ನಿಮ್ಮ ಮನೆ ಬಾಗಿಲಿಗೆ ಐಟಮ್ಸ್ ಬೇಕಾ..? ಲಕ್ಷ್ಮೀ ಪಿಳ್ಳೈ ಗುಪ್ತಾರನ್ನು ಸಂಪರ್ಕಿಸಿ
ಟೀಮ್ ವೈ.ಎಸ್.
ವ್ಯಕ್ತಿಯೊಬ್ಬರು ಮಳಿಗೆಯೊಂದರಲ್ಲಿ ತಮ್ಮ ಲ್ಯಾಪ್ಟಾಪ್ ಮರೆತುಬಿಟ್ಟು ಏರ್ಪೋರ್ಟ್ ತಲುಪಿದ್ದರು. ಅವರು ಅರ್ಬನ್ ಹಾಪರ್ಸ್ ಆ್ಯಪ್ ಮೂಲಕ ತಮ್ಮ ಲ್ಯಾಪ್ಟಾಪ್ ತರಿಸಿಕೊಂಡರು.
ಮತ್ತೊಂದು ಘಟನೆಯಲ್ಲಿ ವ್ಯಕ್ತಿಯೊಬ್ಬರು ಸೂಪರ್ ಮಾರ್ಕೆಟ್ ಒಂದರಲ್ಲಿ ತಮ್ಮ ಕೀ ಕಳೆದುಕೊಂಡಿದ್ದರು, ಕೊನೆಗೆ ಅವರೂ ಕೂಡಾ ಇದೇ ಆ್ಯಪ್ ಮೊರೆಹೋದರು. “ಇಂತಹ ಘಟನೆಗಳು ನಾನು ಆ್ಯಪ್ ಆರಂಭಿಸಿದ್ದನ್ನು ನಿಜಕ್ಕೂ ಸಾರ್ಥಕಗೊಳಿಸಿದ್ದವು. ಇದು ಆರಂಭಿಸಿದ ಎರಡು ತಿಂಗಳಲ್ಲೇ ಅತ್ಯುತ್ತಮ ಪ್ರತಿಕ್ರಿಯೆ ಪಡೆದಿತ್ತು.” ಎನ್ನುತ್ತಾರೆ ಲಕ್ಷ್ಮೀ ಪಿಳ್ಳೈ ಗುಪ್ತ.
ಲಕ್ಷ್ಮೀ ಪಿಳ್ಳೈ ಅವರು ಅರ್ಬನ್ಹಾಪರ್ಸ್ ಆ್ಯಪ್ ಸಂಸ್ಥಾಪಕರು. ಇವರು, ಗ್ರಾಹರಕ ಎಲ್ಲಾ ಅಗತ್ಯಗಳನ್ನು ಮನೆಬಾಗಿಲಲ್ಲೇ ಪೂರೈಸುತ್ತಾರೆ. ದೆಹಲಿ, ನೋಯ್ಡಾ ಮತ್ತು ಗುರ್ಗಾಂವ್ನ ಕೆಲವು ಪ್ರದೇಶಗಳವರೆಗೆ ಇವರು ತಮ್ಮ ಜಾಲ ವಿಸ್ತರಿಸಿಕೊಂಡಿದ್ದಾರೆ.
ಸ್ವಯಂ ಸಾಮರ್ಥ್ಯ ಹೊಂದಿರುವ ಲಕ್ಷ್ಮಿಯವರು, ನಗರದ ಎಲ್ಲರಿಗೂ ತಮ್ಮ ಸಂಸ್ಥೆಯ ಬಾಗಿಲನ್ನು ತೆರೆದು ಅತಿ ದೊಡ್ಡ ಜಾಲವೊಂದನ್ನು ಸೃಷ್ಟಿಸಿದ್ದಾರೆ. “ನಾವು ಇ-ಕಾಮರ್ಸ್, ಕ್ಲೌಡ್ ಕಿಚನ್ ಹೀಗೆ ಎಲ್ಲದಕ್ಕೂ ಸಹಾಯ ಮಾಡುತ್ತೇವೆ. ಹಾಗಂತ ನಮ್ಮದು ಮಾರಾಟ ಆ್ಯಪ್ ಅಪ್ಪ. ನಾವು ಗ್ರಾಹಕರಿಗೆ ಅವರ ಆಯ್ಕೆಯ ಮಳಿಗೆಗಳಿಂದ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತೇವೆ ಅಷ್ಟೇ.” ಎನ್ನುತ್ತಾರೆ ಲಕ್ಷ್ಮೀ.
ತಂತ್ರಜಾನವೇ ಇವರ ಶಕ್ತಿ
ಸಂಶೋಧಕರೊಬ್ಬರ ಪುತ್ರಿಯಾಗಿರುವ ಲಕ್ಷ್ಮೀಯವರು ಕೋಲ್ಕತ್ತಾದಲ್ಲಿ ಜನಿಸಿದರು. ಇವರದ್ದು ಮಳಯಾಲಿ ಕುಟುಂಬ. ಆದರೆ ಬೆಳೆದಿದ್ದೆಲ್ಲವೂ ದೆಹಲಿಯಲ್ಲಿ. ಕುರುಕ್ಷೇತ್ರದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಇನ್ಸ್ಟ್ರುಮೆಂಟೇಷನ್ ಇಂಜಿನಿಯರಿಂಗ್ ಪದವಿ ಪಡೆದರು. ಆ ಬಳಿಕ ಇನ್ಫೋಸಿಸ್ನಲ್ಲಿ ವೃತ್ತಿ ಜೀವನ ಆರಂಭಿಸಿದರು.
ಆದರೆ, ಅವರ ಮನಸ್ಸೆಲ್ಲವೂ ಉದ್ಯಮದ ಮೇಲೆ ಹರಿದಾಡುತ್ತಿತ್ತು. ಎಲ್ಲರಿಗೂ ಉಪಯೋಗವಾಗುವಂತಹ ಏನಾದರೊಂದು ಉದ್ಯಮ ಸ್ಥಾಪಿಸಬೇಕು ಎಂದು ಯೋಚಿಸುತ್ತಿದ್ದರು. ಹೀಗಾಗಿ ಅವರು 2005ರಲ್ಲಿ ಬೆಂಗಳೂರಿನ ಎಸ್ಎಪಿ ಲ್ಯಾಬ್ನಲ್ಲಿ ಕೆಲಸಕ್ಕೆ ಸೇರಿಕೊಂಡರು.
2010ರಲ್ಲಿ ಐಟಿ ಮತ್ತು ಮಾರ್ಕೆಟಿಂಗ್ ಮುಖ್ಯಸ್ಥರಾಗಿ ಅಟ್ಟೆರೋ ಎಂಬ ಸಂಸ್ಥೆ ಸೇರಿಕೊಂಡರು.
“ನಾನು ಅಲ್ಲಿ ಕೆಲಸಕ್ಕೆ ಸೇರಿದಾಗ ಕೇವಲ 5 ಜನರ ತಂಡವಿತ್ತು. ಈ ಕ್ಷೇತ್ರದಲ್ಲಿನ ಸವಾಲುಗಳ ಅರಿವೂ ನನಗಿತ್ತು. ಅಲ್ಲಿ ನನಗೆ ಅತ್ಯಂತ ಪ್ರಮುಖವಾಗಿ ಗೊತ್ತಾಗಿದ್ದೇನೆಂದರೆ, ಭಾರತದಲ್ಲಿನ ಮೂಲಭೂತ ಸಮಸ್ಯೆಗಳು. ಮೊದಲ ಕೆಲವು ವರ್ಷಗಳನ್ನು ನಾನು ಈ ಕ್ಷೇತ್ರದ ಅತ್ಯುತ್ತಮ ನೀತಿಗಳನ್ನು ತಿಳಿದಿಕೊಳ್ಳಲು ವ್ಯಯಿಸಿದೆ,” ಎನ್ನುತ್ತಾರೆ ಲಕ್ಷ್ಮೀ.
ವೃತ್ತಿ ಜೀವನದಲ್ಲೊಂದು ಬ್ರೇಕ್
2013ರಲ್ಲಿ ಲಕ್ಷ್ಮಿಯವರಿಗೆ ಹೆಣ್ಣು ಮಗುವಿನ ಜನನವಾಯಿತು. ಹೀಗಾಗಿ ಅವರು ವೃತ್ತಿ ಜೀವನದಿಂದ 8 ತಿಂಗಳ ಕಾಲ ಬಿಡುವು ತೆಗೆದುಕೊಂಡರು. ಅವರಿಗೆ ಸಂಸ್ಥೆ ಮತ್ತೆ ಅವಕಾಶ ಕೊಟ್ಟಿತು, ಅಷ್ಟೇ ಅಲ್ಲ ಅವರ ಕ್ಯಾಬಿನ್ ಅನ್ನು ಚಿಕ್ಕ ನರ್ಸರಿಯಾಗಿ ಪರಿವರ್ತಿಸಿತು. ವಾರದಲ್ಲಿ ಮೂರು ದಿನ ಅಲ್ಲಿಗೆ ಮಗುವನ್ನು ಕರೆದೊಯ್ಯುತ್ತಿದ್ದರು, ಉಳಿದ ಎರಡು ದಿನಗಳ ಕಾಲ ಮನೆಯಿಂದಲೇ ಕೆಲಸ ಮಾಡುತ್ತಿದರು.
“ನನ್ನ ಸುತ್ತಲಿನ ಜನರಿಂದ ಸಿಕ್ಕ ಬೆಂಬಲ ಅತ್ಯದ್ಭುತವಾಗಿತ್ತು” ಎನ್ನುತ್ತಾ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ಲಕ್ಷ್ಮಿ. ಆದರೆ, ತಮ್ಮ ರಜಾ ಕಾಲದಲ್ಲಿಯೇ ಅವರು ಬೇರೆ ಏನೋ ಮಾಡಬೇಕು ಎಂದು ಆಲೋಚಿಸತೊಡಗಿದ್ದರು. ದೆಹಲಿಯಲ್ಲಿ ಕಟ್ಟಕಡೆಯ ವ್ಯಕ್ತಿಯನ್ನೂ ಸಂಪರ್ಕಿಸುವುದು ದೊಡ್ಡ ಸಮಸ್ಯೆ ಎಂಬುದು ಅವರಿಗೆ ಅರ್ಥವಾಗಿತ್ತು. ಇದರ ಹಿಂದೆಯೇ ಆ್ಯಪ್ ಐಡಿಯಾ ಕೂಡಾ ಹುಟ್ಟಿಕೊಂಡಿತು. ಲಕ್ಷ್ಮೀಯವರು ಅರ್ಬನ್ಹಾಪರ್ಸ್ ಆ್ಯಪ್ ಅಭಿವೃದ್ಧಿಪಡಿಸಿದರು. ತಾನು ಸ್ವಂತವಾಗಿ ಏನು ಮಾಡಬೇಕು ಎಂದುಕೊಂಡಿದ್ದೆನೋ ಅದನ್ನು ಮಾಡಲು ಇದು ಸಹಾಯವಾಯಿತು. ಔಷಧಗಳಿಂದ ಶಿಶು ಆಹಾರದವರೆಗೆ, ತಿಂಡಿ ತಿನಿಸು ಊಟದವರೆಗೆ ಏನು ಬೇಕಾದರೂ ಈ ಆ್ಯಪ್ ಮೂಲಕ ತರಿಸಿಕೊಳ್ಳಬಹುದು. ಅಂದ ಹಾಗೆ ಇವರದ್ದು ಒಂದು ರೀತಿಯಲ್ಲಿ ಪೋಸ್ಟ್ಮನ್ ಕೆಲಸ, ಇವರ ಆ್ಯಪ್ನಲ್ಲಿ ಯಾವುದೇ ವಸ್ತುಗಳನ್ನು ಮಾರಾಟ ಮಾಡುವುದಿಲ್ಲ. ನೀವು ಬುಕ್ ಮಾಡಿದ ವಸ್ತುಗಳನ್ನು ಅಲ್ಲಿಂದ ನಿಮ್ಮ ಮನೆಗೆ ತಂದು ಕೊಡುವುದಷ್ಟೇ ಇವರ ಕೆಲಸ.
ತಮ್ಮ ಗ್ರಾಹಕರಿಗೆ ಮತ್ತಷ್ಟು ಸರಳ ಸೇವೆ ಕಲ್ಪಿಸಲು ತಮ್ಮ ಆ್ಯಪ್ಗೆ ಪೇಮೆಂಟ್ ಗೇಟ್ವೇಯನ್ನೂ ಅಳವಡಿಸುತ್ತಿದ್ದಾರೆ. ಇವರ ಜೊತೆ ನಾಲ್ವರು ತಂತ್ರಜ್ಱರ ತಂಡ ಕೆಲಸ ಮಾಡುತ್ತಿದೆ. ತಮ್ಮ ಕಂಪನಿಯು ಅತ್ಯುತ್ತಮವಾದ ಸಾಫ್ಟ್ವೇರ್ ತಯಾರಿಸಿದ್ದು, ರಿಯಲ್ಟೈಂನಲ್ಲಿ ಎಲ್ಲರನ್ನೂ ತಲುಪುತ್ತಿದ್ದೇವೆ ಎನ್ನುತ್ತಾರೆ ಲಕ್ಷ್ಮೀ.
ನಮ್ಮದು ಇ-ಕಾಮರ್ಸ್ ಸಂಸ್ಥೆಯಲ್ಲ. ನಗರದ ಜನರ ಸಮಸ್ಯೆಗಳನ್ನು ಪರಿಹರಿಸಲು ಹುಟ್ಟಿಕೊಂಡ ಸಂಸ್ಥೆ ಎನ್ನುತ್ತಾರೆ ಲಕ್ಷ್ಮಿ.
ನಿಧಾನಕ್ಕೆ ಬೆಳೆಯುತ್ತಿರುವ ಈ ಸಂಸ್ಥೆ, ಮುಂದಿನ ದಿನಗಳಲ್ಲಿ ಬೇರೆ ನಗರಗಳಲ್ಲೂ ಕಾರ್ಯಾರಂಭ ಮಾಡಲು ಯೋಚಿಸುತ್ತಿದೆ. ಆದರೆ, ವಿಸ್ತರಣೆ ಹೆಸರಲ್ಲಿ ಗುಣಮಟ್ಟ ಕಳೆದುಕೊಳ್ಳಲು ಲಕ್ಷ್ಮೀಯವರು ಇಚ್ಚಿಸುತ್ತಿಲ್ಲ. “ನಾವು ದಿನಂಪ್ರತಿ ಬೆಳೆಯುತ್ತಿದ್ದೇವೆ. ಪ್ರತಿದಿನವೂ ನಾನು ಒಬ್ಬ ವ್ಯಕ್ತಿಯಾಗುವ ಮತ್ತು ಉದ್ಯಮಿಯಾಗಿ ಬೆಳೆಯುತ್ತಿದ್ದೇನೆ” ಎನ್ನುತ್ತಾರೆ 35 ವರ್ಷ ವಯಸ್ಸಿನ ಉದ್ಯಮಿ. ಅವರ ಅನುಭವಗಳೇ ಅವರಿಗೆ ದೊಡ್ಡ ಪಾಠ.
ನವ್ಯೋದ್ಯಮಕ್ಕೆ ಎದುರಾದ ಸವಾಲುಗಳು
ಅರ್ಬನ್ಹಾಪರ್ಸ್ ಸಂಸ್ಥಾಪಕರಾಗಿರುವುದರಿಂದ ತಾವು ಕೆಲಸದಿಂದ ಬಿಡುವು ಪಡೆಯುವುದು ಸಾಧ್ಯವೇ ಇಲ್ಲ. “ನಾನು ಆರಂಭಿಸಿದಾಗ ಒಂದನ್ನು ಸ್ಪಷ್ಟಪಡಿಸಿಕೊಡಿದ್ದೆ. ನಾನು ಭಾನುವಾರ ಕೆಲಸ ಮಾಡುವುದಿಲ್ಲ. ಜೀವನ ಮತ್ತು ಕೆಲಸವನ್ನು ಸಮತೋಲನದಿಂದ ಸಂಭಾಳಿಸುತ್ತೇನೆ ಎಂದುಕೊಂಡಿದ್ದೆ. ಅದೆಲ್ಲವೂ ಈಗ ಮುಗಿದ ಅಧ್ಯಾಯ.”
ಉದ್ಯಮವನ್ನು ಆರಂಭಿಸುವುದು ತುಂಬಾ ಫನ್ ಕೊಡುತ್ತದೆ. ಕಾರಣ, ನಾನು ಏನನ್ನು ಇಷ್ಟಪಡುತ್ತೇನೋ ಅದನ್ನೇ ಮಾಡುತ್ತೇನೆ. ಆದರೆ ಕೆಲಸ-ಮತ್ತು ಜೀವನದ ನಡುವೆ ಯಾವುದೇ ಸಮತೋಲನವಿರುವುದಿಲ್ಲ ಇದಂತೂ ಸತ್ಯ. ನಾನು ಸಂಪೂರ್ಣವಾಗಿ ವ್ಯವಹಾರ ನೋಡಿಕೊಳ್ಳಬೇಕಿದೆ ಎನ್ನುತ್ತಾರೆ ಲಕ್ಷ್ಮೀ. ಕುಂಬಾರಿಕೆ ಇಷ್ಟ ಪಡುವ ಇವರು, ಹೆಚ್ಚು ಸಮಯವನ್ನು ಮಗಳು ಮತ್ತು ಅಮ್ಮನ ಜೊತೆ ಕಳೆಯಲು ಬಯಸುತ್ತಾರೆ. ಆದರೆ ಹೇಗೆ ಎನ್ನುವುದೇ ಯಕ್ಷ ಪ್ರಶ್ನೆ.
“ವೃತ್ತಿಪರ ಮಹಿಳೆಯರಾಗಿ ನಾವೆಲ್ಲರೂ ಸವಾಲುಗಳನ್ನು ಎದುರಿಸುತ್ತೇವೆ. ಆದರೆ ಒಂದಲ್ಲ ಒಂದು ದಿನ ನಮ್ಮ ಗುರಿಯನ್ನು ತಲುಪುವುದು ನಿಶ್ಚಿತ. ಆದರೆ ಕೆಲವು ದಿನಗಳು ತುಂಬಾ ಕಠಿಣವಾಗಿರಬಹುದು ಅಷ್ಟೇ ಎನ್ನುತ್ತಾ ಮಾತು ಮುಗಿಸಿ ಕೆಲಸದತ್ತ ಗಮನ ಹರಿಸುತ್ತಾರೆ ಲಕ್ಷ್ಮೀ.