ಕರವಸ್ತ್ರಗಳ ಮೇಲೆ ಮದುವೆಯ ಆಮಂತ್ರಣವನ್ನು ಮುದ್ರಿಸಿ ತಮ್ಮ ಮಗನ ಮದುವೆ ಮಾಡಿ ಪರಿಸರಸ್ನೇಹಿ ವಿವಾಹಕ್ಕೆ ಮುನ್ನುಡಿ ಬರೆದ ತಮಿಳುನಾಡಿನ ಜಿಲ್ಲಾಧಿಕಾರಿ
ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಜಿಲ್ಲಾಧಿಕಾರಿ ಸೆಲ್ವಮತಿ ವೆಂಕಟೇಶ್ ತಮ್ಮ ಮಗನ ಮದುವೆಯ ಆಮಂತ್ರಣವನ್ನು ಕರವಸ್ತ್ರಗಳ ಮೇಲೆ ಮುದ್ರಿಸಿ ಹಂಚಿದ್ದಾರೆ ಮತ್ತು ಮದುವೆಯಲ್ಲಿ ಹಲವಾರು ಪರಿಸರಸ್ನೇಹಿ ಕ್ರಮಗಳನ್ನು ಅನುಸರಿಸಿ ಪರಿಸರಸ್ನೇಹಿ ವಿವಾಹಕ್ಕೆ ಮುನ್ನುಡಿ ಬರೆದಿದ್ದಾರೆ.
ಭಾರತದಲ್ಲಿ ಮದುವೆಗಳನ್ನು ವಿಜೃಂಭಣೆಯಿಂದ ಮಾಡುವುದು ಅನಾದಿ ಕಾಲದಿಂದಲೂ ನಡೆದುಬಂದಿದೆ. ಪ್ರತಿಯೊಬ್ಬರೂ ತಮ್ಮ ತಮ್ಮ ಅಂತಸ್ತಿಗೆ ತಕ್ಕಂತೆ ತಮ್ಮದೇ ಆದ ಶೈಲಿಯಲ್ಲಿ ಜೀವನದ ಈ ವಿಶೇಷ ದಿನವನ್ನು ಸಂಭ್ರಮದಿಂದ ಆಚರಿಸುತ್ತಾರೆ.
ಆದರೆ ಈಗ ಭಾರತದಲ್ಲಿ ಮತ್ತು ಪ್ರಪಂಚದ ಇತರ ದೇಶಗಳಲ್ಲಿ ಮದುವೆಗಳನ್ನು ಪರಿಸರಸ್ನೇಹಿ ವಿವಾಹಗಳನ್ನಾಗಿ ಆಚರಿಸಬೇಕೆಂಬ ಅರಿವು ಹೆಚ್ಚುತ್ತಿದೆ. ಪರಿಸರಸ್ನೇಹಿ ಆಮಂತ್ರಣ ಪತ್ರಿಕೆಗಳು, ಸಾವಯವ ಪುಷ್ಪಗಳ ಬಳಕೆ, ಅಲಂಕಾರಕ್ಕಾಗಿ ಪ್ಲಾಸ್ಟಿಕ್ಕಿನ ಬದಲು ಮಣ್ಣಿನ ಮಡಕೆಗಳನ್ನು ಉಪಯೋಗಿಸುವುದು, ಉಳಿದ ಊಟವನ್ನು ಹಸಿದವರಿಗೆ ಅನ್ನ ನೀಡುವ ಸಂಸ್ಥೆಗಳಿಗೆ ನೀಡುವುದು, ಇನ್ನೂ ಮುಂತಾದ ಪರಿಸರಸ್ನೇಹಿ ಕ್ರಮಗಳ ಮೂಲಕ ವಿವಾಹದ ವಿಶೇಷ ದಿನವನ್ನು ಹಸಿರು ದಿನವನ್ನಾಗಿ ಆಚರಿಸಲು ಜನರು ಮುಂದಾಗುತಿದ್ದಾರೆ.
“ಇದೆಲ್ಲವನ್ನೂ ಆಲೋಚಿಸಿದ ಕಂಚೀಪುರಂನ ವಿಶೇಷ ಜಿಲ್ಲಾಧಿಕಾರಿ, ಮೂಲತಃ ತ್ರಿಚಿಯವರಾದ ಸೆಲ್ವಮತಿ ವೆಂಕಟೇಶ್ ತಮ್ಮ ಮಗನ ಮದುವೆಯನ್ನು ಪರಿಸರಸ್ನೇಹಿಯಾಗಿ ಆಚರಿಸಲು ಯೋಜನೆಯನ್ನು ಸಿದ್ಧಪಡಿಸಿದರು”
ಮದುವೆಯ ಆಮಂತ್ರಣವನ್ನು ಕಾಗದದ ಬದಲು ಕರವಸ್ತ್ರಗಳ ಮೇಲೆ ಮುದ್ರಿಸಿ ಆಹ್ವಾನಿತರಿಗೆ ಹಂಚಲಾಯಿತು.
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡುತ್ತಾ ಸೆಲ್ವಮತಿ ಹೀಗೆ ಹೇಳಿದ್ದಾರೆ,
“ಮದುವೆಯ ಆಮಂತ್ರಣ ಪತ್ರಿಕೆಗಳು ಬಹಳಷ್ಟು ದುಬಾರಿಯಾಗಿರುವುದಲ್ಲದೇ ಮದುವೆಯ ದಿನ ಮುಗಿದ ನಂತರ ಅವುಗಳನ್ನು ಕಸದ ಬುಟ್ಟಿಗೆ ಹಾಕಲಾಗುತ್ತದೆ. ನನಗೆ ದುಬಾರಿಯ ಮತ್ತು ಫ್ಯಾನ್ಸಿ ಆಮಂತ್ರಣ ಪತ್ರಿಕೆಗಳನ್ನು ನೋಡಿದಾಗಲೆಲ್ಲಾ ಬೇಸರವಾಗುತಿತ್ತು. ಇದರಿಂದಾಗಿ ನಾವು ನಮ್ಮ ಮಗನ ಮದುವೆಯ ಆಮಂತ್ರಣವನ್ನು ಕರವಸ್ತ್ರಗಳ ಮೇಲೆ ಮುದ್ರಿಸಿದೆವು. ಒಂದೆರಡು ಬಾರಿ ಈ ಕರವಸ್ತ್ರಗಳನ್ನು ತೊಳೆದ ಮೇಲೆ ಈ ಮುದ್ರಣವು ಹೊರಟುಹೋಗಿ ಕರವಸ್ತ್ರವನ್ನು ದೈನಂದಿನ ಉಪಯೋಗಕ್ಕಾಗಿ ಉಪಯೋಗಿಸಿಬಹುದು.”
ಈ ಕರವಸ್ತ್ರದ ಆಮಂತ್ರಣಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಿದ ಒಂದು ಸಣ್ಣ ಚೀಲದಲ್ಲಿ ಇಟ್ಟು ಆಹ್ವಾನಿತರಿಗೆ ನೀಡಲಾಗಿದೆ. ಈ ಚೀಲಗಳೂ ಸಹ ಅವರಿಗೆ ಉಪಯೋಗಕ್ಕೆ ಬರುತ್ತವೆ.
ಮದುವೆಯಲ್ಲಿ ಬಳಕೆಯಾಗುವ ಪ್ಲಾಸ್ಟಿಕ್ ಲೋಟಗಳು ಮತ್ತು ಟಿಸ್ಸ್ಯೂ ಪೇಪರ್ ಗಳು ಅಪಾರ ಪ್ರಮಾಣದ ಕಸವನ್ನು ಸೃಷ್ಟಿಸುತ್ತವೆ. ಇವುಗಳ ಬದಲಾಗಿ ಸೆಲ್ವಮತಿ ಊಟ ಬಡಿಸಲು ಬಾಳೆಯ ಎಲೆಗಳನ್ನು ಮತ್ತು ನೀರು ಕುಡಿಯಲು ಸ್ಟೀಲ್ ಲೋಟಗಳನ್ನು ಬಳಸಲು ನಿರ್ಧರಿಸಿದರು ಮತ್ತು ಟಿಸ್ಸ್ಯೂ ಕಾಗದಗಳ ಬದಲಾಗಿ ಹತ್ತಿಯ ಟವೆಲ್ಲುಗಳನ್ನು ಬಳಸಲಾಯಿತು ಎಂದು ದಿ ಲಾಜಿಕಲ್ ಇಂಡಿಯನ್ ವರದಿ ಮಾಡಿದೆ.
ಮದುವೆಗೆ ಹಾಜರಾದ ಅತಿಥಿಗಳಿಗೆ ನೀಡಿದ ಉಡುಗೊರೆಗಳೂ ವಿಶಿಷ್ಟವಾಗಿದ್ದವು. ವಿವಿಧ ತರಕಾರಿಗಳು, ನೀಲಗಿರಿ ಮರ, ಸಾಗವಾನಿ ಮರದ ಬೀಜಗಳನ್ನು ತುಂಬಿದ ಚೀಲಗಳನ್ನು ಅತಿಥಿಗಳಿಗೆ ಉಡಗೊರೆಯಾಗಿ ನೀಡಲಾಯಿತು.
ಬೀಜಗಳನ್ನು ತುಂಬಿದ ಈ ಚೀಲಗಳ ಮೇಲೆ ಅವುಗಳನ್ನು ಹೇಗೆ ಭಿತ್ತಬೇಕೆಂಬ ಬಗ್ಗೆ ಮುದ್ರಿತ ನಿರ್ದೇಶನ ನೀಡಲಾಗಿತ್ತು.
ಹಲವಾರು ಸೆಲೆಬ್ರಿಟಿ ವಿವಾಹಗಳೂ ಕೂಡ ಹಸಿರು ಸ್ಪರ್ಷ ಪಡೆದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಬಾಲಿವುಡ್ ನಟ-ನಟಿಯರಾದ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆಯ ವಿವಾಹ ಆರತಕ್ಷತೆಯು ಹಸಿರಿನ ಸ್ಪರ್ಷದಿಂದ ಕಂಗೊಳಿಸುತ್ತಿತ್ತು. ಊಟದ ಮೇಜುಗಳ ಮೇಲೆ ಬಳಸಿದ ಹಾಸನ್ನು ಜೈವಿಕ ವಿಘಟನೀಯ ವಸ್ತುಗಳಿಂದ ಮಾಡಲಾಗಿತ್ತು.
ನಟಿ ಸೋನಮ್ ಕಪೂರ್ ಮತ್ತು ಉದ್ಯಮಿ ಆನಂದ್ ಅಹುಜಾ ತಮ್ಮ ಮದುವೆಗಾಗಿ ಇ-ಆಮಂತ್ರಣ ಪತ್ರಿಕೆಯನ್ನು ಆಹ್ವಾನಿತರಿಗೆ ಕಳುಹಿಸಿದ್ದರು ಮತ್ತು ಭಾರತೀಯ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯೊಂದಿಗೆ ವಿವಿಧ ಗಿಡಗಳ ಸಸಿಗಳನ್ನು ಆಹ್ವಾನಿತರಿಗೆ ನೀಡಿದ್ದರು.
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.