಿದೆ ಎಂಬ ಸುಳಿವು ಕೂಡ ಯಾರಿಗೂ ಇರಲಿಲ್ಲ. ದಿಢೀರನೆ ಪ್ರಧಾನಿ ಮೋದಿ, ಆರ್ಬಿಐ ಗವರ್ನರ್ ಹಾಗೂ ಹಣಕಾಸು ಸಚಿವಾಲಯದ ಅಧಿಕಾರಿಗಳು ಒಬ್ಬರಾದ ಮೇಲೆ ಒಬ್ಬರಂತೆ ಸುದ್ದಿಗೋಷ್ಠಿ ನಡೆಸಿ ಶತಮಾನದ ಬೃಹತ್ ಆರ್ಥಿಕ ಸುಧಾರಣೆ ಬಗ್ಗೆ ಘೋಷಣೆ ಮಾಡಿದ್ರು. ಕೇಂದ್ರದ ಈ ದಿಟ್ಟ ನಿರ್ಧಾರದಿಂದಾಗಿ ಕಪ್ಪು ಹಣ ಹಾಗೂ ನಕಲಿ ನೋಟುಗಳ ಚಲಾವಣೆಗೆ ಕಡಿವಾಣ ಬೀಳಲಿದೆ. ಅಕ್ರಮ ಹಾಗೂ ಭ್ರಷ್ಟಾಚಾರಕ್ಕೂ ಮೋದಿ ಬ್ರೇಕ್ ಹಾಕ್ತಿದ್ದಾರೆ. ಅಷ್ಟೇ ಅಲ್ಲ ಹಣದುಬ್ಬರ ಕೂಡ ನಿಯಂತ್ರಣಕ್ಕೆ ಬರುವ ನಿರೀಕ್ಷೆ ಇದೆ.
ಕೇಂದ್ರ ಸರ್ಕಾರ ದಿಢೀರನೆ 500 ಮತ್ತು 1000 ರೂಪಾಯಿ ನೋಟುಗಳಿಗೆ ನಿಷೇಧ ಹೇರಿದ್ರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಇವತ್ತು ಎಟಿಎಂ ಕೂಡ ಸ್ಥಗಿತಗೊಂಡಿರೋದ್ರಿಂದ 100 ರೂಪಾಯಿ ನೋಟು ಸಿಗದೆ ಜನರು ಫಜೀತಿ ಅನುಭವಿಸ್ತಿದ್ದಾರೆ. ದೈನಂದಿನ ವ್ಯವಹಾರಕ್ಕೆ ಅಡಚಣೆಯಾಗಿದೆ. ದೂರದ ಊರುಗಳಿಂದ ಬಂದವರು ಚಿಲ್ಲರೆ ಹಣವಿಲ್ಲದ ಕಂಗಾಲಾಗಿದ್ದಾರೆ, ನೋಟುಗಳನ್ನು ಬದಲಾಯಿಸಿಕೊಳ್ಳಲು ಪ್ರಯಾಸಪಡುತ್ತಿದ್ದಾರೆ.
ಇದನ್ನೂ ಓದಿ...
ವಾಯುಮಾಲಿನ್ಯದಿಂದ ಹೆಚ್ಚಿದೆ ತಲೆಬಿಸಿ- "ಟವರ್ ಆಫ್ ಹೋಪ್"ನಿಂದ ಕಡಿಮೆಯಾಗುತ್ತಾ ಕಸಿವಿಸಿ
ಭಾರತದ ಏಕೈಕ ಮಹಿಳಾ ಕಮಾಂಡೋ ಟ್ರೈನರ್- ನಿಜ ಜೀವನದಲ್ಲೂ ಸೀಮಾ ಫೈಟರ್