ಬೆಂಗಳೂರಿನ ವಿದ್ಯಾರ್ಥಿಗಳು ಚಿತ್ರ ಬಿಡಿಸುವ ಮೂಲಕ ಹೇಳುತ್ತಿದ್ದಾರೆ ಜಲ ಸಂರಕ್ಷಣೆಯ ಪಾಠ

ನೀರಿನ ಸಂರಕ್ಷಣೆಗಾಗಿ ಬೆಂಗಳೂರಿನ ಸೃಷ್ಟಿ ಸ್ಕೂಲ್ ಆಫ್ ಆರ್ಟ್, ಡಿಸೈನ್ ಮತ್ತು ಟೆಕ್ನಾಲಜಿಯ ವಿದ್ಯಾರ್ಥಿಗಳು ಮೆಟ್ರೋ ಸ್ಟೇಷನ್ ಗೋಡೆಯ ಮೇಲೆ ಚಿತ್ರ ಬಿಡಿಸುವ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ.

ಬೆಂಗಳೂರಿನ ವಿದ್ಯಾರ್ಥಿಗಳು ಚಿತ್ರ ಬಿಡಿಸುವ ಮೂಲಕ ಹೇಳುತ್ತಿದ್ದಾರೆ ಜಲ ಸಂರಕ್ಷಣೆಯ ಪಾಠ

Sunday December 01, 2019,

2 min Read

ಮಾನವ ಸಂಕುಲಕ್ಕೆ ಮೂಲವಾಗಿರುವುದೇ ಜಲ. ಮನುಷ್ಯನ ಪ್ರತಿ ಕಾರ್ಯಗಳಿಗೂ ಮುಖ್ಯವಾಗಿರುವುದೇ ನೀರು. ವ್ಯವಸಾಯ, ಯಾವುದೇ ಉದ್ಯಮ, ಮನೆ ಕಟ್ಟುವುದಕ್ಕೆ, ಪರಿಸರ ಬೆಳೆಸುವುದಕ್ಕೆ ಒಟ್ಟಿನಲ್ಲಿ ಮಾನವನ ಎಲ್ಲ ಚಟುವಟಿಕೆಗಳಿಗೆ ನೀರೇ ಪ್ರಮುಖ. ಅದರಲ್ಲೂ ಸಿಹಿ ನೀರು ಮಾನವನಿಗೆ ಅತ್ಯಗತ್ಯ. ಇಂದು ಸಿಹಿ ನೀರನ್ನು ಬರೀ ಕುಡಿಯುದಕ್ಕಷ್ಟೇ ಅಲ್ಲದೇ ಮಾನವ ತನ್ನ ದಿನನಿತ್ಯದ ಪ್ರತಿ ಕಾರ್ಯಗಳಿಗೂ ಅದನ್ನೆ ಅವಲಂಬಿಸಿದ್ದಾನೆ. ಇದರಿಂದ ದಿನೇದಿನೇ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ.


ಪ್ರಕೃತಿದತ್ತವಾಗಿ ಸಿಗುವ ಸಿಹಿನೀರು ಮಾನವನ ಅತಿಯಾದ ಬಳಕೆಯಿಂದ ಮುಂದೆ ಒಂದೇ ಒಂದು ಹನಿಯು ದೊರಕದಂತಾಗಬಹುದು. ಆದ್ದರಿಂದ ನೀರಿನ ಸಂರಕ್ಷಣೆ ಅತ್ಯಗತ್ಯವಾಗಿದೆ. ಈಗ ಬಳಸಲಾಗುತ್ತಿರುವ ನೀರನ್ನು ಅತೀ ಜಾಗರುಕತೆಯಿಂದ, ಮಿತವಾಗಿ ಬಳಸಿದರೆ ನಮ್ಮ ಮುಂದಿನ ತಲೆಮಾರಿಗೂ ಸಿಹಿನೀರಿನ್ನು ದಕ್ಕಿಸಬಹುದು. ನಮ್ಮ ಮುಂದಿನ ಪೀಳಿಗೆಗೆ ನಾವು ಕೊಡಬಹುದಾದ ಅತ್ಯಂತ ಶ್ರೇಷ್ಠ ಕೊಡುಗೆ ಅದು.


ಈಗಿನಿಂದಲೇ ನಾವು ಭೂಮಿಯಿಂದ ಎಷ್ಟು ನೀರನ್ನು ತೆಗೆಯುತ್ತೆವೆಯೋ ಅದಕ್ಕಿಂತ ನೂರರಷ್ಟು ನೀರನ್ನು ಭೂಮಿಗೆ ಹಿಂತಿರುಗಿಸಬೇಕಿದೆ. ಅದಕ್ಕಾಗಿ ಮಳೆಯಿಂದ ಬರುವ ಪ್ರತಿಯೊಂದು ಹನಿಯನ್ನು ಹಳ್ಳ, ಕೊಳ್ಳ, ಕೆರೆ, ಬಾವಿಗಳನ್ನು ನಿರ್ಮಿಸಿ ಭೂಮಿಯಲ್ಲಿ ನೀರನ್ನು ಇಂಗಿಸಬೇಕು. ಈ ನಿಟ್ಟಿನಲ್ಲಿ ಬೆಂಗಳೂರಿನ ಚಿತ್ರಕಲಾ ವಿದ್ಯಾರ್ಥಿಗಳು ನೀರಿನ ಸಂರಕ್ಷಣೆ, ಬಾವಿಗಳ ಪುನರ್ಭರ್ತಿಗಾಗಿ ಮೇಟ್ರೋ ನಿಲ್ದಾಣ ಮತ್ತು ಕಬ್ಬನ್ ಪಾರ್ಕ್ ನ ಗೋಡೆಗಳ ಮೇಲೆ ಚಿತ್ರ ಬಿಡಿಸಿ ಪ್ರಾಚೀನ ಕಾಲದ ನೀರಿನ ಬಳಕೆ ಹಾಗೂ ಸಂರಕ್ಷಣೆ (ಬಾವಿಗಳ ಪುನರ್ಭರ್ತಿ) ಮತ್ತು ಪ್ರಸ್ತುತ ನೀರಿನ ಬಳಕೆಗಳ ಬಗ್ಗೆ ಚಿತ್ರ ಬಿಡಿಸಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.


ಇದರಲ್ಲಿರುವ ವಿಶೇಷತೆ ಏನೆಂದರೆ ಅವರು ಬರೀ ಬಣ್ಣಗಳನ್ನು ಬಳಸಿ ಚಿತ್ರ ಬಿಡಿಸಿಲ್ಲ, ಭೂಮಿ ಅಗೆದಾಗ ಪ್ರಾಕೃತಿಕವಾಗಿ ಸಿಗುವ ಕಪ್ಪು, ಕಂದು, ಕೆಂಪು, ಕಾವಿಮಣ್ಣು ಹಾಗೂ ಮಟ್ಟಿಮಣ್ಣನ್ನು ಬಳಸಿ ಚಿತ್ರ ಬಿಡಿಸಲಾಗಿದೆ. ಜೊತೆಗೆ ಬಾವಿ ಅಗೆಯುವ ಭೋವಿ ಜನಾಂಗದ ಬಗ್ಗೆಯು ಈ ಚಿತ್ರಗಳ ಮೂಲಕ ಕಥೆ ಹೇಳಲಾಗಿದೆ, ವರದಿ ದ ನ್ಯೂಸ್‌ ಮಿನಿಟ್.


ಆರ್ಟ್ ಇನ್ ಟ್ರಾನ್ಸಿಟ್ ನಲ್ಲಿ ಭಾಗವಹಿಸಿದವರು (ಚಿತ್ರಕೃಪೆ: ಯಶ್ ಪಾಂಡರಿ)




ಆರ್ಟ್ ಇನ್ ಟ್ರಾನ್ಸಿಟ್ ಬೆಂಗಳೂರಿನ ನೀರಿನ ಬಳಕೆ ಕುರಿತಾದ ಮಾಹಿತಿಯನ್ನು ಕಲೆಹಾಕಲಾಯಿತು. ಬಯೋಮ್ ಮತ್ತು ಸೃಷ್ಟಿ ಸ್ಕೂಲ್ ನ ಹಿರಿಯ ವಿನ್ಯಾಸಕಿ ಅವರ ಸಹಾಯದೊಂದಿಗೆ ಬೆಂಗಳೂರು ನೀರಿನ ಬಳಕೆಯ ಇತಿಹಾಸ, ಪರಿಸರ ಮತ್ತು ಭೋವಿ ಜನಾಂಗದ ಬಗ್ಗೆ ಕಥೆ ಹೆಣೆದು ಗೋಡೆಗಳ ಮೇಲೆ ಚಿತ್ರ ಬಿಡಿಸಲಾಗಿದೆ. ಜೊತೆಗೆ ಬಾವಿ ಅಗೆಯುವುದರ ಮೂಲಕ ನೀರನ್ನು ಪುನರ್ಭರ್ತಿ ಮಾಡಬಹುದಾದ ಪರಿಹಾರಗಳು ಮತ್ತು ಬಾವಿ ಅಗೆಯುವವರ ಜೀವನವನ್ನು ಚಿತ್ರಿಸಲಾಗಿದೆ.


ದ ನ್ಯೂಸ್‌ ಮಿನಿಟ್ ನೊಂದಿಗೆ ಆರ್ಟ್ ಇನ್ ಟ್ರಾನ್ಸಿಟ್ ಪ್ರಾಜೆಕ್ಟ್ ಮುಖ್ಯಸ್ಥೆ ಅರ್ಜು ಮಿಸ್ತ್ರಿಯವರು ಮಾತನಾಡುತ್ತಾ,


“ನೀರಿನ ಬಿಕ್ಕಟ್ಟಿನ ಕುರಿತು ಜಾಗೃತಿ ಮೂಡಿಸಲು ಬೆಂಗಳೂರು ಸುಸ್ಥಿರ ವೇದಿಕೆಯಿಂದ ಕರೆ ಬಂದಿತು. ನಾವು ಈಗಾಗಲೇ ಕಬ್ಬನ್ ಪಾರ್ಕ್ ನಲ್ಲಿ ಏಳು ತೆರೆದ ಬಾವಿಗಳನ್ನು ಪುನರ್ಭರ್ತಿ ಮಾಡಿದ್ದೇವೆ ಹಾಗೂ 65 ಬಾವಿಗಳನ್ನು ಅಗೆಯಲು ಅನುಮತಿ ಪಡೆದಿದ್ದೇವೆ. ನೀರನ್ನು ಬಾವಿಗಳಲ್ಲಿ ಮರು ಭರ್ತಿ ಮಾಡುವ ಅಗತ್ಯತೆಗಳ ಬಗ್ಗೆ ಈ ಚಿತ್ರಕತೆಗಳ ಮೂಲಕ ಜಾಗೃತಿ ಮೂಡಿಸುವುದು ಈ ಯೋಜನೆಯ ಉದ್ದೇಶ” ಎಂದರು.

ಈ ಯೋಜನೆ ಮುಂದುವರೆಸಲು ಬಿಎಫ್ಎಸ್ ನಿಂದ ಹಣ ದೊರೆತಿದೆ ಮತ್ತು ಈ ಯೋಜನೆಯು ಎರಡು ಭಾಗವಾಗಿ ವಿಂಗಡಿಸಲಾಗಿದೆ. ನೀರಿನ ಪುನರ್ಭರ್ತಿ ಜಾಗೃತಿ ಮೂಡಿಸುವುದು ಹಾಗೂ ಭೋವಿ (ಮನ್ನು ವಡ್ಡರು) ಎನ್ನುವ ಬಾವಿ ಅಗೆಯುವ ಸಮುದಾಯದ ಬಗ್ಗೆ ಅರಿವು ಮೂಡಿಸುವುದಾಗಿದೆ. ಭೋವಿ ಜನರೊಂದಿಗೆ ನಾವು ಮಾತನಾಡಿದಾಗ ಅವರ ಸಂಸ್ಕೃತಿ, ಬಾವಿ ಅಗೆಯುವ ವಿವಿಧ ಸ್ಥಳಗಳ ಮತ್ತು ಮಣ್ಣಿನೊಂದಿಗೆ ಅವರು ಬೆಸೆದುಕೊಂಡಿರುವ ಭಾವನಾತ್ಮಕ ಸಂಬಂಧದ ಬಗ್ಗೆ ಅರಿತುಕೊಂಡೆವು ಎಂದು ವಿದ್ಯಾರ್ಥಿಗಳೊಂದಿಗೆ ಕೆಲಸ ಮಾಡಿದ ಯಶ್ ಪಾಂಡರಿ ಹೇಳಿದರು, ವರದಿ ಎಡೆಕ್ಸ್ ಲೈವ್.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.