ಮಗಳ ಶಾಲಾ ಚಟುವಟಿಕೆಯಿಂದ ವ್ಯಕ್ತವಾಯಿತು ತಾಯಿಯ ಸೃಜನಶೀಲ ಕಲಾ ಕುಸುರಿ ಕೆಲಸ-ಬೆಂಗಳೂರಿನ ಗೃಹಣಿ ಮೃದುಲಾ ಹೆಗಡೆಯ ಕಲಾಸಾಧನೆಯ ಕಥೆಯಿದು
ವಿಶ್ವಾಸ್ ಭಾರಾಧ್ವಾಜ್
ತಮ್ಮೊಳಗೆ ಒರ್ವ ಕಲಾವಿದೆಯನ್ನು ಹೊಂದಿದ್ದ ಆ ಮಹಿಳೆಗೆ ನಿತ್ಯದ ಮನೆ ಕೆಲಸ ಹಾಗೂ ಸಂಸಾರ ತಾಪತ್ರಯಗಳ ನಡುವೆ ಆ ಸೃಜನಶೀಲ ಕಲೆಯನ್ನು ಹೊರಹಾಕಲು ಅವಕಾಶವೇ ಸಿಕ್ಕಿರಲಿಲ್ಲ. ಆದರೆ ಅವರ 12 ವರ್ಷದ ಮಗಳು ಶಾಲೆಯಲ್ಲಿ ವಿಭಿನ್ನ ಕಲಾತ್ಮಕ ಚಟುವಟಿಕೆಗಳ ಹೋಂವರ್ಕ್ ಪಡೆದು ಮಾಡುವುದನ್ನು ನೋಡುವಾಗ ಹಾಗೂ ಮಗಳಿಗೆ ಈ ಕಲೆಗಳ ಕುರಿತು ಹೇಳಿಕೊಡುವ ಸಂದರ್ಭದಲ್ಲಿ ಅವರಲ್ಲಿದ್ದ ಕಲಾಭಿರುಚಿ ಅಭಿವ್ಯಕ್ತಗೊಳ್ಳಲು ಮನಸೊಳಗೆ ಸಿದ್ಧತೆ ನಡೆಸಿತ್ತು. ಮಗಳ ಸೃಜನಾತ್ಮಕ ಕೆಲಸಗಳ ನಡುವೆ ಅವರಲ್ಲೊಂದು ಅವ್ಯಕ್ತ ಕಲೆ ಬಹಿರಂಗವಾಗಿತ್ತು. ಅದೇ ಮೆಸೆಜ್ ಇನ್ ಬಾಟೆಲ್. ಅನುಪಯುಕ್ತ ಬಾಟೆಲ್ಗಳಲ್ಲಿ ಸಂದೇಶಗಳನ್ನು ಬರೆಯುವ ಹಾಗೂ ಕಸದಿಂದ ಸೃಜನಶೀಲ ಉತ್ಪನ್ನಗಳನ್ನು ನಿರ್ಮಿಸುವ ಈ ಕಲೆಯನ್ನು ಸಿದ್ಧಿಸಿಕೊಂಡ ಮಧ್ಯಮ ವರ್ಗದ ಗೃಹಿಣಿಯೇ ಮೃದುಲಾ ಹೆಗಡೆ.
ತಮ್ಮ ಮಗಳ ಚಿತ್ರ ಹಾಗೂ ಪೇಂಟಿಂಗ್ ಅಸೈನ್ಮೆಂಟ್ಗಟ್ಗಳಿಗೆ ನೆರವಾಗುವ ಮೂಲಕ ತಮ್ಮಲ್ಲಿಯೂ ಕಲೆಯ ಭಾವವನ್ನು ಸೃಷ್ಟಿಸಿಕೊಂಡವರು ಮೃದುಲಾ. ಅತ್ಯಂತ ಅಪರೂಪದ ಮೆಸೆಜ್ ಇನ್ ಬಾಟೆಲ್ ಆರ್ಟ್ ರಚನೆಯಲ್ಲಿ ಈಗ ಮೃದುಲಾ ತಲ್ಲೀನರಾಗಿದ್ದಾರೆ. ತಮ್ಮ ಬಿಡುವಿನ ವೇಳೆಯಲ್ಲಿ ಈ ಬಾಟೆಲ್ನಲ್ಲಿ ಸಂದೇಶ ರಚಿಸುವುದು ಅವರ ಅಚ್ಚುಮೆಚ್ಚಿನ ಹವ್ಯಾಸವಾಗಿದೆ.
ನಿತ್ಯದ ಬದುಕಿನ ಜಂಜಾಟಗಳಲ್ಲಿ ಕಳೆದು ಹೋಗಿದ್ದ ಮೃದುಲಾಗೆ ಒಳಗೊಳಗೆ ಕಲೆಯ ತುಡಿತ ಮಿಡಿಯುತ್ತಲೇ ಇತ್ತು. ಕಲೆಯ ವಿನಃ ಅವರ ಬದುಕಿನಲ್ಲಿ ಸ್ವಾರಸ್ಯವೂ ಇರಲಿಲ್ಲ, ಮೃದುಲಾಗೆ ಅಂತಹ ಯಾಂತ್ರಿಕ ಬದುಕಿನಲ್ಲಿ ಉತ್ಸಾಹವೂ ಇರಲಿಲ್ಲ. ಕಲೆ ಅನ್ನುವುದು ಸೃಜನಶೀಲ ಸಾಧನೆ. ಇದಕ್ಕೆ ಸಾಕಷ್ಟು ಬದ್ಧತೆ ಹಾಗೂ ಸಂಯಮದ ಅಗತ್ಯವಿದೆ. ಮಾನಸಿಕವಾಗಿ ಅತ್ಯಂತ ಹೆಚ್ಚಿನ ಒತ್ತಡ ಹೇರಿದಾಗ, ಕಲ್ಪನೆಯಲ್ಲಿ ತೀವ್ರ ತುಡಿತವಿದ್ದಾಗ ಹಾಗೂ ಆತ್ಮಕ್ಕೆ ಥೆರಪಿ ನೀಡಿದಾಗ ಮಾತ್ರ ಅತ್ಯುತ್ತಮ ಕಲೆಯೊಂದು ಹೊರಹೊಮ್ಮಲು ಸಾಧ್ಯ ಅನ್ನುವುದು ಮೃದುಲಾ ಹೆಗಡೆಯವರ ದೃಢವಾದ ನಂಬಿಕೆ.
ತಮ್ಮ ತಾರುಣ್ಯದ ದಿನಗಳಲ್ಲಿ ಮೃದುಲಾ ಆರ್ಟ್ ಹಾಗೂ ಕ್ರಾಫ್ಟ್ ಕಲಿತುಕೊಂಡಿದ್ದರು. ಸೃಜನಶೀಲ ಚಿತ್ರ ರಚನೆ, ಪೇಂಟಿಂಗ್, ಕರಕುಶಲ ವಸ್ತುಗಳ ನಿರ್ಮಾಣ, ಕಸದಿಂದ ಕಲಾತ್ಮಕ ವಸ್ತುಗಳ ರೂಪದಲ್ಲಿ ಮರುಬಳಕೆ ಮುಂತಾದ ಕಲೆಯನ್ನು ಅತ್ಯಂತ ಆಸಕ್ತಿಯಿಂದ ಕಲಿತಿದ್ದರು. ಆದರೆ ಇವುಗಳನ್ನು ಅಭಿವ್ಯಕ್ತಪಡಿಸಿಲು ಅವರಿಗೆ ವೇದಿಕೆ ಸಿಕ್ಕಿರಲಿಲ್ಲ. ಅಂತದ್ದೊಂದು ಮಾಧ್ಯಮ ಮತ್ತೆ ಅವರಿಗೆ ಸಿಕ್ಕಿದ್ದು, ಮಗಳ ಶಾಲೆಯ ಕಲೆಗೆ ಸಂಬಂಧಿಸಿದ ಅಸೈನ್ಮೆಂಟ್ನ ಮೂಲಕ. ಮೊದಲು ಅವರ ಮನಸಿನಲ್ಲಿದ್ದಿದ್ದು ಅನುಪಯುಕ್ತ ತ್ಯಾಜ್ಯ ವಸ್ತುಗಳಿಂದ ರಚನಾತ್ಮಕ ಕಲೆ ನಿರ್ವಹಿಸಬೇಕು ಅನ್ನುವುದು.
ಇದಕ್ಕಾಗಿ ಅವರ ವೇಸ್ಟ್ ಬಾಟೆಲ್ಗಳನ್ನು ಆಯ್ದುಕೊಂಡು ಅದರ ಮೇಲೆ ವಿವಿಧ ಚಿತ್ರಗಳು ಹಾಗೂ ತಮ್ಮ ಕಲ್ಪನೆಯಲ್ಲಿ ಮೊಳೆತ ಕಲಾ ಪ್ರಾಕಾರಗಳನ್ನು ಕಾಪಿ ಮಾಡತೊಡಗಿದರು. ಆದರೆ ಅವರ ಈ ವರ್ಕ್ನಲ್ಲಿ ಅವರಿಗೊಂದು ಕ್ಲಾರಿಟಿ ಬೇಕಿತ್ತು. ಇದಕ್ಕೆ ಫೇಸ್ಬುಕ್ನಲ್ಲಿ ಬೆಂಗಳೂರು ಕ್ರಾಫ್ಟ್ ಲವರ್ಸ್ ಪೇಜ್ ಅವರಿಗೆ ನೆರವಾಯಿತು. ಈ ಪೇಜ್ನಲ್ಲಿದ್ದ ಕಲಾವಿದರನ್ನು ಸಂಪರ್ಕಿಸಿದ ಮೃದುಲಾ, ತಮ್ಮ ಆಸಕ್ತಿ ಹಾಗೂ ಕೆಲಸಗಳನ್ನು ವಿವರಿಸಿ, ಅವರಿಂದ ಸೂಕ್ತ ಸಲಹೆ ಸೂಚನೆಗಳನ್ನು ಪಡೆದುಕೊಂಡರು. ಮೃದುಲಾ ಹೆಗಡೆಯವರ ಅನನ್ಯ ಕಲೆಗೊಂದು ಟ್ವಿಸ್ಟ್ ಸಿಕ್ಕಿತ್ತು. ಯೂಟ್ಯೂಬ್ನಲ್ಲಿ ಇನ್ನಷ್ಟು ಈ ರೀತಿಯ ಕಲಾತ್ಮಕ ವಸ್ತುಗಳ ನಿರ್ಮಾಣವನ್ನು ನೋಡಿ ಕಲಿತುಕೊಂಡ ಮೃದುಲಾ ಘನತ್ಯಾಜ್ಯ ಅನುಪಯುಕ್ತ ವಸ್ತುಗಳಿಂದ ಮನೆಯನ್ನು ಅಲಂಕರಿಸಬಲ್ಲ ಶೋಕೇಸ್ ಉತ್ಪನ್ನಗಳನ್ನು ನಿರ್ಮಿಸಬಹುದು ಅನ್ನುವ ಯೋಜನೆಯನ್ನು ಕಾರ್ಯರೂಪಕ್ಕಿಳಿಸಿದರು.
ಮೃದುಲಾ ಹೆಗಡೆಯವರು, ಉಪಯೋಗಿಸಿ ಬಿಟ್ಟ ಅನುಪಯುಕ್ತ ಮರದ ಪೆಟ್ಟಿಗೆಗಳು, ಟಿನ್ಗಳು, ಗಾಜಿನ ಬಾಟೆಲ್ಗಳು, ಜಾಮ್ ಜಾರ್ಗಳು, ಉಪ್ಪಿನಕಾಯಿ ಕ್ಯಾನ್ಗಳು, ಬಿಯರ್ ಬಾಟೆಲ್ ಹಾಗೂ ಇನ್ನಿತರೆ ಪ್ಲಾಸ್ಟಿಕ್ ಬಾಟಲ್ಗಳನ್ನೇ ತಮ್ಮ ಪ್ರಯೋಗಕ್ಕೆ ಬಳಸಿಕೊಂಡರು. ಇದಕ್ಕಾಗಿ ಕೆಲವು ವರ್ಕ್ಶಾಪ್ಗಳು ಹಾಗೂ ಸೆಮಿನಾರ್ಗಳಲ್ಲಿ ಅವರು ಭಾಗವಹಿಸಿದ್ದರು. ಅವರಲ್ಲಿದ್ದ ಸೃಜನಶೀಲ ಕಲಾಭಿರುಚಿಗೆ ಅವರ ಕುಟುಂಬದಿಂದ ಹಾಗೂ ಸ್ನೇಹಿತರಿಂದ ಸಾಕಷ್ಟು ಪ್ರೋತ್ಸಾಹ ದೊರೆಯಿತು. ಕ್ರಮೇಣ ಅವರ ಪ್ರವೃತ್ತಿಯನ್ನೇ ವೃತ್ತಿಪರ ಚಟುವಟಿಕೆಯನ್ನಾಗಿಸಲು ಅವರು ನಿರ್ಧರಿಸಿದ್ದರು.
ಮೊದಲು ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮೃದುಲಾ, ಬಳಿಕ ಕೆಲಸಕ್ಕೆ ಗುಡ್ ಬೈ ಹೇಳಲು ನಿರ್ಧರಿಸಿದರು. ಅವರಿಗೆ ಕಲೆಯ ಕೆಲಸ ಸಂಪೂರ್ಣ ಆತ್ಮ ತೃಪ್ತಿ ನೀಡುತ್ತಿತ್ತು. ಜೊತೆಗೆ ನಿತ್ಯದ 8 ಗಂಟೆಯ ಶಿಫ್ಟ್ ಕೆಲಸ ಹಾಗೂ ಪ್ರಾಜೆಕ್ಟ್ ಜಂಜಾಟಗಳಿಂದ ದೂರ ಉಳಿದು ತಮ್ಮ ಕನಸಿನ ವೃತ್ತಿ ಮುಂದುವರೆಸುವ ಆಶಯ ಅವರದ್ದಾಗಿತ್ತು. ಮೃದುಲಾ ಯಾವುದಾದರೂ ಕಲಾ ಕುಸುರಿ ಪ್ರಾರಂಭಿಸಿದರೇ ಅದನ್ನು ಒಂದೇ ದಿನಕ್ಕೆ ಮುಗಿಸುವುದಿಲಿಲ್ಲ. ಅದರಲ್ಲಿನ ಲಾಲಿತ್ಯವನ್ನು ಅನುಭವಿಸುತ್ತಾ, ಥೆರಪಿ ಪಡೆದುಕೊಳ್ಳುವಂತೆ ಎರಡು ಮೂರು ದಿನಗಳ ಕಾಲ ಕುಸುರಿ ಕೆಲಸ ಮುಂದುವರೆಸುತ್ತಾರೆ. ಇದರಿಂದ ಅವರಿಗೆ ತಮ್ಮ ಕಲೆಯ ಮೇಲೆ ಅವ್ಯಕ್ತ ಹಾಗೂ ಅವರ್ಣನೀಯ ಆಸ್ಥೆ ಬೆಳೆಯುತ್ತದೆಯಂತೆ. ಈಗಾಗಲೆ ಮೃದುಲಾರ ಸೃಜನಾತ್ಮಕ ಕಲೆಗೆ ಯೋಗ್ಯ ಮನ್ನಣೆ ದೊರೆಯುತ್ತಿದೆ. ಸಾಕಷ್ಟು ವೈವಿದ್ಯಮಯ ಕಲಾ ಕುಸುರಿತನ ಮೂಡಿಸುತ್ತಿರುವ ಮೃದುಲಾರ ಕೆಲಸಕ್ಕೆ ಭರಪೂರಾ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ. ತಾವು ರಚಿಸಿರುವ ಉತ್ಪನ್ನಗಳ ಫೋಟೋ ತೆಗೆದು ತಮ್ಮ ಫೇಸ್ಬುಕ್ ಪೇಜ್ ಬ್ರಿಸ್ಟಲ್ ಎಂಡ್ ಗ್ಲೂ ಅನ್ನುವ ತಾಣದಲ್ಲಿ ಪ್ರಕಟಗೊಳಿಸುತ್ತಿದ್ದಾರೆ. ಇದರಿಂದ ಸಾಕಷ್ಟು ಕಲಾಭಿಮಾನಿಗಳು ಈಗಾಗಲೆ ಮೃದುಲಾ ಕೆಲಸವನ್ನು ಮುಕ್ತಕಂಠದಿಂದ ಮೆಚ್ಚಿಕೊಂಡಿದ್ದಾರೆ. ಈ ಜಾಲತಾಣದಲ್ಲಿಯೇ ಮೃದುಲಾ ಸಾಕಷ್ಟು ಬೇಡಿಕೆಯನ್ನೂ ಗಿಟ್ಟಿಸಿಕೊಳ್ತಿದ್ದಾರೆ.
ತಾವು ಮಾಡ್ತಿರೋ ಈ ಕೆಲಸವನ್ನು ಮೃದುಲಾ ಅತ್ಯಂತ ಇಷ್ಟಪಡ್ತಾರೆ ಹಾಗೂ ಈ ಕಲಾ ರಚನೆಯೊಂದಿಗೆ ಭಾವನಾತ್ಮಕವಾಗಿ ಹೊಂದಿಕೊಂಡಿದ್ದಾರೆ. ಕಲೆಯನ್ನು ಪ್ರೀತಿಸುವ ಅವರು ಇದನ್ನೇ ವ್ಯವಹಾರವನ್ನಾಗಿಸಿಕೊಳ್ಳುವ ಕನಸಿಟ್ಟುಕೊಂಡಿದ್ದಾರೆ. ಭಾರತೀಯ ಕರಕುಶಲ ವಸ್ತುಗಳ ಮಾರುಕಟ್ಟೆಯಲ್ಲಿ ವಿಭಿನ್ನ ಹೆಸರು ಹಾಗೂ ಮಾರುಕಟ್ಟೆ ಶೇರುಗಳನ್ನು ಗಳಿಸಿಕೊಳ್ಳುವ ಮಹತ್ವಕಾಂಕ್ಷೆ ಅವರಿಗಿದೆ. ಇವೆಲ್ಲದರ ಜೊತೆ ಮೃದುಲಾರ ಇನ್ನೊಂದು ವಿಶೇಷತೆ ಎಂದರೆ, ಅವರು ಒಮ್ಮೆ ರಚಿಸಿದ ಉತ್ಪನ್ನವನ್ನು ಮತ್ತೆ ನಿರ್ಮಿಸುವುದಿಲ್ಲ. ಹಾಗಾಗಿ ಅವರ ಪ್ರತಿಯೊಂದು ಉತ್ಪನ್ನಗಳಲ್ಲೂ ಜೀವಂತಿಕೆ ಹಾಗೂ ಹೊಸತನದ ಹೊಳಪಿದೆ. ಯುವರ್ ಸ್ಟೋರಿ ವತಿಯಿಂದ ಮೃದುಲಾ ಹೆಗಡೆಯವರ ಈ ಸೃಜನಶೀಲ ಸಾಧನೆಗೆ ಅಭಿನಂದನೆಗಳು ಸಲ್ಲುತ್ತದೆ.