ದೇಶದ ಮೊದಲ ಅಂಧ ಐಎಎಸ್ ಅಧಿಕಾರಿ ಪ್ರಾಂಜಲ್ ಪಾಟೀಲ್
6ನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡ ಪ್ರಾಂಜಲ್ ಪಾಟೀಲ್‌ರವರು, 2016ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತಮ್ಮ ಪ್ರಥಮ ಪ್ರಯತ್ನದಲ್ಲೇ 773ನೇ ರ್‍ಯಾಂಕ್ ಪಡೆದು ಐಆರ್‌ಎಎಸ್ ವಿಭಾಗಕ್ಕೆ ಆಯ್ಕೆಯಾಗಿದ್ದರೂ, ಅಂಧತ್ವದ ಕಾರಣದಿಂದ ಆಯ್ಕೆಯನ್ನು ರದ್ದುಪಡಿಸಲಾಗುತ್ತದೆ. 2017ರಲ್ಲಿ ಮತ್ತೊಮ್ಮೆ ಪರೀಕ್ಷೆ ಎದುರಿಸಿ 124ನೇ ರ್‍ಯಾಂಕ್ ಗಳಿಸಿ ಗುರಿ ಸಾಧಿಸಿದ್ದಾರೆ.
ಐಎಎಸ್ ಎನ್ನುವುದು ಇಂದಿನ ಯುವ ಪೀಳಿಗೆಯ ಬಹುದೊಡ್ಡ ಕನಸು, ಆದರೆ ಅದರಲ್ಲಿ ಯಶಸ್ಸನ್ನು ಸಾಧಿಸುವುದು ಸುಲಭದ ಮಾತಲ್ಲ. ಇದಕ್ಕಾಗಿ ಕಠಿಣ ಪರಿಶ್ರಮ ಅತ್ಯಗತ್ಯ. ಯುಪಿಎಸ್‌ಸಿ ಪರೀಕ್ಷೆ ಬರೆಯಲು ಪ್ರತಿವರ್ಷ 10 ಲಕ್ಷಕ್ಕೂ ಹೆಚ್ಚು ಅಬ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರಾದರೂ ತೇರ್ಗಡೆ ಹೊಂದುವವರು ಕೇವಲ 1000 ಜನರು ಮಾತ್ರ.
ನಾನೀಗ ಹೇಳಲು ಹೊರಟಿರುವುದು ಇವೆಲ್ಲವನ್ನೂ ಮೀರಿ ಯಶಸ್ಸಿನ ಮೆಟ್ಟಿಲೇರಿದ ದೇಶದ ಮೊದಲ ಅಂಧ ಐಎಎಸ್ ಅಧಿಕಾರಿಯ ಯಶಸ್ಸಿನ ಕಥೆ. ತನ್ನ ಅಂಧತ್ವವನ್ನು ಸವಾಲಾಗಿ ಸ್ವೀಕರಿಸಿದ ಮಹಾರಾಷ್ಟ್ರದ ಉಲ್ಲಾಸ ನಗರದ ಪ್ರಾಂಜಲ್ ಪಾಟೀಲ್‌ರವರೀಗ ಕೇರಳದ ತಿರುವನಂತಪುರಂನ ಉಪ ಜಿಲ್ಲಾಧಿಕಾರಿ.
ಮಹಾರಾಷ್ಟ್ರದ ಉಲ್ಲಾಸ ನಗರದವರಾದ ಪ್ರಾಂಜಲ್ ಪಾಟೀಲ್‌ರವರು, ತಮ್ಮ 6ನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡರು. ಆದರೂ, ತಮ್ಮ ದೃಷ್ಟಿ ಹೀನತೆಯಿಂದ ಸ್ವಲ್ಪವೂ ಎದೆಗುಂದದೇ ಮುನ್ನುಗ್ಗಿದ ಅವರು, ಎಲ್ಲ ಅಡೆ ತಡೆಗಳನ್ನು ದಾಟಿ, ಜವಾಹರ್‌ಲಾಲ್ ನೆಹರು ಯುನಿವರ್ಸಿಟಿಯಲ್ಲಿ(ಜೆಎನ್‌ಯು) 'ಅಂತರಾಷ್ಟ್ರೀಯ ಸಂಬಂಧಗಳು' ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಾರೆ. ನಂತರ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ ಅವರು 2016ರಲ್ಲಿ ತಮ್ಮ ಪ್ರಥಮ ಪ್ರಯತ್ನದಲ್ಲೇ 773ನೇ ರ್‍ಯಾಂಕ್ ಪಡೆದು ಐಆರ್‌ಎಎಸ್ ವಿಭಾಗಕ್ಕೆ ಆಯ್ಕೆಯಾಗುತ್ತಾರೆ, ಆದರೆ ಅವರ ಅಂಧತ್ವದ ಕಾರಣದಿಂದ ನೇಮಕಾತಿ ರದ್ದುಗೊಳಿಸಲಾಗುತ್ತದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಪುನಃ ಸಿದ್ಧತೆ ನಡೆಸಿದ ಅವರು 2017ರಲ್ಲಿ ನಡೆದ ಯುಪಿಎಸ್‌ಸಿ ಪರೀಕ್ಷೆಯನ್ನು ಎದುರಿಸಿ, 124ನೇ ರ್‍ಯಾಂಕ್ ಪಡೆಯಲು ಯಶಸ್ವಿಯಾಗುತ್ತಾರೆ.
14 ಅಕ್ಟೋಬರ್ 2019, ಸೋಮವಾರ, ಕೇರಳದ ತಿರುವನಂತಪುರಂನಲ್ಲಿ ಉಪ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಅವರು, ಭಾರತದ ಮೊದಲ ಅಂಧ ಐಎಎಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಉಪ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದು ತುಂಬಾ ಹೆಮ್ಮೆ ಮತ್ತು ಸಂತೋಷವೆನಿಸುತ್ತಿದೆ ಎಂದು ಹೇಳಿದ ಪ್ರಾಂಜಲ್ ಪಾಟೀಲ್‌ರವರು, ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುವ ಇಚ್ಛೆಯನ್ನು ವ್ಯಕ್ತ ಪಡಿಸಿದ್ದಾರೆ. ಇಂಡಿಯಾ ಟುಡೇಯೊಂದಿಗೆ ಮಾತನಾಡಿದ ಪ್ರಾಂಜಲ್‌ರವರು ಯುವ ಜನತೆಗೆ ಈ ಸಂದೇಶವನ್ನು ನೀಡುತ್ತಾರೆ,
“ನಾವು ಎಂದಿಗೂ ಸೋಲೊಪ್ಪಿಕೊಳ್ಳಬಾರದು ಮತ್ತು ನಮ್ಮ ಗುರಿಯನ್ನು ಕೈ ಬಿಡಬಾರದು. ನಮ್ಮ ಸತತ ಪ್ರಯತ್ನದಿಂದಾಗಿ ಕೊನೆಗೊಮ್ಮೆ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ.”
ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.