ಉಕ್ಕಿ ಹರಿಯುವ ನದಿಗೆ ಸೇತುವೆ ಕಟ್ಟಿದ್ರು- ಎರಡೂ ಗ್ರಾಮಗಳ ಜನರಿಗೆ ನೆಮ್ಮದಿ ತಂದ್ರು..!
ಟೀಮ್ ವೈ.ಎಸ್. ಕನ್ನಡ
ಮನಸ್ಸಿದ್ದರೆ ಮಾರ್ಗ, ಸಾಧಿಸುವ ಛಲವಿದ್ದರೆ ಗುರಿಯೂ ಇದ್ದೇ ಇರುತ್ತದೆ. ಇದಕ್ಕೊಂದು ಎಕ್ಸಾಂಪಲ್ ಶೇಕ್ ಲಾಲ್ಚಂದ್. 43 ವರ್ಷ ವಯಸ್ಸಿನ ತನಕ ಈ ಶೇಕ್ ಲಾಲ್ಚಂದ್ ಕೇವಲ ದೋಣಿಗೆ ಹುಟ್ಟುಹಾಕುವ ಮನುಷ್ಯ. ಪಶ್ಚಿಮ ಬಂಗಾಳದಲ್ಲಿರುವ ಮುಂದೇಶ್ವರಿ ನದಿ ತಟದ ಜನರನ್ನು ಆ ಬದಿಯಿಂದ ಈ ಬದಿಗೆ, ಈ ಬದಿಯಿಂದ ಆ ಬದಿಗೆ ದೋಣಿ ಮೂಲಕ ತಲುಪಿಸುವ ಕೆಲಸ ಮಾಡುತ್ತಿದ್ದ. ಆದ್ರೆ ಈಗ ಶೇಕ್ ಲಾಲ್ಚಂದ್ ಪಶ್ಚಿಮ ಬಂಗಾಳದ ಪಾಲಿನ ಹೀರೋ. ಯಾಕೆ ಅಂದ್ರೆ ಶೇಕ್ ಲಾಲ್ಚಂದ್, ಮುಂದೇಶ್ವರಿ ನದಿಗೆ ಸೇತುವೆ ನಿರ್ಮಿಸಿದ್ದಾರೆ. ಸರ್ಕಾರದ ಯಾವುದೇ ನೆರವು ಪಡೆಯದೆ, ತನ್ನ ಕೈಯಿಂದಲೇ ಖರ್ಚು ಮಾಡಿ ಮುಂದೇಶ್ವರಿ ನದಿಗೆ ಅಡ್ಡಲಾಗಿ ಬಿದಿರಿನ ಸೇತುವೆ ನಿರ್ಮಿಸಿದ್ದಾನೆ. ಈ ಮೂಲಕ ನದಿ ತಟದಲ್ಲಿದ್ದರುವ ಗೋರಬಿರಿಯಾ, ಚಿತ್ನಾನ್ ಮತ್ತು ಬಟೋರಾ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಿದ್ದಾರೆ.
ಶೇಕ್ ಲಾಲ್ಚಂದ್ ಮುಂದೇಶ್ವರಿ ನದಿಗೆ ಸೇತುವೆ ನಿರ್ಮಿಸಬೇಕೆಂದು ಹಲವು ಬಾರಿ ಕನಸು ಕಂಡಿದ್ದ. ದೋಣಿ ನಡೆಸುವ ಕಾಯಕದಲ್ಲಿ ಕೊಂಚ ಲಾಭ ಹೆಚ್ಚಿತ್ತಾದರೂ, ಅನೇಕ ಬಾರಿ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದರು. ನದಿಯಲ್ಲಿ ನೀರು ಕಡಿಮೆ ಇದ್ದಾಗ ದೋಣಿ ಓಡಿಸಲು ಸಾಧ್ಯವಾಗುತ್ತಿರಲಿಲ್ಲ. ಇದು ಜನರಿಗೆ ಅನಾನುಕೂಲವಾಗಿತ್ತು.
"ನದಿಯಲ್ಲಿ ನೀರು ಕಡಿಮೆ ಇದ್ದಾಗ ಜನರು ನೀರಿನ ನಡುವೆ ನಡೆದುಕೊಂಡೇ ಹೋಗಬೇಕಿತ್ತು. ಕೆಲವೊಮ್ಮೆ ಕೆಸರು ತುಂಬಿದ ನೀರು ಜನರಿಗೆ ತೊಂದರೆ ಉಂಟು ಮಾಡುತ್ತಿತ್ತು. ಮೊಣಕಾಲು ತನಕದ ನೀರು ವಿದ್ಯಾರ್ಥಿಗಳು ನದಿ ದಾಟುವುದನ್ನು ಕಷ್ಟ ಮಾಡುತ್ತಿತ್ತು. ಇದರ ಜೊತೆಗೆ ಹಲವು ವಿದ್ಯಾರ್ಥಿಗಳು ಸ್ಕೂಲ್ ಬ್ಯಾಗ್ ನೇತು ಹಾಕಿಕೊಂಡು ನದಿ ದಾಟಲು ಆಗದೇ ವಾಪಾಸ್ ಹೋಗುತ್ತಿದ್ದರು. ಇದೆಲ್ಲವನ್ನೂ ನೋಡಿ ನನಗೂ ಮನಸ್ಸಿಗೆ ನೋವಾಗಿತ್ತು. ಹೀಗಾಗಿ ನದಿ ದಾಟಲು ಪರಿಹಾರ ಎಂಬಂತೆ ಬಿದಿರಿನ ಸೇತುವೆ ನಿರ್ಮಿಸಲು ಯೋಚನೆ ಮಾಡಿದೆ"
- ಶೇಕ್ ಲಾಲ್ಚಂದ್, ಸೇತುವೆ ನಿರ್ಮಿಸಿದವರು
ಬಿದಿರಿನ ಸೇತುವೆ ನಿರ್ಮಿಸುವುದು ಶೇಕ್ಲಾಲ್ಚಂದ್ಗೆ ಸುಲಭದ ಕೆಲಸವಾಗಿರಲಿಲ್ಲ. ಯಾಕಂದ್ರೆ ಕೈಯಲ್ಲಿ ದುಡ್ಡು ಇರಲಿಲ್ಲ. ಅಷ್ಟೇ ಅಲ್ಲ ಸೇತುವೆ ನಿರ್ಮಾಣಕ್ಕೆ ಸುಮಾರು 7.5 ಲಕ್ಷ ರೂಪಾಯಿಗಳ ಅನಿವಾರ್ಯತೆ ಇತ್ತು. ಆದ್ರೆ ಶೇಕ್ ಲಾಲ್ಚಂದ್ ಹಿಂದೆಮುಂದೆ ಯೋಚಿಸಲಿಲ್ಲ. ಪತ್ನಿಯ ಬಳಿಯಲ್ಲಿದ್ದ ಒಡವೆಗಳನ್ನು ಮಾರಿದ್ರು. ಗುರುತು ಪರಿಚಯ ಇದ್ದವರ ಕೈಯಿಂದ, ನೆಂಟರಿಷ್ಟರ ಕೈಯಿಂದ ಸಾಲ ಪಡೆದುಕೊಂಡ್ರು. ಮುಂದೇಶ್ವರಿ ನದಿಗೆ ಬಿದಿರಿನ ಸೇತುವೆ ನಿರ್ಮಿಸುವ ಕೆಲಸ ಆರಂಭಿಸಿದ್ರು. 16 ಜನರ ತಂಡ, 28 ದಿನಗಳ ಕಾಲ ಕೆಲಸ ಮಾಡಿ ಮುಂದೇಶ್ವರಿ ನದಿಗೆ ಬದಿರಿನ ಸೇತುವೆ ನಿರ್ಮಾಣ ಮಾಡಿಯೇ ಬಿಟ್ರು. ಅಂದುಕೊಂಡ ಕನಸನ್ನು ಸಾಧಿಸಿ, ಜನರಿಗೆ ಸಹಾಯವಾಗುವಂತೆ ಮಾಡಿದ್ರು.
ಇದನ್ನು ಓದಿ: ತೊಟ್ಟಿ ಸೇರುವ ಆಹಾರವನ್ನು ಹೊಟ್ಟೆ ಸೇರುವಂತೆ ಮಾಡಿದ ಫ್ರಾನ್ಸ್ ಸರ್ಕಾರ..!
ಕೈಯಿಂದ ಕಾಸು ಹಾಕಿದ ಮೇಲೆ ಅದನ್ನು ವಾಪಾಸ್ ಪಡೆಯುವ ಉದ್ದೇಶವೂ ಶೇಕ್ಲಾಲ್ಚಂದ್ಗೆ ಇದೆ. ಹೀಗಾಗಿ ನದಿ ದಾಟುವವರಿಂದ ಟೋಲ್ ಪಡೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ. ಗ್ರಾಮಸ್ಥರು ಕೂಡ ಶೇಕ್ಗೆ ಸಹಾಯ ಮಾಡುತ್ತಿದ್ದಾರೆ. ಬಿದಿರಿನ ಸೇತುವೆಯಲ್ಲಿ ನದಿ ದಾಟುವ ಪದಾಚಾರಿಗಳು ಅಥವಾ ಸೈಕಲ್ ಸವಾರರು ಪ್ರತೀ ಬಾರಿಯೂ 2 ರೂಪಾಯಿ ನೀಡಬೇಕು. ಸ್ಕೂಟರ್ ಮತ್ತು ಇತರೆ ದ್ವಿಚಕ್ರವಾಹನಗಳಿಗೆ 6 ರೂಪಾಯಿಯನ್ನು ನಿಗದಿ ಮಾಡಲಾಗಿದೆ. ಕಾರ್ ಮತ್ತು ಲೈಟ್ವೇಯ್ಟ್ ವಾಹನಗಳು 100 ರೂಪಾಯಿ ನೀಡಿ ಬಿದಿರಿನ ಸೇತುವೆ ಮೂಲಕ ನದಿ ದಾಟಬಹುದು. ಅಂದಹಾಗೇ, ವಿದ್ಯಾರ್ಥಿಗಳಿಗೆ ಮತ್ತು ವೃದ್ಧರಿಗೆ ಟೋಲ್ನಲ್ಲಿ ರಿಯಾತಿ ಇದ್ದು ಕೇವಲ 1 ರೂಪಾಯಿ ನೀಡಿ ನದಿ ದಾಟಬಹುದು. ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಇದ್ದ ವೇಳೆ ಮತ್ತು ಆ್ಯಂಬುಲೆನ್ಸ್ಗೆ ಉಚಿತ ಕ್ರಾಸಿಂಗ್ ಅವಕಾಶ ನೀಡುವ ಮೂಲಕ ಶೇಕ್ ಲಾಲ್ಚಂದ್ ಸಾಮಾಜಿಕ ಕಳಕಳಿಯನ್ನೂ ಮೆರೆದಿದ್ದಾರೆ. ಕೃಷಿಕರು ತಿಂಗಳಿಗೆ ಕೇವಲ 50 ರೂಪಾಯಿ ನೀಡುವ ಮೂಲಕ ಎಷ್ಟು ಬಾರಿ ಬೇಕೋ ಅಷ್ಟು ಬಾರಿ ಸೇತುವೆಯನ್ನು ನದಿ ದಾಟಲು ಉಪಯೋಗಿಸಿಕೊಳ್ಳಬಹುದು.
ಈ ಮಧ್ಯೆ ಶೇಕ್ಲಾಲ್ಚಂದ್ ಸಾಹಸದಿಂದ ನದಿ ತಟದಲ್ಲಿರುವ ಗ್ರಾಮಸ್ಥರು ಖುಷಿಯಾಗಿದ್ದಾರೆ. ತಮ್ಮ ದೈನಂದಿನ ಕೆಲಸಗಳು ನೆಮ್ಮದಿಯಿಂದ ನಡೆಯುತ್ತಿದೆ ಅನ್ನೋ ಖುಷಿಯಲ್ಲಿದ್ದಾರೆ.
" ನದಿಗೆ ಸೇತುವೆ ಇಲ್ಲದೇ ಇದ್ದಿದ್ದರಿಂದ ನದಿ ತಟದಲ್ಲಿದ್ದ ಗ್ರಾಮಗಳಿಗೆ ಹೆಣ್ಣು ಕೊಡಲು ಮತ್ತು ಇಲ್ಲಿಂದ ಹುಡುಗಿಯರನ್ನು ಮದುವೆ ಆಗಲು ಹಿಂದೆಮುಂದೆ ನೋಡುತ್ತಿದ್ದರು. ಈಗ ಅದು ಕೂಡ ಸರಾಗವಾಗಿ ನಡೆಯುತ್ತಿದೆ. ಬಿದಿರಿನ ಸೇತುವೆ ನಮಗೆ ವರವಾಗಿ ಪರಿಣಮಿಸಿದೆ. ಖುಷಿಯನ್ನು ಇಮ್ಮಡಿಗೊಳಿಸಿದೆ."
- ಗ್ರಾಮಸ್ಥರು
ಒಟ್ಟಿನಲ್ಲಿ ಒಂದೊಳ್ಳೆ ಕೆಲಸ ಎಲ್ಲರಿಗೂ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ನಿಮ್ಮ ವ್ಯಕ್ತಿತ್ವನ್ನೂ ಕೂಡ ಬದಲಿಸಬಲ್ಲದು ಅನ್ನೋದನ್ನ ಶೇಕ್ಲಾಲ್ಚಂದ್ ಸಾಹಸ ಕಥೆಯ ಮೂಲಕ ತಿಳಿದುಕೊಳ್ಳಬಹುದು.
1.ದೇಶ ಸುತ್ತಿ ನೋಡಿ.. ಕೋಶ ಓದಿ ನೋಡಿ