ಯಕ್ಷಗಾನ ಪ್ರಿಯರ ಮನೆ-ಮನ ತಲುಪುವಲ್ಲಿ ಯಶಸ್ಸಿಯಾದ Efollo ಆ್ಯಪ್
ರೂಪಾ ಹೆಗಡೆ
ಕೆಲಸದ ಒತ್ತಡದಲ್ಲಿ ಕೆಟ್ಟು ಹೋಗಿದ್ದ ಮನಸ್ಸು ರಿಲ್ಯಾಕ್ಸ್ ಬಯಸಿತ್ತು. ಒಂದು ಯಕ್ಷಗಾನ ನೋಡುವ ಮನಸ್ಸಾಗಿತ್ತು. ನೋಡುವ ಬಯಕೆ ಇದ್ದರೂ ಇಂದು ಎಲ್ಲಿ,ಯಾವ ಮೇಳದ ಯಕ್ಷಗಾನವಿದೆ ಎಂಬ ಮಾಹಿತಿ ಸರಿಯಾಗಿ ಸಿಕ್ಕಿರಲಿಲ್ಲ. ಅಲ್ಲಿ ಇಲ್ಲಿ ಜಾಲಾಡಿದ್ದಾಯ್ತು. ಆದ್ರೆ ಪ್ರಶ್ನೆ ಹಾಗೆ ಉಳಿದಿತ್ತು. ಆಗ ನನ್ನ ಆಪ್ತರು ಕೊಟ್ಟ ಸಲಹೆ Efollo ಆ್ಯಪ್. ತಕ್ಷಣ ಮೊಬೈಲ್ ಎತ್ತಿಕೊಂಡು ಆ್ಯಪ್ ಡೌನ್ ಲೋಡ್ ಮಾಡಿದೆ. ಯಸ್ ನನಗೆ ಬೇಕಾದ ಮಾಹಿತಿ ಅಲ್ಲಿತ್ತು. ಒಂದೊಳ್ಳೆ ಯಕ್ಷಗಾನ ನೋಡಿ ಬರುವ ಅವಕಾಶ ಸಿಕ್ಕಿತು.
ಯಕ್ಷಗಾನ ಕರ್ನಾಟಕದ ಮೇರು ಕಲೆ. ದಕ್ಷಿಣ ಭಾರತದ ಪ್ರಸಿದ್ಧ ಕಲೆಗಳಲ್ಲಿ ಯಕ್ಷಗಾನವೂ ಒಂದು. ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ-ಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಜನಪದ ಕಲೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗಕ್ಕೆ ಸೀಮಿತವಾಗಿದ್ದ ಕಲೆ ಈಗ ಸೀಮೆ,ರಾಜ್ಯ,ದೇಶವನ್ನು ದಾಟಿದೆ. ಸಾವಿರಾರು ಕಲಾವಿದರು ಪಾತ್ರಕ್ಕೆ ಜೀವ ತುಂಬಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಪುರಾಣ ಪುಣ್ಯ ಕಥೆಗಳು ಯಕ್ಷಗಾನ ರೂಪ ತಳೆಯುವುದಲ್ಲದೆ, ಹಾಸ್ಯದ ಯಕ್ಷಗಾನಗಳು ಈಗ ಪ್ರೇಕ್ಷಕರನ್ನು ಸೂರೆಗೊಂಡಿವೆ.
ಸಿನಿಮಾ,ರಿಯಾಲಿಟಿ ಶೋಗಳಿಂದಾಗಿ ಯಕ್ಷಗಾನದಂತ ಜಾನಪದ ಕಲೆಗಳು ಮರೆಯಾಗುತ್ತಿವೆ ಎಂಬ ಮಾತೂ ಆಗಾಗ ಕೇಳಿ ಬರುತ್ತಿರುತ್ತದೆ. ಆದ್ರೆ ಐಟಿ ಯುಗದಲ್ಲೂ ಯಕ್ಷಗಾನ ತನ್ನದೇ ಸ್ಥಾನ ಉಳಿಸಿಕೊಂಡು ಬಂದಿದೆ. ಯಕ್ಷಗಾನ ಅದರದೇ ಆದ ಪ್ರೇಕ್ಷಕರನ್ನು ಹೊಂದಿದೆ. ಹಾಗಾಗಿಯೇ ಪ್ರತಿವರ್ಷ ಸುಮಾರು 10 ಸಾವಿರಕ್ಕೂ ಹೆಚ್ಚು ಯಕ್ಷಗಾನಗಳು ನಡೆಯುತ್ತಿವೆ. ಧರ್ಮಸ್ಥಳ,ಕಟೀಲು,ಸಾಲಿಗ್ರಾಮ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ವೃತ್ತಿ ಮೇಳಗಳು,100ಕ್ಕೂ ಹೆಚ್ಚು ಹವ್ಯಾಸಿ ಮೇಳಗಳು ಕಾರ್ಯಕ್ರಮಗಳನ್ನು ನೀಡುತ್ತಿವೆ. ಮಹಿಳೆಯರು,ಮಕ್ಕಳ ಮೇಳಗಳು ರಾಜ್ಯಾದ್ಯಂತ ಕಾರ್ಯಕ್ರಮ ನೀಡುತ್ತಿವೆ.
ಯಕ್ಷಗಾನ,ತಾಳಮದ್ದಲೆಗಳು ನಡೆಯುತ್ತಲಿರುತ್ತವೆ. ಆದ್ರೆ ಪ್ರೇಕ್ಷಕರಿಗೆ ಇದರ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿರಲಿಲ್ಲ. ಫೇಸ್ಬುಕ್, ವಾಟ್ಸ್ಆ್ಯಪ್, ಭಿತ್ತಿಪತ್ರದಲ್ಲಿ ಸಣ್ಣ ಪುಟ್ಟ ಮಾಹಿತಿ ಬಿಟ್ಟರೆ,ಯಾವ ಯಕ್ಷಗಾನ? ಎಲ್ಲಿ ನಡೆಯುತ್ತಿದೆ?ಮೇಳದಲ್ಲಿ ಯಾರಿದ್ದಾರೆ? ಇವೆಲ್ಲದರ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿರಲಿಲ್ಲ. ಯಕ್ಷಗಾನ ಪ್ರಿಯರ ಸಮಸ್ಯೆಗೆ ಸ್ಪಂದಿಸಿ,ಅವರಿಗೆ ಸಂಪೂರ್ಣ ಮಾಹಿತಿ ನೀಡಲು ಶುರುವಾಗಿದ್ದು Efollo ಆ್ಯಪ್.
ವೃತ್ತಿ ಜೊತೆಗೆ ಪ್ರವೃತ್ತಿ ಉಳಿಸುವ ಕೆಲಸ
ಬೆಂಗಳೂರಿನಲ್ಲಿ ಎಂಜಿನಿಯರ್ಗಳಾಗಿರುವ ಮೂವರು ಸ್ನೇಹಿತರು ಸೇರಿ Efollo ಆ್ಯಪ್ಗೆ ಮುನ್ನುಡಿ ಬರೆದರು. ಹೊಸನಗರದ ರವಿ ಮದೋಡಿ ಬೆಂಗಳೂರಿನಲ್ಲಿ ಸಾಪ್ಟವೇರ್ ಎಂಜಿನಿಯರ್. ಹವ್ಯಾಸಿ ಯಕ್ಷಗಾನ ಕಲಾವಿದರೂ ಹೌದು. ಸುಮಾರು ಏಳು ವರ್ಷಗಳಿಂದ ಹವ್ಯಾಸಿ ಯಕ್ಷಗಾನ ಮೇಳ `ಯಕ್ಷ ಸಿಂಚನ’ದಲ್ಲಿ ವೇಷ ತೊಡುತ್ತಿದ್ದಾರೆ. ರವಿ ಮದೋಡಿ, ಸಾಗರ ಮೂಲದ ಎಂಜಿನಿಯರ್ ಆದಿತ್ಯ ಪ್ರಸಾದ್, ಶಿರಸಿ ಮೂಲದ ಎಂಜಿನಿಯರ್ ರವೀಂದ್ರ ದೊಂಗಡೆ ಜೊತೆ ಸೇರಿ ಈ ಆ್ಯಪ್ ಶುರುಮಾಡಿದ್ದಾರೆ.
ಇದು ಮೊಬೈಲ್ ಯುಗ. ಒಂದು ಕ್ಲಿಕ್ ಮಾಡಿದ ತಕ್ಷಣ ಮಾಹಿತಿ ಸಿಗುವ ಕಾಲ. ಆದ್ರೆ ಯಕ್ಷಗಾನ ಪ್ರಿಯರು ಮಾತ್ರ ನಿರಾಸೆಗೊಂಡಿದ್ದರು. ಅವರಿಗೆ ಯಕ್ಷಗಾನದ ಬಗ್ಗೆ ಸುಲಭವಾಗಿ ಹೇಗೆ ಮಾಹಿತಿ ನೀಡುವುದು ಎನ್ನುವ ಬಗ್ಗೆ ಚಿಂತಿಸಿದೆ. ಟೆಕ್ನಾಲಜಿ ಯುಗದಲ್ಲಿ ಟೆಕ್ನಾಲಜಿ ಬಳಸಿಕೊಂಡು ಯಕ್ಷಗಾನ ಉಳಿಸುವುದು ಹೇಗೆ ಎಂಬ ಬಗ್ಗೆ ಸ್ನೇಹಿತರ ಜೊತೆ ಸಮಾಲೋಚನೆ ನಡೆಸಿದೆ. ಆಗ ಹುಟ್ಟಿಕೊಂಡಿದ್ದೆ Efollo ಆ್ಯಪ್ ಎನ್ನುತ್ತಾರೆ ರವಿ.
ಯಕ್ಷಗಾನದ ಮಾಹಿತಿ ಜನರಿಗೆ ಹತ್ತಿರವಾಗಬೇಕು. ಜನರಿಗೆ ಸುಲಭವಾಗಿ ತಿಳಿಯಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು Efollo ಆ್ಯಪ್ ಶುಭಾರಂಭ ಮಾಡಿದೆ. ವ್ಯಾಪಾರದ ಉದ್ದೇಶ ಇವರಿಗಿಲ್ಲ. ವೃತ್ತಿಯ ಜೊತೆಗೆ ಪ್ರವೃತ್ತಿ ಉಳಿಸಿಕೊಳ್ಳುವುದು ಇವರ ಕನಸು.
ಅರೆ ಕ್ಷಣದಲ್ಲಿ ಯಕ್ಷಗಾನದ ಮಾಹಿತಿ
Efollo ಆ್ಯಪ್ ಯಕ್ಷಗಾನ ಪ್ರಿಯರ ಮನೆ,ಮನ ತಲುಪಿ ಎರಡು ತಿಂಗಳಾಗಿದೆ. ಈಗಾಗಲೇ 4 ಸಾವಿರ ಮಂದಿ ಈ ಆ್ಯಪ್ ಬಳಸುತ್ತಿದ್ದಾರೆ. 35 ಯಕ್ಷಗಾನ ಮೇಳಗಳ ಬಗ್ಗೆ ಆ್ಯಪ್ ನಲ್ಲಿ ಮಾಹಿತಿ ಸಿಗುತ್ತಿದೆ. 2 ಸಾವಿರ ಕಾರ್ಯಕ್ರಮದ ಬಗ್ಗೆ ಆ್ಯಪ್ ಬಳಕೆದಾರರಿಗೆ ಈಗಾಗಲೇ ಮಾಹಿತಿ ನೀಡಿದೆ.
ರಾಜ್ಯದ ಎಲ್ಲಿ?ಯಾವ ಮೇಳ? ಎಂದು?ಯಾವ ಯಕ್ಷಗಾನ? ಹೀಗೆ ಸಂಪೂರ್ಣ ಮಾಹಿತಿಯನ್ನು ಯಕ್ಷಗಾನ ಪ್ರೇಮಿ ಪಡೆಯಬಹುದಾಗಿದೆ. ಯಕ್ಷಗಾನ ನಿರ್ವಾಹಕರು ಆ್ಯಪ್ ನಿರ್ವಾಹಕರಿಗೆ ಮಾಹಿತಿ ನೀಡುತ್ತಾರೆ. ಅವರು ಸಂಪೂರ್ಣ ವಿವರಗಳನ್ನು ಬಳಕೆದಾರರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.
ಬೀಟಾ ಆವೃತ್ತಿ ಆಂಡ್ರಾಯ್ಡ್ ಫೋನ್ ಗಳಿಗೆ ಇದು ಲಭ್ಯವಿದೆ. ಗೂಗಲ್ ಪ್ಲೇಸ್ಟೋರ್ ನಲ್ಲಿ Efollo ಎಂದು ಹುಡುಕಾಡಿ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬೇಕು.
ಆ್ಯಪ್ ಮೂಲಕ ಯಕ್ಷಗಾನದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನೀಡುವ ಕನಸು ತಂಡದ್ದು. ಮತ್ತಷ್ಟು ಯಕ್ಷಗಾನ ನಿರ್ವಾಹಕರು ತಮ್ಮನ್ನು ಸಂಪರ್ಕಿಸಲಿ,ಮತ್ತಷ್ಟು ಮಾಹಿತಿ ಯಕ್ಷಗಾನ ಪ್ರಿಯರನ್ನು ತಲುಪಲಿ ಎಂಬ ಬಯಕೆ ರವಿ ಮತ್ತು ಸ್ನೇಹಿತರದ್ದು. [email protected] or Ef Mobileapp ಫೇಸ್ಬುಕ್ ಗೆ ಮಾಹಿತಿ ತಲುಪಿಸಬಹುದಾಗಿದೆ.