ಆಟೋಮೊಬೈಲ್ ರಿಪೇರಿ ಕ್ಷೇತ್ರದಲ್ಲಿ ಸಾಧನೆಗೈಯ್ಯುವ ನಿಟ್ಟಿನಲ್ಲಿ ಬುಕ್ ಮೈ ಕಾರ್ ಸರ್ವೀಸ್ ಸಂಸ್ಥೆಯ ಹೆಜ್ಜೆ

ಟೀಮ್​​ ವೈ.ಎಸ್​​. ಕನ್ನಡ

1st Dec 2015
  • +0
Share on
close
  • +0
Share on
close
Share on
close

2013ರಲ್ಲಿ ರಾಜ್ ಹಸನ್ ನಾಗರಾಜ್ ಅವರು ಒಂದು ಆಟೋ ಮೊಬೈಲ್ ಸಂಸ್ಥೆಯ ಸ್ಟ್ರಾಟೆಜಿಕ್ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಬಡ್ತಿ ಪಡೆದರು. ಇವರ ಬಹುತೇಕ ಎಲ್ಲಾ ಮಾರ್ಕೆಟಿಂಗ್ ಚಟುವಟಿಕೆಗಳು ಹೊಸ ಮತ್ತು ಬಳಕೆಯಾದ ಕಾರುಗಳ ಮಾರಾಟದ ಕುರಿತಾಗಿಯೇ ಇತ್ತು. ಒಮ್ಮೆ ಬೆಂಗಳೂರಿನಲ್ಲಿ ಆನ್‌ಲೈನ್ ಮುಖಾಂತರ ಯಾವುದಾದರೂ ಕಾರು ರಿಪೇರಿ ಸೇವೆ ದೊರಕುತ್ತದೆಯೇ ಎಂದು ಗೂಗಲ್ ನಲ್ಲಿ ಹುಡುಕುತ್ತಿದ್ದಾಗ ಅವರಿಗೆ ಒಂದು ಕಾರ್ ಸರ್ವಿಸ್ ಅನ್ನೇ ಗುರಿಯಾಗಿರಿಸಿಕೊಂಡ ಕಂಪನಿಯೊಂದು ಅವರ ಕಣ್ಣಿಗೆ ಬಿತ್ತು.

ಇದೇ ವೇಳೆಗೆ ರಾಜ್ ಹಸನ್ ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆಯ ಆಡಳಿತ ಮಂಡಳಿಯವರು ಅವರನ್ನು ಕಸ್ಟಮರ್ ಲೈಫ್ ಸೈಕಲ್ ಮ್ಯಾನೇಜ್‌ಮೆಂಟ್ ವಿಭಾಗದ ಜನರಲ್ ಮ್ಯಾನೇಜರ್ ಆಗಿ ನಿಯಮಿಸಲು ಇಚ್ಛಿಸಿತು. ಈ ಕೆಲಸದಲ್ಲಿ ಅವರು ಹೊಸ ಕಾರುಗಳ ಮಾರಾಟ, ಬಳಕೆಯಾದ ಕಾರುಗಳ ಮಾರಾಟ, ಇನ್ಶುರೆನ್ಸ್ ರಿನಿವಲ್ ಮತ್ತು ಸರ್ವಿಸ್ ರಿಮೈಂಡರ್‌ಗೆ ಸಂಬಂಧಿಸಿದ ಕಾಲ್‌ಸೆಂಟರ್‌ನ ಸಂಪೂರ್ಣ ಜವಾಬ್ದಾರಿಯನ್ನು ಹೊರಬೇಕಾಗಿತ್ತು. ಈ ಹೊಸ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಮೊದಲು ಅವರು ಕಾರ್ ಮಾಲೀಕತ್ವಕ್ಕೆ ಕುರಿತಾದ ಪ್ರಾಥಮಿಕ ಅವಶ್ಯಕತೆಗಳಿಗಾಗಿ ಕಾರು ಮಾಲೀಕರ ಸಮಯ, ಸೇವೆಗಳು, ರಿಪೇರಿ ಮತ್ತು ಇತರ ಸೇವೆಗಳ ಕುರಿತಾಗಿ ಒಂದು ಸಣ್ಣ ಪ್ರಾಜೆಕ್ಟ್ ತಯಾರಿಸಿದರು.

ಪ್ರಾಜೆಕ್ಟ್ ತಯಾರಾದ ಬಳಿಕ ಅದನ್ನು ಪ್ರೀಮಿಯಮ್ ಕಾರ್ ವಿಭಾಗದ ಉದ್ಯಮದಲ್ಲಿ 15 ವರ್ಷಗಳಿಗೂ ಹೆಚ್ಚಿನ ಅನುಭವ ಹೊಂದಿರುವ ಜಿ.ಆರ್. ಭಗವಾನ್ ರಾಮದಾಸ್ ಅವರಿಗೆ ನೀಡಿದರು. ಪ್ರಾಜೆಕ್ಟ್ ನೋಡಿ ತುಂಬಾ ಸಂತೋಷಗೊಂಡ ಭಗವಾನ್ ಅವರು ಯೋಜನೆಯಲ್ಲಿ ಮುಂದುವರೆಯುವಂತೆ ಅವರಿಗೆ ಬೆಂಬಲ ನೀಡಿದರು. ನಂತರ ರಾಜ್ ಹಸನ್ ಅವರು ಆರಂಭಿಸಿದ ಸಂಸ್ಥೆಯೇ ಬುಕ್ ಮೈ ಕಾರ್ ಸರ್ವಿಸ್.ಇನ್.

image


ಸಂಸ್ಥೆ ಆರಂಭವಾದ ರೀತಿ

ರಾಜ್ ಅವರಿಗೆ ಆಟೋಮೊಬೈಲ್ ಉದ್ಯಮ ಕ್ಷೇತ್ರದಲ್ಲಿ 12 ವರ್ಷಗಳ ಅನುಭವವಿದೆ. ತಮ್ಮ ಜೀವನಾಧಾರವಾಗಿದ್ದ ಅತ್ಯುತ್ತಮ ಸಂಬಳ ಪಡೆಯುತ್ತಿದ್ದ ಕೆಲಸಕ್ಕೆ 2014ರಲ್ಲಿ ರಾಜೀನಾಮೆ ನೀಡಿ ಬುಕ್ ಮೈ ಕಾರ್ ಸರ್ವಿಸ್.ಇನ್ ಸಂಸ್ಥೆಯನ್ನು ಆರಂಭಿಸಿದರು. ವೆಬ್‌ಸೈಟ್‌ನ ಮೊದಲ ಹಂತವನ್ನು ವಿನ್ಯಾಸಗೊಳಿಸಲು 4 ತಿಂಗಳುಗಳು ಬೇಕಾಯಿತು. ಜೂನ್ 2014ರಲ್ಲಿ ಅವರು ತಮ್ಮ ಫೇಸ್ ಬುಕ್ ಪೇಜ್ ಅನ್ನು ಆರಂಭಿಸಿದರು. ಇದಾದ 1 ತಿಂಗಳ ಬಳಿಕ ವೆಬ್‌ಸೈಟ್ ಅನ್ನು ಬಿಡುಗಡೆ ಮಾಡಿದರು.

ಬುಕ್ ಮೈ ಕಾರ್ ಸರ್ವಿಸ್.ಇನ್ ಒಂದು ಹೊಸ ಕಾನ್ಸೆಪ್ಟ್ ಆಗಿತ್ತು. ಆರಂಭದಲ್ಲಿ ಅವರಿಗೆ ಸರ್ವಿಸ್ ಸೆಂಟರ್‌ಗಳು ಮತ್ತು ಗ್ರಾಹಕರ ಮನವೊಲಿಸಲು ಬಹಳ ಕಷ್ಟವಾಗಿತ್ತು. ತಮ್ಮ ಬಳಿಯಿದ್ದ ಸಣ್ಣ ಉಳಿತಾಯದಿಂದಲೇ ಉದ್ಯಮವನ್ನು ಆರಂಭಿಸಿದರು. ಆದರೆ ಈ ಸಂದರ್ಭದಲ್ಲಿ ಜಿ.ಆರ್.ಭಗವಾನ್ ಅವರ ಬೆಂಬಲ ಅವರಿಗೆ ಸಾಕಷ್ಟು ಚೈತನ್ಯ ದೊರಕಿಸಿತು. ಭಗವಾನ್ ಅವರು ರಾಜ್ ಅವರಿಗೆ ಹಣಕಾಸು ಬೆಂಬಲ ನೀಡಿದ್ದಷ್ಟೇ ಅಲ್ಲದೇ ಈ ಉದ್ಯಮ ಯಾನದಲ್ಲಿ ಮಾರ್ಗದರ್ಶನವನ್ನೂ ನೀಡಿದರು. ಪ್ರಸ್ತುತ ಹಲವು ಮಂದಿ ಹೂಡಿಕೆದಾರರಿಂದ ಬಂಡವಾಳ ಹೂಡಿಕೆ ಪಡೆಯುವ ಪ್ರಯತ್ನದಲ್ಲಿದೆ ಈ ಸಂಸ್ಥೆ. ಅಲ್ಲದೇ ಜಿ.ಆರ್.ಭಗವಾನ್ ಅವರು ಬುಕ್ ಮೈ ಕಾರ್ ಸರ್ವಿಸ್.ಇನ್‌ಗೆ ಸುಮಾರು ಅರ್ಧ ಮಿಲಿಯನ್‌ ನಷ್ಟು ಹಣವನ್ನು ಹೂಡಿಕೆ ಮಾಡಿದ್ದಾರೆ. ಸಂಸ್ಥೆ ಆರಂಭಗೊಂಡ 1 ತಿಂಗಳಲ್ಲೇ 34 ಸರ್ವಿಸ್ ಸೆಂಟರ್‌ಗಳು ಬುಕ್ ಮೈ ಕಾರ್ ಸರ್ವಿಸ್.ಇನ್ ಜೊತೆ ಸೇರಿಕೊಂಡವು. ಪ್ರಸ್ತುತ ಈ ಸಂಸ್ಥೆಯೊಂದಿಗೆ 570 ಸರ್ವಿಸ್ ಸೆಂಟರ್‌ಗಳು ಕೈಜೋಡಿಸಿವೆ.

ಬುಕ್ ಮೈ ಕಾರ್ ಸರ್ವಿಸ್.ಇನ್ ಹೇಗೆ ಕಾರ್ಯನಿರ್ವಹಿಸುತ್ತದೆ?

ಗ್ರಾಹಕರು ತಮಗೆ ಹತ್ತಿರವಾಗುವ ಸರ್ವಿಸ್ ಸೆಂಟರ್‌ಗಳನ್ನು ಆಯ್ದುಕೊಳ್ಳುವ ಸಲುವಾಗಿ ಬುಕ್ ಮೈ ಕಾರ್ ಸರ್ವಿಸ್. ಇನ್ ಸಂಸ್ಥೆ ಎಲ್ಲಾ ಸರ್ವಿಸ್ ಸೆಂಟರ್‌ಗಳನ್ನು ತನ್ನ ಪಟ್ಟಿಯಲ್ಲಿ ಸೇರಿಸಿಕೊಂಡಿದೆ. ಸಂಸ್ಥೆಗೆ ಒಮ್ಮೆ ಗ್ರಾಹಕರಿಂದ ಯಾವ ಸರ್ವಿಸ್ ಸೆಂಟರ್‌ನಿಂದ ತಮ್ಮ ವಾಹನಕ್ಕೆ ಸರ್ವಿಸ್ ಆಗಬೇಕಿದೆ ಎಂದು ತಿಳಿದರೆ ಆ ಮಾಹಿತಿಯನ್ನು ಗ್ರಾಹಕರು ಇಚ್ಛಿಸಿದ ಸರ್ವಿಸ್ ಸೆಂಟರ್‌ಗೆ ರವಾನಿಸಲಾಗುತ್ತದೆ. ಈ ಸೇವೆಗಾಗಿ ನಿಗದಿತ ಶುಲ್ಕವನ್ನೂ ವಿಧಿಸಲಾಗುತ್ತದೆ. ಪೂರ್ವ ಸ್ವಾಮ್ಯದ ಕಾರುಗಳು, ಟೈರ್ ಬದಲಾವಣೆ, ಬ್ಯಾಟರಿ ಬದಲಾವಣೆ ಮತ್ತು ಕಾರ್‌ಗೆ ಅಗತ್ಯವಿರುವ ಆ್ಯಕ್ಸೆಸ್ಸರೀಸ್ ಸೇರಿದಂತೆ ಎಲ್ಲಾ ರೀತಿಯ ಸೇವೆಯನ್ನೂ ಒದಗಿಸಲಾಗುತ್ತದೆ.

ಮುಂಬರುವ ದಿನಗಳಲ್ಲಿ ಯಶಸ್ವಿ ವಿಮೆ ನವೀಕರಣಗಳ ಮೇಲೆ ಶೇ.5ರಷ್ಟು ಶುಲ್ಕ ವಿಧಿಸುವ ಯೋಜನೆಯೂ ಸಂಸ್ಥೆಯ ಮುಂದಿದೆ. ಪ್ರಸ್ತುತ ಬೆಂಗಳೂರು ಮೂಲದ ಉದ್ಯಮದಲ್ಲಿ 12 ಮಂದಿ ಉದ್ಯೋಗಿಗಳಿದ್ದಾರೆ ಮತ್ತು ಸಂಸ್ಥೆ ಕರ್ನಾಟಕದಾದ್ಯಂತ ತನ್ನ ಸೇವೆಯನ್ನು ಒದಗಿಸುತ್ತಿದೆ. ಬುಕ್ ಮೈ ಕಾರ್ ಸರ್ವಿಸ್‌ನಲ್ಲಿ ಗ್ರಾಹಕರಿಗೆ ಅಗತ್ಯವಿರುವ ಮಾಹಿತಿ, ವಿಚಾರಣೆ ಸೇರಿದಂತೆ ಸರ್ವಿಸ್ ಸೆಂಟರ್‌ಗೆ ಸಂಬಂಧಿಸಿದ ಮಾಹಿತಿಗಾಗಿ ಕಾಲ್ ಬ್ಯಾಕ್ ಸೇವೆಯನ್ನೂ ಒದಗಿಸುತ್ತಿದೆ. ಇದಲ್ಲದೇ ಗ್ರಾಹಕರ ಮನೆಬಾಗಿಲಲ್ಲೇ ವಾಹನವನ್ನು ಸರಿಪಡಿಸಿಕೊಳ್ಳುವಂತಹ ಸೇವೆಯನ್ನೂ ನೀಡುತ್ತಿದೆ. ಮಾರುತಿ, ಹ್ಯುಂಡೈ, ಹೋಂಡಾ, ಫೋರ್ಡ್, ಶವರ್ಲೆಟ್, ಬಿಎಂಡಬ್ಲ್ಯು, ಟೋಯೋಟಾ, ಆಡಿ, ಟಾಟಾ ಮೋಟಾರ್ಸ್, ವೋಲ್ವೋ, ಮರ್ಸಿಡಿಸಿ ಬೆಂಜ್, ಜಾಗ್ವಾರ್, ಮಹೀಂದ್ರಾ, ಲ್ಯಾಂಡ್ ರೋವರ್, ಫಿಯೆಟ್, ಫೋಲ್ಕ್ಸ್ ವ್ಯಾಗನ್, ರೆನಾಲ್ಟ್, ಸ್ಕೋಡಾ, ನಿಸ್ಸಾನ್ ಸಂಸ್ಥೆಯ ಕಾರುಗಳ ಸರ್ವಿಸ್‌ ಮಾಡಿಕೊಡುವ ವ್ಯವಸ್ಥೆ ಬುಕ್ ಮೈ ಕಾರ್ ಸರ್ವಿಸ್.ಇನ್‌ ನಲ್ಲಿ ಇದೆ.

ಸಂಸ್ಥೆಯಲ್ಲಿ ಕಸ್ಟಮರ್ ಕೇರ್ ವಿಭಾಗವೂ ಇದೆ. ಇಲ್ಲಿ ಗ್ರಾಹಕರಿಗೆ ನೀಡುವ ಸೇವೆಯನ್ನು ಅತ್ಯುತ್ತಮಗೊಳಿಸಲು ಅಗತ್ಯವಿರುವ ಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ. ಉತ್ತಮ ಗುಣಮಟ್ಟದ ಸೇವೆಯನ್ನು ನೀಡಲು, ಕಾರ್ಯಚಟುವಟಿಕೆಯ ದಕ್ಷತೆಯನ್ನು ಹೆಚ್ಚಿಸಲು ಸರ್ವಿಸ್ ಸೆಂಟರ್‌ಗೆ ಅಗತ್ಯವಿರುವ ಮಾಹಿತಿಗಳನ್ನು ಇದರಲ್ಲಿ ನೀಡಲಾಗುತ್ತದೆ. ಗ್ರಾಹಕರು ತಮ್ಮ ಸೇವೆಯನ್ನು ಪಡೆದಾದ ಬಳಿಕ ಅವರಿಂದ ಸರ್ವಿಸ್ ಕುರಿತಂತೆ ಫೀಡ್‌ ಬ್ಯಾಕ್ ಪಡೆಯಲಾಗುತ್ತದೆ. ಏನಾದರೂ ಸಮಸ್ಯೆಗಳಿದ್ದಲ್ಲಿ, ಆ ಸಮಸ್ಯೆಗಳನ್ನು ಸರ್ವಿಸ್ ಸೆಂಟರ್‌ಗೆ ರವಾನಿಸಲಾಗುತ್ತದೆ.

ಆಟೋಮೊಬೈಲ್ ಕ್ಷೇತ್ರದ ಹರಡಿರುವ ರೀತಿ

ಭಾರತದಲ್ಲಿ ಆಟೋಮೊಬೈಲ್ ರಿಪೇರಿ ಉದ್ಯಮ ವಿಸ್ತಾರವಾಗಿ ಹರಡಿದೆ. ನಿಗದಿತ ದರದ ಪಾಲಿಸಿಯನ್ನು ಪಾಲಿಸದೇ ಈ ಉದ್ಯಮ ಯಶಸ್ವಿಯಾಗಿ ಬೆಳೆದುಬಂದಿದೆ. ವಾಹನಗಳ ಮಾಲೀಕರು ಸ್ಥಳೀಯ ಮೆಕ್ಯಾನಿಕ್‌ಗಳನ್ನೇ ಈಗಲೂ ಆಶ್ರಯಿಸಿದ್ದಾರೆ. ಆದರೂ ಆನ್‌ಲೈನ್ ಮುಖಾಂತರದ ಮಾರುಕಟ್ಟೆ ನಿಧಾನವಾಗಿ ತನ್ನ ಪ್ರಾಬಲ್ಯತೆ ಸಾಧಿಸುವತ್ತ ಮುಖ ಮಾಡಿದೆ. ಸಮರ್ಪಕ ಸರ್ವಿಸ್ ಸೆಂಟರ್‌ಗಳ ಜೊತೆ ಸೇರಿಕೊಂಡು ತನ್ನದೇ ಆದ ಸಂಘಟನೆಯನ್ನೂ ಅದು ಮಾಡಿಕೊಳ್ಳುತ್ತಿದೆ.

ಭಾರತದಲ್ಲಿ ಆನ್‌ಲೈನ್ ಕಾರ್ ರಿಪೇರಿ ಸರ್ವಿಸ್ ಮಾರುಕಟ್ಟೆ ಬೆಳೆಯಲು ಸಾಕಷ್ಟು ಸಮಯ ಬೇಕಾಗುತ್ತದೆ. ಅದಕ್ಕಾಗಿ ಹೂಡಿಕೆದಾರರನ್ನು ಸೆಳೆಯುವ ಪ್ರಯತ್ನದಲ್ಲಿ ಉದ್ಯಮ ತೊಡಗಿಕೊಳ್ಳಬೇಕಿದೆ. ಕಳೆದ ಕೆಲ ವರ್ಷಗಳಲ್ಲಿ ಈ ಉದ್ಯಮಕ್ಕೆ ಹಲವು ಸಂಸ್ಥೆಗಳು ಪಾದಾರ್ಪಣೆ ಮಾಡಿದೆ. ಭವಿಷ್ಯದಲ್ಲಿ ಈ ಕ್ಷೇತ್ರದಲ್ಲಿ ಯಾವ ರೀತಿಯಲ್ಲಿ ಬೆಳವಣಿಗೆ ಸಾಧಿಸಬಹುದೆಂದು ಹೇಳುವುದು ಸದ್ಯಕ್ಕೆ ಕಷ್ಟವೇ. ಮೇರಿಕಾರ್.ಕಾಮ್, ಸ್ಪೇರ್ಸ್‌ಹಬ್ಸ್.ಕಾಮ್, 3ಎಂ ಕಾರ್ ಕೇರ್, ಕ್ರಾಸ್ ರೋಡ್ಸ್, ಮೈಟಿವಿಎಸ್, ಕಾರ್ ಝಡ್, ಕಾರ್ ಝಡ್ ಕೇರ್, ಹೆಲ್ಪ್ ಆನ್ ವೀಲ್ಸ್.ಇನ್ ನಂತಹ ಸಂಸ್ಥೆಗಳು ಈ ಉದ್ಯಮದಲ್ಲಿ ಬೆಳವಣಿಗೆ ಸಾಧಿಸುವ ಗುರಿ ಹೊಂದಿದೆ. ಈ ಸಾಲಿಗೆ ಈಗ ಬುಕ್ ಮೈ ಕಾರ್ ಸರ್ವಿಸ್.ಇನ್ ಕೂಡ ಸೇರಿದೆ.

ಇಂಡಿಯಾ ಬ್ರಾಂಡ್ ಈಕ್ವಿಟಿ ಫೌಂಡೇಶನ್ ವರದಿ ಪ್ರಕಾರ, ಉದ್ಯಮದಲ್ಲಿ 14.25 ಮಿಲಿಯನ್ ವಾಹನಗಳ ಉತ್ಪಾದನೆಯಾಗುತ್ತದೆ. ಇದರಲ್ಲಿ ವೈಯಕ್ತಿಕ ವಾಹನಗಳು, ಕಮರ್ಷಿಯಲ್ ವಾಹನಗಳು, ತ್ರಿಚಕ್ರ ಮತ್ತು ದ್ವಿಚಕ್ರ ವಾಹನಗಳೂ ಸೇರಿವೆ.

ಅಕ್ಟೋಬರ್ 2015ರವರೆಗೆ ಉತ್ಪಾದನೆಯಾದ ವಾಹನಗಳ ಸಂಖ್ಯೆಯನ್ನು ಗಮನಿಸಿದರೆ ಶೀಘ್ರದಲ್ಲೇ ಉದ್ಯಮವು ಕ್ಷಿಪ್ರಗತಿಯಲ್ಲಿ ಬೆಳೆಯುವ ಸಾಧ್ಯತೆ ಇದೆ. ಬುಕ್ ಮೈ ಕಾರ್ ಸರ್ವಿಸ್.ಇನ್ ಸಂಸ್ಥೆ ಪ್ರಸ್ತುತ ತಿಂಗಳಿಗೆ 600ಕ್ಕೂ ಹೆಚ್ಚು ಸರ್ವಿಸ್ ಬೇಡಿಕೆಗಳನ್ನು ಪಡೆಯುತ್ತಿದೆ. ಮುಂಬರುವ ತಿಂಗಳುಗಳಲ್ಲಿ ಈ ಸಂಖ್ಯೆ 1000ಕ್ಕೆ ಏರಿಕೆಯಾಗುವ ಸಾಧ್ಯತೆಗಳು ದಟ್ಟವಾಗಿವೆ. ಇಲ್ಲಿಯವರೆಗೆ ಸಂಸ್ಥೆ 4,700ಕ್ಕೂ ಹೆಚ್ಚು ಗ್ರಾಹಕರಿಗೆ ತನ್ನ ಸೇವೆಯನ್ನು ಒದಗಿಸಿದೆ. ಬಹುತೇಕ ಎಲ್ಲಾ ರೀತಿಯ ಮಾರ್ಕೆಟಿಂಗ್ ಚಟುವಟಿಕೆಗಳು ಸಾಮಾಜಿಕ ಮಾಧ್ಯಮಗಳು, ಬಲ್ಕ್ ಎಸ್ಎಂಎಸ್‌ಗಳು ಮತ್ತು ಈ ಮೇಲ್ ಕ್ಯಾಂಪೇನ್‌ಗಳ ಮೂಲಕವೇ ಸಾಗುತ್ತವೆ ಎಂಬುದನ್ನು ರಾಜ್ ಗಮನಿಸಿದ್ದಾರೆ.

ಇತ್ತೀಚೆಗಷ್ಟೇ ಬುಕ್ ಮೈ ಕಾರ್ ಸರ್ವಿಸ್.ಇನ್ ಸಂಸ್ಥೆ ಪುಣೆಯಲ್ಲಿ ಪೈಲಟ್ ಪ್ರಾಜೆಕ್ಟ್ ಅನ್ನು ಆರಂಭಿಸಿದೆ. ಶೀಘ್ರದಲ್ಲಿ ಈ ಯೋಜನೆಯನ್ನು ಹೈದ್ರಾಬಾದ್, ಚೆನ್ನೈ, ದೆಹಲಿ ಮತ್ತು ಕೊಚ್ಚಿನ್‌ಗಳಲ್ಲೂ ಆರಂಭಿಸಲಿದೆ. ಆದಾಯದ ವಿಚಾರದಲ್ಲಿ ಬುಕ್ ಮೈ ಕಾರ್ ಸರ್ವಿಸ್.ಇನ್ ಸಂಸ್ಥೆ 2 ಕೋಟಿ ಮಿಲಿಯನ್‌ಗೂ ಹೆಚ್ಚು ಆದಾಯವನ್ನು ಗಳಿಸಿದೆ. ಮುಂದಿನ ಆರ್ಥಿಕ ವರ್ಷದಲ್ಲಿ 15 ಮಿಲಿಯನ್ ನಷ್ಟು ಆದಾಯ ಗಳಿಸುವ ಗುರಿ ಸಂಸ್ಥೆಯ ಮುಂದಿದೆ.

ಲೇಖಕರು: ಅಪರಾಜಿತ ಚೌಧರಿ

ಅನುವಾದಕರು: ವಿಶ್ವಾಸ್​​

  • +0
Share on
close
  • +0
Share on
close
Share on
close
Report an issue
Authors

Related Tags

Latest

Updates from around the world

Our Partner Events

Hustle across India