ಕಣ್ಣಿಲ್ಲದಿದ್ದರೇನು? ಸಾಧಿಸುವ ಆಸೆ ಕಡಿಮೆಯಿಲ್ಲವಲ್ಲ!

ಹಲವು ವರ್ಷಗಳ ಹಿಂದೆ ಲೋಟಸ್‌ ಎಂಬ ಸುದ್ದಿವಾಹಿನಿಯಲ್ಲಿ ಸುದ್ದಿವಾಚಿಸಿದ್ದ ಬಾಲಕನೋರ್ವನ ಕಥೆ.

ಕಣ್ಣಿಲ್ಲದಿದ್ದರೇನು? ಸಾಧಿಸುವ ಆಸೆ ಕಡಿಮೆಯಿಲ್ಲವಲ್ಲ!

Tuesday October 29, 2019,

2 min Read

ಎಲ್ಲ ದೇಹಾಂಗಗಳೂ ಸರಿಯಿದ್ದರೂ ಕೆಲಸ ಮಾಡಲು ಸೋಮಾರಿಗಳಾಗುವವರ ಮಧ್ಯೆ ಕೆಲವರು ಕತ್ತಲ ಅಗಾಧ ಆಕಾಶದ ನಕ್ಷತ್ರಗಳಂತೆ ಹೊಳೆಯುತ್ತಿರುತ್ತಾರೆ. ಕಾಲಿಲ್ಲದಿದ್ದರೂ ಪ್ಯಾರಾಒಲಂಪಿಕ್ಸ್‌ ಆಡಿದ, ಗೆದ್ದ ಕ್ರೀಡಾಪಟುಗಳಿದ್ದಾರೆ, ಅಂಗವೈಕಲ್ಯವಿದ್ದರೂ ಹಿಮಚ್ಛಾದಿತ ಪರ್ವತಗಳನ್ನೇರಿದವರಿದ್ದಾರೆ ತಮ್ಮ ಕಾಲಮೇಲೆ ತಾವು ನಿಲ್ಲುವಂತೆ ಬದುಕುಕಟ್ಟಿಕೊಂಡ ದೃಷ್ಟಿಮಾಂದ್ಯರು, ಅಂಗವಿಕಲರಿದ್ದಾರೆ. ಅಷ್ಟೇ ಏಕೆ ಇತ್ತೀಚೆಗಷ್ಟೇ ತಿರುವನಂತಪುರದ ಉಪಜಿಲ್ಲಾಧಿಕಾರಿಯಾಗಿ ನೇಮಕವಾದ ಐಏಎಸ್‌ ಅಧಿಕಾರಿ ಪ್ರಾಂಜಲ್‌ ಪಾಟೀಲರು ಸಹ ಅಂಧರೆ!


ಇಂಥಹ ಸಾಹಸಿಗಳ ಸಾಲಿಗೆ ಸೇರುವ ಮತ್ತೊಂದು ಜೀವವೆಂದರೆ ದೃಷ್ಟಿಹೀನರಾಗಿದ್ದೂ ತಮ್ಮ ಹನ್ನೊಂದನೇ ವಯಸ್ಸಿನಲ್ಲೇ 22 ನಿಮಿಷಗಳ ಸುಧೀರ್ಘ ಕಾಲ ವಾರ್ತೆಯನ್ನು ನೇರಪ್ರಸಾರದ ಕಾರ್ಯಕ್ರಮದಲ್ಲಿ ಬ್ರೈಲ್‌ ಲಿಪಿಯ ಸಹಾಯದಿಂದ ಓದಿದ ಎಳೆಯ ಬಾಲಕ ರಾಮಾನುಜನ್ನನದ್ದು.


ಅದು 2015ರ ಮೇ 1. ಲೋಟಸ್‌ ಸುದ್ದಿವಾಹಿನಿಯ ಮುಖ್ಯಸ್ಥ ಸೆಲ್ವಕುಮಾರರ ಆಮಂತ್ರಣದ ಮೇರೆಗೆ ಉಳಿಯಂಪಾಳಯಂನ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರು ತಮ್ಮ ಶಾಲೆಯ ಅಂಧ ವಿದ್ಯಾರ್ಥಿಯೊಬ್ಬನನ್ನು ಸುದ್ದಿ ವಾಚಿಸುವುದಕ್ಕೆ ಕಳುಹಿಸಿದ್ದರು. ಆ ದೃಷ್ಟಿಹೀನ ವಿದ್ಯಾರ್ಥಿಯೇ ಕೊಯಮತ್ತೂರಿನ ರಾಮಾನುಜನ್‌.


“ನಾನು ಐದನೇ ತರಗತಿಯಲ್ಲಿ ಅಭ್ಯಸಿಸುತ್ತಿದ್ದಾಗ, ಲೋಟಸ್‌ ವಾಹಿನಿಯ ಕೆಲವರು ನಮ್ಮ ಹೆಡ್‌ ಮಾಸ್ಟರ್‌ರನ್ನು ಸಂಪರ್ಕಿಸಿ, ಅವರಿಗೆ ತಾವು ಅಂಧ ವಿದ್ಯಾರ್ಥಿಗಳಿಗೆ ಸುದ್ದಿ ವಾಚಿಸುವ ಅವಕಾಶ ನೀಡುತ್ತೇವೆಂದು ಕೇಳಿಕೊಂಡರು. ಸಾರ್ವಜನಿಕವಾಗಿ ಮಾತನಾಡಬಲ್ಲ ವಾಗ್ಪಟುವಾಗಿದ್ದ ನನಗೇ ಆ ಅವಕಾಶ ಸಿಕ್ಕಿತು. ನಾನು ಅಲ್ಲಿಯೇ ಮೂರು ವರ್ಷಗಳ ಕಾಲ ಕೆಲಸ ಮಾಡಿದೆ” ಎಂದು ಹೆಮ್ಮೆಯಿಂದ ಮಾಧ್ಯಮಗಳಿಗೆ ತಮ್ಮ ಕಥೆಯನ್ನು ಹೇಳುತ್ತಾರೆ ಶ್ರೀರಾಮಾನುಜನ್.‌


ವಾರ್ತೆಗಳನ್ನು ಬ್ರೈಲ್‌ ಲಿಪಿಯ ಸಹಾಯದಿಂದ ಓದುತ್ತಿರುವ ಶ್ರೀರಾಮಾನುಜನ್‌ (ಚಿತ್ರಕೃಪೆ :ಲೋಟಸ್‌ ನ್ಯೂಸ್)



ಪಳನಿಯ ರೈತ ಕುಟುಂಬದಲ್ಲೇ ಮೊದಲು ಶಾಲೆಕಂಡವ ಶ್ರೀರಾಮಾನುಜನ್.‌ ಅವರ ತಾಯಿ ಕಲೈಅರಸಿ, ವರದಿಗಾರರಿಗೆ ತಮ್ಮ ಮಗನ ಸಾಧನೆಯ ಬಗ್ಗೆ ತಿಳಿಸುತ್ತ,


“ಪ್ರತಿಭೆಯನ್ನು ಯಾವ ದೇಹವೈಕಲ್ಯವೂ ಹಿಮ್ಮೆಟ್ಟಿಸಲಾಗದು. ಯಾವ ಮಕ್ಕಳೂ ತಮ್ಮ ಪ್ರತಿಭೆಯಿಂದ ಲಾಭಪಡೆಯುವುದರಿಂದ ವಂಚಿತರಾಗಬಾರದು. ಎಲ್ಲ ಪೋಷಷಕರಿಗೂ ನನ್ನ ಮನವಿ ಏನೆಂದರೆ-ನಿಮ್ಮ ಮಕ್ಕಳು ವಿಕಲಾಂಗರಾಗಿದ್ದರೆ ಅವರನ್ನು ಸಾಧಕರನ್ನಾಗಿ ಮಾಡಿ. ಯಾವ ವೈಕಲ್ಯವೂ ಮಗುವಿನ ಸಾಧನೆಯ ಹಾದಿಗೆ ತೊಡಕಾಗಬಾರದು. ಎಲ್ಲ ಮಕ್ಕಳಂತೆ ಇವರೂ ಸಾಧನೆ ಮಾಡಬೇಕು” ಎಂದರು.


ಲೋಟಸ್‌ ವಾಹಿನಿಯ ಮುಖ್ಯಸ್ಥ ಸೆಲ್ವಕುಮಾರ್‌ ತಾವು ಕಲ್ಪಿಸಿದ ಈ ಅವಕಾಶದ ಉದ್ದೇಶವೇನೆಂದು ಹೇಳುತ್ತ,


“ಜನರಲ್ಲಿ ಅಂಗವೈಕಲ್ಯದ ಬಗ್ಗೆ ಇರುವ ತಪ್ಪು ಅಭಿಪ್ರಾಯವನ್ನು ಹಾಗೂ ದೃಷ್ಟಿಮಾಂದ್ಯರೂ ಏನನ್ನಾದರೂ ಮಾಡಬಲ್ಲರು ಎಂಬುದನ್ನು ಸಾಬೀತುಪಡಿಸಲು ಅಂಧ ಬಾಲಕನೊಬ್ಬನಿಗೆ ಈ ಅವಕಾಶವನ್ನು ಕಲ್ಪಿಸಿಕೊಟ್ಟೆವು. ನಮ್ಮ ಈ ಕಾರ್ಯದಿಂದ ಜನರಲ್ಲಿ ಮರಣೋತ್ತರ ನೇತ್ರದಾನದ ಅರಿವು ಮೂಡುತ್ತದೆಂದು ಭಾವಿಸಿದ್ದೇವೆ” ಎಂದರು.


ಬ್ರೈಲ್ ಲಿಪಿಯ ಸಹಾಯದಿಂದ ವಾರ್ತೆಗಳನ್ನು ಓದುತ್ತ 22 ನಿಮಿಷಗಳ ನೇರ ಪ್ರಸಾರದ ಕಾರ್ಯಕ್ರಮವನ್ನು ನಡೆಸಿಕೊಟ್ಟ ರಾಮಾನುಜನ್‌ ಮೂರು ವರ್ಷಗಳ ಕಾಲ ಲೋಟಸ್‌ನಲ್ಲಿ ಕೆಲಸ ಮಾಡಿದರು. ಈಗ ಹತ್ತನೇ ತರಗತಿಯ ಸ್ಟೇಟ್‌ ಬೋರ್ಡ್‌ ಪರೀಕ್ಷಗೆ ತಯಾರಾಗುತ್ತಿರುವ ಅವರು ಪರೀಕ್ಷೆ ಮುಗಿದ ನಂತರ ಮತ್ತೆ ವಾಹಿನಿ ಸೇರಿಕೊಳ್ಳುವ ಬಯಕೆ ವ್ಯಕ್ತಪಡಿಸಿದ್ದಾರೆ. ಭವಿಷ್ಯದಲ್ಲಿ ಐಏಎಸ್‌ ಅಧಿಕಾರಿಯಾಗುವ ಆಸೆಯನ್ನೂ ಇವರು ಹೊಂದಿದ್ದಾರೆ.


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.