ಸೋಲಾರ್ ಕಾರ್ನಲ್ಲಿ ಡೆಲ್ಲಿಗೆ ಪಯಣ : ಮಾಲಿನ್ಯದ ಅರಿವು ಮೂಡಿಸಲು 63ರ ವೃದ್ಧನ ಅಪೂರ್ವ ಸಾಹಸ ಯಾತ್ರೆ...!
ಟೀಮ್ ವೈ.ಎಸ್. ಕನ್ನಡ
ಹವಾಮಾನದಲ್ಲಿ ಏರುಪೇರುಗಳಾಗ್ತಿವೆ. ಜಾಗತಿಕ ತಾಪಮಾನದಲ್ಲಿ ಇನ್ನಿಲ್ಲದ ಬದಲಾವಣೆಗಳಾಗ್ತಿದ್ದು, ಜೀವಸಂಕುಲದ ಮೇಲೆ ಪ್ರಭಾವ ಬೀರುತ್ತಿದೆ ಅನ್ನು ಕೂಗು, ಆತಂಕಗಳು ವಿಶ್ವಮಟ್ಟದಲ್ಲಿ ಕೇಳಿಬರುತ್ತಿವೆ. ಅದರಲ್ಲೂ ದೆಹಲಿ ಹಾಗೂ ಚೀನಾದಲ್ಲಿ ಚಳಿಗಾಲ ಶುರುವಾದ್ರೆ ಸಾಕು ಕವಿಯುವ ದಟ್ಟವಾದ ಹೊಗೆ ಮೋಡಗಳು ಉಸಿರನ್ನೇ ನಿಲ್ಲಿಸುವ ಮಟ್ಟಿಗೆ ಆತಂಕ ಸೃಷ್ಠಿಸಿದ್ದವು. ಕ್ರಮೇಣ ಇದರ ಬಗ್ಗೆ ಎಚ್ಚೆತ್ತುಕೊಂಡಿರುವ ದೆಹಲಿ ಸರ್ಕಾರ ಪರಿಸರ ಸಂರಕ್ಷಣೆಗೆ ಒತ್ತು ಕೊಟ್ಟಿದೆ. ಅದರಲ್ಲೂ ವಾಯುಮಾಲಿನ್ಯವನ್ನ ತಡೆಗಟ್ಟಲು ತುರ್ತು ಕ್ರಮಗಳಿಗೆ ದೆಹಲಿ ಹೈಕೋರ್ಟ್ ಕೂಡ ಸೂಚಿಸಿದ್ದು ಇದರ ಪ್ರಕಾರ ಡಿಸೇಲ್ ವಾಹನಗಳ ಓಡಾಟಕ್ಕೆ ಕಡಿವಾಣ ಬೀಳುತ್ತಿದೆ. ಇದು ದೆಹಲಿ ಕಥೆಯಾದರೆ ಅತ್ತ ಚೀನಾದಲ್ಲೂ ವಾಯುಮಾಲಿನ್ಯವನ್ನ ತಡೆಗಟ್ಟಲು ಇನ್ನಿಲ್ಲದ ಸರ್ಕಸ್ ಗಳನ್ನ ಮಾಡಲಾಗ್ತಿದೆ. ಕೈಗಾರಿಗಳು ವಿಪರೀತವಾಗಿ ನಂಬಿಕೊಂಡಿರುವ ಕಲ್ಲಿದ್ದಲಿನ ಬಳಕೆಯನ್ನ ಸಾಧ್ಯವಾದಷ್ಟು ತಗ್ಗಿಸಲು ನಿರ್ಧರಿಸಲಾಗಿದೆ. ಅಲ್ಲದೆ ವಿಕಿರಣ ಸೂಸುವ ಕೈಗಾರಿಕೆಗಳ ಮೇಲೂ ನಿಯಂತ್ರಣ ಸಾಧಿಸುವ ಪ್ರಯತ್ನ ನಡೆಯುತ್ತಿದೆ. ಮತ್ತೊಂದೆಡೆ ಪ್ರಧಾನಿ ಮೋದಿ ಸೇರಿದಂತೆ ಜಾಗತಿಕ ಮಟ್ಟದ ನಾಯಕರು ಇತ್ತೀಚೆಗೆ ಅಂತರಾಷ್ಟ್ರೀಯ ವಲಯದಲ್ಲಿ ಸಭೆ ನಡೆಸಿ ಮಾಲಿನ್ಯ ನಿಯಂತ್ರಣ ಒಪ್ಪಂದಕ್ಕೆ ಬಂದಿದ್ದಾರೆ. ಇದು ಜಾಗತಿಕ ಮಟ್ಟದಲ್ಲಿ ಮಾಲಿನ್ಯ ನಿಯಂತ್ರಿಸಲು ಕೈಗೊಳ್ಳಲು ತೆಗೆದುಕೊಳ್ಳಲಾಗುತ್ತಿರುವ ಕ್ರಮ ಹಾಗೂ ಮಾಲಿನ್ಯದ ಬಗ್ಗೆ ಎಚ್ಚೆತ್ತುಕೊಳ್ಳುತ್ತಿರುವ ರೀತಿ..
ಇದು ಅಂತರಾಷ್ಟ್ರೀಯ ಮಟ್ಟದ ಕಥೆಯಾದ್ರೆ ನಮ್ಮ ಸುತ್ತಲೂ ಇರುವ ಸಾಮಾನ್ಯರಲ್ಲಿ ಮಾಲಿನ್ಯದ ಬಗ್ಗೆ ಎಷ್ಟರ ಮಟ್ಟಿಗೆ ಕಳಕಳಿ ಇದೆ ಅನ್ನುವುದು ಯಕ್ಷ ಪ್ರಶ್ನೆ. ಕೆಲವರಿಗೆ ಈ ಮಾಲಿನ್ಯ, ಇಂಧನಗಳು ಇವುಗಳ ಯಾವುದರ ಬಗ್ಗೆಯೂ ಅರಿವೇ ಇರುವುದಿಲ್ಲ. ಇನ್ನು ಕೆಲವರು ಸೈಲೆಂಟಾಗೇ ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತಾ, ತಮ್ಮ ಕನಿಷ್ಠ ಜವಾಬ್ದಾರಿ ನಿಭಾಯಿಸುವ ಪ್ರಯತ್ನ ನಡೆಸುತ್ತಿರುತ್ತಾರೆ. ಅಂತಹ ವಿಶೇಷ ವ್ಯಕ್ತಿಗಳಲ್ಲಿ ಒಬ್ಬರು ಬೆಂಗಳೂರು ಮೂಲದ ಸಯ್ಯದ್ ಸಜ್ಜದ್ ಅಹ್ಮದ್..
ವಯಸ್ಸು 63 ಆದ್ರೆ. ಮಾಡಲು ಹೊರಟಿರುವ ಜನಜಾಗೃತಿ ಬೆಟ್ಟದಂತದ್ದು. ಇಳಿವಯಸ್ಸಿನಲ್ಲೂ ಪರಿಸರದ ಬಗ್ಗೆ ಅತ್ಯಂತ ಹೆಚ್ಚು ಕಾಳಜಿ ಹೊಂದಿರುವ ಸಯ್ಯದ್ ಸಜ್ಜದ್, ಇದೀಗ ವಾಯುಮಾಲಿನ್ಯ ಹಾಗೂ ನವೀಕರೀಸಬಹುದಾದದ ಇಂಧನ ಶಕ್ತಿಗಳ ಬಳಕೆ ಬಗ್ಗೆ ತಿಳುವಳಿಕೆ ಮೂಡಿಸುವ ಪ್ರಯತ್ನದಲ್ಲಿದ್ದಾರೆ. ಇದಕ್ಕಾಗಿ ಸಯ್ಯದ್ ಬೆಂಗಳೂರಿನಿಂದ ರಾಜಧಾನಿ ದೆಹಲಿವರೆಗೆ ತಾವೇ ನಿರ್ಮಿಸಿರುವ ಸೋಲಾರ್ ಪವರ್ ಕಾರಿನಲ್ಲಿ ಪ್ರಯಾಣ ಹೊರಟಿದ್ದಾರೆ. ನವೆಂಬರ್ 1ರಂದು ಪ್ರಯಾಣ ಶುರುಮಾಡಿರುವ ಸಜ್ಜದ್ ಪರಿಸರ ಸಂರಕ್ಷಣೆ ಹಾಗೂ ಪುನರ್ ನವೀರಣಗೊಳಿಸಬಹುದಾದ ಇಂಧನಗಳ ಮಾಗ್ಗೆ ಮಾಹಿತಿ ನೀಡುವ ಕಾರ್ಯದಲ್ಲಿ ತೊಡಗಿದ್ದಾರೆ. ವಿಶೇಷ ಅಂದರೆ ಸಯ್ಯದ್ ಸಜ್ಜದ್ ದಿವಂಗತ ಮಾಜಿ ರಾಷ್ಟ್ರಪತಿ ಎ ಪಿ ಜೆ ಅಬ್ದುಲ್ ಕಲಾಂ ಅವರಿಗೆ ತಮ್ಮ ಈ ಸಾಮಾಜಿಕ ಕಾರ್ಯಕ್ರಮವನ್ನ ಅರ್ಪಿಸಿದ್ದಾರೆ. ಅವರ ಪೊಲ್ಯುಷನ್ ಫ್ರೀ ಇಂಡಿಯಾ ವಿಜನ್ ನಿಂದ ಪ್ರೇರಿತರಾಗಿರುವ ಈ ಸಜ್ಜದ್ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಇಳಿವಯಸ್ಸಿನಲ್ಲೂ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಯ್ಯದ್ ಅವರ ಲೈಫ್ ಸ್ಟೋರಿ ತುಂಬಾ ಇಂಟರೆಸ್ಟಿಂಗ್ ಆಗಿದೆ. ಬಾಲ್ಯದಲ್ಲಿ ತನಗೆ ಹೆಚ್ಟು ಓದಲು ಸಾಧ್ಯವಾಗದೇ ಹೋದ್ರೂ ತಮ್ಮ ಇಬ್ಬರು ಮಕ್ಕಳಿಗೆ ಕಾನೂನು ಶಿಕ್ಷಣ ಕೊಡಿಸಿದ್ದಾರೆ. ಅಲ್ಲದೆ ತಮ್ಮ ಕೆಲಸದಲ್ಲೂ ಕ್ರಿಯೇಟಿವ್ ಆಗಿದ್ದ ಸಯ್ಯದ್ ಬೆಂಗಳೂರಿನಲ್ಲಿ ಹಣ್ಣಿನ ಅಂಗಡಿಯನ್ನ ಇಟ್ಟುಕೊಂಡಿದ್ರು. ಕ್ರಮೇಣ ಟಿವಿ ರಿಪೇರಿ ಕೆಲಸವನ್ನೂ ಮಾಡಿದ್ರು. ಅಲ್ಲದೆ ವಿಕಲ ಚೇತನರಿಗಾಗಿ ಮೂರು ಹಾಗೂ ಎರಡು ಚಕ್ರದ ವಾಹನಗಳನ್ನ ಸ್ವತಃ ನಿರ್ಮಿಸಿಕೊಟ್ಟ ಹೆಗ್ಗಳಿಕೆಯೂ ಇವರಿಗಿದೆ. ಇವರ ಸ್ವಂತ ಮಗಳೂ ವಿಕಲಚೇತನೆಯಾಗಿದ್ದು ಆಕೆಗೆ ಇವರೇ ವಾಹನ ತಯಾರಿಸಿಕೊಟ್ಟಿದ್ದಾರೆ. ಇನ್ನು ಇವರು ಸೋಲಾರ್ ಪವರ್ ನ ಕಾರು 50 ಸಾವಿರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಇದರ ತಯಾರಿಕೆಗೆ ಸುಮಾರು ಒಂದು ವರ್ಷ ಕಾಲ ತೆಗೆದುಕೊಂಡಿದ್ದಾರೆ. ಅದ್ಭುತ ಪರಿಕಲ್ಪನೆಯಾಗಿ ನಿರ್ಮಿತವಾಗಿರುವ ಇವರ ಕಾರು ಗಂಟೆಗೆ 2 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ.
ಸಯ್ಯದ್ ಸಜ್ಜದ್ ಅಹ್ಮದ್ ಅವರ ಸಾಧನೆಯನ್ನ ಗುರುತಿಸಿರುವ ಸಂಘ ಸಂಸ್ಥೆಗಳು ಹಲವು ಗೌರವಗಳನ್ನ ಸಲ್ಲಿಸಿವೆ. ಅಲ್ಲದೆ ರಾಷ್ಟ್ರೀಯ ಮಟ್ಟದಲ್ಲೂ ಇವರ ಸಾಧನೆ ಗುರುತಿಸಲ್ಪಟ್ಟಿದೆ. 2006ರ ವಿಶ್ವ ಪರಿಸರ ದಿನದ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಇದಿಷ್ಟೇ ಅಲ್ಲದೆ 2012ರಲ್ಲಿ ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲೂ ಇವರು ಭಾಗವಹಿಸಿದ್ರು. ಇದಕ್ಕಾಗಿ ದಕ್ಷಿಣ ಭಾರತದಲ್ಲಿ 1000 ಕಿಲೋಮಿಟರ್ ದೂರ ಸಂಚರಿಸಿದ್ರು. ಇದೀಗ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಬೆಂಗಳೂರಿನಿಂದ ಹೈದ್ರಾಬಾದ್, ಭೂಪಾಲ್, ಝಾನ್ಸಿ ಹಾಗೂ ಆಗ್ರಾ ಮೂಲಕ ದೆಹಲಿಗೆ 1740 ಕಿಲೋಮೀಟರ್ ದೂರ ಪ್ರಯಾಣಿಸುತ್ತಿರುವ ಸಯ್ಯದ್ ಸಜ್ಜದ್ ಅಹ್ಮದ್ ಗೆ ನಮ್ಮ ಹ್ಯಾಟ್ಸಫ್. .
ಅನುವಾದ - ಬಿ ಆರ್ ಪಿ ಉಜಿರೆ