ರಸ್ತೆ ಬದಿಯಲ್ಲಿರುವವರಿಗೆ ಆಶ್ರಯ ವ್ಯವಸ್ಥೆ ಮಾಡುತ್ತಿರುವ ತಮಿಳುನಾಡಿನ ಆಟೋ ರಿಕ್ಷಾ ಚಾಲಕ

ತಮಿಳುನಾಡಿನ ಆಟೋ ಚಾಲಕ ಅರುಲ್ ರಾಜ್ ಕರುಣೈ ಉಲ್ಲಂಗಲ್ ಎಂಬ ಟ್ರಸ್ಟ್‌ ಒಂದನ್ನು ಹುಟ್ಟುಹಾಕಿದ್ದು ಅದು ಇಲ್ಲಿಯವರೆಗೆ ಮನೆಯಿಲ್ಲದ 320 ಜನರಿಗೆ ಆಶ್ರಯ ನೀಡಿದೆ.

ರಸ್ತೆ ಬದಿಯಲ್ಲಿರುವವರಿಗೆ ಆಶ್ರಯ ವ್ಯವಸ್ಥೆ ಮಾಡುತ್ತಿರುವ ತಮಿಳುನಾಡಿನ ಆಟೋ ರಿಕ್ಷಾ ಚಾಲಕ

Tuesday November 12, 2019,

3 min Read

ಪ್ರತಿ ನಿತ್ಯ ನಾವು ರಸ್ತೆಗಳಲ್ಲಿ ಸಾಗುವಾಗ ಅನೇಕ ಅಸಹಾಯಕರು, ಮನೆ ಇಲ್ಲದವರು, ಭಿಕ್ಷುಕರನ್ನು ನೋಡುತ್ತೇವೆ. ಹೀಗೆ ನೋಡಿದರೂ ನಮಗ್ಯಾಕೆ ಎಂಬ ಭಾವನೆಯಿಂದ ಮುಂದೆ ಸಾಗುತ್ತೇವೆ. ಮಳೆ ಗಾಳಿ ಚಳಿ ಎನ್ನದೇ ರಸ್ತೆಯಲ್ಲಿಯೇ ಮಲಗಿದ್ದರೂ ತಲೆಕೆಡಿಸಿಕೊಳ್ಳುವುದಿಲ್ಲ. ಇನ್ನೊಂದಿಷ್ಟು ಮಂದಿ ಅಂಥವರಿಗೆ ಹಣ, ಆಹಾರ ನೀಡುವ ಮೂಲಕ ಆ ಹೊತ್ತಿಗೆ ಅವರ ಹೊಟ್ಟೆ ತುಂಬಿಸುತ್ತಾರೆ. ಆದರೆ ತಮಿಳನಾಡಿನ ಅರುಲ್ ರಾಜ್ ಇಂಥವರಿಗೆ ಆಹಾರ, ಆಶ್ರಯ ನೀಡುವ ಮೂಲಕ ಅನಾಥರಿಗೆ ನೇರವಾಗುತ್ತಿದ್ದಾರೆ.


ಮೂಲತಃ ತಮಿಳುನಾಡಿನ ಮೂಲದ ಅರುಲ್ ರಾಜ್ ಪ್ರತಿ ನಿತ್ಯ ಮನೆಯಿಲ್ಲದೆ ಅಲೆದಾಡುತ್ತಿರುವ ಜನರನ್ನು ಹುಡುಕಿಕೊಂಡು ಹೋಗುತ್ತಾರೆ. ಈ ಕೆಲಸಕ್ಕಾಗಿ ದಿನಂಪ್ರತಿ 8 ಗಂಟೆಗಳನ್ನು ಮೀಸಲಿಟ್ಟಿರುವ ಅರುಲ್ ರಾಜ್, ರಸ್ತೆಗಳಲ್ಲಿ ಊಟವಿಲ್ಲದೆ ಮನೆ ಇಲ್ಲದೆ ಇರುವವರನನು ಭೇಟಿ ಮಾಡಿ, ಅಗತ್ಯ ಬಿದ್ದರೆ ಪ್ರಥಮ ಚಿಕಿತ್ಸೆ ನೀಡಿ ಅವರನ್ನು ಆಶ್ರಯ ಮನೆಗಳಿಗೆ ಹೋಗಲು ವ್ಯವಸ್ಥೆ ಮಾಡುತ್ತಿದ್ದಾರೆ.


ಆಟೋದೊಂದಿಗೆ ಅರುಲ್ ರಾಜ್ (ಚಿತ್ರ ಕೃಪೆ: ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್)




ಅರುಲ್ ಈ ಸಮಾಜ ಸೇವೆ ಮೊದಲು ಪ್ರಾರಂಭ ಮಾಡಿದ್ದು 2015 ರಲ್ಲಿ. ಆಗ ಸೈದಾಪೇಟೆಯಲ್ಲಿ ಉಂಟಾದ ಪ್ರವಾಹದಲ್ಲಿ ಅರುಲ್ ಅವರ ಪತ್ನಿಯ ಸ್ನೇಹಿತರೊಬ್ಬರು ಸಿಲುಕಿಕೊಂಡಿದ್ದರು. ಮನೆಯಿಂದ ಹೊರ ಬರಲಾಗದೇ ಊಟವಿಲ್ಲದೆ ಪರದಾಡಿದ್ದರು. ಈ ವೇಳೆ ಅರುಲ್ ಅವರನ್ನು ರಕ್ಷಣೆ ಮಾಡಿದರು. ಜೊತೆಗೆ ಆಹಾರ ಕೂಡ ನೀಡಿದರು. ಆದರೆ ಆ ಸ್ನೇಹಿತರಂತೆ ಪ್ರವಾಹದಲ್ಲಿ ನೂರಾರು ಮಂದಿ ಸಿಲುಕಿಕೊಂಡು ಪರದಾಡುತ್ತಿದ್ದರು. ಈ ವೇಳೆ ಅಲ್ಲಿನ ಜನರನ್ನು ರಕ್ಷಿಸಿ ಊಟೋಪಚಾರ ಮಾಡಿದ್ದಾರೆ.


ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡುತ್ತಾ ಅರುಲ್,


“ನಾನು ಆ ಜನರನ್ನು ರಕ್ಷಣೆ ಮಾಡುತ್ತಿದ್ದ ವೇಳೆ ಅವರು ನನ್ನ ಮೇಲೆ ಇಟ್ಟಿದ್ದ ನಂಬಿಕೆ ನನ್ನನ್ನು ಆಶ್ಚರ್ಯ ಚಕಿತನಾಗುವಂತೆ ಮಾಡಿತು. ನಂತರ ನಾನು ಫೇಸ್ ಬುಕ್ ನಲ್ಲಿ ಮಕ್ಕಳ್ ಕು ಉದವಲಂ ಎಂಬ ಪೇಜ್ ಸೇರಿಕೊಂಡೆ. ಈ ಪೇಜ್, ಪ್ರವಾಹದಲ್ಲಿ ಸಿಲುಕಿದವರನ್ನು ರಕ್ಷಣೆ ಮಾಡಲೇಂದೇ ರಚಿಸಲಾಗಿತ್ತು. ಈ ಘಟನೆ ನಂತರ ಈ ಪೇಜ್‌ ನಲ್ಲಿ ಸಾಕಷ್ಟು ವಿನಂತಿಗಳು ಬರಲಾರಂಭಿಸಿದವು. ನನ್ನ ಕೈಲಾದಷ್ಟು ಸಹಾಯ ಮಾಡಿದೆ” ಎಂದರು.


ಅರುಲ್ ಮೊದಲು ಬ್ಯಾಂಕ್ ನಲ್ಲಿ ಸಂಗ್ರಹ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಮನೆ ಮನೆಗೆ ಹೋಗಿ ಹಣ ಸಂಗ್ರಹ ಮಾಡುತ್ತಿದ್ದರು. ಆದರೆ ಸಾಮಾಜಿಕ ಕೆಲಸದಲ್ಲಿ ಹೆಚ್ಚಿನ ಸಮಯ ನೀಡುತ್ತಿದ್ದರಿಂದ ಬ್ಯಾಂಕ್ ಕೆಲಸದ ಕಡೆ ಗಮನ ಕಡಿಮೆಯಾಯಿತು. ಈ ವಿಚಾರ ಬ್ಯಾಂಕ್ ಆಡಳಿತ ಮಂಡಳಿಗೆ ತಿಳಿಯುತ್ತಿದ್ದಂತೆ ಆ ಕೆಲಸದಿಂದ 2016 ರಲ್ಲಿ ತೆಗೆದುಹಾಕಲಾಯಿತು. ಆರು ತಿಂಗಳ ಕಾಲ ನಿರುದ್ಯೋಗಿಯಾಗಿದ್ದರು ಅರುಲ್, ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆ, ಸ್ವಚ್ಛತೆ ಹೀಗೆ ಹಲವು ಕೆಲಸಗಳನ್ನು ನಿರ್ವಹಿಸುತ್ತಿದ್ದರು, ವರದಿ ಸ್ಟೋರಿ ಪಿಕ್.


ಬೀದಿ ಬದಿಯ ವ್ಯಕ್ತಿಯ ಕಾಲಿಗೆ ಪ್ರಥಮ ಚಿಕಿತ್ಸೆ ನೀಡುತ್ತಿರುವ ಅರುಲ್ ರಾಜ್ (ಚಿತ್ರಕೃಪೆ: ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್)


ಈ ಅವಧಿಯ ನಂತರ ಪ್ರವಾಹ ಸಮಸ್ಯೆ ಮುಗಿಯುತ್ತಿದ್ದಂತೆ ಮಕ್ಕಳ್ ಕು ಉದವಲಂ ಪೇಜ್ಅನ್ನು ನಿಷ್ಕ್ರಿಯಗೊಳಿಸಲು ಆ ನಿರ್ವಾಹಕರು ನಿರ್ಧರಿಸಿದಾಗ, ಆ ಪೇಜ್ ನಿರ್ವಹಣೆ ಮಾಡಲು ಅರುಲ್ ನಿರ್ಧರಿಸಿ ಈ ಪೇಜ್ ಅನ್ನು ಕರುಣೈ ಉಲ್ಲಂಗಲ್ ಎಂದು ಮರು ನಾಮಕರಣ ಮಾಡುತ್ತಾರೆ.


ಈ ಸಾಮಾಜಿಕ ಸೇವೆ ಬಗ್ಗೆ ಮಾತನಾಡುತ್ತಾ ಅರುಲ್ ಹೇಳುತ್ತಾರೆ,


“2016 ರ ಅಂತ್ಯದ ವೇಳೆಗೆ ರಸ್ತೆ ಬದಿಯ ಮಹಿಳೆಯೊಬ್ಬರು ನನ್ನ ಬಳಿ ಬಂದು ಆಶ್ರಯ ಮನೆಗೆ ನನ್ನನ್ನು ಸೇರಿಸಬಹುದೇ ಎಂದು ಕೇಳಿದರು. ಅಲ್ಲಿಯವರೆಗೆ ನನಗೆ ಆಶ್ರಯ ಮನೆ ಎಂದರೇನು ಎಂಬುದು ತಿಳಿದಿರಲಿಲ್ಲ. ಜೊತೆಗೆ ಪ್ರವಾಹದ ಸಮಯದಲ್ಲೂ ಒಬ್ಬ ಮಹಿಳೆ ಹೀಗೆ ಕೇಳಿದ್ದರು. ಆದರೆ ಅವರಿಗೆ ಸಹಾಯ ಮಾಡಲಾಗಲಿಲ್ಲ. ಈ ಘಟನೆಗಳ ನಂತರ ನನ್ನ ಇಡೀ ಜೀವನ ಶಾಶ್ವತವಾಗಿ ಬದಲಾಯಿತು. ಮನೆಯಿಲ್ಲದವರನ್ನು ರಕ್ಷಿಸುವುದಕ್ಕೆ ನಿರ್ಧಾರ ಮಾಡಿದೆ” ವರದಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್.


ಇಂಥಹ ಅನೇಕರಿಗೆ ಸಹಾಯ ಮಾಡುವ ಉದ್ದೇಶದಿಂದ ಕರುಣೈ ಉಲ್ಲಂಘನ್ ಟ್ರಸ್ಟ್ ಅನ್ನು ಅರುಲ್‌ ಸ್ಥಾಪಿಸಿದರು. ಪ್ರತಿನಿತ್ಯ ಒಬ್ಬರನ್ನು ರಕ್ಷಿಸಿ ಅವರನ್ನು ಆಶ್ರಯಗಳಿಗೆ ಬಿಡಲು 500 ರೂಪಾಯಿ ವೆಚ್ಚವಾಗುತ್ತಿತ್ತು. ಪ್ರತಿನಿತ್ಯ ಸುಮಾರು 10 ಮಂದಿಯನ್ನು ರಕ್ಷಣೆ ಮಾಡುತ್ತಿದ್ದರು ಅರುಲ್. ಇವರ ಜೊತೆಗೆ ಸ್ನೇಹಿತರು ಇದಕ್ಕೆ ಕೈ ಜೋಡಿಸಿ ಅವರ ವಾಹನಗಳನ್ನು ನೀಡುತ್ತಿದ್ದರು. ಆದರೆ ದಿನ ಕಳೆದಂತೆ ಅವರ ಮೇಲೆ ಅವಲಂಬಿತಾಗುವುದು ಬೇಡ ಎಂದುಕೊಂಡ ಅರುಲ್ ತನ್ನ ಸ್ನೇಹಿತರಿಂದ 90 ಸಾವಿರ ಹಣ ಪಡೆದು, ಹೊಸ ಆಟೋ ಖರೀದಿ ಮಾಡುತ್ತಾರೆ. ಉಳಿದ ಹಣವನ್ನು ಪ್ರತಿ ತಿಂಗಳು ಕಂತಿನಲ್ಲಿ ಕಟ್ಟುತ್ತಿದ್ದಾರೆ.


ಪ್ರತಿನಿತ್ಯ ಅರುಲ್ ಅವರ ದಿನಚರಿ ಹೀಗಿರುತ್ತದೆ - ಬೆಳಗ್ಗೆ 6 ರಿಂದ 10 ವರೆಗೆ ಆಟೋ ರಿಕ್ಷಾ ಓಡಿಸುವುದು. ನಂತರ 10 ರಿಂದ ಸಂಜೆ 6 ಗಂಟೆ ವರೆಗೆ ಹೀಗೆ ರಸ್ತೆ ಬದಿಯಲ್ಲಿ ಅಸಹಾಯಕತೆಯಿಂದ ಇರುವವರನ್ನು ಹುಡುಕಿ ಆಶ್ರಗಳಿಗೆ ಕಳುಹಿಸುವುದು. ನಂತರ ಮತ್ತೆ ಸಂಜೆ 6 ರಿಂದ 10 ರವೆಗೆ ಆಟೋರಿಕ್ಷಾ ಓಡಿಸುವುದು. ಹೀಗೆ ರಕ್ಷಣೆ ಮಾಡಿದ ಒಟ್ಟು ಮಂದಿಯಲ್ಲಿ 120 ಜನರನ್ನು ಅವರವರ ಕುಟುಂಬದರೊಂದಿಗೆ ಸೇರಿಸಲಾಗಿದೆ. ಇನ್ನು ಉಳಿದವರು ನಗರದ ಆಶ್ರಯ ಮನೆಗಳಲ್ಲಿದ್ದಾರೆ.


ಅರುಲ್ ರಾಜ್ ಹೇಳುವಂತೆ,


“ಅನೇಕ ಮಂದಿ ಬೀದಿಯಲ್ಲಿರುವರನ್ನು ಮಾತನಾಡಿಸಿ, ಅವರ ಬಗ್ಗೆ ಕೇಳಿ, ಅದರಲ್ಲಿ ಅನೇಕರಿಗೆ ಮನೆಗಳಿವೆ. ಆದರೆ ಆ ಮನೆಗಳಿಗೆ ಅವರು ಹೋಗುವುದಿಲ್ಲ. ಕಾರಣ ಅವರನ್ನು ಪ್ರೀತಿಸುವ ಹೃದಯಗಳು ಅಲ್ಲಿ ಇರುವುದಿಲ್ಲ.”

ಅರುಲ್ ಅವರಿಗೆ ಪ್ರಥಮ ಚಿಕಿತ್ಸೆ ಬಗ್ಗೆ ಕೂಡ ತಿಳುವಳಿಕೆ ಇದೆ. ಯಾಕೆಂದರೆ ಕೆಲವೊಮ್ಮೆ ರಸ್ತೆಗಳಲ್ಲಿ ಆಶ್ರಯ ಇಲ್ಲದೆ ಇರುವವರು, ಗಾಯಗಳ ನೋವಿನಿಂದ ಬಳಲುತ್ತಾರೆ, ಈ ವೇಳೆ ಅವರನ್ನು ನೇರವಾಗಿ ಆಶ್ರಯಗಳಿಗೆ ಬಿಡಲು ಸಾಧ್ಯವಿಲ್ಲ. ಪ್ರಥಮ ಚಿಕಿತ್ಸೆ ಮಾಡುವ ಅನಿವಾರ್ಯತೆ ಇರುತ್ತದೆ. ಹಾಗಾಗಿ ಆ ಚಿಕಿತ್ಸೆ ಬಗ್ಗೆ ತಿಳಿದುಕೊಂಡು, ಅದಕ್ಕೆ ಬೇಕಾದ ಸಲಕರಣೆಗಳನ್ನು ಕೂಡ ತನ್ನ ಜೊತೆ ಇಟ್ಟುಕೊಂಡಿರುತ್ತಾರೆ, ವರದಿ ಸ್ಟೋರಿ ಪಿಕ್.


ಸೆಪ್ಟೆಂಬರ್ ನಲ್ಲಿ ಅರುಲ್ ರಾಜ್, ಗೂಗಲ್ ಪ್ಲೇಸ್ಟೋರ್ನಲ್ಲಿ ಕರುಣೈ ಉಲ್ಲಂಘಲ್ ಟ್ರಸ್ಟ್ ನ ಅಪ್ಲಿಕೇಷನ್ ಪರಿಚಯಿಸಿದ್ದಾರೆ. ಈ ಆಪ್‌ ನಲ್ಲಿ ಮನೆಯಿಂದ ಕೈ ಬಿಟ್ಟ, ರಸ್ತೆಯಲ್ಲಿ ಆಶ್ರಯವಿಲ್ಲದೆ ಇರುವವರ ಫೊಟೋ ಅಪ್ಲೋಡ್ ಮಾಡಬಹುದು. ಮತ್ತು ರಕ್ಷಣೆ ಮಾಡಿದವರ ವಿವರವನ್ನು ಹಾಕಲಾಗುತ್ತದೆ. ಅವರಿಗೆ ಸಹಾಯ ಮಾಡಲು ಸ್ವಯಂ ಸೇವಕರನ್ನು ನಿಯೋಜಿಸಬಹುದಾಗಿದೆ. ಇದರಲ್ಲಿ ಯಾರಾದರೂ ಗೊತ್ತಿದ್ದರೆ ಅವರ ಕುಟುಂಬ ಹುಡುಕಲು ಸಹಾಯವಾಗುತ್ತದೆ. ಅಂತಹ ಜನರಿಗೆ ಸಹಾಯ ಮಾಡಬಯಸುವವರು 9841776685 ಗೆ ಕರೆ ಮಾಡಬಹುದು.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.