ಆನಂದ್ ಮಹೀಂದ್ರಾರ ಸಹಾಯದೊಂದಿಗೆ ಥಿಂಕರ್‌ಬೆಲ್ ಲ್ಯಾಬ್ಸ್ ಅಭಿವೃದ್ಧಿಪಡಿಸಿದ ಬ್ರೈಲ್ ಸಾಧನವಾದ ‘ಅನ್ನಿ’ ಅಂಧರು ತಾವಾಗಿಯೇ ಕಲಿಯಲು ಸಹಾಯ ಮಾಡುತ್ತಿದೆ
ಬೆಂಗಳೂರು ಮೂಲದ ಥಿಂಕರ್‌ಬೆಲ್ ಲ್ಯಾಬ್ಸ್ ನ ಪ್ರಮುಖ ಉತ್ಪನ್ನವಾದ ಅನ್ನಿ, ದೃಷ್ಟಿಹೀನ ವಿದ್ಯಾರ್ಥಿಗಳ ಆರಂಭಿಕ ಶಾಲಾ ಶಿಕ್ಷಣಕ್ಕೆ ಸಹಾಯ ಮಾಡುತ್ತದೆ.
ರಾಂಚಿಯಲ್ಲಿ ದೃಷ್ಟಿ ವಿಕಲಚೇತನರ ಶಾಲೆಯಾದ ರಾಜ್ಯಕ್ರಿತ್ ನೇತ್ರಾಹಿನ್ ಮಧ್ಯ ವಿದ್ಯಾಲಯದಲ್ಲಿ, ಆರು ಮತ್ತು ಹದಿನೆಂಟು ವರ್ಷದೊಳಗಿನ 24 ವಿದ್ಯಾರ್ಥಿಗಳು ಇದ್ದಾರೆ. ಇಬ್ಬರು ಶಿಕ್ಷಕರಿಂದ ಪ್ರತಿದಿನ ಸುಮಾರು 60 ನಿಮಿಷಗಳ ಕಾಲ ಅವರಿಗೆ ಬ್ರೈಲ್ ಕಲಿಸಲಾಗುತ್ತಿತ್ತು. ಇದರರ್ಥ ಪ್ರತಿ ವಿದ್ಯಾರ್ಥಿಗೆ ಕೇವಲ ಐದು ನಿಮಿಷಗಳ ವೈಯಕ್ತಿಕ ಗಮನವನ್ನು ನೀಡಲಾಗುತ್ತಿತ್ತು ಮತ್ತು ಉಳಿದ ಸಮಯವನ್ನು ವ್ಯಾಯಾಮಕ್ಕಾಗಿ ಅಥವಾ ಚಟುವಟಿಕೆಗಳನ್ನು ಮಾಡಲು ಮೀಸಲಿಡಲಾಗಿತ್ತು. ಈ ಬೋಧನಾ ವಿಧಾನವು ಸ್ಪಷ್ಟವಾಗಿ ಅಸಮರ್ಥವಾಗಿತ್ತು ಮತ್ತು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಕ್ರೀಯಾಶೀಲ ಸಮಯವನ್ನು ಹಾಳು ಮಾಡುತಿತ್ತು.
ಅನೇಕ ವರ್ಷಗಳಿಂದ, ಬ್ರೈಲ್ ದೃಷ್ಟಿಹೀನರಿಗೆ ಹಲವು ವಿಧಗಳಲ್ಲಿ ಸಹಾಯ ಮಾಡಿದೆ, ಆದರೆ ಅದನ್ನು ಶಿಕ್ಷಕರಿಂದ ಅಥವಾ ಇನ್ನಿತರ ಹೊರಗಿನವರ ಅಡಿಯಲ್ಲಿ ಕಲಿಯಬೇಕಾಗಿತ್ತು. ಆದಾಗ್ಯೂ, ಹೋರಗಿನವರಿಂದ ಕಲಿಯಬೇಕಾದರೆ ಆಗುವ ಸಮಸ್ಯೆ ಎಂದರೆ ವಿದ್ಯಾರ್ಥಿಗಳಿಗೆ ಸ್ವಂತವಾಗಿ ಆತ್ಮವಿಶ್ವಾಸದಿಂದ ಕಲಿಯಲು ಸಾಧ್ಯವಾಗದೆ ಇರುವುದು.
ಈ ಸಮಸ್ಯೆಯನ್ನು ಗುರುತಿಸುವುದು ಮತ್ತು ಬ್ರೈಲ್ ಸ್ವ-ಕಲಿಕೆಯ ಪ್ರಕ್ರಿಯೆ ಎಂಬ ನಂಬಿಕೆಯೇ 2016 ರಲ್ಲಿ ಥಿಂಕರ್ಬೆಲ್ ಲ್ಯಾಬ್ಸ್ ಹುಟ್ಟಲು ಕಾರಣವಾಯಿತು. ಬಿಟ್ಸ್ ಪಿಲಾನಿಯವರ ಯೋಜನೆಯಾದ 'ಪ್ರಾಜೆಕ್ಟ್ ಮುದ್ರಾ', ಥಿಂಕರ್ಬೆಲ್ ಲ್ಯಾಬ್ಸ್ ಅನ್ನು ಅಮನ್ ಶ್ರೀವಾಸ್ತವ, ಸೈಫ್ ಶೇಖ್, ಸಂಸ್ಕೃತಿ ದಾವ್ಲೆ ಮತ್ತು ದಿಲೀಪ್ ರಮೇಶ್ ಪ್ರಾರಂಭಿಸಿದರು.
ಬೆಂಗಳೂರು ಮೂಲದ ಈ ಸ್ಟಾರ್ಟ್ ಅಪ್ ದೃಷ್ಟಿಹೀನರಿಗೆ ತಾವಾಗಿಯೇ ಬ್ರೈಲ್ ಕಲಿಯಲು ಸಹಾಯ ಮಾಡುವಂತಹ ಬ್ರೈಲ್ ಸಾಕ್ಷರತಾ ಸಾಧನಗಳನ್ನು ತಯಾರಿಸುತ್ತದೆ. ದೃಷ್ಟಿಹೀನ ವಿದ್ಯಾರ್ಥಿಗಳ ಆರಂಭಿಕ ಶಾಲೆಗೆ ಬ್ರೈಲ್-ಆಧಾರಿತ ಹಾರ್ಡ್‌ವೇರ್ ಮೂಲಕ ಅದರ ಗ್ಯಾಮಿಫೈಡ್ ಆಡಿಯೊ ಪಾಠಗಳೊಂದಿಗೆ ಅನ್ನಿ ಸಾಧನವು ಸಹಾಯ ಮಾಡುತ್ತದೆ.
ಪ್ರಸ್ತುತ ತಂಡವು ಒಂಬತ್ತು ಸದಸ್ಯರನ್ನು ಹೊಂದಿದ್ದು, ಇದು ಆನಂದ್ ಮಹೀಂದ್ರಾ, ಲೆಟ್ಸ್ ವೆಂಚರ್ ಮತ್ತು ಇಂಡಿಯನ್ ಏಂಜಲ್ ನೆಟ್‌ವರ್ಕ್ ಮುಂತಾದವುಗಳಿಂದ ಇದುವರೆಗೆ ಒಟ್ಟು 3.4 ಕೋಟಿ ರೂ. ಸಹಾಯಧನವನ್ನು ಸಂಗ್ರಹಿಸಿದೆ.
ಇದು ಹೇಗೆ ಕೆಲಸ ಮಾಡುತ್ತದೆ?
ಥಿಂಕರ್‌ಬೆಲ್‌ನ ಅನ್ನಿ ಸಾಧನವು ಹೆಲೆನ್ ಕೆಲ್ಲರ್‌ನ ಶಿಕ್ಷಕಿ ಅನ್ನಿ ಸುಲ್ಲಿವಾನ್ ಅವರಿಂದ ಈ ಹೆಸರನ್ನು ಪಡೆದುಕೊಂಡಿದೆ. ದೃಷ್ಟಿಹೀನರಲ್ಲಿ ಕಡಿಮೆ ಬ್ರೈಲ್ ಸಾಕ್ಷರತೆಯ ದರದ ಸಮಸ್ಯೆಯನ್ನು ಪರಿಹರಿಸಲು ವಿನ್ಯಾಸಗೊಳಿಸಲಾದ ಸಾಧನ ಇದಾಗಿದ್ದು, ಬ್ರೈಲ್‌ನಲ್ಲಿ ಓದುವುದು, ಬರೆಯುವುದು ಮತ್ತು ಟೈಪ್ ಮಾಡುವುದು ಹೇಗೆ ಎಂದು ತಿಳಿಯಲು ಸಹಾಯ ಮಾಡುತ್ತದೆ.
ಟೈಪಿಂಗ್ ಸ್ಟ್ಯಾಂಡರ್ಡ್, ಬ್ರೈಲ್ ಸ್ಕ್ರಿಪ್ಟ್ನ ಸಾರ್ವತ್ರಿಕ ವಿನ್ಯಾಸವನ್ನು ಅನುಸರಿಸುತ್ತದೆ. ಪ್ರತಿಕ್ರಿಯೆ ಲೂಪ್‌ಗಳನ್ನು ತ್ವರಿತಗೊಳಿಸಿ ಮತ್ತು ಮೌಲ್ಯಮಾಪನವನ್ನು ಸುಲಭಗೊಳಿಸುವ ಮೂಲಕ ಔಟ್‌ಪುಟ್ ಅನ್ನು ಡಿಜಿಟಲೀಕರಣಗೊಳಿಸಲಾಗುತ್ತದೆ, ಕಲಿಕೆಯ ವಿಷಯವು ಎಲ್ಲಾ ವಯೋಮಾನದವರಿಗೆ ಸೂಕ್ತವಾಗುವಂತೆ ಸಾಕಷ್ಟು ವಿಷಯಗಳನ್ನು ಸಂಗ್ರಹಿಸಲಾಗಿದೆ, ಮತ್ತು ಬೋಧನಾ ಮಾಧ್ಯಮವು ಯಾವುದೇ ಭಾಷೆಗೆ ಸೀಮಿತವಾಗಿಲ್ಲ, ಅಲ್ಲದೆ ಯುಕೆ ಇಂಗ್ಲಿಷ್ ಮತ್ತು ಯುಎಸ್ ಇಂಗ್ಲಿಷ್ ಕೂಡ ಇದೆ.
ಹಾರ್ಡ್‌ವೇರ್ ಮಾಡ್ಯೂಲ್‌ಗಳನ್ನು ಸ್ಪರ್ಶಿಸಬಹುದಾಗಿದೆ ಮತ್ತು ಮೃದುವಾದ ಧ್ವನಿಯೊಂದು ಪಾಠಗಳ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತದೆ. ಇದು ನಿರಂತರ ಮೇಲ್ವಿಚಾರಣೆಯ ಅಗತ್ಯವನ್ನು ನಿವಾರಿಸುತ್ತದೆ. ಬಳಕೆದಾರರು ಬ್ರೈಲ್ ಸಾಕ್ಷರರು ಎಂದು ಭಾವಿಸಿ ಹೆಚ್ಚಿನ ದೃಶ್ಯ ಸಾಧನಗಳನ್ನು ವಿನ್ಯಾಸಗೊಳಿಸಲಾಗಿದೆ.
ಯುವರ್‌ಸ್ಟೋರಿಯೊಂದಿಗಿನ ಹಿಂದಿನ ಸಂದರ್ಶನದಲ್ಲಿ, ಅಮನ್,
ನಮ್ಮ ಹಾರ್ಡ್‌ವೇರ್, ಸಾಫ್ಟ್‌ವೇರ್ ತಂತ್ರಜ್ಞಾನಗಳು ಮತ್ತು ನಮ್ಮ ವಿಷಯದ ಮೂಲಕ ನಾವು ಬ್ರೈಲ್ ಕಲಿಕೆಯ ಒಟ್ಟಾರೆ ಪ್ರಕ್ರಿಯೆಯನ್ನು ಹೆಚ್ಚು ನವೀನ ಮತ್ತು ಪರಿಣಾಮಕಾರಿಯಾಗಿ ಮಾಡಿದ್ದೇವೆ. ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಕಲಿಸಲು ನಾವು ಒಬ್ಬ ಶಿಕ್ಷಕರನ್ನು ಶಕ್ತಗೊಳಿಸುತ್ತೇವೆ. ನಮ್ಮ ತಂತ್ರಜ್ಞಾನವನ್ನು ವೈಯಕ್ತಿಕ ಬಳಕೆದಾರರು ಸ್ವತಃ ಬ್ರೈಲ್ ಕಲಿಯಲು ಸಹ ಬಳಸಬಹುದು. ನಾವು ನೀಡುವ ಗ್ಯಾಮಿಫೈಡ್ ಆಡಿಯೊ-ಆಧಾರಿತ ಪಾಠಗಳನ್ನು ಬಳಕೆದಾರರ ಹೆಚ್ಚಿನ ಶಿಕ್ಷಣವನ್ನು ಪಡೆಯಲು ಬಳಸಬಹುದು ಎಂದಿದ್ದಾರೆ.
ಅಂಧರಿಗಾಗಿರುವ ಬೆಂಗಳೂರಿನ ಜ್ಯೋತಿ ಸೇವಾ ಮನೆಯಲ್ಲಿ ಬ್ರೈಲ್ ಕಲಿಯುವ ಜೀವಿಕಾ,
ಅನ್ನಿಯಲ್ಲಿ ಆಟವಾಡಲು ಮತ್ತು ಓದಲು, ಬರೆಯಲು ಮತ್ತು ಟೈಪ್ ಮಾಡುವುದನ್ನು ಕಲಿಯುವುದು ತುಂಬಾ ಆಸಕ್ತಿದಾಯಕವಾಗಿದೆ. ಬ್ರೈಲ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಇದು ನನಗೆ ಸಹಾಯ ಮಾಡುತ್ತದೆ ಮತ್ತು ನಾನು ಆ ಧ್ವನಿಯನ್ನು ಪ್ರೀತಿಸುತ್ತೇನೆ. ಇದು ನನಗೆ ಬಹಳಷ್ಟು ಉತ್ತೇಜನ ನೀಡುತ್ತದೆ ಎಂದು ಹೇಳುತ್ತಾಳೆ.
ಥಿಂಕರ್‌ಬೆಲ್ ಲ್ಯಾಬ್ಸ್ ಅನ್ನು ಹಿಂದೆ ಪ್ರಾಜೆಕ್ಟ್ ಮುದ್ರಾ ಎಂದು ಕರೆಯಲಾಗುತ್ತಿತ್ತು, ಇದು ಗೋವಾದ ಬಿಟ್ಸ್ ಪಿಲಾನಿ ಕ್ಯಾಂಪಸ್‌ನಲ್ಲಿ ಸ್ವತಂತ್ರ ಸಂಶೋಧನಾ ಯೋಜನೆಯಾಗಿತ್ತು. ಸಂಸ್ಕೃತಿ ಮತ್ತು ಅಮನ್ ಕಡಿಮೆ ಬೆಲೆಯ ಮೈಕ್ರೊಸೈಸ್ಡ್ ಕಂಪ್ಯೂಟರ್ ರಾಸ್‌ಪ್ಬೆರಿ ಪೈನಲ್ಲಿ ಬ್ರೈಲ್ ವರ್ಣಮಾಲೆಯ ಹಾಡಿನ ಪೆಟ್ಟಿಗೆಯನ್ನು ನಿರ್ಮಿಸಿದಾಗ, ಅವರು ಅನ್ನಿಯ ಕಲ್ಪನೆಯ ಬಗ್ಗೆ ಯೋಚಿಸಿದರು.
ಒಂದು-ಬಾರಿ ಸೆಟಪ್ ವೆಚ್ಚವಾಗಿ, ಕಂಪನಿಯು ಶಾಲೆ ಅಥವಾ ಅದು ಸಹಯೋಗಗೊಳ್ಳುವ ಸಂಸ್ಥೆಯಿಂದ 9 ಲಕ್ಷ ರೂ. ಶುಲ್ಕ ವಿಧಿಸುತ್ತದೆ. ಈ ಒಪ್ಪಂದದ ಅಡಿಯಲ್ಲಿ, ತಂಡವು ಸಾಧನದ ಸ್ಥಾಪನೆ, ಯಂತ್ರಾಂಶ ಮತ್ತು ಮೂಲಸೌಕರ್ಯವನ್ನು ನೀಡುತ್ತದೆ. ಕರೀಂನಗರ ಮತ್ತು ಮಹಬೂಬ್‌ನಗರ (ತೆಲಂಗಾಣ), ರಾಂಚಿ (ಜಾರ್ಖಂಡ್), ಜಶ್‌ಪುರ (ಚತ್ತೀಸ್‌ಗಢ), ಟೆಕ್ ಮಹೀಂದ್ರಾ ಫೌಂಡೇಶನ್, ಎಲ್.ವಿ.ಪ್ರಸಾದ್ ಕಣ್ಣಿನ ಸಂಸ್ಥೆ, ಸೆಲ್ಕೊ ಫೌಂಡೇಶನ್, ಅಂಧರಿಗಾಗಿರುವ ಪೂನಾ ಶಾಲೆ (ಪುಣೆ), ಮತ್ತು ಇನ್ನೂ ಅನೇಕ ಸಂಸ್ಥೆಗಳು ಈ ಸಾಧನವನ್ನು ಬಳಸುತ್ತಿವೆ.
ಭವಿಷ್ಯದ ಯೋಜನೆಗಳು
ಮಾರ್ಚ್ 2016 ರಲ್ಲಿ ಯುಕೆ ಟ್ರೇಡ್ ಅಂಡ್ ಇನ್ವೆಸ್ಟ್ಮೆಂಟ್ (ಯುಕೆಟಿಐ) ಗ್ರೇಟ್ ಟೆಕ್ ರಾಕೆಟ್‌ಶಿಪ್ ಪಡೆದ ನಂತರ, ಅನ್ನಿಯನ್ನು ಆ ವರ್ಷ ಭಾರತ ಪ್ರವಾಸದಲ್ಲಿದ್ದ ರಾಯಲ್ ದಂಪತಿಗಳಾದ ರಾಜಕುಮಾರ ವಿಲಿಯಂ ಮತ್ತು ಕೇಟ್ ಮಿಡಲ್ಟನ್ ಅವರಿಗೆ ಪ್ರದರ್ಶಿಸಲಾಯಿತು. ಮತ್ತು ಕೇಟ್ ಮಿಡಲ್ಟನ್ ಬ್ರೈಲ್‌ನಲ್ಲಿ ‘ಜಾರ್ಜ್’ ಎಂದು ಟೈಪ್ ಮಾಡಲು ಕಲಿತಾಗ, ಅನ್ನಿ ಅವರ ಗಮನ ಸೆಳೆಯಿತು.
ದೇಶಪಾಂಡೆ ಫೌಂಡೇಶನ್‌ನ ಸ್ಯಾಂಡ್‌ಬಾಕ್ಸ್ ಸ್ಟಾರ್ಟ್ಅಪ್ 500 ಕೆ ಬಿಜ್ ಲಾಂಚ್‌ಪ್ಯಾಡ್, ಜಿಐಜೆಡ್, ಕಾಂಕ್ವೆಸ್ಟ್ 2016, ಬಿಟ್ಸ್ ಪಿಲಾನಿ-ಸಂಘಟಿತ ಸ್ಟಾರ್ಟ್ಅಪ್ ಕಾನ್ಕ್ಲೇವ್, ಮಾಸ್ ಚಾಲೆಂಜ್ ಯುಕೆ, ಲಂಡನ್ ಅಕ್ಯುಮೆನ್ ಪಿಚ್ ಈವೆಂಟ್, ಅತ್ಯುತ್ತಮ ಸಾಮಾಜಿಕ ನಾವೀನ್ಯತೆ - ಇನ್‌ಟೆಕ್ 50, ನಾಸ್ಕಾಮ್ ಸಾಮಾಜಿಕ ನಾವೀನ್ಯತೆ ವೇದಿಕೆ ಅನುದಾನ ಸೇರಿದಂತೆ ಇತ್ಯಾದಿಗಳಲ್ಲಿ ಅನ್ನಿ ಹೆಸರು ಮಾಡಿದೆ.
ಅನ್ನಿಯನ್ನು ಬಹಳ ಉತ್ಸಾಹದಿಂದ ಸ್ವೀಕರಿಸಿದ ನಂತರ, ಭಾರತ ಸರ್ಕಾರದ ಪಾಲಿಸಿ ಥಿಂಕ್ ಟ್ಯಾಂಕ್ ನೀತಿ ಆಯೋಗ, ಸರ್ಕಾರಿ ಶಾಲೆಗಳಲ್ಲಿ ಈ ಸಾಧನವನ್ನು ಬಳಸಲು ದೇಶಾದ್ಯಂತದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಶಿಫಾರಸು ಮಾಡಿದೆ. ದೃಷ್ಟಿಹೀನರಿಗಾಗಿರುವ ರಾಷ್ಟ್ರೀಯ ಸಂಸ್ಥೆ ಅನ್ನಿಯನ್ನು ಸಮರ್ಥ ಬ್ರೈಲ್ ಬೋಧನಾ ಸಾಧನವಾಗಿದೆ ಎಂದು ಪ್ರಮಾಣೀಕರಿಸಿದೆ.
ವ್ಯವಹಾರದಿಂದ ಸರ್ಕಾರದ (ಬಿ 2 ಜಿ) ವಿಭಾಗದ ಮೇಲೆ ಕಟ್ಟುನಿಟ್ಟಾಗಿ ಕೇಂದ್ರೀಕರಿಸಿರುವ ಥಿಂಕರ್‌ಬೆಲ್ ಲ್ಯಾಬ್ಸ್ ಈಗ ಸಕ್ರಿಯ ಸಹಯೋಗಕ್ಕಾಗಿ ಎಲ್ಲಾ ಜಿಲ್ಲಾ ಆಡಳಿತ ಮತ್ತು ರಾಜ್ಯ ಮುಖ್ಯಸ್ಥರನ್ನು ತಲುಪುತ್ತಿದೆ.
ಥಿಂಕರ್‌ಬೆಲ್ ಲ್ಯಾಬ್‌ಗಳ ದೊಡ್ಡ ಮತ್ತು ವಿಶಾಲ ದೃಷ್ಟಿಕೋನವು ಶಿಕ್ಷಣವನ್ನು ಒಳಗೊಳ್ಳುವಂತೆ ಮಾಡುವುದು ಮತ್ತು ಭವಿಷ್ಯದಲ್ಲಿ ಅದನ್ನು ಇತರ ಕಲಿಕಾ ನ್ಯೂನತೆಗಳಿಗೆ ವಿಸ್ತರಿಸುವುದು ಆಗಿದೆ. ಒಟ್ಟಾರೆ ಮೆದುಳಿನ ಸಾಕ್ಷರತೆಯ ಮೇಲೆ ಈಗ ಗಮನ ಹರಿಸಲಾಗಿದ್ದರೂ, ತಂಡವು ಈಗ ಅನ್ನಿ ಸ್ಮಾರ್ಟ್ ತರಗತಿಗಳ ಸಹಾಯದೊಂದಿಗೆ ಕೆ -12 ರ ಮೂಲಕ ವಿದ್ಯಾರ್ಥಿಗಳ ಯೋಜನೆಯನ್ನು ಖಾತ್ರಿಪಡಿಸುವತ್ತ ಕೆಲಸ ಮಾಡುತ್ತಿದೆ.