"ಗ್ರೀನ್ ಬಯೋಟೆಕ್" ಚಿಕ್ಕಮಗಳೂರಿನ ಪಿಎಚ್ಡಿ ಪದವೀಧರನ ಸಾಹಸ
ಟೀಮ್ ವೈ.ಎಸ್. ಕನ್ನಡ
ರೈತ ಈ ದೇಶದ ಬೆನ್ನೆಲುಬು. ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡರೆ ನಮ್ಮ ರೈತರು ಲಾಭದಲ್ಲಿ ಬೇಸಾಯ ಮಾಡಬಹುದು, ಅದಕ್ಕೆ ನೆರವಾಗುವಂತಹ ಒಂದು ಸಂಸ್ಥೆಯನ್ನು ಚಿಕ್ಕಮಗಳೂರು ಜಿಲ್ಲೆಯ ಬಾಳೇ ಹೊನ್ನೂರಿನ ಯುವಕನೊಬ್ಬ ಕಟ್ಟಿದ್ದಾರೆ.
ನವೀನ್ ಮಿಸ್ಕಿತ್ ಎಂಬ ಯುವಕ "ಗ್ರೀನ್ ಬಯೋಟೆಕ್" ಎಂಬ ಸಂಸ್ಥೆ ಆರಂಭಿಸಿದ್ದಾರೆ. ಈ ಮೂಲಕ ಸಾವಯುವ ಗೊಬ್ಬರ ಉತ್ಪನ್ನಗಳನ್ನು ತಯಾರಿಸುವುದಕ್ಕೆ ಆರಂಭಿಸಿದ್ದಾರೆ. ಎಂಎಸ್ಸಿ ಬಯೋಟೆಕ್ ಮತ್ತು ಪಿಎಚ್ಡಿ ವಿದ್ಯಾಭ್ಯಾಸ ಮಾಡಿಕೊಂಡು ದೊಡ್ಡ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುತ್ತಾ ಕಾಲ ಕಳೆಯಬೇಕಿದ್ದ ನವೀನ್, ತಮ್ಮ ತಂದೆ ಒಮ್ಮೆ ನೀನು ನಾಲ್ಕಾರು ಜನರಿಗೆ ಕೆಲಸ ಕೊಡುವಂತವನಾಗಬೇಕು ಎಂದು ಹೇಳಿದ್ದ ಮಾತಿನಂತೆ ನವೀನ್ ಇಂದು ನಾಲ್ಕಾರು ಜನರಿಗೆ ಉದ್ಯೋಗ ನೀಡುವ ಕಂಪನಿ ತೆರೆದಿದ್ದಾರೆ.
ನವೀನ್ ತಂದೆಗೆ ಒಂದಷ್ಟು ಕೃಷಿ ಭೂಮಿ ಇದ್ದ ಪರಿಣಾಮ ಅವರು ಉತ್ತಮ ಕೃಷಿಕರಾಗಿದ್ದರು. ತಂದೆಯಿಂದ ಪ್ರಭಾವಿತರಾದ ನವೀನ್, ಶೃಂಗೇರಿಯಲ್ಲಿ ಬಿಎಸ್ಸಿ ಪದವಿ ಪಡೆದ ನಂತರ ಬೆಂಗಳೂರು ವಿವಿಯಲ್ಲಿ ಬಯೋಟೆಕ್ ವಿಷಯದಲ್ಲಿ ಎಂಎಸ್ಸಿ ಪದವಿಯಲ್ಲಿ ರ್ಯಾಂಕ್ ಪಡೆದರು. ಆ ನಂತರ ಇಂಪ್ಯಾಕ್ಟ್ ಆಫ್ ಮೈಕ್ರೊ ನೈಟ್ರೆಟ್ ಆನ್ ಮಲಬಾರಿ ಪ್ಲಾಂಟ್ಸ್ ಆಂಡ್ ಈಲ್ಡ್ ಆನ್ ಕುಕೂನ್’ (Impact of Micro Nitrate on Malabari plants and yield on Cocoons) ಎಂಬ ವಿಷಯದಲ್ಲಿ ಪಿ.ಚ್ಡಿ. ಮಾಡಿದ್ದರು. ನವೀನ್ ಸಂಪಾದಿಸಿದ ಪದವಿಯಗಳನ್ನು ಇಟ್ಟುಕೊಂಡಿದ್ದರೆ ನವೀನ್ ಅವರಿಗೆ ದೊಡ್ಡ ಕಂಪನಿಗಳಲ್ಲಿ ಅಥವಾ ಸರ್ಕಾರಿ ಇಲಾಖೆಗಳಲ್ಲಿ ಕೆಲಸ ದೊರೆಯುತ್ತಿತ್ತು. ಆದರೆ, ನವೀನ್ ಮಾತ್ರ ತಮ್ಮ ತಂದೆಯ ಮಾತನ್ನು ಕೇಳಿ 2004ರಲ್ಲಿ ಬಾಳೆಹೊನ್ನೂರಿನಲ್ಲಿ ಒಂದು ಗೊಬ್ಬರ ಮಾರಾಟ ಮಾಡುವ ಅಂಗಡಿ ತೆರೆದರು.
ಇದನ್ನು ಓದಿ: ಹಸಿವಿನ ಬಗ್ಗೆ ಚಿಂತೆ ಬಿಡಿ- 7thಸಿನ್ ಫುಡ್ಟ್ರಕ್ಗೆ ವಿಸಿಟ್ ಕೊಡಿ
ನವೀನ್ ಆ ಅಂಗಡಿಯಲ್ಲಿ ಬರೀ ಗೊಬ್ಬರ ಮಾರಾಟ ಮಾತ್ರವಲ್ಲದೆ ಕೃಷಿಗೆ ಸಂಬಂಧಿಸಿದಂತ ಉಚಿತ ಸಲಹೆಗಳನ್ನು ಸಹ ನೀಡುತ್ತಿದ್ದರು. 2008ರಲ್ಲಿ ನವೀನ್ ‘ಗ್ರೀನ್ ಬಯೋಟೆಕ್’ ಎಂಬ ಸಂಸ್ಥೆ ಆರಂಭಿಸುವ ಮೂಲಕ ಸಾವಯುವ ಗೊಬ್ಬರ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದರು.
ಕಂಪನಿಯನ್ನೇನೊ ಪ್ರಾರಂಭಿಸಿ ಬಿಟ್ಟರು, ಆದರೆ ಅದಕ್ಕೆ ಸೂಕ್ತ ಪ್ರಚಾರದ ಕೊರತೆ ಇದ್ದ ಪರಿಣಾಮ ನವೀನ್ ಸತತ ಮೂರು ವರ್ಷಗಳ ಕಾಲ ಖುದ್ದು ರೈತರ ಬಳಿ ಹೋಗಿ ಪ್ರಚಾರ ಮಾಡಿದರು. ನೇರವಾಗಿ ರೈತರನ್ನು ಸಂಪರ್ಕಿಸಿ ತಮ್ಮ ಸಾವಯುವ ಉತ್ಪನ್ನಗಳ ಬಗ್ಗೆ ವಿವರಣೆ ನೀಡುತ್ತಿದ್ದರು. ಈ ಸಮಯದಲ್ಲಿ ಎಷ್ಟೋ ಬಾರಿ ನವೀನ್ ತಮ್ಮ ಕಾರಿನಲ್ಲಿಯೇ ಮಲಗಿದ್ದು ಉಂಟು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ಗೊಬ್ಬರದ ಅಂಗಡಿಗಳಿಗೆ ಹೋಗಿ ತನ್ನ ಕಂಪನಿಯ ಔಷಧಿ, ಗೊಬ್ಬರಗಳನ್ನು ಪರಿಚಿಯಿಸುತ್ತಿದ್ದರು. ಇವರ ಶ್ರಮ ವ್ಯರ್ಥವಾಗಲಿಲ್ಲ. ಸಾಕಷ್ಟು ಅಂಗಡಿಗಳು ಇವರ ಉತ್ಪನ್ನಗಳನ್ನು ಕೊಂಡು ಕೊಂಡರು.
ಹೀಗೆ ತಮ್ಮ ಶ್ರಮದ ಪ್ರತಿಫಲವಾಗಿ ನವೀನ್ ಅವರ ‘ಗ್ರೀನ್ ಬಯೋಟೆಕ್’ ಉದ್ಯಮದ ಉತ್ಪನ್ನಗಳಿಗೆ ಇಂದು ದೇಶಾದ್ಯಂತ ಬೇಡಿಕೆ ಇದೆ. ಇಷ್ಟೇ ಅಲ್ಲದೆ ವಿದೇಶದಲ್ಲೂ ಬೇಡಿಗೆ ಹೆಚ್ಚಾಗಿದ್ದು, ಸದ್ಯ ಅಲ್ಲಿಗೂ ಪೂರೈಸುತ್ತಿದ್ದಾರೆ. ಇಬ್ಬರು ನೌಕರರರೊಂದಿಗ ಆರಂಭವಾದ ಇವರ ‘ಗ್ರೀನ್ ಬಯೋಟೆಕ್’ ಈಗ ಸುಮಾರು 70 ಖಾಯಂ ನೌಕರರನ್ನು ಹೊಂದಿದೆ. ಸರಿಸುಮಾರು 70ಕ್ಕೂ ಹೆಚ್ಚು ಉತ್ಪನ್ನಗಳನ್ನು ನವೀನ್ ಅವರ ಸಂಸ್ಥೆ ತಯಾರಿಸುತ್ತಿದೆ. 30 ಸಾವಿರ ರೂಪಾಯಿಯಿಂದ ಆರಂಭವಾದ ಇವರ ಕಂಪನಿ ಇಂದು 18 ಕೋಟಿಗೂ ಹೆಚ್ಚಿನ ವ್ಯವಹಾರ ಮಾಡುತ್ತಿದೆ.
ಎಲ್ಲೆಲ್ಲಿಗೆ ರಫ್ತು..?
ಸದ್ಯ ಗ್ರೀನ್ ಬಯೋಟೆಕ್ ಉತ್ಪನ್ನಗಳಿಗೆ ಪಶ್ಚಿಮ ಬಂಗಾಳ, ಆಂಧ್ರ , ತಮಿಳುನಾಡು, ಮಹಾರಾಷ್ಟ್ರ, ಹೀಗೆ ದಕ್ಷಿಣ ಭಾರತದ ಬಹುತೇಕ ರಾಜ್ಯಗಳಲ್ಲಿ ಬೇಡಿಕೆ ಇದೆ. ಶ್ರೀಲಂಕಾ, ವಿಯೆಟ್ನಾಂ ರಾಷ್ಟ್ರಗಳಲ್ಲೂ ಇವರ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ.
ನವೀನ್ ಬರೀ ಉದ್ಯಮವನ್ನಷ್ಟೇ ಮಾಡದರೆ ರೈತರಿಗೆ ಅನುಕೂಲವಾಗುವಂತಹ ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದಾರೆ. ಇವರದ್ದೇ ಒಂದು ಪ್ರಯೋಗಾಲಯ ಇದ್ದು, ಅಲ್ಲಿ ಮಣ್ಣು ಪರೀಕ್ಷೆ ಮಾಡುತ್ತಾರೆ. ಕೃಷಿಗೆ ಸಂಬಂಧಿಸಿದಂತೆ ಫೋನ್ ಮೂಲಕ ರೈತರಿಗೆ ಸಲಹೆ ಸೂಚನೆಗಳನ್ನು ಕೂಡ ನವೀನ್ ನೀಡುತ್ತಾರೆ. ರೈತರ ಸಮಸ್ಯೆ ಆಲಿಸಿ ಅವಕ್ಕೆ ಪರಿಹಾರ ಸೂಚಿಸಲು ನವೀನ್ ಅವರ ಸಿಬ್ಬಂದಿಗಳು ಸಹಾಯ ಮಾಡುತ್ತಾರೆ. ವಾಟ್ಸ್ಆ್ಯಪ್ ಮೂಲಕವೂ ನವೀನ್ ಸಲಹೆ ನೀಡುತ್ತಾರೆ. ಇವರ ಎಲ್ಲಾ ಕೆಲಸಗಳಿಗೂ ನವೀನ್ ಅವರ ಕುಟುಂಬದ ಬೆಂಬಲವಿದೆ. ಒಟ್ಟಿನಲ್ಲಿ "ಗ್ರೀನ್ ಬಯೋಟೆಕ್" ಮೂಲಕ ನವೀನ್ ಸಾವಯುವ ಉತ್ಪನ್ನಗಳನ್ನು ಮಾರಾಟ ಮಾಡುವುದಲ್ಲದೆ ರೈತರಿಗೆ ಸಹಾಯವಾಗುವ ಹಲವು ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ.
1. ಕೇವಲ ಟ್ಯಾಕ್ಸಿಯಲ್ಲಿ ಮಾತ್ರ ಅಲ್ಲ… ಬೈಕ್ನಲ್ಲೂ ನಿಮ್ಮನ್ನು ಪಿಕ್ಅಪ್ ಮಾಡ್ತಾರೆ..!
2. ಹಠ+ ಛಲ+ ಸಾಧನೆ = ದೀಪಾಲಿ ಸಿಕಂದ್
3. ತೊಟ್ಟಿ ಸೇರುವ ಆಹಾರವನ್ನು ಹೊಟ್ಟೆ ಸೇರುವಂತೆ ಮಾಡಿದ ಫ್ರಾನ್ಸ್ ಸರ್ಕಾರ..!