ಬೀದಿನಾಯಿಗಳಿಗೆ ಆಶ್ರಯ ನೀಡುತ್ತೆ ಬೈಲುಕೊಪ್ಪೆಯ ಈ ಶ್ವಾನಾಶ್ರಮ
ಅಣ್ಣ ತಂಗಿ ನಡೆಸುವ ಈ ಶ್ವಾನಾಶ್ರಮ ಶ್ವಾನಗಳ ಹಸಿವನ್ನು ಆರೋಗ್ಯ ಅಗತ್ಯತೆಗಳನ್ನು ಪರಿಹರಿಸುತ್ತದೆ.
ಮೈಸೂರಿನ ಬೈಲುಕುಪ್ಪೆ ಅಲ್ಲಿ ನೆಲೆಸಿರುವ ಟಿಬೇಟಿಯನ್ ಸಮುದಾಯದಿಂದ ಗುರುತಿಸಿಕೊಂಡಿದೆ. ನಾಮ್‌ಡ್ರೊಲಿಂಗ್ ಮೊನಾಸ್ಟರಿ ಸುವರ್ಣ ದೇವಾಲಯದಿಂದ ಕೆಲವು ನಿಮಿಷಗಳ ಪ್ರಯಾಣ ಮಾಡಿದರೆ ಅಡ್ಡ ರಸ್ತೆಯಲ್ಲೊಂದು ಡೊಲ್ಮಾ ಡಾಗ್ ರಿಸ್ಕ್ಯೂ ಹೌಸ್ (ಶ್ವಾನಾಶ್ರಮ) ಎಂಬ ಫಲಕ ಕಾಣಿಸುತ್ತದೆ. ಅದರ ಒಳಹೊಕ್ಕರೆ 30 ಕ್ಕೂ ಅಧಿಕ ಶ್ವಾನಗಳು ಹಗ್ಗದ ಮೇಲೋ ಉದ್ಯಾನದಲ್ಲೋ ಗಿಡದ ಕೆಳಗೋ ವಿಶ್ರಾಂತಿ ಪಡೆಯುವುದನ್ನು ಕಾಣಬಹುದು.
2018 ರಲ್ಲಿ ಅಣ್ಣ-ತಂಗಿಯ ಜೋಡಿ ಪ್ರಾರಂಭಿಸಿದ ಈ ಆಶ್ರಯ ತಾಣ ಶ್ವಾನಗಳ ಹಸಿವನ್ನು ಆರೋಗ್ಯ ಅಗತ್ಯತೆಗಳನ್ನು ನೋಡಿಕೊಳ್ಳುತ್ತದೆ. ಅಮೇರಿಕ ಮೂಲದ ಸೆರಿಂಗ್ ಡೊಲ್ಮಾ ತಮ್ಮ ಉಳಿತಾಯದೊಂದಿಗೆ ಈ ತಾಣಕ್ಕೆ ಹಣ ಹೂಡಿದ್ದಾರೆ. ಅವರ ಸಹೋದರ ಕಲ್ಸಂಗ್ ಆಶ್ರಯ ತಾಣದ ನಿರ್ವಾಹಕರಾಗಿ ಅದರ ಕಾರ್ಯಾಚರಣೆಗಳನ್ನು ನೋಡಿಕೊಳ್ಳುತ್ತಾರೆ.
“ಹಲವಾರು ವರ್ಷದಿಂದ ಶ್ವಾನಗಳಿಗೊಂದು ಆಶ್ರಯ ತಾಣ ಕಟ್ಟಬೇಕೆಂಬುದು ನಮ್ಮ ಕನಸು. ಒಂದಷ್ಟು ಹಣ ಉಳಿತಾಯ ಮಾಡಿಕೊಂಡು ನನ್ನ ತಂಗಿ ಅದಕ್ಕೆ ಹಣ ಹೂಡಲು ನಿರ್ಧರಿಸಿದಳು. 9 ಮರಿಗಳಿರುವ ಬೀದಿ ನಾಯಿಯ ನಮ್ಮ ಮೊದಲ ಸದಸ್ಯನಾಯಿತು,” ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜತೆಗಿನ ಮಾತುಕತೆಯಲ್ಲಿ ಕಲ್ಸಂಗ್ ಹೇಳಿದ್ದಾರೆ.
“ಸ್ಥಳ ಮತ್ತು ಹಣದ ಕೊರತೆಯಿರುವುದರಿಂದ ಆರೋಗ್ಯವಾದ ಶ್ವಾನಗಳನ್ನು ನಾವು ಸೇರಿಸಿಕೊಳ್ಳುವುದಿಲ್ಲ,” ಎನ್ನುತ್ತಾರೆ ಕಲ್ಸಂಗ್. ಆಶ್ರಯ ತಾಣವನ್ನು ನಡೆಸುವುದು ದುಬಾರಿ ಕೆಲಸ. ತಿಂಗಳಿಗೆ 70,000 ಕ್ಕೂ ಅಧಿಕ ಹಣ ಖರ್ಚಾಗುತ್ತದೆ. ಕಲ್ಸಂಗ್ ಮತ್ತು ಸೇರಿಂಗ್ ಇಬ್ಬರು ದಾದಿಯರು ಮತ್ತು ಸಹಾಯಕರನ್ನು ನೇಮಿಸಿದ್ದಾರೆ. ಬೀದಿ ನಾಯಿಗಳ ಆರೋಗ್ಯ ನೋಡಿಕೊಳ್ಳಲು ಪೆರಿಯಾಪಟ್ಟಣದಿಂದ ಪಶುವೈದ್ಯರೊಬ್ಬರು ಕೇಂದ್ರಕ್ಕೆ ಭೇಟಿ ನೀಡುತ್ತಾರೆ.
ಪ್ಲಾಟೋಕಾಸ್ಟ್ ಪ್ರಕಾರ ಶ್ವಾನಗಳ ಊಟ, ವಿಹಾರ ಮತ್ತು ಇತರ ದಿನಚರಿಗೆ ವೇಳಾಪಟ್ಟಿಯೂ ಇದೆ.
ಪ್ರತಿ ತಿಂಗಳಿಗೆ 220 ಕಿಲೋ ಅಕ್ಕಿ ಬೇಕು. ಶ್ವಾನಗಳಿಗೆ ಹಾಲು, ಅನ್ನ, ಪೆಡಿಗ್ರಿ ಮತ್ತು ಚಿಕನ್ ನೀಡಲಾಗುತ್ತದೆ. ಅವುಗಲ ಉಪಹಾರಕ್ಕೆ ಮೂಳೆ, ಪೆಡಿಗ್ರಿ, ಬಿಸ್ಕತ್ತು ಮತ್ತು ಮೊಸರನ್ನು ನೀಡಲಾಗುತ್ತದೆ ಎನ್ನುತ್ತಾರೆ ಕಲ್ಸಂಗ್.
ಆಶ್ರಯ ತಾಣಕ್ಕೆ ಸೇರಿಂಗ್ ಅವರ ಹಣವನ್ನು ಬಳಸುವುದರ ಜತೆಗೆ ಇತರ ಶ್ವಾನಗಳಿಗೆ ಸಬ್ಸಿಡಿ ದರದಲ್ಲಿ ಚಿಕಿತ್ಸೆ ನೀಡಿ ಬಂದ ಹಣವನ್ನು ಬಳಸಿಕೊಳ್ಳಲಾಗುತ್ತದೆ.
“ಈ ಶ್ವಾನಗಳನ್ನು ಸಾಕಿದವರು ದೇಣಿಗೆ ನೀಡುತ್ತಾರೆ, ಅದನ್ನು ಉತ್ತಮ ಸೌಲಭ್ಯ ನೀಡಲು ಬಳಸಿಕೊಳ್ಳುತ್ತೇವೆ,” ಎನ್ನುತ್ತಾರವರು.
ರಕ್ಷಿಸಿ ಚಿಕಿತ್ಸೆ ನೀಡಿದ ಶ್ವಾನಗಳನ್ನು ದತ್ತು ನೀಡಲಾಗುತ್ತದೆ. ದತ್ತು ನೀಡಿದ ಶ್ವಾನಗಳು ಸುರಕ್ಷಿತವಾಗಿ ಮನೆ ಸೇರಿವೆಯೆ ಎಂಬುದನ್ನು ಅವರು ಖಾತರಿ ಪಡಿಸಿಕೊಳ್ಳುತ್ತಾರೆ.
“ಹಲವು ಪ್ರವಾಸಿಗರು ಇಲ್ಲಿನ ಶ್ವಾನಗಳನ್ನು ದತ್ತು ಪಡೆಯುತ್ತಿದ್ದರು. ಆದರೆ ಕೊರೊನಾ ಕಾರಣದಿಂದಾಗಿ ದತ್ತು ಪಡೆಯುವುದು ಕಡಿಮೆಯಾಗಿದೆ,” ಎಂದರು ಅವರು.