ಬೆಂಗಳೂರಿನ ಕೆರೆಗಳಿಗೆ ಮರುಜೀವ ನೀಡುತ್ತಿರುವ ಕಾರ್ಪೊರೇಟ್ ಭಗೀರಥ
ಕೆಂಪೆಗೌಡರು ಕಟ್ಟಿಸಿದ್ದ ಸು.262 ಕೆರೆಗಳಲ್ಲಿ ಈಗ ಉಳಿದಿರುವವು ಕೇವಲ 34. ಅವುಗಳಲ್ಲಿಯೂ ಸಹ ಆರೋಗ್ಯವಂತ ಹಾಗೂ ಕುಡಿಯುವುದಕ್ಕೆ ಯೋಗ್ಯ ನೀರನ್ನು ಶೇಖರಿಸಿರುವ ಕೆರೆಗಳು ಬೆರಳೆಣಿಕೆಯಷ್ಟೂ ಇಲ್ಲ. ಯಾವ ಸರಕಾರದ ಸಹಾಯವೂ ಇಲ್ಲದಂತೆ 45 ಕೆರೆಗಳಿಗೆ ಮರುಜೀವ ನೀಡುವ ಕಾರ್ಯಕ್ಕೆ ಮುನ್ನುಡಿ ಬರೆದಂತೆ ಈಗಾಗಲೇ 4 ಕೆರೆಗಳನ್ನು ಪುನರುಜ್ಜೀವನಗೊಳಿಸಿದ್ದಾರೆ ಆನಂದ್.
ಸುಮಾರು 500 ವರ್ಷಗಳ ಹಿಂದೆ ಬೆಂಗಳೂರನ್ನು ನಿರ್ಮಿಸಿದ ಕೆಂಪೆಗೌಡರು ಭವಿಷ್ಯದ ಬೆಂಗಳೂರಿನ ಕುರಿತು ಯೋಚಿಸಿಯೆ ಕೆರೆಗಳನ್ನು ನಿರ್ಮಿಸಿ, ಒಂದು ಕೆರೆಯಿಂದ ಇನ್ನೊಂದು ಕೆರೆಗೆ ನೀರು ಹರಿಯುವಂತೆ ರಾಜಕಾಲುವೆಗಳನ್ನೂ ನಿರ್ಮಿಸಿದ್ದರು. ನಂತರದ ದಿನಗಳಲ್ಲಿ, ಕೆರೆಗಳು ಕ್ರಮೇಣ ಗೋಲ್ಫ್ ಕ್ಲಬ್, ಸ್ಟೇಡಿಯಂ ಹಾಗೂ ಬಸ್ ನಿಲ್ದಾಣಗಳಾಗಿ, ಅಪಾರ್ಟ್‌ಮೆಂಟ್‌ಗಳಾಗಿ ಬದಲಾಗುತ್ತಾ ಬಂದವು. ಕಳೆದ ಶತಮಾನದಲ್ಲಿ ಅಂದರೆ, 1960 ರಲ್ಲಿ 262 ಕೆರೆಗಳಿದ್ದ ಬೆಂಗಳೂರು ಈಗ 81 ಕೆರೆಗಳಿಗೆ ಗಣನೀಯವಾಗಿ ಇಳಿದಿದೆ. ಇರುವ 81 ಕೆರೆಗಳಲ್ಲಿ ಇಂದು ಉಸಿರಾಡುತ್ತಿರುವವು ಕೇವಲ 34!
ಬೆಂಗಳೂರಿನ ಜಲಬವಣೆಯನ್ನ ನೋಡುತ್ತಲಿದ್ದರೆ, ಬೆಂಗಳೂರು ಸಹ ಕೇಪ್‌ಟೌನಿನಂತಾಗಬಹುದೆಂದೂ ಊಹಿಸಲಾಗಿದೆ. ಕೇಪ್‌ಟೌನ್‌ನಲ್ಲಿ ವ್ಯಕ್ತಿಗೆ 25 ಲೀಟರಿನಂತೆ ನೀರು ಹಂಚಿಕೆ ಮಾಡಲಾಗುತ್ತಿದೆ. ನಾವೂ ಎಚ್ಚೆತ್ತುಕೊಳ್ಳದಿದ್ದರೆ, ನಮ್ಮ ಜಲಮೂಲಗಳನ್ನು ಉಳಿಸಿಕೊಳ್ಳದಿದ್ದರೆ ಅದೇ ಪರಿಸ್ಥಿತಿ ಇಲ್ಲಿಯೂ ಉದ್ಭವಿಸಬಹುದು.
ಇಂತಹ ಕಠಿಣ ಪರಿಸ್ಥಿತಿ ಎಲ್ಲರನ್ನೂ ಚಿಂತೆಗೀಡು ಮಾಡಿರುವಾಗ, ಎಲ್ಲರೂ ಸರಕಾರಗಳನ್ನು, ಪ್ರಾಧಿಕಾರಗಳನ್ನು ಬೈಯುತ್ತಿರುವ ಸಮಯದಲ್ಲಿ ಇಲ್ಲೊಬ್ಬರು ಜಲ ಮೂಲಗಳಿಗೆ ಮರುಜೀವ ನೀಡುವ ಕಾರ್ಯವನ್ನು ಪ್ರಾರಂಭಿಸಿ ಭಗೀರಥರಾಗಿದ್ದಾರೆ. 38 ವರ್ಷದ ಯಾಂತ್ರಿಕ ಅಭಿಯಂತರ ಆನಂದ್ ಮಲ್ಲಿಗವಾದ್ ಕೆರೆಗಳಿಗೆ ಮರು ಜೀವ ನೀಡಿ ಹೊಸ ರೂಪಕೊಡಲು ತಮ್ಮ ಕೆಲಸವನ್ನೇ ತೊರೆದಿದ್ದಾರೆ.
2025ರ ಹೊತ್ತಿಗೆ 45 ಕೆರೆಗಳಿಗೆ ಮರುಜೀವ
ಒಂದೂಅರ್ಧ ವರ್ಷಗಳ ಕಾಲ ಅಧ್ಯಯನ ನಡೆಸಿದ ಆನಂದ್, 2025ರ ಹೊತ್ತಿಗೆ ಬೆಂಗಳೂರಿನ 45 ಕೆರೆಗಳನ್ನು ಪುನರುಜ್ಜೀವನಗೊಳಿಸುವ ಗುರಿ ಹೊಂದಿದ್ದಾರೆ. ತಮ್ಮ ಭಗೀರಥ ಯಾತ್ರೆಯ ಬಗ್ಗೆ ಯುವರ್‌ಸ್ಟೋರಿಯೊಂದಿಗೆ ಮಾತನಾಡುತ್ತ, ಆನಂದ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
“ನಾವು ಮೊದಲು ಕ್ಯಾಲಸನಹಳ್ಳಿ ಕೆರೆಯನ್ನು ಆಯ್ಕೆ ಮಾಡಿದೆವು. ನಾನು ಸನ್ಸೇರಾದಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿಯೇ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ವಿಭಾಗದಲ್ಲಿ ಮುಖ್ಯಸ್ಥನಾಗಿದ್ದೆ. ಎಪ್ರಿಲ್ 20, 2017ರಂದು ಸುಮಾರು 1 ಕೋಟಿ 17 ಲಕ್ಷರೂಪಾಯಿಗಳ ಅನುದಾನವನ್ನು ಸನ್ಸೇರಾ ಬಿಡಗಡೆಗೊಳಿಸಿತು. ಕೆರೆಯ ಸುತ್ತಲಿನ ಹಳ್ಳಿಗಳ ಸಮುದಾಯವನ್ನು ನಾವು ಕೆರೆ ಪುನರುಜ್ಜೀವನಗೊಳಿಸುವುದರ ಬಗ್ಗೆ ಜಾಗೃತರನ್ನಾಗಿ ಮಾಡಬೇಕಿತ್ತು. ಅದಕ್ಕಾಗಿ ನಮಗೆ ಸಹಾಯ ಮಾಡಿದವರು, ಓರ್ವ ಹಿರಿಯ ನಾಗರಿಕ 74 ವರ್ಷದ ಬಿ ಮುತ್ತುರಾಮ್. ಅವರೊಂದಿಗೆ ಸೇರಿ ನಾವು 400 ಮನೆಗಳ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಿದೆವು. ಆ ನಂತರದಲ್ಲಿಯೇ ಜನರು ನಮಗೆ ಸಹಾಯ ಮಾಡುವುದಕ್ಕೆ ಮುಂದೆ ಬಂದರು.” ಎಂದರು.
ಕ್ಯಾಲಸನಳ್ಳಿ ಕೆರೆಗೆ ಮರುಜೀವ
ಈವರೆಗೆ ಮರುಜೀವ ಪಡೆದಿರುವ ನಾಲ್ಕು ಕೆರೆಗಳೂ ವಿಭಿನ್ನ ರೀತಿಯ ಮಾದರಿಗಳಾಗಿವೆ. ಕ್ಯಾಲಸನಳ್ಳಿ ಕೆರೆಯನ್ನು ಮೊದಲು ಮಾದರಿ ಕೆರೆಯನ್ನಾಗಿ ರೂಪಿಸಬೇಕೆಂದು ನಿರ್ಧರಿಸಿದ ಆನಂದ್ 6 ಟ್ರಕ್‌ಗಳನ್ನು, 3 ಜೆಸಿಬಿಗಳನ್ನು ಬಳಸಿ 45 ದಿನಗಳ್ಲಿ ಇಡೀ ಕೆರೆಗೆ ಹೊಸ ರೂಪ ನೀಡಿದರು. ಇದರ ಬಗ್ಗೆ ಮಾತನಾಡುತ್ತ ಆನಂದ್,
“ನಾವು ಕ್ಯಾಲಸನಳ್ಳಿ ಕೆರೆಯನ್ನು ರೈತ ಸ್ನೇಹಿ ಕೆರೆಯಾಗಿ, ಮಾಡಿದ್ದೇವೆ. ಅದರಲ್ಲಿ ಜಾನುವಾರುಗಳು ನೀರು ಕುಡಿಯಬೇಕು, ರೈತರಿಗೆ ಮೀನು ಹಿಡಿಯುವುದಕ್ಕೆ, ಮಕ್ಕಳಿಗೆ ಆಟವಾಡುವುದಕ್ಕೆ ಹಾಗೂ ಬಟ್ಟೆ ಒಗೆಯುವುದಕ್ಕೆ ಕಟ್ಟೆಗಳನ್ನೂ ನಿರ್ಮಿಸಿದ್ದೇವೆ. ಇದಲ್ಲದೆ ಇಡೀ ಕೆರೆಯಲ್ಲಿ ಒಟ್ಟು 5 ಚಿಕ್ಕ ದ್ವೀಪ ದಿಬ್ಬಗಳನ್ನು ವಿವಿಧ ಪಕ್ಷಿಗಳಿಗೆ ಗೂಡು ಕಟ್ಟಿಕೊಳ್ಳುವುದಕ್ಕೆ ಸಹಕಾರಿಯಾಗುವಂತೆ ನಿರ್ಮಿಸಿದ್ದೇವೆ.” ಎಂದರು.
ಕೆರೆಗಳನ್ನು ಪುನರುಜ್ಜೀವನಗೊಳಿಸುವುದಷ್ಟೇ ಅಲ್ಲದೆ, ಆ ಕೆರೆಗಳ ಸುತ್ತ ರಸ್ತೆ ನಿರ್ಮಿಸಿ, ಸುತ್ತಲೂ ಗಿಡಗಳನ್ನು ಬೆಳೆಸಿದ್ದಾರೆ. ಈ ಒಂದು ಕೆರೆಯಲ್ಲಿ ಸುಮಾರು 18,000 ಜಲಸಸ್ಯಗಳನ್ನೂ ಬೆಳೆಸಿದ್ದಾರೆ.
ವಾಬಸಂದ್ರ ಕೆರೆ
ವಾಬಸಂದ್ರ ಕೆರೆಯು ಜಲ ಶೇಖರಣೆಗೆಂದೇ ಮೀಸಲಿಡಲಾಗಿದೆ. ಇದರ ವಿಶಿಷ್ಟತೆಯ ಬಗ್ಗೆ ಮಾತನಾಡುತ್ತ ಆನಂದ್,
“ಈ ಕೆರೆಯನ್ನು 8 ಅಡಿ, 16 ಅಡಿ ಹಾಗೂ 32 ಅಡಿಯ ಮೂರು ಆಳದಲ್ಲಿ ತೋಡಲಾಗಿದೆ. 8 ಅಡಿಯಲ್ಲಿ ಸೂರ್ಯನ ಶಾಖವು ಹೆಚ್ಚು ಬೀಳುತ್ತದೆ. ಆಗ ನೀರು ಆವಿಯಾಗುತ್ತದೆ, ಆದರೆ ಇಂಗಿಹೋಗುವುದಿಲ್ಲ. ಮೊದಲಬಾರಿಗೆ ನೀರು ಹರಿದು ಬಂದಾಗ ಅದರಲ್ಲಿನ ಗಲೀಜನ್ನು ಮೀನುಗಳು ಹಾಗೂ ಕೆಲ ನೀರಿನಲ್ಲಿ ಬೆಳೆಯುವ ಸಸ್ಯಗಳು ತಿಂದು ಹಾಕಿ ನೀರನ್ನು ಸ್ವಚ಼್ಛಗೊಳಿಸುತ್ತವೆ. ನಂತರದಲ್ಲಿ 16 ಅಡಿ ಆಳಕ್ಕೆ ನೀರು ಹರಿದು ಹೋಗುತ್ತದೆ. ಅಲ್ಲಿ 8 ಅಡಿಗಳವರೆಗೆ ಮಾತ್ರ ಸೂರ್ಯನ ಕಿರಣಗಳು ಬೀಳುತ್ತವೆ, ಉಳಿದ 8 ಅಡಿಯಲ್ಲಿ ಬೇರೆ ರೀತಿಯ ಗಿಡಗಳು ಬೆಳೆಯುತ್ತವೆ. ಅಲ್ಲಿನ ನೀರು ಭೂಮಿಯಲ್ಲಿ ಇಂಗಿಹೋಗಿ ಅಂತರ್ಜಲವನ್ನು ಹೆಚ್ಚಿಸುತ್ತದೆ. ಉಳಿದ ಸ್ವಚ್ಛ ನೀರು 32 ಅಡಿಗೆ ನುಗ್ಗುತ್ತದೆ. ಅಲ್ಲಿಯೂ ಸೂರ್ಯನ ಶಾಖ ಇಲ್ಲದ ಕಾರಣ ನೀರು ಆವಿಯಾಗದೆ, ಇಂಗಿಹೋಗುತ್ತದೆ.”
ಕೋನಸಂದ್ರ ಕೆರೆಯ ಸೀವೇಜ್ ಟ್ರೀಟ್ಮೆಂಟ್.
ತಮ್ಮ ಕಾರ್ಯದಲ್ಲಿ ಕೆರೆಗಳನ್ನು ಪುನರುಜ್ಜೀವನಗೊಳಿಸುವುದಕ್ಕೆ ಸಿಮೆಂಟ್ ಹಾಗೂ ಇತರ ಸಾಮಾಗ್ರಿಗಳನ್ನು ಉಪಯೋಗಿಸದೆ ಕೇವಲ ನೈಸರ್ಗಿಕ ಉತ್ಪನ್ನಗಳನ್ನು ಉಪಯೋಗಿಸಿರುವ ಆನಂದ್
“ಈ ಕೆರೆಗೆ ಬರುವ ನೀರು ಗಲೀಜಾಗಿದ್ದರಿಂದ ನಾವು ಅದು ಬರುವ ಕಾಲುವೆಗೆ ಜಲ್ಲಿ, ಮರುಳು ಹಾಗೂ ಸೀವೇಜ್ ಟ್ರೀಟ್ಮೆಂಟ್‌ಗೆ ಬೇಕಾದ ಸಾಮಾಗ್ರಿಗಳನ್ನು ಬಳಸಿ ಒಂದು ಜಾಲರಿ ರೀತಿಯ ಸಾಧನವನ್ನು ನಿರ್ಮಿಸಿದೆವು. ನೀರಿನಲ್ಲಿ ಹರಿದುಕೊಂಡು ಬರುವ ಪ್ಲಾಸ್ಟಿಕ್, ಹಾಗೂ ಘನ ವಸ್ತುಗಳನ್ನು ಅದು ತಡೆಹಿಡಿಯುತ್ತದೆ. ಜೇಡಿ ಮಣ್ಣು ಕೆರೆಗೆ ಹರಿಯದಂತೆ ನಾವು ಸಿಲ್ಟ್ ಟ್ರಾಪ್ ಎಂಬ ವ್ಯವಸ್ಥೆ ಮಾಡಿದ್ದೇವೆ. ಕೇವಲ ತಿಳಿ ನೀರು ಮಾತ್ರ ಕೆರೆಗೆ ಹರಿದುಬರುವಂತೆ ವ್ಯವಸ್ಥಿತವಾಗಿ ಇದನ್ನು ರೂಪಿಸಿ, ಇನ್ನೂ ಏನಾದರು ರಾಸಯಾನಿಕ ಅಂಶಗಳು ನೀರಿನಲ್ಲಿ ಉಳಿದಿದ್ದರೆ, ಅದನ್ನು ಸ್ವಚ್ಛಗೊಳಿಸಲು 60 ರೀತಿಯ ಜಲಸಸ್ಯಗಳನ್ನು ನಾವು ಬೆಳೆಸಿದ್ದೇವೆ” ಎಂದರು.
ಈ ರೀತಿಯಾಗಿ ಕೆರೆಗೆ ನೀರು ಬರುವುದರಿಂದ ಕೆರೆಯ ಸುತ್ತಲೂ ಒಂದು ಸೂಕ್ಷ್ಮ ಹವಾಮಾನ ಸೃಷ್ಟಿಯಾಗಿ ವಾತಾವರಣವನ್ನು ತಂಪಾಗಿಸುತ್ತದೆ.
'ಕೆರೆಯ ಸುತ್ತಲೂ ಒರೆಲಿಯಾ ಎಂಬ ಪ್ರಭೇದದ ಗಿಡಗಳನ್ನು ನೆಡಲಾಗಿದ್ದು, ನಿರ್ವಹಣಾ ರಹಿತವಾಗಿ ಇವು ಬೆಳೆಯುತ್ತವೆ. ಮಣ್ಣಿನ ಸವಕಳಿಯಾಗದಂತೆ ತಡೆಯುತ್ತದೆ. ಈ ಗಿಡಗಳ ಹೂವುಗಳಿಗೆ ಜೇನು ಹಾಗೂ ಪಾತರಗಿತ್ತಿಯಂತ ಕೀಟಗಳು, ಪಕ್ಷಿಗಳು ಮುತ್ತಿಕ್ಕುತ್ತವೆ. ಅದರಲ್ಲಿನ ಮಕರಂದವನ್ನು ಹೀರಿ ಸುತ್ತಲಿನ ರೈತರ ಹೊಲಗಳ ಬೆಳೆಗೆ ಹೋಗಿ ಪರಾಗಸ್ಪರ್ಷವನ್ನು ಮಾಡುತ್ತವೆ. ಈ ರೀತಿಯಾದಾಗ, ಬೆಳೆಯ ಇಳುವರಿ ಹೆಚ್ಚಾಗುತ್ತದೆ.'
ಈ ಗಿಡಗಳನ್ನು ಕೆರೆಯ ಸುತ್ತಲೂ 3 ಕಿಮೀನಷ್ಟು ನೆಡಲಾಗಿದೆ. ಇವು ಭುಮಿಯು ಕಾಯದಂತೆ, ಮಣ್ಣು ಸವೆದು ಹೋಗದಂತೆ ಹಾಗೂ ಪಾರ್ಥೇನಿಯಂನಂತ ಕಳೆಗಳನ್ನು ಬೆಳೆಯದಂತೆ ನೋಡಿಕೊಳ್ಳುತ್ತದೆ.
ಗವಿ ಕೆರೆಯ ವಿಶಿಷ್ಟತೆ
ಈ ಕೆರೆಯ ವಿಶಿಷ್ಟತೆ ಇರೋದು ಇದು ಪುಷ್ಕರಣಿಯ ರೀತಿಯಲ್ಲಿ ನಿರ್ಮಿತವಾಗಿರುವುದರಲ್ಲಿ. ಅಂದರೆ ಮೆಟ್ಟಿಲುಗಳಂತೆ ನಿರ್ಮಿತವಾಗಿರೋದು. ಇಲ್ಲಿ ನೀರು ತೆಳುವಾಗಿರದೆ ದಪ್ಪನೆಯ ಪದರಗಳಂತಿದ್ದು, ಆವಿಯಾಗುವುದು ತಪ್ಪುತ್ತದೆ. ಬಂದ ನೀರೆಲ್ಲವೂ ಹೋಗಿ ಆಳದಲ್ಲಿ ಸೇರುವುದರಿಂದ ಅಷ್ಟೂ ನೀರು ಇಂಗಿಹೋಗುತ್ತದೆ. ಇದರಲ್ಲಿಯೂ ಗಿಡಗಳನ್ನು ಬೆಳೆಸಿ ನೀರನ್ನು ಸ್ವಚ್ಛಗೊಳಿಸಿ ಅದಕ್ಕೆ ಔಷಧೀಯಗುಣಗಳನ್ನು ನೀಡುವ ವ್ಯವಸ್ಥೆಯನ್ನೂ ಮಾಡಲಾಗಿದೆ.
ಕೆರೆಯ ಸುತ್ತಲೂ ಬೆಳೆದಿದೆ ದಟ್ಟ ಕಾಡಿನಂತಹ ಮಿಯಾವಕಿ ಫಾರೆಸ್ಟ್.
ಈ ಎಲ್ಲಾ ಕೆರೆಯ ಏರಿಯ ಮೇಲೂ ಪ್ರಾದೇಶಿಕವಾಗಿ ದೊರೆಯುವ ಗಿಡಗಳನನ್ನು ಮಿಯಾವಕಿ ಪದ್ದತಿಯಲ್ಲಿ ಬೆಳೆಸಲಾಗಿದೆ.
“ಇದೊಂದು ವಿಭಿನ್ನ ಪದ್ದತಿಯಾಗಿದ್ದು, ನಾವು ಸುಮಾರು 25,000 ಚದುರ ಅಡಿಯಲ್ಲಿ 5000 ಗಿಡಗಳನ್ನು ನೆಟ್ಟಿದ್ದೇವೆ. 1500 ಕಾರ್ಯಕರ್ತರು ಬಂದು 1 ಗಂಟೆ 45 ನಿಮಿಷದಲ್ಲಿ ಅಷ್ಟೂ ಗಿಡಗಳನ್ನು ನೆಟ್ಟಿದ್ದರು. ಈಗ ಅದು ದಟ್ಟ ಅರಣ್ಯದಂತೆ ಕಾಣುತ್ತಿದೆ" ಎನ್ನುತ್ತಾರೆ ಆನಂದ್.
ಕೆರೆಯ ಸುತ್ತಲಿನ ರೈತರಿಗೆ ಸಹಾಯವಾಗಲೆಂದು ಸುಮಾರು 186 ಕೊಳವೆಬಾವಿಗಳನ್ನು ರೀಚಾರ್ಜ್ ಮಾಡಲಾಗಿದೆ.
ಜೂನ್ 5 2017ರ ಹೊತ್ತಿಗೆ ಕ್ಯಾಸನಳ್ಳಿ ಕೆರೆ ಸಂಪೂರ್ಣವಾಗಿ ಮರುಜೀವಪಡೆದುಕೊಂಡಿತ್ತು. ಅಂದೆ ಆನಂದ್ ಉಳಿದ ಕೆರೆಗಳನ್ನೂ ಪುನರುಜ್ಜೀವನಗೊಳಿಸುವ ಕಾರ್ಯಕ್ಕೆ ಹೆಜ್ಜೆ ಇಟ್ಟದ್ದು. ಇದುವರೆಗು 40,000 ಗಿಡಗಳನ್ನು ನೆಟ್ಟು ಬೆಳೆಸಿರುವ ಆನಂದ್ ಇನ್ನೂ 40 ಕೆರೆಗಳಿಗೆ ಮರುಜೀವ ನೀಡಿ ಅವುಗಳ ಸುತ್ತಲೂ ಅರಣ್ಯ ಬೆಳೆಸುವುದಾಗಿ ಹೇಳಿದ್ದಾರೆ.
ಅವರ ಈ ಕಾರ್ಯಕ್ಕೆ ಹಲವಾರು ಅಂತರಾಷ್ಟ್ರೀಯ ಕಂಪನಿಗಳ ಸಿಎಸ್‌ಆರ್ ವಿಭಾಗವು ಹಣ ಒದಗಿಸಿದೆ.
ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.