ಒಂದು ರೂಪಾಯಿ ಬೇಕಂದ್ರೆ ನೂರು ರೂಪಾಯಿ ಕೊಡ್ಬೇಕು..!
ಈಶಾನಾ
ಚಿಲ್ಲರೆ ಬಗ್ಗೆ ಕಿರಿ ಕಿರಿ ನಿಮಗೆ ಗೊತ್ತೇ ಗೊತ್ತು. ಬಸ್ ಹತ್ತಿದ್ರೆ ಇಳಿಯುವ ಸ್ಥಳವನ್ನು ಕೇಳುವ ಮೊದಲೇ ಕಂಡಕ್ಟರ್ ಚೇಂಜ್ ಕೇಳಿಬಿಟ್ಟಿರುತ್ತಾನೆ. ಹೊಟೇಲ್ನಲ್ಲಿ ಬಿಲ್ ಕೊಡುವಾಗಲೂ ಅಷ್ಟೇ ಚೇಂಜ್ ಬೇಕೇ ಬೇಕು. ಆದ್ರೆ ಈ ಸ್ಟೋರಿ ಎಲ್ಲಕ್ಕಿಂತ ವಿಭಿನ್ನ. ನಿಮ್ಮ ಕೈಯಲ್ಲಿ ಒಂದು ರೂಪಾಯಿ ನೋಟನ್ನು ಹಿಡಿಕೊಂಡೇ ಈ ಸ್ಟೋರಿ ಓದೋದಿಕ್ಕೆ ಶುರು ಮಾಡಿ.
ಒಂದು ರೂಪಾಯಿ ಕೊಟ್ಟು ನೂರಿ ರೂಪಾಯಿ ಪಡೆದುಕೊಳೋದು ಕೇಳಿದ್ದೀರಿ. ಇನ್ನು ಅದು ಬಿಟ್ರೆ ಭಾರತದ ಒಂದು ರೂಪಾಯಿಗೆ ಶ್ರೀಲಂಕಾ, ನೇಪಾಳದಂತಹ ದೇಶಗಳಲ್ಲಿ ಹೆಚ್ಚು ಬೆಲೆ ಇರೋದು ಕೇಳಿದ್ದೀವಿ. ಆದರೆ ಭಾರತದಲ್ಲೇ ಒಂದು ರೂಪಾಯಿಗೆ ನೂರು ರೂಪಾಯಿ ಕೊಡಬೇಕು ಅಂದ್ರೆ ನಂಬ್ತೀರಾ. ನಂಬಲೇ ಬೇಕು. ಒಂದು ರೂಪಾಯಿ ನೋಟು ಕೊಡೋಕೆ ನೀವ್ ರೆಡಿ ಇದ್ದೀರಾ. ಅಚ್ಚರಿ ಎನಿಸಿದ್ರೂ ಇದು ನಿಜ. ಆನ್ ಲೈನ್ ನಲ್ಲಿ ಒಂದು ರೂಪಾಯಿ ನೋಟಿಗೆ ನೂರು ರೂಪಾಯಿ ಸಿಗುತ್ತೆ ಕಣ್ರೀ..!
ಆನ್ ಲೈನ್ ಕ್ರೇಜ್ ಗೆ ಬಿದ್ದಿರೋ ನಮ್ ಜನ ಪ್ರತಿಯೊಂದನ್ನೂ ಆನ್ ಲೈನ್ ನಲ್ಲಿ ಖರೀದಿಸಲು ಶುರು ಮಾಡಿದ್ದಾರೆ. ಯಾಕಂದ್ರೆ ಬುಕ್ ಮಾಡಿದ್ರೆ ಸಾಕು ಮನೆ ಬಾಗಿಲಿಗೇ ಐಟಮ್ ಬಂದು ಬಿಡುತ್ತದೆ. ಹೀಗಾಗಿ ಎಲ್ಲವೂ ಅನ್ ಲೈನ್ ಮಯ. ಆನ್ ಲೈನ್ ನಲ್ಲಿ ಲಭ್ಯವಾಗೋ, ಚಲಾವಣೆಯಲ್ಲಿ ಇಲ್ಲದ ಅಪರೂಪದ ಹಳೆಯ ನೋಟುಗಳಿಗೆ ಹೆಚ್ಚು ಬೆಲೆ ಕೊಡೋದು ಸಾಮಾನ್ಯ. ಆದ್ರೀಗ ಚಲಾವಣೆಯಲ್ಲಿರೋ ಭಾರತೀಯ ಒಂದು ರೂಪಾಯಿ ನೋಟಿಗೆ ಚಿನ್ನದ ಬೆಲೆ ಬಂದಿದೆ. ಬಹುಬೇಡಿಕೆ ಇರೋ ಒಂದು ರೂಪಾಯಿ ನೋಟಿಗೆ ಇಲ್ಲಿ ನೂರು ರೂಪಾಯಿಯ ಬೆಲೆ ಇದೆ.
Eebay ಆನ್ ಲೈನ್ ವೆಬ್ ಸೈಟ್ ಗೆ ಹೋಗಿ ಒಂದು ರೂಪಾಯಿ ನೋಟನ್ನು ಹುಡುಕಾಡಿದರೆ ಕಂತೆ ಕಂತೆ ನೋಟುಗಳು ಮಾರಾಟಕ್ಕಿರೋದನ್ನ ತೋರಿಸತ್ತೆ. ಒಂದು ರೂಪಾಯಿಯ ಒಂದು ಕಟ್ಟಿಗೆ 1000 ರೂಪಾಯಿಂದ ಬೆಲೆ ಪ್ರಾರಂಭವಾಗತ್ತೆ. ಅದ್ರಲ್ಲಿ ಬೇರೆ ಬೇರೆ ಬೆಲೆಗಳು ನಿಗದಿಯಾಗಿವೆ. 2015ರ ಹೊಸ ನೋಟುಗಳಿಗೆ ಹೆಚ್ಚಿನ ಬೆಲೆ.
ನೋಟಿನ ಮುಖಬೆಲೆಗಿಂತ ಪ್ರಿಂಟಿಂಗ್ ಬೆಲೆ ಹೆಚ್ಚಾಗಿರೋದ್ರಿಂದ 1994ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಒಂದು ರೂಪಾಯಿ ನೋಟಿನ ಮುದ್ರಣವನ್ನು ಸ್ಥಗಿತಗೊಳಿಸಿತ್ತು. ನಂತರ ಎರಡು ದಶಕಗಳ ಬಳಿಕ 2014ರಲ್ಲಿ ಕೇಂದ್ರ ಸರ್ಕಾರ ಮತ್ತೆ ಒಂದು ರೂಪಾಯಿ ನೋಟಿನ ಮುದ್ರಣಕ್ಕೆ ಅನುಮತಿ ನೀಡಿತ್ತು. ಎಲ್ಲಾ ನೋಟುಗಳಲ್ಲಿ ರಿಸರ್ವ್ ಬ್ಯಾಂಕ್ ಗವರ್ನರ್ ಸಹಿ ಇದ್ರೆ ಒಂದು ರೂಪಾಯಿ ನೋಟಿನಲ್ಲಿ ವಿತ್ತ ಸಚಿವರ ಸಹಿ ನೋಡಬಹುದು. ಕೇಂದ್ರ ಸರ್ಕಾರ ಮುದ್ರಿಸೋ ಈ ಒಂದು ರೂಪಾಯಿ ನೋಟುಗಳನ್ನು ಖಾಸಗಿ ಕಂಪೆನಿಗಳು ಮಾರಾಟ ಮಾಡುತ್ತಿವೆ. ವಿಷಯ ಏನು ಬೇಕಾದ್ರು ಇರಲಿ, ನಿಮ್ಮ ಹತ್ರ 1 ರೂಪಾಯಿ ನೋಟುಗಳಿದ್ರೆ ಸುಮ್ಮನೆ ಇಟ್ಟುಕೊಳ್ಳಿ.. ಮುಂದೊಂದು ದಿನ ಅದಲ್ಲೆ 500, 1000 ರೂಪಾಯಿ ಸಿಕ್ಕಿದ್ರೂ ಅಚ್ಚರಿ ಇಲ್ಲ.