Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಪರಿಸರದಲ್ಲಿರುವ ಇಂಗಾಲದ ಡೈ ಆಕ್ಸೈಡನ್ನು ಹೀರಿಕೊಳ್ಳುವ ಕಬ್ಬಿನ ತ್ಯಾಜ್ಯದಿಂದ ತಯಾರಿಸಿದ ಇಟ್ಟಿಗೆಗಳನ್ನು ಅಭಿವೃದ್ಧಿಪಡಿಸಿರುವ ಇಬ್ಬರು ಸಂಶೋಧಕರು

ಇಬ್ಬರು ಸಂಶೋಧಕರು ಸೇರಿ ಪರಿಸರದಲ್ಲಿರುವ ಇಂಗಾಲದ ಡೈ ಆಕ್ಸೈಡನ್ನು ಹೀರಿಕೊಳ್ಳುವ, ಕಬ್ಬಿನ ತ್ಯಾಜ್ಯದಿಂದ ತಯಾರಿಸಿದ ಜೈವಿಕ ಇಟ್ಟಿಗೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಪ್ರಸ್ತುತ ಅವುಗಳನ್ನು ಕಡಿಮೆ ವೆಚ್ಚದ ಮನೆಗಳನ್ನು ಕಟ್ಟಲು ಮರ ಅಥವಾ ಲೋಹದ ರಚನೆಯೊಂದಿಗೆ ಉಪಯೋಗಿಸಬಹುದಾಗಿದೆ.

ಪರಿಸರದಲ್ಲಿರುವ ಇಂಗಾಲದ ಡೈ ಆಕ್ಸೈಡನ್ನು ಹೀರಿಕೊಳ್ಳುವ ಕಬ್ಬಿನ ತ್ಯಾಜ್ಯದಿಂದ ತಯಾರಿಸಿದ ಇಟ್ಟಿಗೆಗಳನ್ನು ಅಭಿವೃದ್ಧಿಪಡಿಸಿರುವ ಇಬ್ಬರು ಸಂಶೋಧಕರು

Monday October 21, 2019 , 2 min Read

ಮಾಲಿನ್ಯವು ನಮ್ಮ ಪರಿಸರದ ಮೇಲೆ ಬೃಹತ್ ಪ್ರಮಾಣದ ಹಾನಿಯನ್ನು ಉಂಟು ಮಾಡುತ್ತಿದೆ ಮತ್ತು ಭೂಮಿಯ ನೈಸರ್ಗಿಕ ಸಂಪನ್ಮೂಲಗಳು ಅತ್ಯಂತ ವೇಗವಾಗಿ ಬರಿದಾಗುತ್ತಿವೆ. ಈ ಸಮಸ್ಯಗೆ ಬಟ್ಟೆಯ ಬ್ಯಾಗುಗಳನ್ನು ಉಪಯೋಗಿಸುವುದು, ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವುದು, ವಿದ್ಯುತ್ ಚಾಲಿತ ವಾಹನಗಳನ್ನು ಉಪಯೋಗಿಸುವುದು ಕೆಲವೊಂದು ಪರಿಹಾರಗಳಾಗಿವೆ. ಈ ಒಂದು ಭೌಗೋಳಿಕ ಸಮಸ್ಯೆಯನ್ನು ದೂರ ಮಾಡಲು ಎಲ್ಲಾ ಕ್ಷೇತ್ರಗಳಲ್ಲಿಯೂ ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ.


ಈ ನಿಟ್ಟಿನಲ್ಲಿ ಕಟ್ಟಡ ನಿರ್ಮಾಣದಲ್ಲಿ ಜೇಡಿಮಣ್ಣಿನ ಇಟ್ಟಿಗೆಗಳಿಗೆ ಬದಲಾಗಿ ಜೈವಿಕ ಇಟ್ಟಿಗೆಗಳನ್ನು ಉಪಯೋಗಿಸುವುದು ಪರಿಸರ-ಸ್ನೇಹಿ ಪರಿಹಾರವಾಗಿ ಹೊರಹೊಮ್ಮಿದೆ. ಈ ಇಟ್ಟಿಗೆಗಳ ವಿಶೇಷತೆ ಏನಂದರೆ ಕಬ್ಬನ್ನು ಅರೆದ ನಂತರ ಉಳಿಯುವ ತ್ಯಾಜ್ಯದಲ್ಲಿ ಇವು ಮಾಡಲ್ಪಟ್ಟಿವೆ.


ಐಐಟಿ ಹೈದರಾಬಾದಿನ ವಿನ್ಯಾಸ ವಿಭಾಗದ ಡಾಕ್ಟರೇಟ್ ವಿದ್ಯಾರ್ಥಿ ಪ್ರಿಯಬ್ರಾತ ರೌಟ್ರೇ ಮತ್ತು ಕೆಐಐಟಿ ಸ್ಕೂಲ್ ಆಫ್ ಆರ್ಕಿಟೆಕ್ಚರ್, ಭುವನೇಶ್ವರದ ಸಹಾಯಕ ಪ್ರಾಧ್ಯಾಪಕ ಅವಿಕ್ ರಾಯ್ ಇವರಿಬ್ಬರು ಸೇರಿ ಈ ಇಟ್ಟಿಗೆಗಳನ್ನು ಅಭಿವೃದ್ಧಿಪಡಿಸಿದ್ದಾರೆ.


ಐಐಟಿ ಹೈದರಾಬಾದಿನ ವಿನ್ಯಾಸ ವಿಭಾಗದ ಡಾಕ್ಟರೇಟ್ ವಿದ್ಯಾರ್ಥಿ ಪ್ರಿಯಬ್ರಾತ ರೌಟ್ರೇ(ಚಿತ್ರಕೃಪೆ: ಎಡೆಕ್ಸ್ ಲೈವ್)



ಈ ಯೋಜನೆಯು ಐಐಟಿ ಹೈದರಾಬಾದಿನ ಪ್ರೊಫೆಸ್ಸರ್ ದೀಪಕ್ ಜೈನ್ ಮ್ಯಾಥ್ಯೂ ಮತ್ತು ಆಸ್ಟ್ರೇಲಿಯಾದ ಸ್ವಿನ್ಬರ್ನ್ ಯುನಿವರ್ಸಿಟಿ ಆಫ್ ಟೆಕ್ನಾಲಜಿಯ ಡಾ.ಬೋರಿಸ್ ಐಸೆನಬರ್ಟ್ ಇವರ ಮಾರ್ಗದರ್ಶನದಲ್ಲಿ ಕೈಗೊಳ್ಳಲಾಗಿದೆ.


“ಜೈವಿಕ ಇಟ್ಟಿಗೆಗಳು ಜೇಡಿಮಣ್ಣಿನ ಇಟ್ಟಿಗೆಗಳಿಗಿಂತ ಬಲಯುತವಾಗಿರುವುದಲ್ಲದೇ ಅವು ಉತ್ಪಾದಿಸುವ ಇಂಗಾಲದ ಡೈ ಆಕ್ಸೈಡಿಗಿಂತ ಹೆಚ್ಚಿನ ಪ್ರಮಾಣವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ.” ಎಂದು ಅವಿಕ್ ಹೇಳಿರುವುದನ್ನು ಎಡೆಕ್ಸ್ ಲೈವ್ ವರದಿ ಮಾಡಿದೆ.

ಐಐಟಿ ಹೈದರಾಬಾದಿನಲ್ಲಿ ಅಭಿವೃದ್ಧಿಪಡಿಸಿರುವ ಒಂದು ಜೈವಿಕ ಇಟ್ಟಿಗೆಗೆ 900 ಗ್ರಾಮಿನಷ್ಟು ಕಬ್ಬಿನ ತ್ಯಾಜ್ಯ ಬೇಕಾಗುತ್ತದೆ. ಈ ತ್ಯಾಜ್ಯವನ್ನು ಸುಟ್ಟರೆ 639 ಗ್ರಾಮ್ ಇಂಗಾಲದ ಡೈ ಆಕ್ಸೈಡ್ ಬಿಡುಗಡೆಯಾಗುತ್ತದೆ. ಈ ಇಟ್ಟಿಗೆಯ ವಿಶೇಷತೆಯೆಂದರೆ ಅದು ಪರಿಸರದಲ್ಲಿರುವ ಇಂಗಾಲದ ಡೈ ಆಕ್ಸೈಡನ್ನು ಹೀರಿಕೊಳ್ಳುತ್ತದೆ. ಸಂಶೋಧಕರ ಪ್ರಕಾರ ಒಂದು ಇಟ್ಟಿಗೆಯು 322.2 ಗ್ರಾಮಿನಷ್ಟು ಇಂಗಾಲದ ಡೈ ಆಕ್ಸೈಡನ್ನು ಹೀರಿಕೊಳ್ಳುತ್ತದೆ.


ಎನ್ ಡಿ ಟಿವಿ ವರದಿಯ ಪ್ರಕಾರ ಈ ಇಟ್ಟಿಗೆಗಳನ್ನು ತಯಾರಿಸಲು ಮೊದಲು ಮಾಡಬೇಕಾಗಿರುವುದು ಏನಂದರೆ ಹತ್ತಿಯ ಗಿಡಗಳು, ಭತ್ತದ ಹುಲ್ಲು ಮತ್ತು ಕಬ್ಬಿನಸಿಪ್ಪೆಯಂತಹ ಒಣ ಕೃಷಿ ತ್ಯಾಜ್ಯವನ್ನು ಆಯ್ಕೆ ಮಾಡಿಕೊಳ್ಳಬೇಕು. ಮೊದಲ ಸ್ಯಾಂಪಲ್ ತಯಾರಿಸಲು ಸಂಶೋಧಕರು ಒಣ ಕಬ್ಬಿನ ಸಿಪ್ಪೆಯನ್ನು ಉಪಯೋಗಿಸಿದ್ದಾರೆ.`

ಕಬ್ಬಿನ ಸಿಪ್ಪೆಯನ್ನು ಕತ್ತರಿಸಿ ನಿಂಬೆಯ ಹುಳಿಯಧಾರಿತ ದ್ರಾವಣದಲ್ಲಿ ಕೈಗಳಿಂದಾಗಲೀ ಅಥವಾ ಮೆಕ್ಯಾನಿಕಲ್ ಮಿಕ್ಸರ್ ಸಹಾಯದಿಂದ ಚೆನ್ನಾಗಿ ಬೆರಸಿ ಒಂದು ಏಕರೂಪದ(ಹೋಮೋಜೀನಸ್) ಮಿಶ್ರಣವನ್ನು ತಯಾರಿಸಿಕೊಳ್ಳಲಾಗುತ್ತದೆ.


ಮಿಶ್ರಣವನ್ನು ಅಚ್ಚುಗಳಿಗೆ ಸುರಿದು ಮರದ ಕೋಲುಗಳಿಂದ ಅದನ್ನು ಚೆನ್ನಾಗಿ ಗಟ್ಟಿಸಿ ಬೇಕಾದ ರೂಪದ ಮತ್ತು ಅಳತೆಯ ಇಟ್ಟಿಗೆಗಳನ್ನು ಪಡೆಯಬಹುದು. ಅಚ್ಚನ್ನು ಹಾಗೆಯೇ ಒಂದು ಅಥವಾ ಎರಡು ದಿನ ಬಿಟ್ಟು ಆನಂತರ ಬಿಸಿಲಿನಲ್ಲಿ 15 ರಿಂದ 20 ದಿನಗಳವರಗೆ ಒಣಗಿಸಲಾಗುವುದು. ಇದಾದ ನಂತರ ಮತ್ತೊಂದು ತಿಮಗಳುಗಳ ಕಾಲ ಈ ಇಟ್ಟಗೆಗಳು ಬಲವನ್ನು ಪಡೆಯಲು ಗಾಳಿಯಲ್ಲಿ ಒಣಗಿಸಲಾಗುತ್ತದೆ.


ಆದರೆ ಈ ಇಟ್ಟಿಗೆಗಳು ಸಾಂಪ್ರದಾಯಿಕ ಇಟ್ಟಿಗೆಗಳಂತೆ ಇರದೇ ಇವುಗಳನ್ನು ಕಡಿಮೆ ವೆಚ್ಚದ ಮನೆಗಳನ್ನು ಕಟ್ಟಲು ಮರ ಅಥವಾ ಲೋಹದ ರಚನೆಗಳೊಂದಿಗೆ ಮಾತ್ರ ಉಪಯೋಗಿಸಬಹುದು. ಇಂಗಾಲದ ಡೈ ಆಕ್ಸೈಡನ್ನು ಹೀರಿಕೊಳ್ಳುವುದೇ ಅಲ್ಲದೇ ಇವು ಶಾಖ ಮತ್ತು ಶಬ್ಧಗಳ ನಿರೋಧಕಗಳಾಗಿದ್ದು ಮನೆಗಳಲ್ಲಿ ಉಷ್ಣತೆಯನ್ನು ಕಡಿಮೆ ಮಾಡಿ ತಂಪಾಗಿಸಬಲ್ಲವು.


ಈ ಜೈವಿಕ ಇಟ್ಟಿಗೆಗಳನ್ನು ತಯಾರಿಸಲು ಬಳಸುವ ಕಚ್ಚಾವಸ್ತುಗಳನ್ನು ಪ್ಯಾನೆಲ್ ಬೋರ್ಡ ಅಥವಾ ಇನ್ಸುಲೇಷನ್ ಬೋರ್ಡ್ ತಯಾರಿಸಲೂ ಸಹ ಉಪಯೋಗಿಸಬಹದು ಎಂದು ಎನ್ ಡಿ ಟಿವಿಗೆ ಅವಿಕ್ ಹೇಳಿದ್ದಾರೆ.

ಹೈದರಾಬಾದಿನ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು 2019 ರಲ್ಲಿ ಏರ್ಪಡಿಸಿದ್ದ ಗ್ರಾಮೀಣ ಸಂಶೋಧನೆಗಳ ಉದ್ಯಮ ಕಮ್ಮಟವು ಈ ಜೈವಿಕ ಇಟ್ಟಿಗೆಗಳ ಸಂಶೋಧನೆಗಾಗಿ ವಿಶೇಷ ಟ್ರೋಫಿಯೊಂದನ್ನು ನೀಡಿ ಸಂಶೋಧಕರನ್ನು ಗೌರವಿಸಿದೆ.


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.