ದೇಶದಾದ್ಯಂತ ಸುಮಾರು 31,000 ಪೌರಕಾರ್ಮಿಕರಿಗೆ, ಜೀತ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸುತ್ತಿರುವ ಆಸಿಫ್ ಶೈಖ್

ಆಸಿಫ್ ರವರ “ಜನ್ ಸಾಹಸ್ ಸಂಸ್ಥೆ" 18 ರಾಜ್ಯಗಳ 200 ಜಿಲ್ಲೆಗಳಲ್ಲಿ ಕೆಲಸ ನಿರ್ವಹಿಸಿದೆ ಮತ್ತು ತಾನು ರಕ್ಷಿಸಿದ ಪೌರಕಾರ್ಮಿಕರಿಗೆ ಆರ್ಥಿಕ ಸಹಾಯ ಮಾಡಿದೆ.

ದೇಶದಾದ್ಯಂತ ಸುಮಾರು 31,000 ಪೌರಕಾರ್ಮಿಕರಿಗೆ, ಜೀತ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸುತ್ತಿರುವ ಆಸಿಫ್ ಶೈಖ್

Monday October 14, 2019,

2 min Read

ನಮ್ಮ ದೇಶದಲ್ಲಿ ತಾಂತ್ರಿಕವಾಗಿ ಬಹಳಷ್ಟು ಕ್ಷೇತ್ರದಲ್ಲಿ ಮಹತ್ತರವಾದ ಸಾಧನೆಗಳು ಜರುಗಿದ್ದರೂ, ದೇಶವನ್ನು ಸ್ವಚ್ಚವಾಗಿಡುವ ಪೌರಕರ್ಮಿಕರು ಮಾತ್ರ ಇಂದಿಗೂ ತಮ್ಮ ಬರಿಯ ಕೈಗಳಿಂದಲೇ ಕಸ-ಕೊಳಚೆಗಳನ್ನು ಆಯ್ದು ಸ್ವಚ್ಛಗೊಳಿಸುತ್ತಿರುವುದು ವಿಷಾದನೀಯ. ಇತ್ತೀಚೆಗೆ ಸರಕಾರವೂ ಇತ್ತ ಗಮನ ಹರಿಸಿದ್ದು ಬರಿಯ ಕೈಗಳಿಂದ ಸ್ವಚ್ಚಗೊಳಿಸುವ ಕಾರ್ಯಕ್ಕೆ ಇತಿಶ್ರೀ ಹಾಡಲು ಮುಂದಾಗಿದೆ.


2013 ರಲ್ಲಿ, ಮಲ ಹೋರುವ ಅಭ್ಯಾಸವನ್ನು ರದ್ದುಗೊಳಿಸುವ ಕಾಯ್ದೆ ಜಾರಿಗೊಂಡರು, ಅಂದಿನಿಂದ ಇಲ್ಲಿಯ ತನಕ ಈ ವಿಚಾರದಲ್ಲಿ ಯಾವುದೇ ಪ್ರಗತಿಕಾಣಲಿಲ್ಲ.


ಜನ್ ಸಾಹಸ್ ಸಂಘಟನೆಯ ಸಂಸ್ಥಾಪಕ ಆಸಿಫ್ ಶೇಖ್ ಅವರಂತಹ ವ್ಯಕ್ತಿಗಳು ಈ ಅಭ್ಯಾಸವನ್ನು ತಡೆಯಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದಾರೆ. ಕಳೆದ 16 ವರ್ಷಗಳಲ್ಲಿ, ಈ ಪ್ರತಿಷ್ಠಾನವು 18 ರಾಜ್ಯಗಳ 200 ಜಿಲ್ಲೆಗಳಲ್ಲಿ 31,000 ಮಲ ಹೋರುವವರು ಮತ್ತು ಜೀತ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸಿದೆ. ಮಾತ್ರವಲ್ಲದೆ ಹಣಕಾಸಿನ ನೆರವು ನೀಡುವ ಮೂಲಕ ರಕ್ಷಿಸಿದ ಮಲ ಹೋರುವವರಿಗೆ ಫೌಂಡೇಶನ್ ಸಹಾಯ ಮಾಡುತ್ತದೆ.


ಆಸಿಫ್ ಶೇಖ್, ಬಿಲ್ ಕ್ಲಿಂಟನ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು (ಚಿತ್ರಕೃಪೆ: ಜನ ಸಹಸ್ ಇಂಡಿಯಾ)




ಇಂಟರ್‌ ನ್ಯಾಷನಲ್ ದಲಿತ ಸಾಲಿಡಾರಿಟಿ ನೆಟ್ವರ್ಕ್ ನಡೆಸಿದ ಅಧ್ಯಯನದ ಪ್ರಕಾರ, ಭಾರತದಲ್ಲಿ ಸುಮಾರು 1.3 ಮಿಲಿಯನ್ ಮಲ ಹೋರುವವರಿದ್ದಾರೆ, ಅವರಲ್ಲಿ ಹೆಚ್ಚಿನವರು ಮಹಿಳೆಯರು. ದಿ ಗಾರ್ಡಿಯನ್‌ಗೆ ನೀಡಿದ ಸಂದರ್ಶನದಲ್ಲಿ ಆಸಿಫ್ ಹೀಗೆ ಹೇಳಿದ್ದಾರೆ,


“ಅವರು ಕೆಳಜಾತಿಯವರಾಗಿರುವ ಕಾರಣ ಅವರಿಗೆ ಈ ಜವಾಬ್ದರಿಯನ್ನು ವಹಿಸಿಲಾಗಿದೆ. ಅವರ ಅಭಿಪ್ರಾಯದಲ್ಲಿ ಈ ಕೆಲಸವನ್ನು ದೇವರು ಅವರಿಗೆ ಕೊಟ್ಟಿದ್ದಾನೆ ಮತ್ತು ಇದರಿಂದಲೇ ಅವರು ಆಹಾರವನ್ನು ಸಂಪಾದಿಸಬೇಕಾಗಿದೆ. ಆದರೆ ವಾಸ್ತವದಲ್ಲಿ ಅವರನ್ನು ಪ್ರಾಣಿಗಳಿಗಿಂತ ಕೆಟ್ಟದಾಗಿ ಪರಿಗಣಿಸಲಾಗುತ್ತಿದೆ”.


ಸಮಾಜದ ಅಂಚಿನಲ್ಲಿರುವ ಸಮುದಾಯದಿಂದ ಬಂದ ಆಸಿಫ್ ತನ್ನ ಬಾಲ್ಯದಲ್ಲಿಯೇ, ಸಾಮಾಜಿಕ ಅಭಿವೃದ್ಧಿ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ವಿದ್ಯಾರ್ಥಿ ಸಮುದಾಯವಾದ ‘ಸಾಹಸಿ ಏಕ್ತಾ ಗ್ರೂಪ್’ ಅನ್ನು ಪ್ರಾರಂಭಿಸಿದರು. ಇದನ್ನು ಅನುಸರಿಸಿ, 2000 ರಲ್ಲಿ, ಆಸಿಫ್ "ಜನ್ ಸಾಹಸ್" ಅನ್ನು ಸ್ಥಾಪಿಸಿದರು.


ಒಂದು ವರ್ಷದ ನಂತರ, ಆಸಿಫ್ ಜೀತದ ಕಾರ್ಮಿಕರನ್ನು ಬಂಧಮುಕ್ತಿಗೊಳಿಸಲು ಆತ್ಮಗೌರವಕ್ಕಾಗಿ ರಾಷ್ಟ್ರೀಯ ಅಭಿಯಾನ ಎಂಬ ಅಭಿಯಾನವನ್ನು ಪ್ರಾರಂಭಿಸಿದರು. ಈ ಅಭಿಯಾನದ ಅಡಿಯಲ್ಲಿ, ದಲಿತ ಸಮುದಾಯದ ಬಗ್ಗೆ ಅಸ್ಪೃಶ್ಯತೆ ಮತ್ತು ತಾರತಮ್ಯದ ರೂಪಗಳನ್ನು ಗುರುತಿಸುವ ಅಧ್ಯಯನಗಳನ್ನು ಕೈಗೊಳ್ಳಲಾಯಿತು.


ಈ ಅಧ್ಯಯನದ ಮೂಲಕ, ಹೆಚ್ಚಿನ ಸಂಖ್ಯೆಯ ಮಹಿಳೆಯರು ಮಲ ಹೋರುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಕಂಡುಕೊಂಡರು." ಸುರಿವ ಮಳೆಯಲ್ಲಿ, ಸುಡುವ ಬಿಸಿಲಿನಲ್ಲಿ ಬಿದಿರಿನ ಬುಟ್ಟಿಯಲ್ಲಿ ತಲೆಮೇಲೆ ಮಲವನ್ನು ಹೊತ್ತುಕೊಂಡು ಹೋಗುವುದು ಇವರ ಪರಿಸ್ಥಿತಿ ಅಹಿತಕರ ಮಾತ್ರವಲ್ಲ ಅಮಾನವೀಯವೂ ಆಗಿದೆ" ಎಂದು ಆಸಿಫ್ ಒತ್ತಿ ಹೇಳಿದರು.


ಹಳ್ಳಿಯಲ್ಲಿ ಸಮುದಾಯ ಸಹಭಾಗಿತ್ವದಲ್ಲಿ ಜಾಗೃತಿ ಅಭಿಯಾನ.(ಚಿತ್ರ ಕೃಪೆ: ದಿ ಲಜಿಕಲ್ ಇಂಡಿಯನ್)




ದಿ ಲಾಜಿಕಲ್ ಇಂಡಿಯನ್ ಪ್ರಕಾರ, ಸಂಸ್ಥೆ ತನ್ನ ಕೆಲಸವನ್ನು ಮಧ್ಯಪ್ರದೇಶದ ಭೌರಸದಲ್ಲಿ ಪ್ರಾರಂಭಿಸಿತು. ಇಲ್ಲಿ, ಆಸಿಫ್ 26 ಮಹಿಳೆಯರಿಗೆ ತಮ್ಮ ಮಲ ಹೋರುವ ಉದ್ಯೋಗಗಳನ್ನು ತ್ಯಜಿಸಲು ಮನವರಿಕೆ ಮಾಡಿಕೊಟ್ಟರು. ಇದರಿಂದ ಪ್ರೇರಿತರಾದ "ಮಹಿಳೆಯರು ತಮ್ಮ ಬುಟ್ಟಿಗಳನ್ನು ಕೆಟ್ಟ ಅಭ್ಯಾಸವನ್ನು ಬಹಿಷ್ಕರಿಸುವ ಸಂಕೇತವಾಗಿ ಸುಟ್ಟುಹಾಕಿದರು" ಎಂದು ದಿ ಲಾಜಿಕಲ್ ಇಂಡಿಯನ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ನಂತರ ಈ ಮಹಿಳೆಯರಿಗೆ ತಮ್ಮ ಜೀವನೋಪಾಯಕ್ಕಾಗಿ ಟೈಲರಿಂಗ್‌ನಂತಹ ಪರ್ಯಾಯ ಉದ್ಯೋಗವನ್ನು ನೀಡಲಾಯಿತು.


2013 ರ ಹೊತ್ತಿಗೆ ಈ ಮೊದಲು ಇದ್ದ ಮಲ ಹೋರುವ ತಂಡವು ಜನರಲ್ಲಿ ಜಾಗೃತಿ ಮೂಡಿಸಲು ದೇಶದಾದ್ಯಂತ ಅಭಿಯಾನವನ್ನು ಆರಂಭಿಸಿತು ತನ್ಮೂಲಕ ಈ ಸಂಸ್ಥೆ ತನ್ನ ಕಾರ್ಯವ್ಯಾಪ್ತಿಯನ್ನು 230 ಜಿಲ್ಲೆಗಳಿಗೆ ವಿಸ್ತರಿಸುವಲ್ಲಿ ಯಶಸ್ವಿಯಾಯಿತು. ಪ್ರಸ್ತುತ ಕೆಲವು ಸರಕಾರೇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ಜನ ಸಾಹಸ್ ಸಂಸ್ಥೆ ಮಲ ಹೋರುವುದನ್ನು ಬಹಿಷ್ಕರಿಸಲು ಹೊರಡುತ್ತಿದೆ.


ಇದೆಲ್ಲದರೊಂದಿಗೆ "ಬೇರ್ ಫೂಟ್ ಪ್ಯಾರಾಲಿಗಲ್ಸ್" ಎಂಬ ಇನ್ನೊಂದು ಅಭಿಯಾನವನ್ನು ಈ ಸಂಸ್ಥೆ ಪ್ರಾರಂಭಿಸಿದೆ. ಇದು ಮಲ ಹೋರುವ ಕಾರ್ಯದಲ್ಲಿ ಶೋಷಿಸಲಪ್ಪಟ್ಟ ಸುಮಾರು 65% ದಷ್ಟು ಸಂತ್ರಸತ್ತರಿಗೆ ಕಾನೂನಿನಡಿಯಲ್ಲಿ ನ್ಯಾಯಕ್ಕಾಗಿ ಹೋರಾಡಲು ನೆರವು ನೀಡುತ್ತಿದೆ. ಈ ಎಲ್ಲಾ ಪ್ರಯತ್ನಗಳ ಫಲವಾಗಿ ದಲಿತ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳು ಶೇಕಡ 2 ರಿಂದ 38 ರಷ್ಟು ಬೆಳಕಿಗೆ ಬಂದಿದೆ.


ಆಸಿಫ್ ದಿ ಲಾಜಿಕಲ್ ಇಂಡಿಯನ್ ವರದಿಯಲ್ಲಿ,


"ಪ್ರತಿಯೊಬ್ಬರೂ ಭಾರತೀಯ ಸಂವಿಧಾನದಲ್ಲಿ ಚಿತ್ರಿಸಿರುವ ಸಮಾನತೆಯ ಮೂಲಭೂತ ಹಕ್ಕನ್ನು ಗೌರವಿಸಬೇಕಾಗಿದೆ" ಎಂದು ಹೇಳುತ್ತಾರೆ.

ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.