ಸರ್ಕಾರಿ ಶಾಲೆಗೂ ಬೇಡಿಕೆ ಬರುವಂತೆ ಮಾಡಿದ ರಾಯಚೂರು ಜಿಲ್ಲೆಯ ಶಿಕ್ಷಕ
ವಿದ್ಯಾರ್ಥಿಗಳೇ ನಡೆಸಿಕೊಡುವ ಪೆನ್ಸಿಲ್ ಪತ್ರಿಕೆ ಆರಂಭಿಸಿ, ಸರ್ಕಾರದಿಂದ ಶಾಲಾ ಸೌಲಭ್ಯವನ್ನು ಯಶಸ್ವಿಯಾಗಿ ಹೆಚ್ಚಿಸಿಕೊಂಡು ಸರ್ಕಾರಿ ಶಾಲೆಗೂ ಬೇಡಿಕೆಬರುವಂತೆ ಮಾಡಿ ಮಾದರಿ ಶಾಲೆಯನ್ನು ರೂಪಿಸಿದವರು ಕೊಟ್ರೇಶ್ ಬಾವಿಹಳ್ಳಿ.
ಶಿಕ್ಷಕ ಎಂದರೆ ಹಣತೆಯಂತೆ, ತಾನು ಉರಿದು ಉಳಿದವರಿಗೆ ಬೆಳಕಾಗುತ್ತಾನೆ. ಅವರು ಕೇವಲ ಪಾಠವನ್ನಷ್ಟೇ ಬೋಧಿಸುವುದಿಲ್ಲ. ಮಕ್ಕಳಿಗೆ ಒಳ್ಳೆಯ ಭವಿಷ್ಯವನ್ನು ಕೊಡುವ ಮಾರ್ಗದರ್ಶಕರಾಗುತ್ತಾರೆ ಎಂಬುದಕ್ಕೆ ಹಲವಾರು ಶಿಕ್ಷಕರು ನಮಗೆ ಕಾಣ ಸಿಗುತ್ತಾರೆ. ಅಂತಹ ಶಿಕ್ಷಕರ ಸಾಲಿಗೆ ಕೊಟ್ರೇಶ್ ಬಾವಿಹಳ್ಳಿಯವರು ಕೂಡ ಸೇರುತ್ತಾರೆ.
ಅದು ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಬೆಳಗುರ್ಕಿ ಎಂಬ ಗ್ರಾಮ. ಅಲ್ಲಿರುವುದು ಒಂದರಿಂದ ಐದನೇ ತರಗತಿಯವರೆಗಿನ ಶಾಲೆ ಅದು ಕೂಡ ಏಕೋಪಾಧ್ಯಾಯ ಶಾಲೆ. ಈ ಶಾಲೆಗೆ ಕೊಟ್ರೇಶ್ ರವರು 2004ರಲ್ಲಿ ಶಿಕ್ಷಕರಾಗಿ ಸೇರಿಕೊಳ್ಳುತ್ತಾರೆ. ಆ ಶಾಲೆಯು ಕೇವಲ ಮೂರು ಕೊಠಡಿಗಳನ್ನು ಮಾತ್ರ ಹೊಂದಿದ್ದು, ಒಂದು ಕೊಠಡಿಯಲ್ಲಿ 1-3 ಹಾಗೂ ಇನ್ನೊಂದರಲ್ಲಿ 4-5 ತರಗತಿಯ ಮಕ್ಕಳು ಕುಳಿತುಕೊಳ್ಳುತ್ತಿದ್ದರು. ಇನ್ನೊಂದರಲ್ಲಿ ಬಿಸಿಯೂಟವನ್ನು ತಯಾರಿಸುತ್ತಿದ್ದರು. ಇವರು ಬರುವುದಕ್ಕಿಂತ ಒಂದು ತಿಂಗಳು ಮುಂಚೆ ಇನ್ನೊಬ್ಬ ಶಿಕ್ಷಕರಷ್ಟೇ ಸೇರಿದ್ದರು.
ಒಂದರಿಂದ ಐದನೇ ತರಗತಿಯವರೆಗೂ ಎಲ್ಲ ವಿಷಯಗಳನ್ನು ಈ ಇಬ್ಬರು ಶಿಕ್ಷಕರೇ ಪಾಠ ಮಾಡಬೇಕಿತ್ತು. ಅಲ್ಲದೇ ಶಾಲಾ ಕಟ್ಟಡವು ಕೂಡ ಚೆನ್ನಾಗಿರಲಿಲ್ಲ. ಅವು ಶೀಟನ್ನು ಹೊಂದಿದ್ದ ಕೊಠಡಿಗಳಾಗಿದ್ದವು. ಆಗ ಐದು ತರಗತಿಗಳು ಸೇರಿ ಒಟ್ಟು 89 ಜನ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದರು.
"ಮೊದಮೊದಲು ಈ ವಾತಾವರಣವನ್ನು ನೋಡಿ ಎಲ್ಲಿ ಬಂದು ಸಿಲುಕಿದೆ ನಾನು, ಎಂಬ ಖಿನ್ನತೆಯು ನನ್ನನ್ನು ಕಾಡಿತ್ತು. ಒಂದು ವರ್ಷದ ತನಕವು ಇದೇ ತೊಳಲಾಟದಲ್ಲಿಯೆ ನಾನು ದಿನಗಳನ್ನು ಕಳೆದೆ" ಎಂದೆನ್ನುತ್ತಾರೆ ಕೊಟ್ರೇಶ್.
2005ರಲ್ಲಿ ಶಾಲೆಯ ನ್ಯೂನತೆಯ ಕುರಿತಾಗಿ ಪತ್ರಿಕೆಯೊಂದರಲ್ಲಿ ಪ್ರಕಟವಾದ ನಂತರ, ಶಾಲಾ ಕಟ್ಟಡ ಬೇಕೆಂದು ಕೊಟ್ರೇಶ್ ಹೋರಾಟ ಮಾಡಲು ಪ್ರಾರಂಭಿಸುತ್ತಾರೆ. ತದನಂತರ 2007ರಲ್ಲಿ ಒಂದು ಕೊಠಡಿ ಮಂಜೂರಾಗುತ್ತದೆ.
"ಆಗ ಮತ್ತೊಂದು ತೊಂದರೆ ಎದುರಾಯ್ತು ಕೊಠಡಿ ಕಟ್ಟಲು ಸ್ಥಳವಿರಲಿಲ್ಲ. ಆಗ ಊರಿನಲ್ಲಿ ಓಡಾಡಿ ಜನಗಳ ಹತ್ರ ಮನವಿ ಮಾಡಿ ಒಂದು ಲಕ್ಷದ ಇಪ್ಪತ್ತೇಳು ಸಾವಿರದಷ್ಟು ಹಣ ಸಂಗ್ರಹಣೆ ಮಾಡಿ ಶಾಲೆಯ ಪಕ್ಕದಲ್ಲಿರುವ ಒಂದು ಎಕರೆ ಜಮೀನು ಕೊಂಡುಕೊಂಡು ಅಲ್ಲಿ ಕೊಠಡಿ ಕಟ್ಟಲಾಯಿತು."
ಇದೇ ಸಂದರ್ಭದಲ್ಲಿ ಕೊಟ್ರೆಶ್ ಅವರು ಪತ್ರಿಕೋದ್ಯಮದಲ್ಲಿಯೂ ಸಹ ಆಸಕ್ತಿಯನ್ನು ಹೊಂದಿದ್ದರು. 2005-07 ರವರೆಗೆ ಸ್ಥಳೀಯ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರು.
2008ರಲ್ಲಿ ಮತ್ತೆ ಇನ್ನೊಂದು ಕೊಠಡಿ ಮಂಜುರಾಯ್ತು. ಹಾಗೆ ಇನ್ನೊಬ್ಬ ಶಿಕ್ಷಕರು ಶಾಲೆಗೆ ಬಂದರು. ಪ್ರತಿ ಕೊಠಡಿಯು ಮಂಜುರಾಗುವ ಹೊತ್ತಿಗೆ ಕೊಟ್ರೆಶ್ ಅವರು ನಮ್ಮ ಶಾಲೆಗೆ ಇನ್ನೊಬ್ಬ ಶಿಕ್ಷಕರು ಬೇಕೆಂದು ಬಿಇಓ ಆಫೀಸಿಗೆ ಮನವಿ ಸಲ್ಲಿಸುತ್ತಿದ್ದರು. ಹೀಗೆ 2010ರ ಹೊತ್ತಿಗೆ ಎಂಟು ಜನ ಶಿಕ್ಷಕರು ಬಂದರು. ಇಬ್ಬರು ಶಿಕ್ಷಕರಿದ್ದ ಸಂಖ್ಯೆ ಎಂಟಕ್ಕೆ ಏರಿಕೆಯಾಯಿತು.
ಪ್ರಸ್ತುತ ಈಗ ಒಂದರಿಂದ ಎಂಟನೇ ತರಗತಿಗಳು ಇದ್ದು, 310 ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. ನಾನು ಬಂದ ಮೇಲೆ ಒಬ್ಬ ವಿದ್ಯಾರ್ಥಿಯನ್ನು ಶಾಲೆ ಬಿಡಲು ಬಿಟ್ಟಿಲ್ಲ ಎಂದು ಹೇಳುವಾಗ ಅವರ ಮುಖದಲ್ಲಿ ಸಂತೋಷ ಕಾಣುತ್ತಿತ್ತು.
ಈ ಶಾಲೆಯ ಮತ್ತೊಂದು ಹೆಮ್ಮೆ ಎಂದರೆ ಅದೇ ಪೆನ್ಸಿಲ್ ಪತ್ರಿಕೆ. ವಿದ್ಯಾರ್ಥಿಗಳೇ ರೂಪಿಸುವಂತಹ ವಿಶಿಷ್ಟ ಪತ್ರಿಕೆ ಇದಾಗಿದೆ.
ಏನಿದು ಪೆನ್ಸಿಲ್?
ಪೆನ್ಸಿಲ್ ಎಂಬ ಪತ್ರಿಕೆಯು ಈ ಶಾಲೆಯ ವಿದ್ಯಾರ್ಥಿಗಳೇ ರೂಪಿಸುವ ಪತ್ರಿಕೆಯಾಗಿದೆ. ಈ ಊರಿನಲ್ಲಿ ಯಾವುದೇ ಪತ್ರಿಕೆಗಳು ಬರುವುದಿಲ್ಲ. ವಿದ್ಯಾರ್ಥಿಗಳು ರೂಪಿಸುವ ಈ ಪತ್ರಿಕೆಯನ್ನು ಓದಲು ಊರ ಜನರು ಕಾಯುತ್ತಿರುತ್ತಾರೆ.
ಪೆನ್ಸಿಲ್ ಪತ್ರಿಕೆಯು ವಿದ್ಯಾರ್ಥಿಗಳಿಗೆ ಸೃಜನಶೀಲತೆ ಮತ್ತು ಅವರ ಕುಟುಂಬಗಳಿಗೆ ಶಿಕ್ಷಣದ ಮಹತ್ವವನ್ನು ಅರಿತುಕೊಳ್ಳುವ ಅವಕಾಶವನ್ನು ನೀಡಿತು. ಇದು ಕೇವಲ ಶಾಲಾ ಪತ್ರಿಕೆ ಮಾತ್ರವಲ್ಲ, ನಗರ ಸೌಲಭ್ಯಗಳೊಂದಿಗೆ ಯಾವುದೇ ಹೆಚ್ಚಿನ ಸಂಪರ್ಕವನ್ನು ಹೊಂದಿರದ ಹಳ್ಳಿಯ ಮೊದಲ ಪತ್ರಿಕೆ.
"ಮೊದಲು ಗೋಡೆ ಪತ್ರಿಕೆ ಎಂದು ಮಾಡುತ್ತಿದ್ದೆವು. ವಿದ್ಯಾರ್ಥಿಗಳು ಬಿಡಿಸಿದ ಚಿತ್ರ, ಕಥೆ ಹೀಗೆ ಅವುಗಳನ್ನು ಸೇರಿಸಿ ಕೊಲಾಜ್ ರೀತಿ ಮಾಡಿ ಅದನ್ನು ಗೋಡೆಯಲ್ಲಿ ಅಂಟಿಸಲಾಗುತ್ತಿತ್ತು. ನಂತರ ಇದನ್ನು ಪತ್ರಿಕೆಯ ರೀತಿ ಮಾಡಬೇಕೆಂಬ ಆಲೋಚನೆ ಬಂದಾಗ ಅದನ್ನು ಕಾರ್ಯರೂಪಕ್ಕೆ ತಂದೆ," ಎಂದರು.
2013ರಲ್ಲಿ ಪೆನ್ಸಿಲ್ ಪತ್ರಿಕೆಯನ್ನು ಆರಂಭಿಸಿದ್ದು, ಮೊದಲು ವಿದ್ಯಾರ್ಥಿಗಳು ಬರೆದು ಕೊಟ್ಟಿದ್ದನ್ನು ಡಿಟಿಪಿ ಮಾಡಿ, ಪುಟ ವಿನ್ಯಾಸ ಮಾಡಿ ಅದನ್ನು ಮುದ್ರಿಸಿ ಹಂಚಲಾಯಿತು. ಇಲ್ಲಿ ಶಾಲೆಗೆ ಸರಿಯಾಗಿ ಬರದಿರುವ ವಿದ್ಯಾರ್ಥಿಗಳನ್ನು ಮುಖ್ಯವಾಗಿಟ್ಟುಕೊಂಡು ಅವರಿಂದ ಬರೆಸುವುದು, ಚಿತ್ರ ಬಿಡಿಸಿದ್ದನ್ನು ಹಾಕಲಾಯಿತು. ಪಾಲಕರು ತಮ್ಮ ಮಕ್ಕಳು ಹೊಂದಿದ್ದ ಕೌಶಲ್ಯದ ಬಗ್ಗೆ ಹೆಮ್ಮೆ ಪಡಲಾರಂಭಿಸಿದರು. ಇದರಿಂದ ವಿದ್ಯಾರ್ಥಿಗಳು ಕ್ರಮೇಣ ಶಾಲೆಗೆ ಬರತೊಡಗಿದರು. ಹಾಜರಾತಿ ಹೆಚ್ಚತೊಡಗಿತು.
ALSO READ
ಈಗ ಎರಡು ತಿಂಗಳಿಗೊಮ್ಮೆ ನಾಲ್ಕರಿಂದ ಎಂಟು ಪುಟಗಳ್ನೊಳಗೊಂಡಂತಹ ಪತ್ರಿಕೆಯು ಕಳೆದ ಆರು ವರ್ಷಗಳಿಂದ ತಪ್ಪದೇ ಬರುತ್ತಿದೆ. ಮೊದಲು ಸ್ವಂತ ಖರ್ಚಿನಿಂದಲೇ ನಿರ್ವಹಿಸುತ್ತಿದ್ದರು. ಕುಟುಂಬಗಳು ಮತ್ತು ಸ್ನೇಹಿತರಿಗೆ ಪೆನ್ಸಿಲ್ ಪತ್ರಿಕೆಯನ್ನು ಶಿಫಾರಸು ಮಾಡಲು ಪ್ರಾರಂಭಿಸಿದರು. ಯಾರಾದರೂ ಧನಸಹಾಯ ಮಾಡುವವರು ಸಿಕ್ಕರೆ ಒಂದು ಸಾವಿರ ಪ್ರತಿ ಇಲ್ಲದೇ ಇದ್ರೆ ಐದುನೂರು ಪ್ರತಿಗಳನ್ನು ಮುದ್ರಿಸಲಾಗುತ್ತದೆ.
ಆ ಸಂದರ್ಭದಲ್ಲಿ ಬೆಂಗಳೂರಿನ ಐಎಫ್ಎ (ಇಂಡಿಯಾ ಫೌಂಡೇಶನ್ ಫಾರ್ ಆರ್ಟ್ಸ್) ಎಂಬ ಎನ್ ಜಿ ಓ 2018ರಲ್ಲಿ ಒಂದು ವರ್ಷಗಳ ಕಾಲ ಧನಸಹಾಯ ನೀಡಿತು. ಅಲ್ಲದೇ ಕೊಟ್ರೇಶ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಅನೇಕ ಕಡೆ ಕಾರ್ಯ ನಿರ್ವಹಿಸುತ್ತಿದ್ದು ಅದರಿಂದ ಬಂದ ಹಣವನ್ನೆಲ್ಲಾ ಪೆನ್ಸಿಲ್ ಪತ್ರಿಕೆಗಾಗಿ ಖರ್ಚು ಮಾಡಿದ್ದಾರೆ.
ಎಲ್ಲವನ್ನೂ ಮಕ್ಕಳೇ ನಿರ್ವಹಿಸುತ್ತಾರೆ
ಪ್ರಸ್ತುತ ಆರರಿಂದ ಎಂಟನೇ ತರಗತಿಯವರೆಗಿನ ಮಕ್ಕಳು ಪತ್ರಿಕೆಯ ಕೆಲಸದಲ್ಲಿ ತೊಡಗಿಕೊಂಡಿದ್ದು, ಸಂಪಾದಕೀಯಯೊಂದನ್ನು ಹೊರತು ಪಡಿಸಿ, ವರದಿಗಾರಿಕೆ, ಕರಡು ತಿದ್ದುವಿಕೆ, ವಿಷಯ ಸಂಗ್ರಹಣೆ ಎಲ್ಲವನ್ನೂ ವಿದ್ಯಾರ್ಥಿಗಳೇ ಮಾಡುತ್ತಾರೆ. ಡಿಟಿಪಿ ಹಾಗೂ ಪುಟವಿನ್ಯಾಸವೊಂದನ್ನು ಮಾತ್ರ ಕೊಟ್ರೇಶ್ ನಿಭಾಯಿಸುತ್ತಾರೆ.
ಇದಕ್ಕಾಗಿಯೇ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಯೊಂದನ್ನು ತೆಗೆದುಕೊಳ್ಳಲಾಗುತ್ತದೆ. ಅವರಿಗೆ ಈ ರೀತಿ ಮಾಹಿತಿ ಇದೆ, ಪೂರ್ತಿ ಮಾಹಿತಿ ಸಂಗ್ರಹಿಸಿಕೊಂಡು ಬನ್ನಿ ಎಂದು ಹೇಳಲಾಗುತ್ತದೆ. ವಿದ್ಯಾರ್ಥಿಗಳು ತಾವೇ ಓಡಾಡಿ ಮಾಹಿತಿ ತರುತ್ತಾರೆ.
"ಮುಂಬೈನಲ್ಲಿ ಬಾಲಕ ನಾಮಾ ಎಂಬ ಪತ್ರಿಕೆಯೊಂದು ಬರುತ್ತಿದ್ದು, ಇದನ್ನು ಸ್ಲಂನಲ್ಲಿರುವ ಹುಡುಗರು ತರುತ್ತಾರೆ. ಇದನ್ನು ನೋಡಿದ ನನಗೆ ನಮ್ಮ ಶಾಲೆಯಲ್ಲಿಯೂ ಪತ್ರಿಕೆ ಮಾಡಬೇಕೆಂದೆನಿಸಿತು. ಇದರಿಂದ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚೆಚ್ಚು ತೊಡಗಿಕೊಂಡಿದ್ದು. ಅವರ ಪ್ರತಿಭೆಯನ್ನು ತೋರ್ಪಡಿಸಲು ಅವರಿಗೆ ಒಂದು ವೇದಿಕೆಯಾಗಿದ್ದು, ಅವರ ಕ್ರೀಯಾಶೀಲತೆ ಮತ್ತಷ್ಟು ಹೆಚ್ಚಿದೆ. ಈ ಪತ್ರಿಕೆಯು ಈಗ ಊರಿನ ಪ್ರತಿಯೊಂದು ಮನೆಗೂ ತಲುಪುತ್ತದೆ. ಇದಾದ ನಂತರ ಶಾಲೆ ತಪ್ಪಿಸುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ" ಎಂದೆನ್ನುತ್ತಾರೆ.
ಏನೇನಿದೆ ಪತ್ರಿಕೆಯಲ್ಲಿ
ಪತ್ರಿಕೆಯು ವೈವಿಧ್ಯಮಯ ವಿಷಯಗಳನ್ನೊಳಗೊಂಡಿದ್ದು ನಮ್ಮೂರು ನಮ್ಮ ಹೆಮ್ಮೆ, ನಮ್ಮೂರ ಇತಿಹಾಸ ತಿಳಿಯಿರಿ, ಶಾಲಾ ವರದಿ, ಪುಸ್ತಕ ಪರಿಚಯ, ಕಥೆ ಕವನ, ಜನರಲ್ ನಾಲೆಡ್ಜ್, ವಿದ್ಯಾರ್ಥಿಗಳೇ ಬಿಡಿಸಿದ ಚಿತ್ರಗಳು ಮುಂತಾದ ವಿಷಯಗಳಿವೆ.
ಇಲ್ಲಿ ಊರಿನ ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳನ್ನು ಹುಡುಕಿ ವಿದ್ಯಾರ್ಥಿಗಳೇ ಅವರನ್ನು ಮಾತಾಡಾಡಿಸಿ ಲೇಖನ ಬರೆಯುತ್ತಾರೆ. ಅವರಿಗೆ ಗೌರವಪ್ರತಿ ಅಂತ ಐದು ಪತ್ರಿಕಾ ಪ್ರತಿಗಳನ್ನು ನೀಡಲಾಗುತ್ತದೆ. ಕೆಲವೊಬ್ಬರು ಖುಷಿ ಪಟ್ಟು ತಾವೇ ಮುದ್ರಣದ ಖರ್ಚನ್ನು ನೀಡಿ ಮತ್ತಷ್ಟು ಪ್ರತಿಗಳನ್ನು ಮುದ್ರಿಸಿ ಹಂಚುತ್ತಾರೆ.
ಮರಳಿ ಶಾಲೆಗೆ ಬಂದರು
27 ಮಕ್ಕಳು ಈ ಶಾಲೆಯಿಂದ ಖಾಸಗಿ ಶಾಲೆಗೆ ಕಲಿಯಲು ಹೋದವರು, ನಾವು ಈ ಶಾಲೆಯಲ್ಲಿ ಕಲಿಯುತ್ತೇವೆಂದು ಮರಳಿ ಬಂದಿದ್ದಾರೆ. ಅಲ್ಲದೇ ಈ ಬಾರಿ ಒಂದನೇ ತರಗತಿಗೆ 45 ವಿದ್ಯಾರ್ಥಿಗಳು ದಾಖಲಾಗಿದ್ದು ಇದು ಇಷ್ಟು ವರ್ಷಗಳಲ್ಲಿ ಹೆಚ್ಚಿನ ದಾಖಲಾತಿಯಾಗಿದೆ.
ಪೊಪೆಟರಿ ತಂಡ
ಶಾಲಾ ಮಕ್ಕಳನ್ನು ಸೇರಿಸಿ ಪೊಪೆಟರಿ (ಕಡ್ಡಿ ಬೊಂಬೆಯಾಟ) ಎಂಬ ತಂಡವೊಂದನ್ನು ಕಟ್ಟಿದ್ದು, ಇದರ ಮೂಲಕ ಬೇರೆ ಬೇರೆ ಕಡೆ ಪ್ರದರ್ಶನ ನೀಡುತ್ತಿದ್ದು, ಇದರಿಂದ ಬಂದ ಹಣವನ್ನೆಲ್ಲಾ ಪೆನ್ಸಿಲ್ ಪತ್ರಿಕೆಗಾಗಿ ಬಳಸಲಾಗುತ್ತದೆ.
ಈ ಶಾಲೆ ಈಗ ಮಾದರಿ ಶಾಲೆಯೆಂದು ಹೆಸರು ಪಡೆದಿದೆ. ಮೊದಲು ಏನೊಂದು ಸೌಲಭ್ಯಗಳಿಲ್ಲದಿದ್ದ ಶಾಲೆ ಇದೀಗ ಮಾದರಿ ಶಾಲೆಯೊಂದು ಹೆಸರುವಾಸಿಯಾಗಿದೆ. ಇದಕ್ಕೆ ಇತ್ತಿಚೀಗೆ ಶಾಲೆಯಲ್ಲಿ ನಡೆದ ವಿಜ್ಞಾನ ಹಬ್ಬ ಎಂಬ ಸಮಾರಂಭವೇ ಸಾಕ್ಷಿ. ಇಲ್ಲಿ ಬೇರೆ ಬೇರೆ ಶಾಲೆಯ ನೂರೈವತ್ತಕ್ಕೂ ಹೆಚ್ಚು ಮಕ್ಕಳು ಆಗಮಿಸಿದ್ದರು. ಪ್ರಸ್ತುತ ನೂರರಷ್ಟು ಹಾಜರಾತಿಯನ್ನು ಈ ಶಾಲೆಯು ಹೊಂದಿದೆ. ಈ ಶಾಲೆಯ ಒಟ್ಟು ಬದಲಾವಣೆಯಲ್ಲಿ ಎಸ್.ಡಿ.ಎಂ.ಸಿ ಅದ್ಯಕ್ಷರು, ಸದಸ್ಯರು ಹಾಗೂ ಸಹಶಿಕ್ಷಕರ ಸಹಕಾರ ಮತ್ತು ಪ್ರೋತ್ಸಾಹವಿದೆ.
ಒಬ್ಬರ ಭರವಸೆ, ಮುಂದುವರೆಯುವ ಹುಮ್ಮಸ್ಸು ಹಲವಾರು ಜನರ ಜೀವನವನ್ನೇ ಬದಲಾಯಿಸಬಲ್ಲದು. ಕೊಟ್ರೇಶ್ ಅವರ ಒಂದು ನಿರ್ಧಾರ ಮಕ್ಕಳ ಭವಿಷ್ಯದ ಬುನಾದಿಯಾಗಿದೆ ಎಂಬುದಕ್ಕೆ ಪೆನ್ಸಿಲ್ ಪತ್ರಿಕೆ ಉತ್ತಮ ನಿದರ್ಶನ. ಇಂತಹ ಶಿಕ್ಷಕರು ಸಂತತಿ ಸಾವಿರವಾಗಲಿ. ಈ ಶಿಕ್ಷಕರಿಗೆ ನಮ್ಮ ಕಡೆಯಿಂದ ಒಂದು ಸಲಾಮ್.!
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.