ಗ್ರಂಥಾಲಯವನ್ನೆ ಕಟ್ಟುವಂತೆ ಮಾಡಿದ ಕನ್ನಡಿಗನ ಪುಸ್ತಕ ಪ್ರೇಮ

ಪುಸ್ತಕ ಪ್ರೇಮಕ್ಕಾಗಿ ಮನೆಯನ್ನೆ ಗ್ರಂಥಾಲಯವನ್ನಾಗಿ ಮಾಡಿ ವಿವಿಧ ಭಾಷೆಯ ಹತ್ತು ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿದ‌ಕ್ಕಾಗಿ ಲಿಮ್ಕಾ ದಾಖಲೆಯಲ್ಲಿ ಸ್ಥಾನ ಗಳಿಸಿದ ಪಾಂಡವಪುರದ ಅಂಕೇಗೌಡರು ಒಬ್ಬ ಅಪರೂಪದ ಪುಸ್ತಕಪ್ರೇಮಿ.

ಗ್ರಂಥಾಲಯವನ್ನೆ ಕಟ್ಟುವಂತೆ ಮಾಡಿದ ಕನ್ನಡಿಗನ ಪುಸ್ತಕ ಪ್ರೇಮ

Wednesday October 30, 2019,

2 min Read

ಅಲ್ಲಿ ಎಲ್ಲೆಡೆ ಕಣ್ಣಾಡಿಸಿದರೂ ನಿಮ್ಮ ಕಣ್ಣಿಗೆ ಕಾಣುವುದು ಒಂದೇ ಕೇವಲ ಪುಸ್ತಕ, ಪುಸ್ತಕ. ಅದು ಒಂದೆರಡು ಪುಸ್ತಕಗಳಲ್ಲ‌ ಲಕ್ಷ- ಲಕ್ಷ ಪುಸ್ತಕಗಳು. ನೀವು ಅತ್ತ ಇತ್ತ ಸರಿಯಬೇಕಾದರೂ ಪುಸ್ತಕ ಎತ್ತಿಟ್ಟೇ ಸರಿಬೇಕು ಎಂದರೆ ನೀವೆ ಊಹಿಸಿ ಹೇಗಿರಬಹುದು ಆ ಪುಸ್ತಕ ಮನೆ.


ಇಂತಹ ದೊಡ್ಡ ಪುಸ್ತಕ ಸಂಗ್ರಹಾಲಯವನ್ನು ಹುಟ್ಟು ಹಾಕಿ ಎಲ್ಲರಲ್ಲಿ ಪುಸ್ತಕ ಪ್ರೇಮ ಮೊಳಕೆಯೊಡಿಯುವಂತೆ ಮಾಡಿದವರು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಅಂಕೇಗೌಡರು. ಪುಸ್ತಕ್ಕಾಗಿ ಏನೂ ಬೇಕಾದರೂ ಮಾಡುತ್ತಾರೆ. ಪುಸ್ತಕ ಮುಟ್ಟದಿದ್ದರೆ ಸಮಾಧಾನವೆ ಇಲ್ಲ ಇವರಿಗೆ.


ಅಂಕೇಗೌಡರು (ಚಿತ್ರಕೃಪೆ: ಗಿರಿ-ಶಿಖರ)

ಬಡತನದ ನಿರಾಶೆ, ಓದುವ ಆಸಕ್ತಿ ಇವರನ್ನು ಪುಸ್ತಕ ಸಂಗ್ರಹಿಸುವದಕ್ಕೆ, ಓದುವುದಕ್ಕೆ ಪ್ರೇರೇಪಿಸಿತು. ಆ ಪುಸ್ತಕ ಪ್ರೇಮ ಇಂದು ಇವರನ್ನು ಎತ್ತರದ ಸ್ಥಾನದಲ್ಲಿಟ್ಟಿದೆ. ಅಂಕೇಗೌಡರು ಎಂದರೆ ಪುಸ್ತಕ ಮನೆ ಎನ್ನುವಂತೆ ಗುರುತಿಸುವಂತಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಒಂದು ಗ್ರಂಥಾಲಯವನ್ನು ಹುಟ್ಟು ಹಾಕಿದ್ದಾರೆ. ಇವರ ಈ ಸಾಧನೆ ಲಿಮ್ಕಾ ಪುಸ್ತಕದಲ್ಲಿಯೂ ದಾಖಲೆಯಾಗಿದೆ.

ಸಕ್ಕರೆ ಕಾರ್ಖಾನೆಯೊಂದರಲ್ಲಿ‌ ಕೆಲಸ ಮಾಡುತ್ತ ಪುಸ್ತಕ ಸಂಗ್ರಹಿಸುತ್ತಾ ಬಂದ ಅಂಕೇಗೌಡರ ಗ್ರಂಥಾಲಯ ಎಲ್ಲೆ ಮೀರಿ ಬೆಳೆದಿದೆ. ಇಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಪುಸ್ತಕಗಳಿದ್ದು, ಓದುವುದಕ್ಕೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಇಲ್ಲಿ ಯಾರು ಬೇಕಾದರೂ ಬಂದು ಕುಳಿತು ಪುಸ್ತಕವನ್ನು ಓದಬಹುದಾಗಿದೆ.

ಗ್ರಂಥಾಲಯಕ್ಕಾಗಿ ನಿವೇಶನ ಮಾರಾಟ

ದಿನೇ ದಿನೇ ಪುಸ್ತಕ ಸಂಗ್ರಹ ಹೆಚ್ಚತೊಡಗಿದಂತೆ ಅದನ್ನು ಕಾಯ್ದುಕೊಳ್ಳುವುದು ಅಷ್ಟೇ ಕಷ್ಟವಾಯಿತು. ಪುಸ್ತಕ ಇಡಲು ಜಾಗ ಸಾಲುತ್ತಿರಲಿಲ್ಲ. ಆಗ ಊರಿನಲ್ಲಿದ್ದ ನಿವೇಶನವನ್ನು ಮಾರಿ ಬಂದ ಹಣದಿಂದ ಗ್ರಂಥಾಲಯ ಕಟ್ಟಿದ್ದಾರೆ. ಈಗ ಅದು ದೊಡ್ಡ ಜಾಗವಾಗಿದ್ದು, ವಿದ್ಯಾರ್ಥಿಗಳು ಹಾಗೂ ಓದುಗರಿಗೆ ಕುಳಿತು ಓದಲು ಅನುಕೂಲವಾಗಿದೆ.

ಪತ್ನಿಯ ಸಹಕಾರ

ಅಂಕೇಗೌಡರ ಈ ಪುಸ್ತಕಪ್ರೇಮಕ್ಕೆ ಅವರ ಪತ್ನಿ ವಿಜಯಲಕ್ಷ್ಮಿ ಸಾಥ್ ನೀಡಿದ್ದಾರೆ. ತಮ್ಮ ಪತಿ ಹಬ್ಬ ಹರಿದಿನಕ್ಕೆ ಹೊಸ ಬಟ್ಟೆ, ದಿನಸಿ ಬದಲು ಪುಸ್ತಕ ತಂದಾಗ ಬೇಸರಿಸಿಕೊಳ್ಳದೆ ಇವರ ಪುಸ್ತಕಪ್ರೇಮವನ್ನು ಒಪ್ಪಿಕೊಂಡಿದ್ದಾರೆ, ವರದಿ ಸುವರ್ಣ ನ್ಯೂಸ್.


(ಚಿತ್ರಕೃಪೆ: ಗಿರಿ-ಶಿಖರ)

ಬಗೆ-ಬಗೆಯ ಪುಸ್ತಕಗಳು

ಎಂಟಕ್ಕಿಂತ ಹೆಚ್ಚು ಭಾಷೆಯ ಹತ್ತು ಲಕ್ಷಕ್ಕೂ ಅಧಿಕ ಪುಸ್ತಕಗಳು, ಅಪರೂಪವಾಗಿ ದೊರಕುವ ಪುಸ್ತಕ, ಕಾದಂಬರಿ,‌ ನಿಘಂಟು, ನಿಯತಕಾಲಿಕೆಗಳು ಎಲ್ಲವೂ ಇಲ್ಲಿ ಲಭ್ಯ. ರಾಮಾಯಣದ ಬಗೆಗೆಯೆ ಐನೂರಕ್ಕೂ ಹೆಚ್ಚಿನ ಪುಸ್ತಕಗಳಿವೆ. ಗಾಂಧೀಜಿಯ ಬಗೆಗೆ 300 ಪುಸ್ತಕಗಳು ಇವೆ. ಕಲೆ, ಸಾಹಿತ್ಯ, ವಿಜ್ಞಾನ, ಭಗವದ್ಗೀತೆ, ಮಹಾಕಾವ್ಯ ಸೇರಿದಂತೆ ಎಲ್ಲ‌ ಪ್ರಕಾರಗಳ ಪುಸ್ತಕ ಇಲ್ಲಿ ಲಭ್ಯ.


ಎನ್ಸೈಕ್ಲೋಪೀಡಿಯಾ, ವಿಶ್ವಕೋಶ, ಸ್ಪರ್ಧಾತ್ಮಕ ಪುಸ್ತಕ, ಕುಮಾರವ್ಯಾಸನ ಭಾರತದಿಂದ ಹಿಡಿದು ಇತ್ತಿಚೀನ ಲೇಖಕರವರೆಗೂ ಎಲ್ಲವೂ ಇಲ್ಲಿವೆ. ಜೊತೆಗೆ ಅಪರೂಪದ ಚಿತ್ರಗಳು, ವಿವಿಧ ರಾಷ್ಟ್ರಗಳ ಭೂಪಟ, ಕರೆನ್ಸಿ, ಸ್ಟಾಂಪ್ ಗಳು ನಮಗೆ ಕಾಣಸಿಗುತ್ತವೆ.


ಅಂಕೇಗೌಡರು ಹಲವಾರು ವರ್ಷಗಳಿಂದ ಪುಸ್ತಕ ಸಂಗ್ರಹಣೆಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಈ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಅಂಕೇಗೌಡರ ಪುಸ್ತಕ ಸಂಗ್ರಹಾಲಯಕ್ಕೆ ರಾಜ್ಯೋತ್ಸವ ಪ್ರಶಸ್ತಿಯು ದೊರೆತಿದೆ, ಜತೆಗೆ ಸುವರ್ಣ ನ್ಯೂಸ್ ಖಾಸಗಿ ವಾಹಿನಿ ಕೊಡುವ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ ಸಹ ಲಭಿಸಿದೆ.


ಇತ್ತಿಚೀಗೆ ಜೀ ಕನ್ನಡ ಖಾಸಗಿ ವಾಹಿನಿಯಲ್ಲಿ ಡ್ರಾಮಾ ಜ್ಯೂನಿಯರ್ಸ್ ಕಾರ್ಯಕ್ರಮದಲ್ಲಿ ಇವರ ಬದುಕಿ‌ನ ಕಥನವನ್ನು ನಾಟಕ ರೂಪದಲ್ಲಿ ತಂದು ಎಲ್ಲರಿಗೂ ಪ್ರಸ್ತುತಪಡಿಸಿದ್ದು ಇವರಿಗೆ ಸಂದ ಅಪರೂಪದ ಗೌರವವಾಗಿದೆ.


ಗ್ರಾಮೀಣ ಮಕ್ಕಳಿಗೂ ಓದಿನ ದಾಹವನ್ನು ಗ್ರಂಥಾಲಯದ ಮೂಲಕ ನೀಗಿಸುತ್ತಿರುವ ಈ ಅಂಕೇಗೌಡರು ನಿಜವಾದ ಜ್ಞಾನದಾಸೋಹಿ ಎಂದರೆ ತಪ್ಪಾಗಲಾರದು. ನೀವು ಒಮ್ಮೆ ಅಪರೂಪದ ಈ ಪುಸ್ತಕ ಮನೆಗೆ ಭೇಟಿ ನೀಡಿ.