ವೈಕಲ್ಯವನ್ನು ಮೆಟ್ಟಿನಿಂತು ಹಿಮಚ್ಛಾದಿತ ಕಿಲಿಮಂಜಾರೊ ಪರ್ವತವೇರಿದ ಕೇರಳದ ಸಾಹಸಿ

ಒಂಬತ್ತನೇ ವಯಸ್ಸಿನಲ್ಲಿ ಕಾಲು ಕಳೆದುಕೊಂಡ ಕೇರಳ ಮೂಲದ ನೀರಜ್‌ರವರು, ನಿರಂತರ ವ್ಯಾಯಾಮ ಮತ್ತು ಬ್ಯಾಡ್ಮಿಂಟನ್‌ ಆಟದ ಮೂಲಕ ದೇಹವನ್ನು ಸದೃಡವಾಗಿಟ್ಟುಕೊಂಡಿದ್ದಾರೆ. ಕೇವಲ ಊರುಗೋಲಿನ ಸಹಾಯದಿಂದ, ಆಫ್ರೀಕಾದ ಅತಿ ಎತ್ತರದ ಹಿಮಚ್ಛಾದಿತ ಪರ್ವತ ಕಿಲಿಮಂಜಾರೋದ ತುತ್ತ ತುದಿಯನ್ನು ತಲುಪಿದ ಇವರ ಆತ್ಮ ಸ್ಥೈರ್ಯಕ್ಕೆ ನಮ್ಮದೊಂದು ಸಲಾಂ.

ವೈಕಲ್ಯವನ್ನು ಮೆಟ್ಟಿನಿಂತು ಹಿಮಚ್ಛಾದಿತ ಕಿಲಿಮಂಜಾರೊ ಪರ್ವತವೇರಿದ ಕೇರಳದ ಸಾಹಸಿ

Friday October 18, 2019,

2 min Read

"ನಿದ್ದೆ ಮಾಡುವಾಗ ಕಾಣುವುದು ಕನಸಲ್ಲ, ಯಾವುದು ನಿದ್ದೆ ಮಾಡಲು ಬಿಡುವುದಿಲ್ಲವೋ ಅದು ನಿಜವಾದ ಕನಸು" ಎಂಬ ಸಂದೇಶ ನೀಡಿದ್ದ ಅಬ್ದುಲ್‌ ಕಲಾಂರವರು, ಬಾಲ್ಯದಲ್ಲೇ ಆಕಾಶಕ್ಕೆ ಹಾರುವ ಕನಸು ಕಂಡು ಅದನ್ನು ಸಾಧಿಸಿ, ಭಾರತದ ಕ್ಷಿಪಣಿ ಪುರುಷ ಎಂಬ ಬಿರುದು ಪಡೆದರು. ಅವರ ಆತ್ಮ ಕಥೆ ವಿಂಗ್ಸ್‌ ಆಫ್‌ ಫೈರ್‌ಇಂದಿನ ಯುವ ಜನತೆಗೆ ಸ್ಪೂರ್ಥಿದಾಯಕ. ಇತರರು ಇಂಪಾಸಿಬಲ್‌ (ಅಸಾಧ್ಯ) ಎನ್ನುವುದನ್ನು ಐ ಆ್ಯಮ್‌ ಪಾಸಿಬಲ್‌ (ಸಾಧ್ಯ) ಎಂದು ಅರ್ಥೈಸಿಕೊಂಡು ಮುನ್ನುಗ್ಗಿದರೆ ಯಶಸ್ಸು ನಮ್ಮದಾಗುತ್ತದೆ ಎಂಬ ಕಲಾಂರ ಸರಳ ಸೂತ್ರವನ್ನ ಅಳವಡಿಸಿಕೊಂಡರೆ ಸಾಧನೆಗೆ ಅಸಾಧ್ಯವೆನ್ನುವುದು ಯಾವುದೂ ಇಲ್ಲ.


ಕೇರಳದ ಎರ್ನಾಕುಲಂ ಜಿಲ್ಲೆಯ ಅಲುವಾ ಮೂಲದ 32 ವರ್ಷದ ನೀರಜ್‌ ಜಾರ್ಜ್‌ ಬೇಬಿಯವರು, ಆಪ್ರಿಕಾದ ಅತಿ ಎತ್ತರ ಹಿಮಚ್ಛಾದಿತ ಪರ್ವತ ಕಿಲಿಮಂಜಾರೋವನ್ನು (5,895ಮೀ.) ಏರಿ ಸಾಧನೆ ಮಾಡಿದ್ದಾರೆ, ಅದೂ ಊರುಗೋಲಿನ ಸಹಾಯದಿಂದ! ಹೌದು, ಒಂಬತ್ತನೇ ವಯಸ್ಸಿನಲ್ಲಿರುವಾಗ ಕಾಲಿನಲ್ಲಿ ಗಡ್ಡೆ ಕಾಣಿಸಿಕೊಂಡು, ವೈದ್ಯರ ಸಲಹೆ ಮೇರೆಗೆ ಮೊಣಕಾಲನ್ನು ಕತ್ತರಿಸಬೇಕಾಗಬರುತ್ತದೆ. ಆದರೆ ಕಾಲನ್ನು ಕಳೆದುಕೊಂಡ ನೋವು, ಅವರ ಪರ್ವತಾರೋಹಣದ ಗುರಿಯನ್ನು ತಲುಪಲು ಅಡ್ಡಿಪಡಿಸಲಿಲ್ಲ, ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ.


ಹಿಮಚ್ಛಾದಿತ ಕಿಲಿಮಂಜಾರೋ ಪರ್ವತ ಏರಿದ ಸಂತೋಷದ ಕ್ಷಣ ಹಂಚಿಕೊಂಡ ನೀರಜ್‌ (ಚಿತ್ರಕೃಪೆ: ಫೆಸ್‌ ಬುಕ್)



ನೀರಜ್‌ರವರು ತಮ್ಮ ಊರುಗೋಲಿನ ಸಹಾಯದಿಂದ ಪರ್ವತದ ತುದಿಯನ್ನು ತಲುಪಿರುವ ಸಂತೋಷದ ಕ್ಷಣಗಳ ಬಗ್ಗೆ,


"ಇದು ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣ, ಐದು ವರ್ಷದ ಕನಸನ್ನು ಸಾಧಿಸಲು ಅನುಭವಿಸಿರುವ ನೋವಿನ ಹಿಂದೆ ಒಂದು ಕಾರಣವಿದೆ, ವಿಕಲಚೇತನರು ಕೃತಕ ಕೈಕಾಲುಗಳಿಲ್ಲದೇ ತಾವು ಬಯಸಿದ್ದನ್ನು ಸಾಧಿಸಬಹುದು ಎಂಬುದನ್ನು ಸಾಬೀತುಪಡಿಸಲು ಬಯಸಿದ್ದೆ, ನೀವು ನಮ್ಮ ಕನಸಿಗೆ ಜಿಎಸ್‌ಟಿ ಮತ್ತು ಟ್ಯಾಕ್ಸ್‌ ವಿಧಿಸಿದರೂ, ನಾವದನ್ನು ಕಾಣುವುದನ್ನು ನಿಲ್ಲಿಸುವುದಿಲ್ಲ!," ಎಂಬ ಶೀರ್ಷಿಕೆಯೊಂದಿಗೆ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ.

ನೀರಜ್‌ರವರು ಅಕ್ಟೋಬರ್‌ 7ರಂದು ಸಾಹಸಿಗರ ತಂಡದ ಜತೆ ತಮ್ಮ ಕನಸನ್ನು ಬೆನ್ನಟ್ಟಿ ಹೊರಟಿದ್ದರು, ಗುರುವಾರ ಚಾರಣವನ್ನು ಪೂರ್ಣಗೊಳಿಸಿದ್ದಾರೆ ಎಂದು ಇಂಡಿಯಾ ಟೈಮ್ಸ್‌ ವರದಿ ಮಾಡಿದೆ.


ಪರ್ವತಾರೋಹಣ ಮಾಡಲು ನೀರಜ್‌ರವರು ಆತುರರಾಗಿದ್ದರೂ, ಚಾರಣ ಪ್ರಾರಂಭವಾದ ಕ್ಷಣದಿಂದ ಅವರು ಆ ಸಂತೋಷದ ಕ್ಷಣಗಳ ಕುರಿತು ತಿಳಿಸಲು ಮನೆಗೆ ಹಿಂತಿರುಗಿದ ಕೊನೆಯ ಕ್ಷಣದವರೆಗೂ ಅವರ ಕುಟುಂಬದವರು ತುಂಬಾ ಚಿಂತಿತರಾಗಿದ್ದರು.


"ನಮಗೆ ಚಿಂತೆಯಾಗಿತ್ತು ಆದರೆ ಅವರ ಸಾಧನೆಯಿಂದಾಗಿ ತುಂಬಾ ಖುಷಿಯಾಗಿದೆ. ಅವರು ಆ ಸಂತೋಷದ ಸುದ್ದಿಯನ್ನು ತಿಳಿಸಿದಾಗ, ಒಂದು ಕ್ಷಣ, ಅವರು ಗಡ್ಡೆಯಿಂದಾಗಿ ಕಾಲನ್ನು ಕಳೆದುಕೊಂಡ ದಿನಗಳಿಗೆ ನನ್ನ ಆಲೋಚನೆಗಳು ಹಿಂತಿರುಗಿದವು," ಎಂದು ನಿವೃತ್ತ ಪ್ರಾಧ್ಯಾಪಕರಾದ ಶೀಲಾ ಪಪ್ಪುರವರು ಹೇಳಿದ್ದಾರೆ, ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ.


"1996ರಲ್ಲಿ ಅವನ ಕಾಲನ್ನು ಕತ್ತರಿಸಬೇಕಾಗಿಬರುತ್ತದೆ. ಆಗ ನನ್ನ ಮಗನ ಭವಿಷ್ಯ ಹಾಳಾಗುತ್ತಿದೆ ಎಂಬ ಭಯ ನನ್ನನ್ನು ಆವರಿಸಿತ್ತು. ಆದಾಗ್ಯೂ, ನನ್ನ ಮಗನಿಗೆ ಚಿಕಿತ್ಸೆ ನೀಡಿದ್ದ ಫಿಸಿಯೋತೆರಪಿಸ್ಟ್‌ರವರು ಭಯಪಡಬೇಕಾದ ಅಗತ್ಯ ಇಲ್ಲ ಎಂಬ ಸಲಹೆ ನೀಡಿದ್ದರು. ನೀರಜ್‌ ಚಿನ್ನದಂಥ ಹುಡುಗ, ಖಂಡಿತವಾಗಿಯೂ ಶ್ರೇಷ್ಠ ಸಾಧನೆ ಮಾಡುತ್ತಾನೆಂಬ ಭವಿಷ್ಯ ಇಂದು ಸತ್ಯವಾಗಿದೆ. ನನ್ನ ಮಗ ನಿಜಕ್ಕೂ ಎಲ್ಲವನ್ನೂ ಗೆದ್ದಿದ್ದಾನೆ," ಎಂದು ನೀರಜ್‌ರವರ ತಾಯಿ ಹೆಮ್ಮೆಯಿಂದ ದಿ ನ್ಯೂ ಇಂಡಿಯನ್‌ ಟೈಮ್ಸ್‌ ಗೆ ಹೇಳಿದ್ದಾರೆ.


ನೀರಜ್‌ರವರು ತಮ್ಮನ್ನು ತಾವು ಸದೃಡವಾಗಿಟ್ಟುಕೊಳ್ಳುವ ಕಾರಣಕ್ಕೆ ಬ್ಯಾಡ್ಮಿಂಟನ್‌ ಆಡಲು ಪ್ರಾರಂಭಿಸಿದರು, ಕ್ರಮೇಣ ಅದರ ಬಗ್ಗೆ ಆಸಕ್ತಿಯನ್ನು ಹೆಚ್ಚಿಸಿಕೊಂಡರು. ನಂತರ ಅದನ್ನು ಗಂಭೀರವಾಗಿ ಪರಿಗಣಿಸಿ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ಯಾರಾ ಬ್ಯಾಡ್ಮಿಂಟನ್‌ ಆಡಿದರು.


ಅಧ್ಯಯನಕ್ಕಾಗಿ ಸ್ಕಾಟ್‌ಲ್ಯಾಂಡ್‌ಗೆ ಹೋದಾಗ 2007ರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಛಾಪು ಮೂಡಿಸಿದರು. ಇಸ್ರೆಲ್‌ನ ಟೆಲ್‌ ಅವೀವ್‌ನಲ್ಲಿ ನಡೆದ ಅಂತರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್‌ ಪಂದ್ಯಾವಳಿಯ ತಮ್ಮ ಮೊದಲ ಪ್ರವಾಸದಲ್ಲಿ ಕಂಚನ್ನು ಗೆಲ್ಲುತ್ತಾರೆ. ಇದು ಅವರ ಆತ್ಮ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಲು ಸಹಾಯ ಮಾಡಿತು.


ಬ್ಯಾಡ್ಮಿಂಟನ್‌ ಆಟದಲ್ಲಿ ನಿರತರಾಗಿರುವ ನೀರಜ್‌ರವರು (ಚಿತ್ರಕೃಪೆ: ಫೆಸ್‌ ಬುಕ್)

ನೀರಜ್‌ರವರು ಪ್ರಸ್ತುತ ಕೇರಳ ಅಡ್ವೋಕೇಟ್‌ ಜನರಲ್‌ ಕಚೇರಿಯಲ್ಲಿ ಅಸಿಸ್ಟೆಂಟ್‌ ಆಗಿ ಕೆಲಸ ನಿರ್ವಹಿಸುತ್ತಿದ್ದು, ಪ್ಯಾರಾ ಬ್ಯಾಡ್ಮಿಂಟನ್‌ ಆಟಗಾರರಿಗೆ ಒಂದು ಸಂಸ್ಥೆಯನ್ನು ಪ್ರಾರಂಭಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.