ವೃತ್ತಿಯಲ್ಲಿ ಆಟೋ ಚಾಲಕ- ಆದ್ರೆ 5000 ಸಸಿಗಳನ್ನು ನೆಟ್ಟ ಅಪ್ಪಟ ಪರಿಸರ ಪ್ರೇಮಿ
ಟೀಮ್ ವೈ.ಎಸ್. ಕನ್ನಡ
ಮನಸ್ಸಿದ್ದರೆ ಮಾರ್ಗವಿದೆ. ಏನೋ ಒಂದು ಕೆಲಸ ಮಾಡಬೇಕು, ಸಮಾಜಕ್ಕೆ ಒಳ್ಳೆಯದು ಆಗಬೇಕು ಅನ್ನುವ ಯೋಚನೆಗಳಿದ್ದರೆ ಸಾಕಷ್ಟು ಕೆಲಸಗಳು ಕಣ್ಣಿಗೆ ಕಾಣುತ್ತವೆ. ಇವತ್ತು ಸ್ವಾರ್ಥ ಬದುಕಿನ ಬಗ್ಗೆ ಯೋಚನೆಗಳು ಹೆಚ್ಚಾಗಿವೆಯೇ ಹೊರತು, ಸಮಾಜಕ್ಕೆ ನೆರವು ನೀಡುವ ಯೋಚನೆಗಳು ಬರುವುದು ತುಂಬಾ ಕಡಿಮೆ. ಆದ್ರೆ ನಾವೀಗ ಹೇಳ ಹೊರಟಿರುವ ಕಥೆಯೇ ವಿಭಿನ್ನ. ಪರಿಸರ ರಕ್ಷಣೆ ಮತ್ತು ಪರಿಸರದ ಬಗ್ಗೆ ಹೇಗೆ ಕಾಳಜಿ ವಹಿಸಿಕೊಳ್ಳಬೇಕು ಅನ್ನುವುದನ್ನು ಸಾರಿ ಹೇಳುವ ಕಥೆಯಿದು. ಪರಿಸರ ವಿನಾಶದಿಂದ ಇಡೀ ವಿಶ್ವಕ್ಕೆ ಅಪಾಯ ಎದುರಾಗಿದೆ. ಆದರೆ ಅದನ್ನು ರಕ್ಷಿಸುವ ಗೋಜಿಗೆ ಹೆಚ್ಚಿನವರು ಹೋಗುತ್ತಿಲ್ಲ. ತಾನಾಯಿತು, ತನ್ನ ಕೆಲಸ ಆಯಿತು ಅಂತ ಯೋಚನೆ ಮಾಡುವವರೇ ಹೆಚ್ಚಿದ್ದಾರೆ. ಇದರ ನಡುವೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಅನ್ನುವ ಮನಸ್ಸುಗಳು ಸಾಕಷ್ಟಿವೆ.
ಸುಭಾನಿ. ಚಿಕ್ಕಬಳ್ಳಾಪುರದಲ್ಲಿ ಆಟೋಚಾಲಕ. ಕಷ್ಟಪಟ್ಟು ದುಡಿಯುವ ಸಾಹಸಿ. 5 ಜನರು ಇರುವ ತುಂಬು ಕುಟುಂಬ ಅವರದ್ದು. ಆಟೋದಿಂದ ಬರುವ ದುಡಿಮೆ ದಿನಕ್ಕೆ ಅಬ್ಬಬ್ಬಾ ಅಂದ್ರೆ 250 ರೂಪಾಯಿಯಿಂದ 300 ರೂಪಾಯಿ ಆಗಬಹುದು. ಆದರೆ ಈತನಿಗೆ ಪರಿಸರದ ಬಗ್ಗೆ ವಿಶೇಷ ಕಾಳಜಿ. ಹೀಗಾಗಿ ತನ್ನ ದುಡಿಮೆಯ ನಡುವೆಯೂ ಸಸಿಗಳನ್ನು ನೆಟ್ಟು ಪರಿಸರ ಕಾಳಜಿ ತೋರುತ್ತಿದ್ದಾರೆ. ಸುಭಾನಿ ಮಾಡುವ ಕೆಲಸ ಈಗ ಸಾವಿರಾರು ಜನರಿಗೆ ಸ್ಫೂರ್ತಿಯಾಗಿದೆ.
ಇದನ್ನು ಓದಿ: "ಗ್ರೀನ್ ಕಾರ್ಪೆಟ್" ಹಾಸಿತು ಆಧುನಿಕ ಪಾಟ್ ಬ್ಯುಸಿನೆಸ್
2 ವರ್ಷದಲ್ಲಿ 5000 ಸಸಿನೆಟ್ಟ ಸಾಹಸಿ
ಅಂದಹಾಗೇ, ಸುಭಾನಿ ಈ ಕೆಲಸವನ್ನು ಸುಮಾರು 2 ವರ್ಷಗಳ ಹಿಂದೆ ಆರಂಭಿಸಿದ್ದರು. ಆದ್ರೆ ಒಮ್ಮೆ ಆರಂಭಿಸಿದ್ದ ಕೆಲಸವನ್ನು ಇಲ್ಲಿಯ ತನಕ ಬಿಟ್ಟಿಲ್ಲ. ಅಷ್ಟೇ ಅಲ್ಲ ಪ್ರತಿದಿನವೂ ಸಸಿಗಳನ್ನು ನೆಡುವ ಇಚ್ಛೆ ವ್ಯಕ್ತಪಡಿಸುತ್ತಾರೆ. ಆರಂಭದಲ್ಲಿ ಸುಭಾನಿ ತನ್ನ ಕೈಯಿಂದಾ ಆದಷ್ಟು ಸಸಿಗಳನ್ನು ನೆಡುತ್ತಿದ್ದರು. ಆದ್ರೆ ಈಗ ಇವರ ಕೆಲಸದಿಂದ ಸ್ಫೂರ್ತಿ ಪಡೆದು ಹಲವರು ಸಸಿಗಳನ್ನು ನೆಡುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಸುಭಾನಿ ನೆಟ್ಟಿರುವ ಸಸಿಗಳ ಸಂಖ್ಯೆ ಬರೋಬ್ಬರಿ 5000ದ ಗಡಿ ದಾಟುತ್ತದೆ. ಕೇವಲ ಪರಿಸರ ಕಾಳಜಿಯಿಂದ ಸುಭಾನಿ ಈ ಕೆಲಸವನ್ನು ಮಾಡುತ್ತಿದ್ದಾರೆ.
“ ಕೆಲ ವರ್ಷಗಳ ಹಿಂದೆ ನಾನು ಕಾಲಿನ ಗಾಯಕ್ಕೆ ಒಳಗಾಗಿದ್ದೆ. ಹೀಗಾಗಿ 6 ತಿಂಗಳ ಕಾಲ ಓಡಾಡುವ ಸ್ಥಿತಿಯಲ್ಲಿ ಇರಲಿಲ್ಲ. ಈ ವೇಳೆಯಲ್ಲಿ ನಾನು, ಟೈಂಪಾಸ್ಗಾಗಿ ಮನೆಯ ಮುಂದೆ ಅಮ್ಮ ನೆಟ್ಟಿದ್ದ ಮರಗಳ ಕೆಳಗೆ ಕುಳಿತುಕೊಳ್ಳುತ್ತಿದ್ದೆ. ತಂಪಾದ ಗಾಳಿ ಮತ್ತು ನೆರಳು ನನಗೆ ಇಷ್ಟವಾಯಿತು. ಅಮ್ಮ ನೆಟ್ಟಿರುವ ಮರದಲ್ಲಿ ಇಷ್ಟೊಂದು ಒಳ್ಳೆಯ ಗುಣವಿದೆ. ತಾನೂ ಕೂಡ ಸಸಿ ನೆಡಬೇಕು ಅಂತ ನಿರ್ಧಾರ ಮಾಡಿದೆ. ನನ್ನ ಕೆಲಸದಿಂದ ಇತರರಿಗೆ ನೆರವಾಗುತ್ತದೆ ಅನ್ನುವ ನಂಬಿಕೆ ನನ್ನದಾಗಿತ್ತು. ”
- ಸುಭಾನಿ, ಪರಿಸರ ಪ್ರೇಮಿ
ಎಲ್ಲರ ಮನೆ ಮುಂದೆ ಸಸಿ..!
ಆರಂಭದಲ್ಲಿ ಸುಭಾನಿ ಅರಣ್ಯ ಇಲಾಖೆಯಿಂದ ಸಸಿಗಳನ್ನು ಪಡೆದು ಅವುಗಳನ್ನು ಸರಕಾರಿ ಸ್ಥಳಗಳಲ್ಲಿ ನೆಡುತ್ತಿದ್ದರು. ಆರಂಭದಲ್ಲಿ ಇವರ ಕೆಲಸವನ್ನು ನೋಡಿದವರು ಈತನಿಗೆ ಏನೋ ಆಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲ ಸುಭಾನಿ ಕೆಲಸವನ್ನು ನೋಡಿ ತಮ್ಮಷ್ಟಕ್ಕೆ ತಾವೇ ನಗುತ್ತಿದ್ದರು. ಆದ್ರೆ ಇವತ್ತು ಎಲ್ಲರಿಗೂ ಪರಿಸರದ ಬಗ್ಗೆ ಕಾಳಜಿ ಮತ್ತು ಅರಿವು ಮೂಡಿದೆ. ಹಲವರು ಸುಭಾನಿ ಜೊತೆ ಕೈ ಜೋಡಿಸಿದ್ದಾರೆ. ಸುಭಾನಿ ಹಲವರ ಮನೆ ಮುಂದೆ ಸಸಿಗಳನ್ನು ನೆಟ್ಟು ಬಂದಿದ್ದಾರೆ. ಎದುರಿಗಿರುವ ಮನೆಯವರೇ ಆ ಸಸಿಯನ್ನು ಪೋಷಿಸುತ್ತಿದ್ದಾರೆ. ನಿಧಾನವಾಗಿ ಹಸಿರು ಹೆಚ್ಚುತ್ತಿದೆ.
“ ಪರಿಸರ ನಾಶದಿಂದ ಮಳೆ ಕಡಿಮೆಯಾಗಿದೆ. ಕುಡಿಯುವ ನೀರಿಗೂ ಬರ ಬಂದಿದೆ. ಆರೋಗ್ಯ ಕೆಟ್ಟು ಹೋಗಿದೆ. ದುಡಿದ ಹಣವನ್ನು ಆಸ್ಪತ್ರೆಗೆ ಹಾಕುವುದೇ ಆಗಿದೆ. ಇದಕ್ಕೆಲ್ಲಾ ಕಾರಣ ಪರಿಸರ ಕಲುಷಿತಗೊಂಡಿರುವುದು. ಕುಡಿಯುವ ನೀರಿಗೆ ಸಾವಿರಾರು ಅಡಿ ಬೋರ್ವೆಲ್ ಕೊರೆಸಿದ್ರೂ, ಅಲ್ಲಿ ನೀರು ಸಿಗುವುದೇ ಅಪರೂಪ. ಅಷ್ಟೇ ಅಲ್ಲ ನೀರು ಸಿಕ್ರೂ ಅದು ಫ್ಲೋರೈಡ್ ಯುಕ್ತವಾಗಿದೆ. ಇದಕ್ಕೆಲ್ಲಾ ಪರಿಹಾರ ಕೇವಲ ಮರಗಳನ್ನು ಪೋಷಿಸುವುದು ಮತ್ತು ಸಸಿಗಳನ್ನು ನೆಡುವುದು ಆಗಿದೆ. ”
- ಸುಭಾನಿ, ಪರಿಸರ ಪ್ರೇಮಿ
ಸಸಿಗಳನ್ನೇ ಗಿಫ್ಟ್ ಕೊಡ್ತಾರೆ..!
ಯಸ್, ಹುಟ್ಟುಹಬ್ಬ, ಗೃಹಪ್ರವೇಶ ಮತ್ತು ಮದುವೆ ವೇಳೆಯಲ್ಲಿ ಸಾಕಷ್ಟು ಗಿಫ್ಟ್ಗಳು ಬರುತ್ತವೆ. ಆದರೆ ನೀವು ಸುಭಾನಿಯವರನ್ನು ಯಾವುದಾದರು ಸಮಾರಂಭಕ್ಕೆ ಕರೆದರೆ ಅವರು ನಿಮಗೆ ಸಸಿಗಳನ್ನೇ ಗಿಫ್ಟ್ ನೀಡುತ್ತಾರೆ. ಈ ಮೂಲಕ ಸುಭಾನಿ ಪರಿಸರ ಕಾಳಜಿಯನ್ನು ಎಲ್ಲರಿಗೂ ತಿಳಿಸುವ ಪ್ರಯತ್ನ ಮಾಡುತ್ತಾರೆ.
“ ಎಲ್ಲಾ ಕಡೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅವರು ದುಡಿದು ತಿನ್ನುವವರು. ಆದರೆ ಅವರ ದುಡಿಮೆಗೆ ನೀರು ಇಲ್ಲ ಎಂದಾದ ಮೇಲೆ ಅವರು ಹೇಗೆ ಜೀವನ ನಡೆಸಲು ಸಾಧ್ಯ. ಇದೆನ್ನೆಲ್ಲಾ ಯೋಚನೆ ಮಾಡಿಕೊಂಡು ನಾನು ಯಾವುದೇ ಸಭೆ ಸಮಾರಂಭಗಳಿಗೆ ಹೋದರೆ ಅಲ್ಲಿ ಸಸಿಗಳನ್ನೇ ಗಿಫ್ಟ್ ನೀಡುತ್ತೇನೆ. ಈ ಮೂಲಕ ಎಲ್ಲರಿಗೂ ಪರಿಸರದ ಬಗ್ಗೆ ಜ್ಞಾನ ಮೂಡಲಿ ಅನ್ನುವ ಆಶಯ ನನ್ನದು ”
- ಸುಭಾನಿ, ಪರಿಸರ ಪ್ರೇಮಿ
ಶಾಲೆ, ಕಾಲೇಜುಗಳಲ್ಲಿ ಪರಿಸರ ಪಾಠ
ಸುಭಾನಿಯ ಕೆಲಸವನ್ನು ಹಲವರು ಗುರುತಿಸಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಇವರು ಪರಿಸರದ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟು ಬರುತ್ತಾರೆ. ಅಷ್ಟೇ ಅಲ್ಲ ಅಲ್ಲಿ ಸಸಿಗಳನ್ನು ನೆಡುತ್ತಾರೆ. ಶಾಲೆಯ ಶಿಕ್ಷಕರು ಮಕ್ಕಳಿಗೆ ಆ ಸಸಿಯನ್ನು ಕಾಪಾಡಿಕೊಳ್ಳುವ ವಿಧಾನವನ್ನು ತಿಳಿಸುತ್ತಾರೆ. ಇದು ಸುಭಾನಿ ಕೆಲಸವನ್ನು ಸ್ವಲ್ಪ ಸುಲಭವಾಗಿಸುತ್ತಿದೆ.
ಸಸಿಗಳಿಗೆ ಟ್ಯಾಂಕರ್ ಮೂಲಕ ನೀರು..!
ಆರಂಭದಲ್ಲಿ ಸುಭಾನಿ ನೆಟ್ಟ ಸಸಿಗಳಿಗೆ ನೀರುಣಿಸಲು ಸಾಕಷ್ಟು ಪರದಾಡಿದ್ದರು. ಅದೆಲ್ಲಿಂದಲೋ ತಾನು ನೆಟ್ಟ ಸಸಿಗಳಿಗೆ ಬಿಂದಿಗೆಯ ಮೂಲಕ ನೀರುಣಿಸುತ್ತಿದ್ದರು. ಇದನ್ನು ನೋಡಿದ್ದ ಯಾರೋ ಪುಣ್ಯಾತ್ಮರು ಸುಭಾನಿಗೆ ಸೈಕಲ್ ಒಂದನ್ನು ನೀಡಿದ್ದರು. ಆ ಮೂಲಕ ಸುಭಾನಿ ಹಲವು ಗಿಡಗಳಿಗೆ ನೀರು ಸುರಿಯುತ್ತಿದ್ದರು. ಗಿಡಗಳ ಸಂಖ್ಯೆ ಹೆಚ್ಚಾದಂತೆ ಸುಭಾನಿ ಎತ್ತಿನ ಗಾಡಿಗಳಲ್ಲಿ ಸಸಿಗಳಿಗೆ ನೀರೆರು ಪೋಷಿಸುತ್ತಿದ್ದರು. ಈಗ ಹಲವರ ನೆರವಿನಿಂದ ಟ್ಯಾಂಕರ್ ಮೂಲಕ ಗಿಡಗಳಿಗೆ ನೀರುಣಿಸುತ್ತಿದ್ದಾರೆ. ಸುಭಾನಿ ಕೆಲಸಕ್ಕೆ ಸಾಕಷ್ಟು ಜನ ಕೈ ಜೋಡಿಸುತ್ತಿದ್ದಾರೆ.
ಹಲವು ಪ್ರಶಸ್ತಿಗಳು
ಸುಭಾನಿ ಅರಣ್ಯ ಇಲಾಖೆಯಿಂದ ಸಸಿಗಳನ್ನು ಪಡೆದು ಆಸಕ್ತರಿಗೆ ಹಂಚುತ್ತಾರೆ. ಮಳೆಗಾಲದಲ್ಲಿ ಕೆಲವು ಕಾಲ ಆಟೋ ಓಡಿಸುವುದಕ್ಕೆ ಬ್ರೇಕ್ ಹಾಕಿ ಸಸಿ ನೆಡುವುದರಲ್ಲೇ ತಲ್ಲೀನರಾಗುತ್ತಾರೆ. ಸುಭಾನಿಯ ಈ ಕೆಲಸಕ್ಕೆ ಸಾಕಷ್ಟು ಪ್ರಶಸ್ತಿಗಳು ಕೂಡ ಸಿಕ್ಕಿವೆ. ಹಲವರು ಸುಭಾನಿ ಕೆಲಸಕ್ಕೆ ಹಣದ ಸಹಾಯ ನೀಡುವ ಬಗ್ಗೆ ಮಾತುಗಳನ್ನಾಡಿದ್ದಾರೆ. ಅಂತಹವರಿಗೆ ಸುಭಾನಿ ಹೇಳುವುದು ಒಂದೇ, ನಿಮ್ಮ ಕೈಯಲ್ಲಾಗುವಷ್ಟು ಸಸಿಗಳನ್ನು ನೆಟ್ಟು ಬಿಡಿ. ಅದೇ ನನಗೆ ಮಾಡುವ ಅತೀ ದೊಡ್ಡ ಸಹಾಯ ಎಂದು ಇತರರನ್ನು ಹುರಿದುಂಬಿಸುತ್ತಾರೆ.
ಒಟ್ಟಿನಲ್ಲಿ ಸುಭಾನಿ, ಸಾಲುಮರದ ತಿಮ್ಮಕ್ಕನಂತಹ ಮನಸ್ಸುಗಳನ್ನು ಹಸಿರನ್ನು ಕಾಪಾಡಲು ಇನ್ನಿಲ್ಲದ ಶ್ರಮ ಪಡುತ್ತಿದ್ದಾರೆ. ಯಾರ ಸಹಾಯ, ನೆರವು ಇಲ್ಲದೆ ಪರಿಸರನ್ನು ಬೆಳೆಸುವ ಪ್ರಯತ್ನ ಮಾಡುತ್ತಿದ್ದಾರೆ. ಪರಿಸರ ಪ್ರೇಮಿಗಳ ಈ ಕೆಲಸಕ್ಕೆ ಎಲ್ಲರೂ ಕೈ ಜೋಡಿಸಬೇಕಿದೆ. ಮುಂದಿನ ಪೀಳಿಗೆಗೆ ನಾವು ಪರಿಸರವನ್ನು ಉಳಿಸಿಕೊಡಬೇಕಾದ ಮಹತ್ವದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
2. ಒಂದು ರೂಪಾಯಿನಲ್ಲಿ ಅಡಗಿದೆ ನಿಮ್ಮ ಆರೋಗ್ಯದ ರಹಸ್ಯ- ಸಿಂಪಲ್ ಆಗಿದೆ ತರಕಾರಿಯಲ್ಲಿ ವಿಷ ಪರೀಕ್ಷೆ ಮಾಡುವ ಯಂತ್ರ