ಕೊರೊನಾವೈರಸ್: ಗ್ರಾಮೀಣ ಭಾಗದ ಜನರಿಗೆ ಸಹಾಯ ಮಾಡುತ್ತಿದ್ದಾರೆ ಭಾರತೀಯ ಮೂಲದ ದುಬೈ ಉದ್ಯಮಿ
ಗ್ರಾಮೀಣ ಭಾಗದಲ್ಲಿ ಕಷ್ಟದಲ್ಲಿ ಸಿಲುಕಿರುವ ಜನರಿಗೆ ಅವಶ್ಯ ವಸ್ತುಗಳನ್ನು ನೀಡುತ್ತ, ವಲಸಿಗರಿಗೆ ಮನೆಗೆ ಮರಳಲು ಬಸ್ಸುಗಳ ವ್ಯವಸ್ಥೆ ಮಾಡುತ್ತ ಕೊರೊನಾ ವಿರುದ್ಧದ ಭಾರತದ ಹೋರಾಟದಲ್ಲಿ ನೇರವಾಗುತ್ತಿದ್ದಾರೆ ಉದ್ಯಮಿ ಮತ್ತು ಕಲಾರಸಿಕರಾದ ಆಸಿಫ್ ಕಮಲ್.
ಕೊರೊನಾವೈರಸ್ ಮಹಾಮಾರಿಯಿಂದ ತತ್ತರಿಸಿದ ಸೌಲಭ್ಯವಂಚಿತ ವರ್ಗಕ್ಕೆ ಸಹಾಯ ಮಾಡಲು ಹಲವಾರು ಸಂಘ ಸಂಸ್ಥೆಗಳು, ಜನರು ಆಹಾರ, ಔಷಧಿ, ವಸತಿ ಮತ್ತು ಅವಶ್ಯಕ ವಸ್ತುಗಳನ್ನು ನೀಡಲು ಮುಂದೆ ಬರುತ್ತಿದ್ದಾರೆ.
ಅಂಥವರಲ್ಲಿ ಒಬ್ಬರು ಆಸಿಫ್ ಕಮಲ್. ಅವರು ಕಷ್ಟಪಟ್ಟು ಮೇಲೆ ಬಂದವರು. ಹಾಗಾಗಿ ದಿನಗೂಲಿ ನೌಕರರ ಮತ್ತು ವಲಸೆ ಕಾರ್ಮಿಕರ ಕಷ್ಟ ಅವರಿಗೆ ಚೆನ್ನಾಗಿ ಗೊತ್ತಿದೆ.
ಅವರ ಸಂಸ್ಥೆ ದಿ ಆಸಿಫ್ ಫೌಂಡೇಶನ್ ಗ್ರಾಮೀಣ ಭಾಗದ ಜನರಿಗೆ ಅವಶ್ಯ ವಸ್ತುಗಳನ್ನು ತಲುಪಿಸುತ್ತಿದೆ ಮತ್ತು ವಲಸಿಗರು ತಮ್ಮೂರಿಗೆ ಮರಳಲು ಬಸ್ಸುಗಳ ಸೌಲಭ್ಯವನ್ನು ಏರ್ಪಡಿಸುತ್ತಿದೆ.
ದುಬೈ ಮೂಲದ ಅಲ್ತುರಾಶ್ ಗ್ರೂಪ್‌ನ ಅಧ್ಯಕ್ಷರಾದ ಆಸಿಫ್ ಅವರ ಜೀವನದ ಮಹಾತ್ವಕಾಂಕ್ಷೆ ಭಾರತದಲ್ಲಿರುವ ಹಿಂದುಳಿದ ಜನತೆಯನ್ನು ಸಬಲೀಕರಣಗೊಳಿಸಬೇಕೆಂಬುದು. ಅವರು ದುಬೈನಲ್ಲಿ ಆರ್ಟ್ ಹೌಸ್ ಹಾಗೂ ನವದೆಹಲಿಯ ಡಿಎಲ್‌ಎಫ್ ಮಾಲ್‌ನಲ್ಲಿ ಆರ್ಟ್ ಗ್ಯಾಲರಿಗಳನ್ನು ನಡೆಸುತ್ತಿದ್ದಾರೆ.
ಯುವರ್ ಸ್ಟೋರಿಯೊಂದಿಗಿನ ಸಂದರ್ಶನದಲ್ಲಿ ಆಸಿಫ್ ಕಮಲ್ ಅವರು ಕೊರೊನಾವೈರಸ್ ಬಿಕ್ಕಟ್ಟಿನ ಸಮಯದಲ್ಲಿ ತಮ್ಮ ಸಂಸ್ಥೆಯ ಕೆಲಸಗಳು ಮತ್ತು ಅದರ ಮೂಲ ಗುರಿಯಾದ ಆರೋಗ್ಯ ಮತ್ತು ಶಿಕ್ಷಣ ಎಲ್ಲರಿಗೂ ಸಿಗಬೇಕೆಂಬುದರ ಬಗ್ಗೆ ಮಾತನಾಡಿದ್ದಾರೆ.
ಪ್ರಾರಂಭ
ಆಸಿಫ್ ನೇಪಾಲ್ ಗಡಿಯ ಸಮೀಪ ಬರುವ, ಸುಪೌಲ್ ಜಿಲ್ಲೆಯಿಂದ 10 ಕಿ.ಮೀ. ದೂರವಿರುವ ಬಿಹಾರದ ಹಳ್ಳಿಯೊಂದರಲ್ಲಿ ತಮ್ಮ ಬಾಲ್ಯವನ್ನು ಕಳೆದಿದ್ದಾರೆ. ಪೊಸ್ಟ್‌ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದ ಅವರ ತಂದೆ ಆರ್ಥಿಕ ಸಮಸ್ಯೆಗಳಿಂದ ಉತ್ತಮ ನೌಕರಿಯ ನಿರೀಕ್ಷೆಯಲ್ಲಿ ದುಬೈಗೆ ತೆರಳಿದರು. 5 ವರ್ಷಗಳ ನಂತರ ಅವರಿಗೆ ಭಾರತೀಯ ರಾಯಭಾರಿ ಕಚೇರಿಯಲ್ಲಿ ಕೆಲಸ ದೊರೆಯಿತು.
“ನಮ್ಮ ತಾಯಿ ಒಬ್ಬ ಬಲಿಷ್ಠ ಮಹಿಳೆ, ತನ್ನ ಬಳಿಯಿದ್ದ ಕಡಿಮೆ ಹಣದಲ್ಲೆ ಎಲ್ಲವನ್ನೂ ನಿಭಾಯಿಸಿ ನಮಗೆ ಶಿಕ್ಷಣ ನೀಡಿ ಬೆಳೆಸಿದ್ದಾಳೆ,” ಎನ್ನುತ್ತಾರೆ ಆಸಿಫ್.
ಆಸಿಫ್ ಅವರ ಮೊದಲ ತರಗತಿ ಮರದ ಕೆಳಗಡೆ ನಡೆದಿತ್ತು, ಅವರಿದ್ದ ಪ್ರದೇಶದಲ್ಲಿ ಯಾವುದೇ ಶಾಲೆಗಳಿರಲಿಲ್ಲ. ಹಳ್ಳಿಯಲ್ಲಿ ಸಣ್ಣ ಸಂಸ್ಥೆಯೊಂದು ಸ್ಥಾಪನೆಯಾದಾಗ ಆಸಿಫ್ ಅವರನ್ನು ಅಲ್ಲಿ ಸೇರಿಸಲಾಯಿತು, ಆ ಶಾಲೆಯಲ್ಲಿ ಆಸಿಫ್ ಮೊದಲ ವಿದ್ಯಾರ್ಥಿಯಾಗಿದ್ದರು. 8 ತರಗತಿಯವರೆಗೂ ಅಲ್ಲೆ ಕಲಿತು ಬೋರ್ಡ್ ಪರೀಕ್ಷೆಯನ್ನು ಅಲ್ಲೇ ಬರೆದರು.
ನಂತರ ದರ್ಭಾಂಗಾ ಜಿಲ್ಲೆಯಲ್ಲಿದ್ದ ಆಸಿಫ್ ಅವರ ತಾಯಿಯ ಮನೆಗೆ ಹೋಗಿ ನೆಲೆಸಿದರು. ಸರ್ಕಾರಿ ಶಾಲೆ ಸೇರಿ ಆಸಿಫ್, 10 ನೇ ಪರೀಕ್ಷೆ ಬರೆದರು.
ಉನ್ನತ ಶಿಕ್ಷಣವನ್ನು ಪಡೆಯಲಾಗದೆ ಆಸಿಫ್ ಹಲವಾರು ಕೆಲಸಗಳನ್ನು ಮಾಡಿದ್ದಾರೆ. ತಿಂಗಳಿಗೆ ನಾಲ್ಕು ಸಾವಿರ ರೂ ವೇತನದ ಸೇಲ್ಸ್‌ಮ್ಯಾನ್ ಕೆಲಸವನ್ನು ಶಾಪರ್ಸ್ ಸ್ಟಾಪ್ ನಲ್ಲಿ ಮಾಡಿದರು. ಹಚ್(ಈಗಿನ ವೊಡಾಫೋನ್) ಕಂಪನಿಯ ಕಾಲ್ ಸೆಂಟರ್‌ನಲ್ಲೂ ಇವರು ಕೆಲಸ ಮಾಡಿದ್ದಾರೆ.
ಆಸಿಫ್ ಕಮಲ್ ಫೌಂಡೇಶನ್
2009 ರಲ್ಲಿ ಆಸಿಫ್ ತಮ್ಮ ತಂದೆಯಿಂದ ವ್ಯಾಪಾರ ಕೌಶಲ್ಯಗಳನ್ನು ಕಲಿಯಲು ದುಬೈಗೆ ತೆರೆಳಿದರು. ಅಲ್ಲಿ ಸ್ಟೀಲ್ ಉದ್ಯಮವನ್ನು ಸ್ಥಾಪಿಸಿ, ಅದು ಯಶಸ್ವಿಯಾದಾಗ ಅವರು ಕಲೆಯ ಉದ್ಯಮಕ್ಕೆ ಕಾಲಿಟ್ಟರು.
2019 ರಲ್ಲಿ ಆಸಿಫ್ ಕಮಲ್ ಫೌಂಡೇಶನ್ ಸ್ಥಾಪಿಸಿ ಸಮಾಜ ಸೇವೆಗೆ ಇಳಿದರು.
“ಸಹಾಯ ಮಾಡುವ ಸ್ಥಾನದಲ್ಲಿದ್ದ ನಾನು ನನಗೆ ಇಷ್ಟೆಲ್ಲ ನೀಡಿದ ಸಮಾಜಕ್ಕೆ ಏನಾದರೂ ಮಾಡಲೆಬೇಕೆಂಬುದು ತಿಳಿದಿತ್ತು. ಕಾಲ ಇಷ್ಟು ಮುಂದೆ ಬಂದಿದ್ದರು ಮಕ್ಕಳ ಕಷ್ಟ ಏನು ಬದಲಾಗಿಲ್ಲ, ವಿಶೇಷವಾಗಿ ಸುಪೌಲ್ ಜಿಲ್ಲೆಯಲ್ಲಿ. ಅವರ ಕಷ್ಟ ನನಗೆ ಅರ್ಥವಾಗುತ್ತದೆ,” ಎಂದರು ಆಸಿಫ್.
ತಮ್ಮ ಹಳ್ಳಿಯಲ್ಲಿ 8 ನೇ ತರಗತಿ ನಂತರ ಶಾಲೆ ಬಿಡುವ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಹೆಚ್ಚುತ್ತಿದ್ದರಿಂದ ಆಸಿಫ್ ಶಿಕ್ಷಣದ ಮೇಲೆ ಗಮನ ಹರಿಸಲು ನಿರ್ಧರಿಸಿದರು. ಆ ಪ್ರದೇಶದಲ್ಲಿ ಮತ್ತು ಭಾರತದ ಹಳ್ಳಿಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಸಹಾಯ ಮಾಡಲು ಅವರು ನಿರ್ಧರಿಸಿದರು.
ನಂತರ ಫೌಂಡೇಶನ್ ಮಹಾತ್ವಾಕಾಂಕ್ಷಿ ವಿದ್ಯಾರ್ಥಿಗಳಿಗೆ ಅವರ ಆರ್ಥಿಕ ಸ್ಥಿತಿ, ಶ್ರೇಣಿ ಮತ್ತು ಆಸಕ್ತಿಗಳನ್ನಾಧರಿಸಿ ವಿದ್ಯಾರ್ಥಿ ವೇತನವನ್ನು ನೀಡಲಾರಂಭಿಸಿತು.
ಫೌಂಡೇಶನ್ ಆರೋಗ್ಯದ ಮೇಲೂ ಆಸಕ್ತಿ ಹೊಂದಿತ್ತು:
“ಬಿಹಾರ್‌ನ ಪಾಟ್ನಾ ನಗರದ ಹತ್ತಿರ ವಾಸಿಸುವ ಜನರು ಆಸ್ಪತ್ರೆಗೆ ಹೋಗಬೇಕೆಂದರೆ 400 ಕಿ. ಮೀ. ದೂರ ಸಾಗಬೇಕು. ಹಾಗಾಗಿ ನಮ್ಮ ಆಸ್ಪತ್ರಗಳು ಹತ್ತಿರದಲ್ಲೆ ಇರುವಂತೆ ನೋಡಿಕೊಂಡು ಗ್ರಾಮೀಣ ಜನರಿಗೆ ಸೌಲಭ್ಯ ಸಿಗುವಂತೆ ಮಾಡುವ ಯೋಚನೆ ಇತ್ತು,” ಎನ್ನುತ್ತಾರೆ ಆಸಿಫ್.
ಕೋವಿಡ್-19
ಕೋವಿಡ್-19 ಮಹಾಮಾರಿಯಿಂದ ಕಷ್ಟದಲ್ಲಿರುವ ದಿನಗೂಲಿ ನೌಕರರು ಮತ್ತು ವಲಸೆ ಕಾರ್ಮಿಕರಿಗೆ ಸಹಾಯವಾಗುವಂತೆ ಫೌಂಡೇಶನ್ ಅವಶ್ಯಕ ವಸ್ತುಗಳನ್ನು ಮತ್ತು ರೇಷನ್ ನೀಡುತ್ತಿದೆ.
ಈ ಸಂಸ್ಥೆಯು ಬಿಹಾರ್, ದೆಹಲಿ, ಪಂಜಾಬ್ ಮತ್ತು ಮಹಾರಾಷ್ಟ್ರದಲ್ಲಿ ಸಕ್ರಿಯವಾಗಿದೆ.
“ನಾವು ಪ್ರಸ್ತುತ ಈ ಹೊಸ ರೋಗ ತಂದೊಡ್ಡಿರುವ ಪರಿಸ್ಥಿತಿ ವಿರುದ್ಧ ಹೋರಾಡಬೇಕಿದೆ, ಮತ್ತಿದು ಹಲವರನ್ನು ದೊಡ್ಡ ಆಘಾತಕ್ಕೆ ಸಿಲುಕಿಸಿದೆ. ಹಾಗಾಗಿ ನಮ್ಮ ತಂಡ, ಈ ಜನರಿಗೆ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವತ್ತ ಕೆಲಸ ಮಾಡುತ್ತಿದೆ.” ಎಂದರು ಆಸಿಫ್.
ತಂಡವು ಸಹಾಯವಾಣಿ ಸಂಖ್ಯೆಯೊಂದನ್ನು ಸಿದ್ಧಪಡಿಸಿದ್ದು, ಅದನ್ನು ವಾಟ್ಸಾಪ್ ಗುಂಪುಗಳಲ್ಲಿ ಹರಿಬಿಡಲಾಗಿದೆ. ಇದರಲ್ಲಿ ಸ್ಥಳೀಯ ನಗರ ಸಭೆಗಳ ಮುಖಂಡರು ಸೇರಿದ್ದಾರೆ. ಈ ಗುಂಪುಗಳು ಹಳ್ಳಿಗೆ ಬೇಕಾಗಿರುವ ಅವಶ್ಯಕತೆಗಳನ್ನು ಮತ್ತು ಕಷ್ಟದಲ್ಲಿ ಸಿಲುಕಿರುವ ಕುಟುಂಬಗಳ ಮಾಹಿತಿಯನ್ನು ತಂಡಕ್ಕೆ ಒದಗಿಸುತ್ತದೆ.
ಇಲ್ಲಿಯವರೆಗೆ ಸಂಸ್ಥೆ ರೇಷನ್ ಕಿಟ್, ಆಹಾರ ಸರಬರಾಜು ಮತ್ತು ಇತರ ಅವಶ್ಯಕತೆಗಳ ಪೂರೈಕೆಯನ್ನು ಸೇರಿ ಸುಮಾರು 12,000 ಕುಟುಂಬಗಳಿಗೆ ನೆರವಾಗಿದೆ. 500 ವಲಸಿಗರಿಗೆ ಊರಿಗೆ ಮರಳಲು ಬಸ್ ವ್ಯವಸ್ಥೆಯನ್ನು ಕಲ್ಪಿಸಿದೆ.
“ಅವಶ್ಯಕತೆಗೆ ತಕ್ಕಂತೆ ನಾವು ಅವರಿಗೆ ಸಹಾಯ ಮಾಡುತ್ತಿದ್ದೇವೆ, ನಗರಗಳಲ್ಲಿ ಅವರು ಸಿಲುಕಿದ್ದರೆ, ಟ್ರಾವೆಲ್ ಪಾಸ್ ನೀಡುತ್ತೇವೆ. ಅವರಿಗೆ ರೇಷನ್‌ನ ಅವಶ್ಯಕತೆ ಇಲ್ಲದಿದ್ದಲ್ಲಿ ಧನಸಹಾಯ ಮಾಡುತ್ತೇವೆ,” ಎಂದರು ಆಸಿಫ್.
ಲಾಕ್‌ಡೌನ್ ನ ನಂತರ
ಶಾಲೆ, ಆಸ್ಪತ್ರೆ ಮತ್ತು ಆಶ್ರಮ ಇವೆಲ್ಲವೂ ಒಂದೆ ಸ್ಥಳದಲ್ಲಿರುವಂತಹ ಘಟಕವನ್ನು ನಿರ್ಮಿಸಲು ಸಂಸ್ಥೆ ಬಯಸುತ್ತಿದೆ.
ಮನೆಯಿಲ್ಲದ ಮಕ್ಕಳಿಗೆ ಅಥವಾ ಪೋಷಕರು ನೋಡಿಕೊಳ್ಳದ ಮಕ್ಕಳಿಗೆ ಆಶ್ರಮ ಮೀಸಲಾಗಿರುತ್ತದೆ.
ಮಕ್ಕಳು ಸಂಸ್ಥೆಯಿಂದ ನೀಡಲಾಗಿರುವ ಗುಣಮಟ್ಟದ ಶಿಕ್ಷಣ ಮತ್ತು ಮೂಲಭೂತ ಆರೋಗ್ಯ ಸೇವೆಗಳನ್ನು ಪಡೆಯುತ್ತಾರೆ. ಇದಕ್ಕಾಗಿ ಶುಲ್ಕವನ್ನು ಅವರ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ನೋಡಿ ಅವರು ಶುಲ್ಕ ನೀಡಲು ಒಪ್ಪಿದರೆ ತೆಗೆದುಕೊಳ್ಳಲಾಗುವುದು ಇಲ್ಲದಿದ್ದಲ್ಲಿ ಉಚಿತ ಶಿಕ್ಷಣವನ್ನು ನೀಡಲಾಗುತ್ತದೆ.
ಆಸ್ಪತ್ರೆಯು ಖಾಸಗಿ ಆಸ್ಪತ್ರೆಗಳು ನೀಡುವಂತಹ ಸೌಲಭ್ಯಗಳನ್ನು ಸರ್ಕಾರಿ ಆಸ್ಪತ್ರೆಗಳ ಶುಲ್ಕಕ್ಕಿಂತ ಕಡಿಮೆ ಹಣದಲ್ಲಿ ಒದಗಿಸಲಿದೆ.
“ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಮೊದಲ ಆದ್ಯತೆ. ಅವರ ಆರ್ಥಿಕ ವಿವರಗಳನ್ನು ಜಿಲ್ಲಾ ವಿವರಗಳೊಂದಿಗೆ ಹೊಂದಿಸಿ ನೀಡಲಾಗುವುದು,” ಎನ್ನುತ್ತಾರೆ ಆಸಿಫ್.
ಔಷಧಿಗಳನ್ನು ಮತ್ತು ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗದವರು ಯಾವುದೇ ಆದಾಯದ ಮೂಲಗಳಿಲ್ಲ ಎಂದು ಪತ್ರವೊಂದನ್ನು ನೀಡಿದ ನಂತರ ಆರೋಗ್ಯ ಸೇವೆಯನ್ನು ಸಂಸ್ಥೆ ಉಚಿತವಾಗಿ ನೀಡಲಿದೆ.
ಯೋಜನೆ ಈಗ ಸ್ವಂತ ಬಂಡವಾಳದಿಂದ ನಡೆಯುತ್ತಿದ್ದು, ಆದರೆ ಸಂಸ್ಥೆ ಮುಂದಿನ ವಾರಗಳಲ್ಲಿ ಧನ ಸಹಾಯಕ್ಕಾಗಿ ಕೋರಲಿದೆ. ಆಸಿಫ್ ಅವರ ಈ ಕಾರ್ಯವನ್ನು ಗಮನಿಸಿ ಬಂಡವಾಳ ಹೂಡಲು ಹಲವರು ಆಸಕ್ತಿ ವಹಿಸಿದ್ದಾರೆ.